ಮೈಸೂರು.26 ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವವು ವರ್ಷದ ಮೊದಲ ರಾಷ್ಟ್ರೀಯ ಹಬ್ಬವಾಗಿದೆ. ಗಣರಾಜ್ಯೋತ್ಸವವನ್ನು ಗೌರವ ಹಾಗೂ ಅಭಿಮಾನದಿಂದ ಬಹಳ ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
● ಭಾರತೀಯರಾದ ನಮಗೆ ಗಣರಾಜ್ಯೋತ್ಸವವು ಅತ್ಯಂತ ಮಹತ್ವದ ದಿನಾಚರಣೆ. ಅಪಾರ ತ್ಯಾಗ ಬಲಿದಾನಗಳ ಮೂಲಕ ಈ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಲಭಿಸಿತು. ಆದರೆ ನಮ್ಮ ದೇಶಕ್ಕೆ ನಮ್ಮದೇ ಆದ ಸಂವಿಧಾನ ಇರಲಿಲ್ಲ. ಸ್ವತಂತ್ರ ಭಾರತವನ್ನು ಮುನ್ನಡೆಸಲು ನಮಗೆ ಸೂಕ್ತ ಸಂವಿಧಾನದ ಅವಶ್ಯಕತೆ ಇತ್ತು.
● ಡಾ. ಬಾಬು ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಲಾಯಿತು. ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿ ದೇಶಕ್ಕೆ ಸಮಗ್ರವಾದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ನಾವು ಸಂವಿಧಾನ ಶಿಲ್ಪಿ ಎಂದು ಹೆಮ್ಮೆಯಿಂದ ಕರೆಯುತ್ತೇವೆ.
● ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ಲಿಖಿತ ಸಂವಿಧಾನವನ್ನು ಭಾರತ ಹೊಂದಿದೆ. 1946ರಲ್ಲಿ ರಚನೆಯಾದ ಸಂವಿಧಾನ ರಚನಾ ಸಮಿತಿಯು ಸುಮಾರು 2 ವರ್ಷ 11 ತಿಂಗಳು ಹಾಗೂ 18 ದಿನಗಳ ಕಾಲ ಸುದೀರ್ಘವಾದ ಸಮಯವನ್ನು ತೆಗೆದುಕೊಂಡು ಹಲವಾರು ಸಭೆಗಳನ್ನು ನಡೆಸಿ, ಚರ್ಚೆಗಳನ್ನು ಮಾಡಿ, ಅಂತಿಮವಾಗಿ 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಲಾಗುತ್ತದೆ.
● 1950ರ ಜನವರಿ 26ರಂದು ಈ ಸಂವಿಧಾನ ಜಾರಿಗೆ ಬರುತ್ತದೆ. ಅಂದಿನಿಂದ ನಾವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ.
● ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನವಾದ ಮೂಲಭೂತ ಹಕ್ಕುಗಳನ್ನು ನೀಡಿದೆ. ಹಾಗೆಯೇ ಪ್ರಜೆಗಳು ಅನುಸರಿಸಬೇಕಾದ ಕರ್ತವ್ಯಗಳ ಬಗ್ಗೆಯೂ ತಿಳಿಸಿದೆ. ರಾಜ್ಯ ನಿರ್ದೇಶಕ ತತ್ವಗಳ ಮೂಲಕ ಸರ್ಕಾರದ ಗುರಿ ಮತ್ತು ಉದ್ದೇಶ ಏನಿರಬೇಕು ಎಂದು ತಿಳಿಸಲಾಗಿದೆ.
● ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಸ್ವರೂಪ, ಲಕ್ಷಣಗಳು ಹಾಗೂ ಕಾರ್ಯವ್ಯಾಪ್ತಿಯನ್ನು ಸಂವಿಧಾನದಲ್ಲಿ ತಿಳಿಸಲಾಗಿದೆ. ಒಕ್ಕೂಟ ಸರ್ಕಾರಕ್ಕೆ ಮತ್ತು ರಾಜ್ಯಗಳ ಸರ್ಕಾರಕ್ಕೆ ಅದರದೇ ಆದ ಅಧಿಕಾರವನ್ನು ನೀಡಿ, ಪ್ರಜೆಗಳ ಹಿತಕ್ಕಾಗಿ ಆಡಳಿತ ನಡೆಸಲು ಮಾರ್ಗದರ್ಶನ ನೀಡಿದೆ.
● ಪ್ರತಿಯೊಬ್ಬ ಪ್ರಜೆಯು ಏಕತೆ ಮತ್ತು ಸಮಾನತೆಯ ಭಾವನೆಯೊಂದಿಗೆ ಗೌರವದಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ಶಾಂತಿ, ಸಹಿಷ್ಣುತೆ, ಸೌಹಾರ್ದತೆ ಹಾಗೂ ಸಮಾನತೆಯು ನಮ್ಮ ದೇಶವನ್ನು ಭದ್ರಪಡಿಸುವ ಮೌಲ್ಯಗಳಾಗಿವೆ.
● ನಮ್ಮ ದೇಶ ಅಸ್ತಿತ್ವಕ್ಕೆ ಬಂದಾಗ ಇದ್ದ ಎಲ್ಲಾ ಪ್ರಾಂತ್ಯಗಳು ಈಗಲೂ ಭಾರತದ ಆಡಳಿತ ವ್ಯಾಪ್ತಿಯಲ್ಲೇ ಇವೆ. ಹಲವಾರು ರಾಜ್ಯಗಳು ಆಡಳಿತಾತ್ಮಕವಾಗಿ ವಿಭಜನೆಯಾಗಿದ್ದರೂ ಸಹ ಭಾರತದ ಸಾರ್ವಭೌಮತ್ವವನ್ನು ಒಪ್ಪಿಕೊಂಡಿವೆ.
● ರಾಜ್ಯಗಳು ಬೇರೆ, ಬೇರೆ ಇರಬಹುದು. ಭಾಷೆಗಳು ಬೇರೆ ಬೇರೆ ಇರಬಹುದು, ಮತ-ಪಂಥಗಳು, ಆಚಾರ-ವಿಚಾರಗಳು ವಿಭಿನ್ನವಾಗಿರಬಹುದು. ಆದರೆ ಭಾವನೆ ಮಾತ್ರ ಒಂದೆ. ಅದು ನಾವು ಭಾರತೀಯರು ಎಂಬುದು. ವಿವಿಧತೆಯಲ್ಲ್ಲಿ ಏಕತೆ ಇರುವುದೇ ಭಾರತದ ಸೌಂದರ್ಯವಾಗಿದೆ.
● ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ರಾಜ್ಯ ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧ ಇರಬೇಕು. ಕೆಲವರು ಸ್ವಾರ್ಥಕ್ಕಾಗಿ ರಾಜ್ಯ ರಾಜ್ಯಗಳ ನಡುವೆ ಒಡಕು ಉಂಟು ಮಾಡುವ ಪ್ರಯತ್ನ ಮಾಡುತ್ತಾರೆ. ಇಂತಹ ಪ್ರಯತ್ನಗಳಿಗೆ ಪ್ರಜೆಗಳು ಕಿವಿಗೊಡಬಾರದು.
● ಸಮಗ್ರ ಅಭಿವೃದ್ಧಿ ಪ್ರತಿಯೊಬ್ಬರ ಧ್ಯೇಯವಾಗಬೇಕು. ಕಳೆದ ಎರಡು ವರ್ಷದಿಂದ ಕೋವಿಡ್ ಮಹಾಮಾರಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದೇಶದ ಜನರ ಆರೋಗ್ಯ ಕಾಪಾಡುವುದು ಸರ್ಕಾರಗಳಿಗೆ ದೊಡ್ಡ ಜವಬ್ದಾರಿಯಾಗಿದೆ.
● ದೇಶದಲ್ಲಿ 150 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಿರುವುದು ಭಾರತದ ಐತಿಹಾಸಿಕ ಸಾಧನೆಯಾಗಿದೆ. ದೇಶದ ಜನತೆಗೆ ಇಷ್ಟು ದೊಡ್ಡ ಪ್ರಮಾಣದ ಲಸಿಕೆ ಒದಗಿಸುವ ಸವಾಲನ್ನು ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಯಶಸ್ವಿಯಾಗಿ ನಿಭಾಯಿಸಿರುವುದು ಹೆಮ್ಮೆಯ ವಿಷಯವಾಗಿದೆ.
● ಕಳೆದ ವರ್ಷ ಕೋವಿಡ್ 2ನೇ ಅಲೆಯಲ್ಲಿ ಅಪಾರ ಸಾವು-ನೋವುಗಳು ಸಂಭವಿಸಿದೆ. ಕೆಲವು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಯೇ ಕೋವಿಡ್‌ಗೆ ಬಲಿಯಾಗಿದ್ದು, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
● ಸರ್ಕಾರವು ಇಂತಹ ಕುಟುಂಬಗಳ ಆರ್ಥಿಕ ನೆರವಿಗೆ ಧಾವಿಸಿದೆ. ಕೋವಿಡ್‌ನಿಂದ ಮೃತಪಟ್ಟವರ ಎಲ್ಲಾ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 50 ಸಾವಿರ ರೂ. ಪರಿಹಾರ ನೀಡಿದೆ. ಇದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಇಂತಹ ಬಿ.ಪಿ.ಎಲ್. ಕುಟುಂಬಗಳಿಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ಗಳವರೆಗೆ ಪರಿಹಾರ ಘೋಷಿಸಿದ್ದು, ಬಡಕುಟುಂಬಗಳು ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ.
● ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಂದ ಬಂದಿರುವ ಅರ್ಜಿಗಳ ಪೈಕಿ ಈವರೆಗೆ 1665ಕ್ಕೂ ಹೆಚ್ಚು ಕುಟುಂಬಗಳಿಗೆ ಕೇಂದ್ರ ಸರ್ಕಾರದ 50 ಸಾವಿರ ರೂ.ಗಳ ಪರಿಹಾರ ಮೊತ್ತವನ್ನು ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ 819 ಕುಟುಂಬಗಳಿಗೆ ರಾಜ್ಯ ಸರ್ಕಾರದ ಅನುದಾನದಲ್ಲಿ ಹೆಚ್ಚುವರಿಯಾಗಿ 1 ಲಕ್ಷ ರೂ. ಮೊತ್ತದ ಚೆಕ್ ವಿತರಣೆಗೆ ಸಿದ್ಧವಾಗಿದೆ.
● ಕೋವಿಡ್ 3ನೇ ಅಲೆಯು ತೀವ್ರವಾಗಿ ಹರಡುತ್ತಿದ್ದು, ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು.
● ಮೈಸೂರು ಜಿಲ್ಲೆಯಲ್ಲಿ ಈವರೆಗೆ ಶೇ. 100ರಷ್ಟು ಮೊದಲ ಡೋಸ್ ಲಸಿಕೆ ಹಾಕಲಾಗಿದ್ದು, ಶೇ. 88 ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಸಹ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆ ಲಭ್ಯವಿದ್ದು, ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಆದಷ್ಟು ಬೇಗ ಈ ಮಹಾಮಾರಿಯನ್ನು ತಡೆಗಟ್ಟಲು ಪ್ರಯತ್ನಿಸಬೇಕಾಗಿದೆ.
● ಕೋವಿಡ್ ಸಂಕಷ್ಟದ ನುಡವೆಯು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗಿದೆ.
● ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ ಯೋಜನೆಯಡಿ ಮೈಸೂರು ಮಹಾನಗರ ಪಾಲಿಕೆಗೆ ಒಟ್ಟು 150 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.
● ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಯ ವಂತಿಕೆ ಹಣ ಸೇರಿದಂತೆ, ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಿ, ಯಂತ್ರೋಪಕರಣಗಳನ್ನು ಖರೀದಿಸಲು 54 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈ ಅನುದಾನದಲ್ಲಿ ಕೆಸರೆ ಹಾಗೂ ರಾಯನಕೆರೆ ಸಂಸ್ಕರಣಾ ಘಟಕಗಳ ಸಿವಿಲ್ ಕಾಮಗಾರಿಯು ಪ್ರಗತಿಯಲ್ಲಿದೆ. ವಿದ್ಯಾರಣ್ಯಪುರಂನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮರು ನಿರ್ಮಾಣ ಮಾಡುವ ಕಾಮಗಾರಿಯು ಟೆಂಡರ್ ಪ್ರಕ್ರಿಯೆಯಲ್ಲಿದೆ.
● ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಯಂ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಜಿ+3 ಮಾದರಿಯಲ್ಲಿ 158 ಮನೆಗಳ ನಿರ್ಮಾಣಕ್ಕೆ ಒಟ್ಟು 22.58 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.
● ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಲ್ಲಿ ಒಂದು ಬಾರಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ 377.60 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ತಾಂತ್ರಿಕ ಬಿಡ್ಡ್ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿ ಇರುತ್ತದೆ.
● ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗುಂಪು ವಸತಿ ಯೋಜನೆಯಡಿ ಮೂರು ಸ್ಥಳಗಳಲ್ಲಿ 1960 ಮನೆಗಳನ್ನು ನಿರ್ಮಾಣ ಮಾಡಲು 452 ಕೋಟಿ ರೂ.ಗಳಿಗೆ ಯೋಜನೆ ಸಿದ್ಧಪಡಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಸಚಿವ ಸಂಪುಟದ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ.
● ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 2167 ಕೆರೆಗಳನ್ನು ಪುನಶ್ಚೇತನಗೊಳಿಸಲು ‘ಸಮಗ್ರ ಕೆರೆ ಅಭಿವೃದ್ಧಿ ಅಭಿಯಾನ’ ಕೈಗೊಂಡಿದ್ದು, ಈ ವರೆಗೆ 547 ಕೆರೆಗಳ ಸಮಗ್ರ ಅಭಿವೃದ್ಧಿಯಾಗಿದೆ. ಉಳಿದ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು.
● ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ‘ಮನೆ ಮನೆಗೆ ಗಂಗೆ’ ಶೀರ್ಷಿಕೆಯಡಿ “ಜಲ ಜೀವನ್ ಮಿಷನ್’ ಯೋಜನೆಯನ್ನು ಜಾರಿಗೊಳಿಸಲಾಗಿದೆ.
● ಜಲ ಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 5 ಲಕ್ಷದ 15 ಸಾವಿರದ 194 ಕುಟುಂಬಗಳಿಗೆ ನಳ ನೀರು ಸರಬರಾಜು ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಯು 2020-21ರಿಂದ ಹಂತ ಹಂತವಾಗಿ ಅನುಷ್ಠಾನವಾಗುತ್ತಿದ್ದು, ಈಗಾಗಲೇ 73 ಸಾವಿರದ 561 ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸಿ, ಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ.
● ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ 256 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ ಅವಶ್ಯವಿರುವ ಆಟೋ ಟಿಪ್ಪರ್ ವಾಹನ ಹಾಗೂ ಕಸದ ಬುಟ್ಟಿ ಪೂರೈಸಲಾಗುತ್ತಿದೆ. ಸ್ವಚ್ಚ ಸಂಕೀರ್ಣ ಶೆಡ್ ನಿರ್ಮಾಣ ಪ್ರಗತಿಯಲ್ಲಿದೆ.
● ಕೋವಿಡ್ ಸಂಕಷ್ಟದ ನಡುವೆಯೂ ಎಲ್ಲಾ ಇಲಾಖೆಗಳಲ್ಲಿ ಇದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆ ಮೂಲಕ ಸಾರ್ವಜನಿಕರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಎಂದು ಹೇಳಿದರು. ಈ ವೇಳೆ ಕಾರ್ಯಕ್ರಮದಲ್ಲಿ ಶಾಸಕರು ಸಂಸದರು , ವಿಧಾನಪರಿಷತ್ತನ ಸದಸ್ಯರು.ಉಪಸ್ಥಿತರಿದ್ದರು.