ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
2020 ಡಿಸೆಂಬರ್ ಮತ್ತು 2021 ಜೂನ್ ನಲ್ಲಿ ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಶೋಧನಾ ಸಹೋದ್ಯೋಗಿ ಅರ್ಹತಾ ಪರೀಕ್ಷೆಯು (ಯು.ಜಿ.ಸಿ.ನೆಟ್) ವಿಶ್ವ ಸಮಸ್ಯೆ ಕರೋನಾ ವೈರಸ್’ನ ಕೆಟ್ಟ ಪರಿಣಾಮದಿಂದಾಗಿ, ಸಮಯಕ್ಕೆ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 12% ವಿಶೇಷ ಅಂಕಗಳನ್ನು ಜೂನಿಯರ್ ರೀಸಚ್೯ ಫೆಲೋ ಹಂತಕ್ಕೆ ಅಧಿಕವಾಗಿ ಪರಿಗಣನೆ ತೆಗೆದುಕೊಂಡು ಫಲಿತಾಂಶ ನೀಡಲಾಗುತ್ತದೆ ಎಂದು ಘೋಷಿಸಿ, 2021 ಡಿಸೆಂಬರ್’ನಲ್ಲಿ ಪರೀಕ್ಷೆ ನಡೆಸಲಾಯಿತು. ಈ ಹಿಂದೆ ಪ್ರತಿಬಾರಿ ಯೂನಿವರ್ಸಿಟಿ ಗ್ರ್ಯಾಂಡ್ ಕಮಿಷನ್(ಯು.ಜಿ.ಸಿ) ಕಡೆಯಿಂದ ಪರೀಕ್ಷೆಯನ್ನು ಆಯೋಜಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಸಣ್ಣ ಪುಟ್ಟ ತಾಂತ್ರಿಕ ದೋಷಗಳು ಕಂಡುಬಂದಿದ್ದು ಬಿಟ್ಟರೆ; ಯಾವುದೇ ದೊಡ್ಡಮಟ್ಟದ ನಷ್ಟ ವಿದ್ಯಾರ್ಥಿಗಳಿಗೆ ಆಗುತ್ತಿರಲಿಲ್ಲ.
ಆದರೆ ಈ ಬಾರಿ ಪರೀಕ್ಷೆಯನ್ನು ಎನ್. ಟಿ. ಎ.(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಖಾಸಗಿ ಸಂಸ್ಥೆಯೊಂದಕ್ಕೆ ಪರೀಕ್ಷೆ ನಡೆಸಲು ಅವಕಾಶ ಕೊಟ್ಟಿದ್ದು. ಆ ಸಂಸ್ಥೆಯ ಅಸಮರ್ಪಕ ಸಾಮರ್ಥ್ಯದಿಂದ, ಅವ್ಯವಸ್ಥೆಗಳಿಂದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಬಹುದೊಡ್ಡ ಗಂಡಾಂತರವೇ ನಡೆದಿದೆ. ಎಲ್ಲಾ ಐಚ್ಛಿಕ ವಿಷಯಗಳಲ್ಲಿ ಅಂದರೆ ಉದಾಹರಣೆಗೆ ವಿಜ್ಞಾನ, ಗಣಿತ, ವ್ಯವಹಾರಿಕ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಉರ್ದು ಇನ್ನಿತರ ಭಾಷಾ ವಿಷಯಗಳಲ್ಲಿ ಲೋಪದೋಷಗಳು ಏರ್ಪಡದೇ ಸುಸೂತ್ರವಾಗಿ ಪರೀಕ್ಷೆಯು ಜರುಗಿದೆ. ಆದರೆ 26/12/2021ರಂದು ನಡೆದ ಕನ್ನಡ ವಿಷಯ ಪತ್ರಿಕೆಯಲ್ಲಿ ಮಾತ್ರ ತಾಂತ್ರಿಕ ದೋಷವಾಗಿ ಮುಂಜಾನೆ ಸಮಯ ನಡೆಯಬೇಕಿದ್ದ ಪರೀಕ್ಷೆಯು ಸರಿಯಾದ ಸಮಯಕ್ಕೆ ಆರಂಭವಾಗಿಲ್ಲ. ಬಹುಪಾಲು ವಿದ್ಯಾರ್ಥಿಗಳ ಪರೀಕ್ಷಾ ನೊಂದಣಿ ಕಂಪ್ಯೂಟರ್’ಗಳಲ್ಲಿ ಎನ್.ಟಿ.ಎ. ಖಾಸಗಿ ಸಂಸ್ಥೆಯ ತಾಂತ್ರಿಕ ದೋಷದಿಂದಾಗಿ ಪರೀಕ್ಷಾ ವಿಷಯ ಪತ್ರಿಕೆಯೇ ಕಂಡಿಲ್ಲ. ವಿದ್ಯಾರ್ಥಿಗಳು ಆಗಲೇ ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ.
ಅದಾಗಿಯೂ ಕೆಲವರ ಪ್ರಶ್ನೆ ಪತ್ರಿಕೆಗಳು ತೆರದಿದ್ದು, ಕನ್ನಡ ಭಾಷಾ ಪತ್ರಿಕೆಯು ಹಿಂದಿ ಭಾಷೆಯಲ್ಲಿ ಮುದ್ರಿತವಾಗಿ ಬಂದಿದೆ. ಇದರಲ್ಲಿ ಹಿಂದಿ ಭಾಷಾ ಹೇರಿಕೆಯ ಕೆಟ್ಟ ಕುತಂತ್ರವೂ ಕೂಡ ಜರುಗಿದೆ ಎಂದು ಊಹಿಸಿದರೆ ತಪ್ಪಾಗಲಾರದು. ನಂತರ ಪರೀಕ್ಷೆ ನಡೆಯುತ್ತಿದ್ದ ಕಾಲೇಜುಗಳಿಂದ ಮೇಲ್ವಿಚಾರಕರು ಆ ಕ್ಷಣದಲ್ಲೇ ಎನ್.ಟಿ.ಎ ಖಾಸಗಿ ಸಂಸ್ಥೆಯ ಮುಖ್ಯ ಕಚೇರಿಯ ಸಿಬ್ಬಂದಿಯವರಲ್ಲಿ ದೂರು ದಾಖಲಿಸಿದ ತರುವಾಯ ಅರ್ಧತಾಸಿನ ನಂತರ ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ಮುದ್ರಿತವಾಗಿ ಬಂದಿದೆ. ಆ ಸಂದರ್ಭದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಶ್ನೆಗಳು ಪುನರಾವರ್ತಿತಗೊಂಡು ಆಗಲೂ ಸಮಸ್ಯೆ ತಲೆದೋರಿದೆ. ಅದಾಗಿಯೂ ಕೆಲವರು ಮಾತ್ರ ಪೂರ್ಣ ಪ್ರಶ್ನೆ ಪತ್ರಿಕೆಗೆ ಉತ್ತರವನ್ನು ಗುರುತು ಹಾಕಿದ್ದಾರೆ. ಉತ್ತರ ತುಂಬಿದವರಲ್ಲಿ ಕೆಲವರು, ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳ ಒಡಗೂಡಿ ಪರೀಕ್ಷಾ ಕೊಠಡಿಯಲ್ಲಿ ಒಬ್ಬರಿಗೊಬ್ಬರು ಚರ್ಚೆ ಮಾಡಿಕೊಂಡು ಉತ್ತರ ತುಂಬಿದ್ದಾರೆ. ಕೆಲವರು ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಕಾಣದೆ ಗೊಂದಲದಲ್ಲಿ,, ಭಯದಲ್ಲಿ ಸುಮಾರು ನಾಲ್ಕಾರು ತಾಸು ಕಾದಿದಲ್ಲದೆ ಹಸಿವಿನಿಂದಲೂ ಗೋಳಾಡಿದ್ದಾರೆ. ದೂರದ ಊರುಗಳಿಂದ ಬಂದವರ ಪಾಡಂತು ಕೇಳಲಾಗದಂತಾಗಿತ್ತು. ಕೊನೆಯಲ್ಲಿ ಉತ್ತರ ತುಂಬಿದ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಅಂತಿಮವಾಗಿ ಸಲ್ಲಿಕೆಯಾಗದೆ ಅವರೂ ಕೂಡ ಗೊಂದಲದಲ್ಲಿ ಪರೀಕ್ಷಾ ಕೊಠಡಿಯಿಂದ ಹೊರ ಬರುವಂತಾಯಿತು. ನಂತರ ಎಲ್ಲೆಡೆ ಉದ್ಭವಿಸಿದ ಸಮಸ್ಯೆಯಿಂದಾಗಿ ಎನ್.ಟಿ.ಎ ಖಾಸಗಿ ಸಂಸ್ಥೆಯು ಪುನರ್ ಪರೀಕ್ಷೆಯನ್ನು ನೀಡಲು ನಿರ್ಧರಿಸಿ 4/1/2022ರಂದು ಮಧ್ಯಾಹ್ನದ ಸಮಯದಲ್ಲಿ ಪರೀಕ್ಷೆಯನ್ನು ಕನ್ನಡ ವಿಷಯ ಪತ್ರಿಕೆಯವರಿಗೆ ಆಯೋಜಿಸಿತ್ತು. ಎನ್.ಟಿ.ಎ ಖಾಸಗಿ ಸಂಸ್ಥೆಯು, ಆ ಸಂದರ್ಭದಲ್ಲಿ ಪುನಃ ತೆಗೆದುಕೊಂಡ ನಿರ್ಧಾರ ಸರಿಯಾಗಿಲ್ಲ. ಮೊದಲ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸಿದವರಿಗೆ ಪ್ರವೇಶಾತಿಪತ್ರ ಕೊಡದೇ ಅವರ ಮೊದಲ ಪರೀಕ್ಷೆಯನ್ನೇ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು ಮತ್ತು ಮೊದಲ ಬಾರಿಯಲ್ಲಿ ಪ್ರಶ್ನೆ ಪತ್ರಿಕೆ ಕಾಣದವರಿಗೆ ಪುನರ್ ಪರೀಕ್ಷೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳಲ್ಲಿ ಒಂದು ಕಡೆ ಬೇಸರ ಏಕೆಂದರೆ ಮೊದಲ ಪರೀಕ್ಷೆ ಪತ್ರಿಕೆಯಲ್ಲಿ ತಾಂತ್ರಿಕ ದೋಷದಿಂದ ಉಂಟಾದ ಗೊಂದಲ ಮತ್ತು ಭಯಗಳಿಂದ ಸರಿಯಾದ ಉತ್ತರಗಳನ್ನು ತುಂಬಿಲ್ಲವೆಂದು. ಈಗ ಆ ಪರೀಕ್ಷಾ ಪತ್ರಿಕೆಯನ್ನೇ ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ನಮಗೆಲ್ಲಾ ಮೋಸವಾಗುತ್ತಿದೆಯಲ್ಲಾ ಎಂದು. ಹೇಗೋ ಪರೀಕ್ಷೆ ಬರೆದ ಮೊದಲನೇ ಬಾರಿ ಮತ್ತು ಎರಡನೇ ಬಾರಿಯ ವಿದ್ಯಾರ್ಥಿಗಳಿಬ್ಬರೂ ಫಲಿತಾಂಶಕ್ಕಾಗಿ ಕಾದುಕುಳಿತಿರುವಾಗ ಮತ್ತೊಂದು ಸಮಸ್ಯೆ ಕಂಡುಬಂದಿದೆ. ಮೊದಲನೇ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಮೋಸವಾಗಿದೆ, ಅಂಕಗಳು ವ್ಯತ್ಯಯವಾಗಿದೆ. ಎಷ್ಟೋ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ತುಂಬಿಲ್ಲವೆಂದು ಸೂಚನೆ ಬರುತ್ತಿದೆ. ನೂರಕ್ಕೆ ನಲವತ್ತು, ಐವತ್ತು, ಎಪ್ಪತ್ತು ಪ್ರಶ್ನೆಗಳಿಗೆ ಖಾಲಿ ಬಿಡಲಾಗಿದೆ ಎಂದು ತೋರಿಸಲಾಗುತ್ತಿದೆ.
ಇದರಿಂದ ತಿಳಿಯುವುದೇನೆಂದರೆ ಎನ್.ಟಿ.ಎ ಖಾಸಗಿ ಸಂಸ್ಥೆಯು ಎಷ್ಟು ಬೇಜವಾಬ್ದಾರಿ ತನವನ್ನು ಕನ್ನಡ ಭಾಷೆಯ ವಿಷಯವಾಗಿ ತೋರಿಸುತ್ತಿದೆ ಮತ್ತು ಕನ್ನಡ ಭಾಷಾ ವಿಷಯವಾಗಿ ಎಷ್ಟು ಹಿಂದಿ ಭಾಷಾ ಹೇರಿಕೆಯ ಕುತಂತ್ರ ಪ್ರದರ್ಶಿಸುತ್ತಿದೆ ಎನ್ನುವುದು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಭವಿಷ್ಯದ ಒಳಿತನ್ನು ಕಾಣದೆ ತಮ್ಮ ಉಜ್ವಲ ಭವಿಷ್ಯದ ಕನಸನ್ನು ಮೊಟಕುಗೊಳಿಸಿ ಕೊಂಡಂತಾಗಿ ಅತೀವ ದುಃಖದಿಂದ, ಬೇಸರ-ನಿರಾಸೆಗಳಿಂದ ಅವ್ಯವಸ್ಥೆಗಳಿಗೆ ಪ್ರತಿಧ್ವನಿಸುತ್ತಿದ್ದಾರೆ ಅಥವಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಸೂಕ್ತ ನಿಗವಹಿಸಿ ಯು.ಜಿ.ಸಿ.ಯೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಪ್ರಮುಖವಾಗಿ ಕನ್ನಡ ಭಾಷೆಯ ದೃಷ್ಟಿಯಿಂದ ಒಳಿತಾಗುವ ಹಾಗೆ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ವಿದ್ಯಾರ್ಥಿಗಳ ಪರವಾಗಿ ನನ್ನದೊಂದು ಧ್ವನಿ.
*ಚಿಮಬಿಆರ್(ಮಂಜುನಾಥ ಬಿ.ಆರ್)**
ಯುವಸಾಹಿತಿ,ವಿಮರ್ಶಕ,ಸಂಶೋಧಕ*
*ಹೆಚ್. ಡಿ.ಕೋಟೆ ಮೈಸೂರು.*
*ದೂರವಾಣಿ ಸಂಖ್ಯೆ:-8884684726*
*Gmail I’d:-Manjunathbr709@gmail.com.*