ಪಟ್ಟಣ ಠಾಣೆ ಪೊಲೀಸರಿಗೆ ಸನ್ಮಾನ
ಗುಂಡ್ಲುಪೇಟೆ: ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಅವರು ಮುಖ್ಯಮಂತ್ರಿ ಪದಕ ಪಡೆದ ಹಿನ್ನೆಲೆ ಹಾಗೂ ಕೊವಿಡ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ ಸಿ.ಪಿ.ಐ. ಮಹದೇವ ಸ್ವಾಮಿ ಅವರನ್ನು ತಾಲ್ಲೂಕಿನ ಬಿಜೆಪಿ ಮುಖಂಡರು ಪಿಎಚ್ಡಿ ಬ್ಯಾಂಕ್ ಅಧ್ಯಕ್ಷ ರಾದ ಎನ್. ಮಲ್ಲೇಶ್ ನೇತೃತ್ವದಲ್ಲಿ ಪಟ್ಟಣ ಪೋಲಿಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲೇಶ್, ಪಟ್ಟಣದ ಪೋಲಿಸ್ ಇಲಾಖೆಯ ಅಧಿಕಾರಿಗಳು ಕೋವಿಡ್ ಸಂದರ್ಭದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕರ ಅರೋಗ್ಯ ರಕ್ಷಣೆಗೆ ಸಹಕಾರ ನೀಡಿದ್ದಾರೆ ಎಂದರು.
ಪಟ್ಟಣ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಅವರು ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರಿಂದ ಮುಖ್ಯ ಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಆದ ಕಾರಣ ಪಟ್ಟಣದ ನಾಗರೀಕರ ಪರವಾಗಿ ಇವರನ್ನು ಸನ್ಮಾನಿಸಿರುವುದು ನಮಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ, ಪೋಲಿಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಿದಾಗ ಮಾತ್ರ ಯಾವುದೇ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಣೆ ಮಾಡಲು ಸಾಧ್ಯ. ತಾಲ್ಲೂಕಿನ ಜನತೆ ನಮ್ಮೊಂದಿಗೆ ಸಹಕಾರ ನೀಡಿದ್ದಕ್ಕಾಗಿ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾದ ಹೆಚ್.ಎಂ.ಮಹೇಶ್, ವಕೀಲರಾದ ಸಿದ್ದೇಶ್, ಮಹದೇವು ಮಳವಳ್ಳಿ, ರಂಗಪ್ಪ ಬೇರಂಬಾಡಿ, ಜ್ಯೂನಿಯರ್ ಶ್ರೀರಾಮುಲು ಸುರೇಶ್, ಸಿದ್ದಯ್ಯ, ಗೋಪಾಲ್ ಕೃಷ್ಣ, ಮಹದೇವ ನಾಯಕ, ಮಣಿಕಂಠ ನಾಯಕ ಹೊರೆಯಾಲ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ