ಚಾಮರಾಜನಗರ: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾನವಕಳ್ಳ ಸಾಗಾಣಿಕೆ, ಮಕ್ಕಳು-ಬಡವರ ಮೇಲಿನ ದೌರ್ಜನ್ಯವನ್ನು ಪೊಲೀಸರು ತಡೆಗಟ್ಟಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಸಲಹೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕ ಮತ್ತು ಜೀತ ಕಾರ್ಮಿಕ ಪದ್ದತಿ ನಿರ್ಮೂಲನಾ ಕುರಿತು ಕಾನೂನು ಅರಿವು-ನೆರವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪೊಲೀಸರು ಆಧುನಿಕ ತಾಂತ್ರಿಕ ಬಳಕೆಯನ್ನು ಕರಗತ ಮಾಡಿಕೊಂಡು ಪ್ರಕರಣಗಳನ್ನು ಭೇದಿಸಬೇಕು. ಹಲವು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕಾಣಬಹುದಾಗಿದೆ. ಇಂತಹವುಗಳನ್ನು ಪತ್ತೆಹಚ್ಚಿ ಪ್ರಕರಣಗಳನ್ನು ದಾಖಲಿಸಬೇಕು ಎಂದರು.
ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ದತಿಗಳನ್ನು ನಿರ್ಮೂಲನೆ ಮಾಡಲು ಪೊಲೀಸ್ ಇಲಾಖೆಗೆ ವಿಶೇಷ ಅಧಿಕಾರಗಳ ನೀಡಲಾಗಿದೆ. ಇದನ್ನು ಬಳಸಿಕೊಂಡು ದೌರ್ಜನ್ಯ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಮಾತನಾಡಿ ಮಾನವ ಕಳ್ಳಸಗಾಣಿಕೆಯನ್ನು ನಿರ್ಬಂಧಿಸಲಾಗಿದೆ. ಮಾನವ ಕಳ್ಳಸಗಾಣಿಕೆಗೆ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಗುರಿಯಾಗುತ್ತಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿ ಶಾಲೆ ಬಿಟ್ಟಿರುವ ಮಕ್ಕಳ ಮಾಹಿತಿಯನ್ನು ಪಡೆದುಕೊಂಡಿರಬೇಕು. ನಾಪತ್ತೆ ಆಗಿರುವ ಮಕ್ಕಳ, ಮಹಿಳೆಯರ ಕುರಿತು ದೂರು ದಾಖಲಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಬೆಂಗಳೂರಿನ ಮಾನವ ಟ್ರಾಫಿಕಿಂಗ್ ರಾಜ್ಯ ಹೈಪವರ್ ಕಮಿಟಿ ಸದಸ್ಯರಾದ ವಿಲಿಯಂ ಕ್ರಿಸ್ಟೋಫರ್ ಅವರು ಮಾತನಾಡಿ ಮಾನವ ಕಳ್ಳಸಾಗಾಣಿಕೆಯಲ್ಲಿ ಕರ್ನಾಟಕ ರಾಜ್ಯವು ೩ನೇ ಸ್ಥಾನ ಹಾಗೂ ಮಕ್ಕಳ ಕಳ್ಳಸಾಗಾಣಿಕೆಯಲ್ಲಿ ೨ನೇ ಸ್ಥಾನದಲ್ಲಿರುವುದು ವಿಷಾಧನೀಯವಾಗಿದೆ. ೨೦೧೭ ರಿಂದ ಇಲ್ಲಿಯವರೆಗೆ ೧೪೭೫ ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ದಾಖಲಾಗಿದೆ ಎಂದರು. 
ಮಾನವ ಕಳ್ಳಸಾಗಾಣಿಕೆ ಸಾಬೀತಾದರೆ ಅಪರಾಧಿಗಳಿಗೆ ೭ ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸುವುದಕ್ಕೆ ಕಾನೂನಿನಡಿ ಅವಕಾಶವಿದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು, ಪೊಲೀಸರು ಪ್ರಕರಣ ದಾಖಲಿಸುವಲ್ಲಿ ಪಾರದರ್ಶಕವಾಗಿರಬೇಕು. ಈಗಾಗಲೇ ದಾಖಲಾಗಿರುವ ಪ್ರಕರಣಗಳನ್ನು ತನಿಖೆ ಮಾಡಿ ಅಪರಾಧಿಗಳನ್ನು ಬಂಧಿಸಿದರೆ ಮುಂದಿನ ದಿನಗಳಲ್ಲಿ ಮಾನವ ಕಳ್ಳಸಾಗಾಣಿಕೆಯ ಪ್ರಮಾಣವನ್ನು ತಡೆಗಟ್ಟಬಹುದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿ ಮಾನವ ಕಳ್ಳಸಾಗಣಿಕೆಯ ದೇಶದಲ್ಲಿ ಅನಿಷ್ಟ ಪದ್ದತಿಯಾಗಿದ್ದು ಬಡತನ, ನಿರುದ್ಯೋಗ ಹಾಗೂ ಅನಕ್ಷರತೆಯಿಂದ ಕೆಲವರು ಕ್ಷಣಿಕ ಕಾಲದಲ್ಲಿ ಹೆಚ್ಚು ಹಣ ಸಂಪಾದನೆ ಮಾಡಲು ಮಾನವ ಕಳ್ಳಸಾಗಾಣಿಕೆ ಇಳಿಯುತಿದ್ದಾರೆ. ಹೆಣ್ಣು ಮಕ್ಕಳಿಗೆ ಆಸೆ, ಆಮಿಷಗಳೊಡ್ಡಿ ಕಳ್ಳಸಾಗಾಣಿಕೆಗೆ ಒಳಪಡಿಸುತ್ತಾರೆ. ಇದು ಹೆಚ್ಚಾಗಿ ಗಡಿ ಪ್ರದೇಶಗಳಲ್ಲಿ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯವರು ಕಟ್ಟೆಚ್ಚರ ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ಪಿ. ಶಿವಕುಮಾರ್ ಅವರು ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ವಿರೂಪಾಕ್ಷಾಸ್ವಾಮಿ, ಡಿ.ವೈ.ಎಸ್.ಪಿ. ಪ್ರಿಯದರ್ಶಿನಿ ಸಾಣೆಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.