ಲೇಖನ ಅಭಿವ್ಯಕ್ತಿ:- ಚಿಮಬಿಆರ್ (ಮಂಜುನಾಥ ಬಿ.ಆರ್)

ಕನ್ನಡಿಗರು ಮತ್ತೊಮ್ಮೆ ಚಳವಳಿಯ ಹಾದಿ ಹಿಡಿಯಲೇ ಬೇಕಾದ ಸಂದರ್ಭವೊಂದು ಇದೀಗ ಸನ್ನಿಹವಾಗಿದೆ. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ತರುವಾಯ ಭಾಷಾವಾರು ಶಿಕ್ಷಣ ಮಾಧ್ಯಮವಾಗುವುದು ಆ ಹಿನ್ನೆಲೆಯಲ್ಲಿ ಸೂಕ್ತವಾಗಬೇಕಿತ್ತು. ಆದರೆ ಭಾಷಾ ರಾಜಕೀಯ ಅಥವಾ ಆಡಳಿತ ನೀತಿ ಇದಕ್ಕೆ ಸಾಂವಿಧಾನಿಕ ವಿಧಿ ನಿಯಮಗಳನ್ನು ಅಡ್ಡವಿಟ್ಟು ಖಾಸಗೀಕರಣದ ಲಾಭ ಕಂಡಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ. 1989 ಜೂನ್ 19ರಂದು ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ ಕಾಣಬೇಕೆಂಬುವುದು ರಾಜ್ಯ ಸರ್ಕಾರದ ಆದೇಶವಾಗಿರುತ್ತದೆ. ಇದೇ ಆದೇಶವನ್ನು ರಾಜ್ಯಸರ್ಕಾರ ಮತ್ತಷ್ಟು ಪ್ರಬಲವಾಗಿ 1994ರಲ್ಲಿ ಮತ್ತೊಮ್ಮೆ ಮರುಪರಿಶೀಲಿಸಿ 1994-95ನೇ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯದಿಂದ ಮಾನ್ಯತೆ ಪಡೆದ ಎಲ್ಲಾ ಶಾಲೆಗಳು ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಬೋಧಿಸಬೇಕು ಮತ್ತು ಕಲಿಯಬೇಕು ಎಂದು ಆದೇಶ ಹೊರಡಿಸುತ್ತದೆ. ಈ ಆದೇಶವನ್ನು ಒಪ್ಪದ ಶಾಲೆಗಳು ಬಾಗಿಲು ಮುಚ್ಚ ಬೇಕಾಗಿ ತಿಳಿಸುತ್ತದೆ.

ರಾಜ್ಯ ಸರ್ಕಾರದ ಈ ಭಾಷಾನೀತಿಯ ವಿರುದ್ಧ ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್ ಮೊರೆಬಿದ್ದವು.ಈ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್, 2008ರಲ್ಲಿ ಖಾಸಗಿ ಅನುದಾನರಹಿತ, ಧಾರ್ಮಿಕ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಭಾಷಾ ನೀತಿಯು ಒಪ್ಪುವುದಿಲ್ಲ ಎಂದು ಖಾಸಗಿ ಶಾಲೆಗಳ ಪರವಾಗಿ ಸಾಂವಿಧಾನಿಕ ತೀರ್ಪನ್ನು ನೀಡಿತ್ತು. ರಾಜ್ಯ ಹೈಕೋರ್ಟ್’ನ ಈ ತೀರ್ಪನ್ನು ವಿರೋಧಿಸಿ ರಾಜ್ಯ ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದವು. ಮಾತೃಭಾಷೆ ಎಂದರೇನು? ಮಾತೃಭಾಷೆಯನ್ನು ನಿರ್ಧರಿಸುವವರು ಯಾರು? ವಿದ್ಯಾರ್ಥಿ ಮತ್ತು ಪೋಷಕರಿಗೆ ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಿ ಕಲಿಕೆಯ ಭಾಷಾ ಮಾಧ್ಯಮವನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಹಕ್ಕು ಇದೆಯೇ? ಮಾತೃಭಾಷೆಯ ಹೇರಿಕೆಯ ರೀತಿಯು ಸಂವಿಧಾನದ 14, 19, 29 ಹಾಗೂ 30ನೆಯ ಪರಿಚ್ಛೇದಗಳ ಅಡಿಯಲ್ಲಿನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆಯೇ? ಸರ್ಕಾರಿ ಮಾನ್ಯತೆ ಪಡೆದ ಶಾಲೆಗಳ ವರ್ಗೀಕರಣಕ್ಕೆ ಸರ್ಕಾರಿ ಅನುದಾನಸಹಿತ ಮತ್ತು ಅನುದಾನರಹಿತ ಶಾಲೆಗಳು ಸೇರುತ್ತವೆಯೇ? ಸಂವಿಧಾನದ 350(ಎ) ಪರಿಚ್ಛೇದದ ಅಡಿಯಲ್ಲಿ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕಲಿಕೆಯ ಏಕೈಕ ಮಾಧ್ಯಮವಾಗಿ ಮಾತೃಭಾಷೆಯನ್ನು ಮಾತ್ರವೇ ಆಯ್ಕೆಮಾಡಲು ರಾಜ್ಯ ಸರ್ಕಾರವು ಕಡ್ಡಾಯ ಮಾಡಲು ಬರುತ್ತದೆಯೇ? ಎಂಬ ಪ್ರಶ್ನೆಗಳನ್ನು ಮುಖ್ಯ ನ್ಯಾಯಮೂರ್ತಿ ಸದಾಶಿವಂ ನೇತೃತ್ವದ ನ್ಯಾಯಪೀಠವು 2013 ಜುಲೈ 5ರಲ್ಲಿ ಸಾಂವಿಧಾನಿಕ ನ್ಯಾಯಪೀಠದ ಪರಿಶೀಲನೆಗೆ ವಹಿಸಿಕೊಟ್ಟಿತ್ತು.

ಈ ಪ್ರಶ್ನೆಗಳಿಗೆ ಉತ್ತರವಾಗಿ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ನ್ಯಾಯಪೀಠ ಅರವತ್ತೇಳು ಪುಟಗಳ ಸುಧೀರ್ಘ ತೀರ್ಪಿನಲ್ಲಿ ಈ ನಿರ್ಧಾರಕ ಅಂಶಗಳನ್ನು ಪ್ರಕಟಿಸಿತು. ಸಂವಿಧಾನದ 19(1)ನೆಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಮಾತೃಭಾಷೆ ಮಾಧ್ಯಮದ ಬಲವಂತ ಹೇರಿಕೆ ಸಂವಿಧಾನದ ಹಕ್ಕುಗಳ ಉಲ್ಲಂಘನೆ. 350(ಎ) ಕಾಲಂಮಿನ ಪ್ರಕಾರ ಮಾತೃಭಾಷೆಯ ಅರ್ಥ, ಒಂದು ರಾಜ್ಯದ ಒಳಗಡೆ ಭಾಷಾ ಅಲ್ಪಸಂಖ್ಯಾತರ ಭಾಷೆಯಾಗಿ ಮಾತೃಭಾಷೆ ಅರ್ಥಪಡೆದುಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿರುವ ಹೇಳಿಕೆಯನ್ನು ದೃಢಪಡಿಸಿ ಮತ್ತು ಪ್ರಸ್ತುತಪಡಿಸಿ ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ನೀಡಬೇಕೆಂಬುವುದು ಅಥವಾ ಪಡೆಯಬೇಕೆಂಬುವುದು ಸಾಂವಿಧಾನಿಕ ಅಪರಾಧ ಎಂದು ತೀರ್ಪನ್ನು ತಿಳಿಸಿತು.

ಈ ತೀರ್ಪಿನಿಂದ ಖಾಸಗಿ ಶಾಲೆಗಳು ಮತ್ತು ರಾಜ್ಯ ಸರ್ಕಾರದ ನಡುವಿನ ಸುಧೀರ್ಘ ಹೋರಾಟಕ್ಕೆ ಖಾಸಗಿ ಶಾಲೆಗಳಿಗೆ ಜಯಸಿಕ್ಕಿದೆ. ಈ ತೀರ್ಪಿಗೆ ಸಂಬಂಧಪಟ್ಟಂತೆ ಈಗಾಗಲೇ ಹಲವು ಗಣ್ಯರು ತಮ್ಮ ಅಭಿಪ್ರಾಯಗಳನ್ನು ಮತ್ತು ವಿರೋಧಗಳನ್ನು ನ್ಯಾಯಯುತವಾಗಿಯೇ ತಿಳಿಸಿದ್ದಾರೆ.‘ಕೋರ್ಟ್ ತೀರ್ಪು ದುರದೃಷ್ಟಕರ. ಆದರೆ ಇದರಿಂದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಯಾರೂ ಪರಿಗಣಿಸಬಾರದು.  ಸರ್ಕಾರದ ಮುಂದೆ ಇನ್ನೂ ಹಲವು ಆಯ್ಕೆಗಳಿವೆ. ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಕಾನೂನು ತಜ್ಞರ ಜತೆ  ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಈ ತೀರ್ಪು ಜಾರಿಯಾದರೆ ಭಾಷೆಯೇ ನಾಶವಾಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡಲ್ಲ.*– ಕಿಮ್ಮನೆ ರತ್ನಾಕರ, (ಮಾಜಿ) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಣ ಸಚಿವ.*ಎಲ್ಲ ಮಾತೃ ಭಾಷೆ ಹಾಗೂ ರಾಜ್ಯ ಭಾಷೆಗಳಿಗೂ ತೀವ್ರ ಹಿನ್ನೆಡೆಯಾಗಿದೆ. 

ಭಾಷಾವಾರು ಪ್ರಾಂತ್ಯ ರಚನೆ ಮತ್ತು ಒಕ್ಕೂಟ ವ್ಯವಸ್ಥೆಯ ಆದರ್ಶಕ್ಕೆ ಕೊಡಲಿ ಏಟು ಹಾಕಿದಂತಾಗಿದೆ. ವ್ಯಕ್ತಿಯ ಹಕ್ಕಿನ ಕಾರಣ ನೀಡಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತರಲಾಗಿದೆ. ಇದು ಶಿಕ್ಷಣದ ಪ್ರಶ್ನೆ ಮಾತ್ರವಲ್ಲ. ಪತ್ರಿಕೆ, ದೃಶ್ಯ ಮಾಧ್ಯಮ, ಸಿನಿಮಾ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷಾ ಮಾಧ್ಯಮಗಳೂ ಮೂಲೆಗುಂಪಾಗುವ ಅಪಾಯವಿದೆ. ಅದಕ್ಕಾಗಿ ಸಂವಿಧಾನ ತಿದ್ದುಪಡಿ ಹಾಗೂ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ರಾಷ್ಟ್ರದಾದ್ಯಂತ ಸಮಾನ ಮನಸ್ಕರ ಸಂಘಟನೆ ಕಟ್ಟಿ ಹೋರಾಡಬೇಕಾಗಿದೆ. *-ಪ್ರೊ. ಬರಗೂರು ರಾಮಚಂದ್ರಪ್ಪ (ಸಾಹಿತಿ).*ಮಾತೃ ಭಾಷಾ ಮಾಧ್ಯಮ ಆರೋಗ್ಯಕಾರಿ ಹಾಗೂ ಸೃಜನಶೀಲವಾಗಿರುತ್ತದೆ. ಪರಭಾಷಾ ಮಾಧ್ಯಮದ ಮೂಲಕ ಶಿಕ್ಷಣ ನೀಡಿದರೆ ಮಕ್ಕಳ ಪ್ರತಿಭೆ ನಾಶವಾಗುತ್ತದೆ. ಪರಭಾಷೆಯ ಭಯದಿಂದ ಮಕ್ಕಳು ಗಿಳಿಗಳಂತೆ ಆಗುತ್ತಾರೆ. ಅವರಲ್ಲಿ ಸ್ವಂತಿಕೆ ಉಳಿಯುವುದಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಅನಿವಾರ್ಯ. ಅದಕ್ಕಾಗಿ ಮಾತೃಭಾಷಾ ಮಾಧ್ಯಮದ ಮೂಲಕವೇ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಸುವ ನಿಯಮ ಜಾರಿಗೆ ಬರಬೇಕು.

ಈ ಸಂಬಂಧ ವ್ಯಾಪಕವಾಗಿ ಚರ್ಚೆ ಮಾಡಿ, ಹೊಸ ಶಾಸನವನ್ನು ಜಾರಿಗೆ ತರಬೇಕು.-ಕಾಳೇಗೌಡ ನಾಗವಾರ(ಸಾಹಿತಿ).*ಇದು ಒಂದು ವರ್ಗದ ಜನರ ಆಸಕ್ತಿಯನ್ನು ರಕ್ಷಣೆ ಮಾಡಿದಂತೆ ಇದೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ದೇಶದಲ್ಲಿ 1400 ಭಾಷೆಗಳಿದ್ದು, ಎಲ್ಲ ಭಾಷೆಗಳ ಮೂಲಕ ಶಿಕ್ಷಣ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಆಯಾ ರಾಜ್ಯಗಳ ಭಾಷೆಗಳಲ್ಲಿ ಶಿಕ್ಷಣ ನೀಡುವುದು ಉತ್ತಮ ಎಂದು ಭಾಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಆಯಾ ರಾಜ್ಯಗಳು ರಾಜ್ಯ ಭಾಷೆಗಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರ ಹಿತಕ್ಕಾಗಿ ಪ್ರತಿಯೊಬ್ಬರ ಅಭಿಪ್ರಾಯವನ್ನೂ ತೆಗೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು.  –ಡಾ. ಚಂದ್ರಶೇಖರ ಕಂಬಾರ, ಸಾಹಿತಿ.*ಇದು ಕನ್ನಡದ ಬುಡಕ್ಕೆ ಹಾಕಿದ ಕೊಡಲಿ ಏಟು. ಇದರಿಂದ ಕನ್ನಡ ಮಾತ್ರವಲ್ಲ ಎಲ್ಲ ಪ್ರಾಂತೀಯ ಭಾಷೆಗಳೂ ಸೊರಗಿ ಸಾಯುವುದು ಖಚಿತ. ಭಾಷೆಯೊಂದಿಗೆ ದೇಶೀಯ ಸಂಸ್ಕೃತಿಗೂ ಚಪ್ಪಡಿ ಎಳೆದಂತಾಗಿದೆ. ಸುಪ್ರೀಂಕೋರ್ಟಿನ ತೀರ್ಪು ಭಾರತೀಯ ಭಾಷೆಗಳ ಮರಣ ಶಾಸನ. ಒಲೆ ಹತ್ತಿ ಉರಿದರೆ ನಿಲ್ಲಬಹುದು, ಧರೆ ಹತ್ತಿ ಉರಿದರೆ ಹೇಗೆ ಬದುಕುವುದು? ಸುಪ್ರೀಂಕೋರ್ಟ್ ಕೊಟ್ಟಿರುವುದು ತೀರ್ಪು ಅಲ್ಲ; ಅದು ವಿಷ. ತಾಯ  ಹಾಲೇ ನಂಜಾದರೆ, ಇನ್ನು ಯಾರಿಗೆ ದೂರುವುದು? ನಮ್ಮ ಹೋರಾಟದ ಮುಂದಿನ ಹೆಜ್ಜೆಗಳು ಸಬಲವಾಗಲು ಒಗ್ಗಟ್ಟಿನಿಂದ ಚಿಂತಿಸಬೇಕಾಗಿದೆ.*– ಹಂಪ ನಾಗರಾಜಯ್ಯ*ಶಿಕ್ಷಣದ ಮಾಧ್ಯಮ ಯಾವುದು ಇರಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್ನ ಈ ತೀರ್ಪು ಗೊಂದಲವನ್ನುಂಟು ಮಾಡಿದೆ. ರಾಜ್ಯದ ಭಾಷೆಯೇ ಮಾತೃಭಾಷೆಗೆ ಸಮೀಪವಾದುದು.

ಆದರೆ, ಇಂಗ್ಲಿಷ್ ಒಂದು ಭಾಷೆಯಾಗಿ ನಮಗೆ ಬೇಕೇ ಹೊರತು ನಮ್ಮ ಶಿಕ್ಷಣದ ಮಾಧ್ಯಮವಾಗಬಾರದು. ಇದು ಕನ್ನಡಿಗರ ಪಾಲಿಗೆ ಪರೀಕ್ಷಾ ಕಾಲ. ಇದಕ್ಕೆ ಪರಿಹಾರ ಇದೆ.*–ಪಾಟೀಲ ಪುಟ್ಟಪ್ಪ, ಪತ್ರಕರ್ತ*ಭಾಷಾ ನೀತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಿಗೂ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರ ಮಾತೃ ಭಾಷಾ ಮಾಧ್ಯಮದ ಬದಲು ರಾಜ್ಯ ಭಾಷಾ ಮಾಧ್ಯಮ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ, ನ್ಯಾಯಾಲಯದ ತೀರ್ಪು ಬೇರೆ ರೀತಿಯೇ ಇರುತ್ತಿತ್ತು. ಆದರೆ ಈ ತೀರ್ಪಿನಿಂದ ಧೃತಿಗೆಡುವ ಅಗತ್ಯ ಇಲ್ಲ. ರಾಜ್ಯ ಸರ್ಕಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಭಾಷೆಯನ್ನು ಶಿಕ್ಷಣದಲ್ಲಿ ಉಳಿಸಿಕೊಳ್ಳುವಂತೆ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಯಾವ ರಾಜ್ಯ ಭಾಷೆಗಳೂ ಶಿಕ್ಷಣದಲ್ಲಿ ಉಳಿಯುವುದಿಲ್ಲ.   *– ಪುಂಡಲೀಕ ಹಾಲಂಬಿ, (ಮಾಜಿ)ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ*ಭಾಷಾ ನೀತಿಗಾಗಿ ಸಂಸತ್ ಸೂಕ್ತ ಕಾನೂನು ತಿದ್ದುಪಡಿ ತರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು.

ನ್ಯಾಯಾಲಯದ ತೀರ್ಪು ದುರದೃಷ್ಟಕರ. ಇದು ಕನ್ನಡ ಭಾಷೆಗೆ ಮರಣ ಶಾಸನವಾಗಲಿದೆ. ಭಾಷಾವಾರು ಪ್ರಾಂತ್ಯಗಳ ರಚನೆ, ಒಕ್ಕೂಟ ವ್ಯವಸ್ಥೆಯನ್ನು ನ್ಯಾಯಾಲಯ ಪರಿಗಣಿಸಿದಂತಿಲ್ಲ. ತೀರ್ಪು ಮರುಶೀಲನೆ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು.*-ಡಾ. ಸಿದ್ಧಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ.*ಈ ಮೇಲೆ ತಿಳಿಸಿದ್ದು ಒಂದು ರೀತಿಯ ಮಾತೃ ಭಾಷಾನೀತಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರವನ್ನು ಖಾಸಗಿ ಶಾಲೆಗಳು ವಿರೋಧಿಸಿ ನಡೆಸಿದ ಇಪ್ಪತ್ತು ವರ್ಷಗಳ ಸಮರದ ಟಿಪ್ಪಣಿಯಾಗಿದೆ. ಇಲ್ಲಿ ಸಾಂವಿಧಾನಿಕ ತೀರ್ಪು ಖಾಸಗಿ ಶಾಲೆಗಳ ಪರವಾಗಿ ಹೊರಬಿದ್ದದ್ದು ಫಲಿತಾಂಶ. ಆದರೆ ಈ ಫಲಿತಾಂಶಕ್ಕೆ ವಿರುದ್ಧವಾಗಿ ಸಾಹಿತಿಗಳ, ರಾಜಕೀಯ ಧುರಿಣರ ಸಮರ್ಪಕ ಹೇಳಿಕೆ ಸುಪ್ರೀಂ ಕೋರ್ಟ್ ಪುನರ್ ಪರಿಶೀಲನೆಗೆ ಒಳಪಡಿಸುವಂತದ್ದೇ ಸರಿ. ನಾವು ಒಂದು ವಿಷಯವನ್ನು ಗ್ರಹಿಸಬೇಕು ಶಿಕ್ಷಣ ಎಂಬುವುದು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳಿಗೆ ಶಿಕ್ಷಣನೀತಿಯಲ್ಲಿ ಸ್ವಂತವಾಗಿ ತೀರ್ಮಾನಿಸುವ ಅಧಿಕಾರ ಮತ್ತು ಸ್ವಾತಂತ್ರ್ಯವಿದೆ. ಆದರೆ ಕೇಂದ್ರ ಸರ್ಕಾರದ ಅಸ್ತಕ್ಷೇಪ ಶಿಕ್ಷಣ ನೀತಿಯಲ್ಲಿ ಸರಿಯಲ್ಲ.

2021ರಲ್ಲಿ ಜಾರಿಗೆ ತಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ರಾಜ್ಯಗಳ ಶಿಕ್ಷಣ ನೀತಿಯ ಮೇಲೆ ಕೇಂದ್ರ ಸರ್ಕಾರದ ನಿರಂಕುಶ ಪ್ರಭುತ್ವವನ್ನು ಸೂಚಿಸುತ್ತದೆ. ಅದರಂತೆ 2021-2022ನೇ ಸಾಲಿನಲ್ಲಿ ದೇಶದಲ್ಲಿ ಮೊದಲ ಬಾರಿಗೆ ಉನ್ನತ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ಜಾರಿಗೆ ತಂದಿದೆ. ಈ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಮೂರು ವರ್ಷಗಳ ಪದವಿಯಲ್ಲಿ ಎರಡು ವರ್ಷ ಕಡ್ಡಾಯ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದು ನಿಷಿದ್ಧವಾಗಿದೆ. ಇದಕ್ಕೆ ಬೆಂಬಲ ಸೂಚಿಸಿ ಖಾಸಗಿ ವಿಶ್ವವಿದ್ಯಾಲಯಗಳು , ಖಾಸಗಿ ಪದವಿ ಕಾಲೇಜುಗಳು ಕೊಟ್ಟ ಕಾರಣ, ಕನ್ನಡ ಕಡ್ಡಾಯ ಕಲಿಕೆಯಿಂದಾಗಿ ಪಿಯುಸಿ ಹಂತದಲ್ಲಿ ಕನ್ನಡ ಕಲಿಯದ ಹೊರ ರಾಜ್ಯ ಹಾಗೂ ಹೊರ ದೇಶದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಇದರಿಂದಾಗಿ ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯದ ಕಾಲೇಜುಗಳಲ್ಲಿ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ಷೇಪ

ವ್ಯಕ್ತಪಡಿಸಿದ್ದವು. ಜತೆಗೆ ನ್ಯಾಯಾಲಯದ ಮೊರೆ ಹೋಗಿದ್ದವು. ನ್ಯಾಯಾಲಯವು ಕನ್ನಡವನ್ನು ಬಲವಂತವಾಗಿ ಕಲಿಸಬಾರದು ಎನ್ನುವ ಮಧ್ಯಾಂತರ ತೀರ್ಪಿನ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆಯು ಕನ್ನಡ ಕಡ್ಡಾಯ ಕಲಿಕೆ ವಿಷಯವನ್ನು ಕೈಬಿಟ್ಟಿದೆ.*ಕನ್ನಡಿಗರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ ಮಾಡಿದ ನಿರ್ಧಾರವಿದು. ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಇಲ್ಲಿಗೆ ಬಂದವರು ಇಲ್ಲಿನ ಜನರೊಂದಿಗೆ ವ್ಯವಹರಿಸಲು ಇಲ್ಲಿನ ಕನ್ನಡ ಭಾಷೆ ಅಗತ್ಯವಲ್ಲವೇ. ಇನ್ಯಾವ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಕಲಿತು ಕನ್ನಡ ಭಾಷೆಯಲ್ಲಿ ಕನ್ನಡಿಗರೊಂದಿಗೆ ವ್ಯವಹರಿಸುವುದು.

ಯಾರೋ ಹೊರಗಿನವರಿಗಾಗಿ ನಮ್ಮ ಕನ್ನಡಿಗರಿಗೆ ನಾವು ಹೇಗೆ ದಿಕ್ಕುತಪ್ಪಿಸುವುದು. ತಮಿಳುನಾಡಿನಲ್ಲಿ ದ್ವಿಭಾಷಾ ನೀತಿಯಿಂದ ಮಾತೃಭಾಷೆ ತಮಿಳನ್ನು ಎಲ್ಲೆಡೆ ಕಡ್ಡಾಯವಾಗಿ ಬಳಸಿ ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಕಲಿಸಲಾಗುತ್ತಿದೆ. ಅಲ್ಲಿ ಉದ್ಭವಿಸದ ಈ ಖಾಸಗಿ ವಿಶ್ವವಿದ್ಯಾಲಯಗಳ, ಖಾಸಗಿ ಪದವಿ ಕಾಲೇಜುಗಳ ಸಮಸ್ಯೆ ಕರ್ನಾಟಕದಲ್ಲಿ ಉದ್ಭವಿಸುತ್ತಿದೆ ಎಂದರೆ ಇಲ್ಲಿ ಕನ್ನಡವನ್ನು ಮೂಲೆಗುಂಪನ್ನಾಗಿ ಮಾಡುವ ಶಕುನಿ ಬುದ್ಧಿಯೇ ಎನ್ನಬಹುದು. ಪ್ರಬಲವಾದ ಕರ್ನಾಟಕವನ್ನು ಹರಿದು ಹಂಚಿ ಕರ್ನಾಟಕದಲ್ಲಿ ಕನ್ನಡಿಗರೇ ಇರದ ಹಾಗೆ ಮಾಡುವ ಕುತಂತ್ರವಿದು. ಮುಂದಿನ ದಿನಗಳಲ್ಲಿ ಪರಭಾಷಿಗರು ಕನ್ನಡಿಗರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ

ಒಳಸಂಚಿದು. ಖಾಸಗೀಕರಣದ ಮೂಲಕ ಕರ್ನಾಟಕವನ್ನು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ದೌರ್ಬಲ್ಯಗೊಳಿಸುವ ರೀತಿಯಿದು.*ಸುಪ್ರೀಂ ಕೋಟ್೯, ಕನ್ನಡಿಗರನ್ನು ಸಾಂವಿಧಾನಿಕ ಸಮಾಧಾನ ಪಡಿಸಿರುವ ರೀತಿಯಲ್ಲಿ ಜಾಣ್ಮೆ ತೋರಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ಶೇಕಡ 84% ಶಾಲೆಗಳು ಒಳಪಡುವುದರಿಂದ ಮತ್ತು ಕೇವಲ 16% ಖಾಸಗಿ ಶಾಲೆಗಳು ಅಥವಾ ಅನುದಾನರಹಿತ ಶಾಲೆಗಳು ಮತ್ತು ಇಂಗ್ಲಿಷ್ ‌ಮಾಧ್ಯಮ ಶಾಲೆಗಳು ಬರುವುದರಿಂದ ರಾಜ್ಯದ ಕಡ್ಡಾಯ ಕನ್ನಡದ ನೀತಿಗೆ ತೊಂದರೆ ಆಗುವುದಿಲ್ಲ. ಜತೆಗೆ ಈ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಕಲಿಸಲೇ ಬಾರದಂತಿಲ್ಲ ಬದಲಿಗೆ ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿ ಓದುವ ಅವಕಾಶ ಕೊಡಲಾಗುತ್ತಿದೆಯಷ್ಟೇ ಎನ್ನುವ ಅಂಶ ಕನ್ನಡವನ್ನು ಮೃದುವಾಗಿಯೇ ಧ್ವಂಸ ಮಾಡುವಂತಿದೆ. ಇತ್ತೀಚಿಗೆ ಕನ್ನಡ ಶಾಲೆಗಳು ಮುಚ್ಚಿಕೊಳ್ಳುವುದಕ್ಕೆ ಇಂಗ್ಲಿಷ್ ಭಾಷೆಯ ವ್ಯಾಮೋಹ

ಒಂದು ಕಡೆಯಾದರೆ ಕನ್ನಡ ಭಾಷೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯು ಇನ್ನೊಂದು ರೀತಿಯ ಹೊಡೆತವಾಗಿದೆ.ಹೀಗೆ ನಿರಂತರವಾದ ಜರ್ಜರಿತ ನೀತಿ ನಿಯಮಗಳಿಂದ ಕನ್ನಡ ಭಾಷೆ ಮತ್ತು ಕನ್ನಡಿಗರು ನಲುಗುವ ಮುನ್ನ ಮತ್ತೊಮ್ಮೆ ಕನ್ನಡಿಗರು ಕನ್ನಡಕ್ಕಾಗಿ ಕಟಿ ಬದ್ಧರಾಗಿ ಕಂಕಣ ತೊಡಬೇಕಾಗಿದೆ. ಪೋಷಕರು ಕನ್ನಡ ಮಾಧ್ಯಮದಲ್ಲಿ ತಮ್ಮ‌ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕೊಡಿಸುವುದರ ಮೂಲಕ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದರ ಮೂಲಕ ಕನ್ನಡದ ಉಳಿವಿಗೆ ಸಹಕರಿಸಬೇಕಾಗಿದೆ. ಉನ್ನತ ಶಿಕ್ಷಣ ಹಂತದಲ್ಲಿ ಕಡ್ಡಾಯ ಕನ್ನಡ ರಾಜ್ಯದಲ್ಲಿ ಅಗತ್ಯವಾಗಿದೆ. ಈ ವಿಚಾರವಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಾಂವಿಧಾನಿಕ ವಿಧಿ ನಿಯಮಗಳನ್ನು ತಿದ್ದುಪಡಿಗೆ ತಂದು ನ್ಯಾಯಸಮ್ಮತ ತೀರ್ಪನ್ನು ನೀಡಬೇಕಾಗಿ ಕನ್ನಡಿಗರು ಧ್ವನಿ ಎತ್ತುವುದು ಅವಶ್ಯಕ. ಜೈ ಭಾರತ ಮಾತೆ, ಜೈ ಕರ್ನಾಟಕ ಮಾತೆ.


*ಚಿಮಬಿಆರ್ (ಮಂಜುನಾಥ ಬಿ.ಆರ್)

ಯುವಸಾಹಿತಿ, ವಿಮರ್ಶಕ, ಸಂಶೋಧಕ

ಹೆಚ್.ಡಿ.ಕೋಟೆ ಮೈಸೂರು.

ದೂರವಾಣಿ ಸಂಖ್ಯೆ:-8884684726

Gmail I’d:-manjunathabr709@gmail.com.