ಮೈಸೂರು: ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಾವಣೆ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪುಸುಲ್ತಾನ್ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಅಂತಹವರ ಹೆಸರು ಬದಲಾವಣೆ ಮಾಡುವುದು ಸರಿಯಲ್ಲ. ಸಂಸದ ಪ್ರತಾಪ್ ಸಿಂಹ ಓರ್ವ ಅಂಕಣಕಾರನಾಗಿದ್ದವನು. ರೈಲ್ವೆ ಸಚಿವರ ಬಳಿ ಈ ರೀತಿ ಚರ್ಚಿಸಿರೋದು ಎಷ್ಟು ಸರಿ. ಒಡೆಯರ್ ಕೂಡಾ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಆದರೆ, ಇಂತಹ ವಿಚಾರದಲ್ಲಿ ಘರ್ಷಣೆ ಮಾಡುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಹೆಚ್.ಸಿ. ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಎಕ್ಸಪ್ರಸ್ ಎಂದು ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ವಿಚಾರವಾಗಿ ಮೈಸೂರಿನಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿದ್ದಾರೆ. ಇದು ದುರದೃಷ್ಟಕರ ಹೇಳಿಕೆ. ಒಬ್ಬ ಸಂಸದನಿಗೆ ಈ ರೀತಿಯ ಕೋಮುವಾದಿ ಚಿಂತನೆ ಇರುವುದು ಒಳ್ಳೆಯದಲ್ಲ ಇದು ದುರದೃಷ್ಟಕರ. ಇದು ಅವರ ಫ್ಯಾಸಿಸ್ಟ್ ಮನೋಭಾವವನ್ನು ಎತ್ತು ತೋರಿಸುತ್ತಿದೆ. ಕೆಆರ್‌ಎಸ್ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದೇ ಟಿಪ್ಪುಸುಲ್ತಾನ್. ಟಿಪ್ಪು ದೂರದೃಷ್ಟಿಯ ರಾಜನಾಗಿದ್ದ. ಅದರ ಫಲವಾಗಿ ಅಂದಿನ ಕಾಲದಲ್ಲೇ ೩೫ ಸಾವಿರ ಕೆರೆ ಕಟ್ಟೆ ಕಾಲುವೆಗಳು ನಿರ್ಮಾಣವಾಗಿವೆ ಎಂದು ಹೇಳಿದ್ದಾರೆ.

ಹೊಸದೊಂದು ರೈಲು ತಂದು ಅದಕ್ಕೆ ಒಡೆಯರ್ ಹೆಸರು ಇಡಿ. ಈಗ ಇರುವ ಟಿಪ್ಪು ಹೆಸರನ್ನು ಬದಲಿಸುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದಾಗ ಬುಲೆಟ್ ರೈಲು ತರುತ್ತೇನೆ ಎಂದಿದ್ದರು. ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಭರವಸೆ ನೀಡಿದ್ದರು. ಪ್ರತಾಪ್ ಸಿಂಹ ಇದನ್ನು ಮೋದಿಯವರ ಬಳಿ ಕೇಳಬೇಕು ಎಂದು ಅಬ್ದುಲ್ ಮಜೀದ್ ಮೈಸೂರಿನಲ್ಲಿ ಒತ್ತಾಯ ಮಾಡಿದ್ದಾರೆ.