ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಬಲವಂತ ಪಡಿಸಿದಲ್ಲದೇ ಪ್ರೀತಿಸದಿದ್ದಲ್ಲಿ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ೨೨ ದಿನ ಶಿಕ್ಷೆ ಮತ್ತು ೧೦ ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದ ಚೇತನ್ ಹಾಗೂ ಗುರುಪ್ರಸಾದ್ ಶಿಕ್ಷೆಗೆ ಗುರಿಯಾದವರು. ಚೇತನ್ ೧೬ ವರ್ಷದ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಬಲವಂತ ಪಡಿಸುತ್ತಿದ್ದ. ಕಳೆದ ೨೦೧೯ರ ಮೇ ೮ ರಂದು ಅಪ್ರಾಪ್ತ ಬಾಲಕಿ ತನ್ನ ಅಜ್ಜಿ ಊರಿಗೆ ಹೋಗಿದ್ದಾಗ ಗುರುಪ್ರಸಾದ್ ಬಾಲಕಿಯ ಮೊಬೈಲಿಗೆ ಕರೆ ಮಾಡಿ ನೀನು ಚೇತನನನ್ನು ಪ್ರೀತಿಸದಿದ್ದರೆ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತಕ್ಷಣ ವಾಪಸ್ಸು ಬರುವಂತೆ ತಿಳಿಸಿದ್ದ. ಬಂದ ಬಾಲಕಿಯನ್ನು ತನ್ನ ಮೋಟರ್ ಸೈಕಲ್‌ನಲ್ಲಿ ಕೂರಿಸಿಕೊಂಡು ಬೇರೆ ಕಡೆಯಲೆಲ್ಲಾ ಸುತ್ತಾಡಿಸಿ ನೀನು ನನ್ನನ್ನೆ ಮದುವೆಯಾಗಬೇಕು ಎಂದು ಇಲ್ಲದಿದ್ದರೆ ನಿಮ್ಮ ಮನೆಯವರ ಪೈಕಿ ಯಾರನ್ನಾದರೂ ಕೊಲೆ ಮಾಡಲು ತಯಾರಿದ್ದೇನೆ ಎಂದು ಬೆದರಿಕೆ ಹಾಕಿದ್ದ. ಬಾಲಕಿಗೆ ಲೈಂಗಿಕ ಪೀಡನೆ ಹಾಗೂ ಕೊಲೆ ಬೆದರಿಕೆ ಹಾಕಿದ್ದು ಇದಕ್ಕೆ ಗುರುಪ್ರಸಾದ್ ಸಹಕಾರ ನೀಡಿದ್ದು ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಭಾರತೀಯ ದಂಡ ಸಂಹಿತೆ ಕಲಂ ೩೫೪(ಡಿ), ೫೦೬ ಪೋಕ್ಸೋ ಕಾಯ್ದೆ ಕಲಂ ೧೨ ಮತ್ತು ೧೭ರ ಅನ್ವಯ ಆರೋಪಿಗಳಿಗೆ ೨೨ ದಿನ ಶಿಕ್ಷೆ ಮತ್ತು ೧೦ ಸಾವಿರ ರೂ ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ ಮತ್ತೆ ೧ ತಿಂಗಳ ಸಾದಾ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸತಕ್ಕದ್ದು. ಆರೋಪಿಗಳಿಗೆ ವಿಧಿಸಿರುವ ದಂಡದ ಹಣವಾದ ತಲಾ ೧೦ ಸಾವಿರ ರೂ ಗಳನ್ನು ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ೨೦ ಸಾವಿರ ರೂ ಗಳನ್ನು ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಜನವರಿ ೨೮ ರಂದು ತೀರ್ಪು ನೀಡಿದ್ದಾರೆ. 

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೇಶ್ ವಾದ ಮಂಡಿಸಿದ್ದರು.