ಲೇಖಕರು   :    ಗುರುರಾಜ್  ಎಂ .ಎಸ್              

” ಮರ ಗಿಡ ನೋಡಲು ಹಣ ಕೊಟ್ಟು ಬರಬೇಕಿತ್ತಾ ?”

” ಸುಮ್ಮನೆ ಟೈಮ್ ವೇಸ್ಟ್, ಈ ಕಾಡಿನಲ್ಲಿ ಏನಾದರೂ ಇದೆಯಾ ?”

” ಪ್ರಾಣಿಯೂ ಇಲ್ಲ, ಏನೂ ಇಲ್ಲ. ಮೋಸ “.

ಈ ಬಾರಿ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಸಫಾರಿ ಮುಗಿಸಿ ಬಂದಾಗ ಅರಣ್ಯ ಇಲಾಖೆಯ ಬಸ್ ನಿಂದ ಇಳಿಯುತ್ತಾ ಕೆಲವು ಪ್ರವಾಸಿಗರು ಬೈದುಕೊಳ್ಳುತ್ತಿದ್ದರು.  ಹೌದು, ದುಬಾರಿ ಟಿಕೆಟ್ ಖರೀದಿಸಿ, ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ಕಾಡೆಲ್ಲಾ ಅಲೆದರೂ ಅಂದು ಪ್ರವಾಸಿಗರು  ನೋಡಬಯಸುವ  ಹುಲಿಯಾಗಲಿ, ಆನೆ ಚಿರತೆಗಳಾಗಲಿ ಯಾವ ಪ್ರಾಣಿಗಳೂ ಕಣ್ಣೆದುರಿಗೆ ಸ್ಪಷ್ಟವಾಗಿ ಕಾಣಲೇ ಇಲ್ಲ ಜಿಂಕೆಯೊಂದನ್ನು ಬಿಟ್ಟು . ಸಹಜವಾಗಿಯೇ ಕಾಡುಪ್ರಾಣಿಗಳ ಜೀವನದ ಅರಿವಿಲ್ಲದ ಅವರು ಬೇಸರಗೊಂಡಿದ್ದರು. ಪಾಪ, ಈ ಜನರು ಮಾಡಿಕೊಂಡ ಖರ್ಚಿನ ಬಗ್ಗೆಯಾಗಲಿ, ಅವರ ಅಮೂಲ್ಯವಾದ ಸಮಯದ ಬಗ್ಗೆಯಾಗಲಿ ಕಾಡಿನಲ್ಲಿ ವಾಸಿಸುವ ಜೀವಿಗಳಿಗೆ ಹೇಗೆ ತಾನೇ ತಿಳಿಯಬೇಕು?  ಎಷ್ಟೇ ಆದರೂ ಅವು ಕಾಡು ಮೃಗಗಳು !!

ಆ ದಿನ ಟಿಕೆಟ್ ಪಡೆದು ಮಗನ ಜೊತೆ  ಬಸ್ ಏರಿ ಅರಣ್ಯ ಪ್ರವೇಶಿಸಿದಾಗ ಕೆಲವರು ಬಹಳ ಉತ್ಸುಕರಾಗಿ ತಮ್ಮ ಸೀಟ್ ನ  ಕಿಟಕಿಗಳಿಂದಷ್ಟೇ ಅಲ್ಲದೆ ಅಕ್ಕ ಪಕ್ಕದವರ ಕಿಟಕಿಗಳಿಂದಲೂ ಇಣುಕಿ ಇನ್ನೂ ಕಾಣದ  ಪ್ರಾಣಿಗಳನ್ನು ನೋಡಲು ಮುಗಿಬೀಳುತ್ತಿದ್ದರು. ಆರಂಭದಲ್ಲಿ ಜಿಂಕೆಗಳನ್ನು ಕಂಡಾಗ  “ಹಾ , ಹೋ ” ಎಂದು ಉದ್ಗರಿಸುತ್ತಿದ್ದ ಜನರು ಎಲ್ಲೆಲ್ಲೂ ಜಿಂಕೆಗಳೇ ಕಾಣತೊಡಗಿದಾಗ  ಕಡೆಗಣಿಸಿ ಸುಮ್ಮನಾದರು. ಸುಮಾರು ಒಂದು ಗಂಟೆ ಕಳೆಯಿತು. ಮಧ್ಯಾಹ್ನದ ಉರಿ ಬಿಸಿಲು ಕಾಡನ್ನೆಲ್ಲ ಆವರಿಸಿತ್ತು. ಅಂದು ಏಕೋ ಪ್ರವಾಸಿಗರು ನೋಡಬಯಸಿದ್ದ  ಯಾವ  ಪ್ರಾಣಿಗಳೂ ಕಾಣಲಿಲ್ಲ. ಬೇಸರದಿಂದ ತಾಳ್ಮೆಕಳೆದುಕೊಂಡು ಗೊಣಗಲು  ಶುರುಮಾಡಿದ್ದರು.

 ನಮ್ಮ ಸಫಾರಿ ಬಸ್ ಚಾಲಕರಂತೂ ಪ್ರಾಣಿಗಳನ್ನು ತೋರಿಸಲು ಅವಿರತ ಪ್ರಯತ್ನದಲ್ಲಿದ್ದರು. ನಾ ಕಂಡಂತೆ ಕಬಿನಿ ಸಫಾರಿಯಲ್ಲಿ ಎಲ್ಲ ಬಸ್ ಚಾಲಕರು ಪ್ರವಾಸಿಗರಿಗೆ ಪ್ರಾಣಿಗಳ ದರ್ಶನ ಮಾಡಿಸಲೇಬೇಕೆಂದು ಪಣ ತೊಟ್ಟವರಂತೆ ಕಾರ್ಯನಿರ್ವಹಿಸುತ್ತಾರೆ. ಕಾಡಿನ ಬೇರೆ ಭಾಗದಲ್ಲಿರುವ ಸಫಾರಿ ವಾಹನಗಳೊಂದಿಗೆ ನಿರಂತರವಾಗಿ ಸಂಪರ್ಕಿಸುತ್ತಅಲ್ಲೇನಾದರೂ ಪ್ರಾಣಿಗಳು ಕಂಡಿದ್ದರೆ, ಆ ಭಾಗಕ್ಕೆ ಹೋಗಿ ತೋರಿಸುವ ಕೆಲಸ ಮಾಡುತ್ತಾರೆ.  ಪ್ರಾಣಿಗಳಿಲ್ಲ ಎಂಬ ನೆಪಹೇಳಿ ಸಮಯ ಕಳೆಯದೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾರೆ.

ಆದರೂ ಅಂದು ಪ್ರಾಣಿಗಳು ನಮ್ಮೆದುರಿಗೆ  ಇನ್ನೂ ಬಂದಿರಲಿಲ್ಲ. ಎಲ್ಲರಲ್ಲೂ ನಿರಾಸೆ. ಆದರೆ ಇದ್ದಕ್ಕಿದ್ದಂತೆ ನನ್ನ ಮಗ  ” ಅಪ್ಪ, ಸರ್ಪೆಂಟ್ ಈಗಲ್ ! “ಎಂದು ಮೆಲ್ಲಗೆ ಹೇಳಿದ. ಪಕ್ಷಿಗಳ ಬಗ್ಗೆ ಸ್ವಲ್ಪ ತಿಳುವಳಿಕೆ ಇದ್ದುದರಿಂದ ಆ ಹದ್ದು ನನ್ನ ಬೇಸರವನ್ನು ಹೋಗಲಾಡಿಸಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅದರ ಮೊನಚಾದ  ಉಗುರುಗಳಿರುವ ಕಾಲುಗಳಡಿಯಲ್ಲಿ  ಸತ್ತ ಹಾವಿನ ಬಾಲವೊಂದು ನೇತಾಡುತಿತ್ತು. ಅಲ್ಲಿ ನಡೆದಿರುವ ಬೇಟೆಯ ದೃಶ್ಯವನ್ನು ನನ್ನ ಮಗನಿಗೆ ವಿವರಿಸುವಾಗ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಕುತೂಹಲದಿಂದ ಏನೆಂದು ಕೇಳಿದ. ಹದ್ದನ್ನು ತೋರಿಸಿದಾಗ ” ಎಲ್ಲಿ ಯಾವ ಹದ್ದು ಕಾಣುತ್ತಿಲ್ಲ ” ಎಂದ. ಎಷ್ಟು ಪ್ರಯತ್ನಪಟ್ಟರೂ ಆತನಿಗೆ ಅದನ್ನು ನೋಡಲಾಗಲಿಲ್ಲ. ಕಾರಣ, ಮರದ ಮೇಲೆ ಕುಳಿತಿರುವ ಹದ್ದನ್ನು ಎಲೆ ಮತ್ತು ರೆಂಬೆಗಳಿಂದ  ಬೇರ್ಪಡಿಸಿ ನೋಡಲು ಆತನ ಕಣ್ಣುಗಳಿಗೆ  ಸಾಧ್ಯವಾಗಲೇ ಇಲ್ಲ. ಮತ್ತೊಬ್ಬ ” ಅಯ್ಯೋ ಹದ್ದನ್ನ ಏನ್ ನೋಡ್ತೀಯಾ, ಬಿಡು” ಎನ್ನುತ್ತಾ ಕಾಡಿನ ಅದ್ಭುತ ಬೇಟೆಯ ಘಟನೆಯಿಂದ ವಂಚಿತನಾದ.

ಸ್ವಲ್ಪ ಸಮಯದ ನಂತರ ಚಾಲಕ ಬಸ್ ಅನ್ನು ಒಂದು ಪೊದೆಯ ಬಳಿ ನಿಲ್ಲಿಸಿದರು. ಅಲ್ಲಿ ಆಗ  ತಾನೇ ಹಾಕಿದ್ದ ಲದ್ದಿ ಬಿದ್ದಿತ್ತು. ಆನೆಯ ಇರುವಿಕೆ ಅವರ ಅರಿವಿಗೆ ಬಂದಿತ್ತು. ಜನರೆಲ್ಲಾ ಧಿಗ್ಗನೆ ಎದ್ದು ಪೊದೆಯ ಕಡೆ  ನೋಡತೊಡಗಿದರು. ಆದರೆ ಆನೆ ಪೊದೆಯ ಹಿಂದೆ ಇದ್ದುದರಿಂದ ಏನೂ ಕಾಣಲಿಲ್ಲ. ಆದರೂ ಆನೆ ನಿಂತಿರುವ ಸ್ಥಳದಿಂದ ಗಿಡಗಳು ಕಟಕಟನೇ ಮುರಿದ ಸದ್ದು ಕೇಳಿಬರುತ್ತಿತ್ತು. ಒಣಗಿದ ಪೊದೆಗಳ ಸದ್ದು ಅದರ ಭಾರೀ ಗಾತ್ರವನ್ನು ಅಂದಾಜಿಸಲು ಸಹಾಯ ಮಾಡುತಿತ್ತು. ನನಗೆ ಆನೆ ಕಾಣದಿದ್ದರೂ ಕಂಡಷ್ಟೇ ಸಂತೋಷವಾಗಿತ್ತು. ಆದರೆ ಪ್ರವಾಸಿಗರಿಗೆ ಮತ್ತು ಅವರ ಕ್ಯಾಮೆರಾಗಳಿಗೆ ಬೇಸರವಾಗಿತ್ತು. ಬಸ್ ಮುಂದೆ ಸಾಗಿತು.

ಬಸ್ ಒಂದು ಸಣ್ಣ ಸೇತುವೆ ಮೇಲೆ ಸಾಗುವಾಗ  ಕೆಳಭಾಗದಲ್ಲಿ ನೀರಿದ್ದ ಕಾರಣ ಇಲ್ಲಾದರೂ ಪ್ರಾಣಿಗಳು ಕಾಣಬಹುದೆಂದು ಬಸ್ ನಿಲ್ಲಿಸಿದರು. ನೀರಿನ ಬಳಿ ಇದ್ದ ಕೆಸರು ಮಣ್ಣಿನಲ್ಲಿ  ಹಲವು ಹೆಜ್ಜೆ ಗುರುತುಗಳಿದ್ದವು. ಅವುಗಳ ನಡುವೆ ಹುಲಿಯ ದಪ್ಪ ಹೆಜ್ಜೆ ಗುರುತು ಸ್ಪಷ್ಟವಾಗಿ ಮೂಡಿತ್ತು. ನೀರಿಗೆ ಬಂದಿದ್ದ ಹುಲಿಯು ಮತ್ತೊಂದು ದಿಕ್ಕಿಗೆ ಹೋಗಿತ್ತು. ಅದನ್ನು ಕಲ್ಪಿಸಿಕೊಂಡು ಪುಳಕಿತಗೊಂಡೆವು.ಸಫಾರಿ ಪ್ರಾರಂಭವಾಗಿ ಸುಮಾರು ಎರಡು ಗಂಟೆಗೂ ಅಧಿಕ ಸಮಯ ಕಳೆದಿತ್ತು. ಪ್ರವಾಸಿಗರೆಲ್ಲರಲ್ಲೂ ನಿರಾಶಾಭಾವ ಎದ್ದು ಕಾಣುತಿತ್ತು. ಮೊದಲಿದ್ದ ಉತ್ಸಾಹ ಕರಗಿ ಒಂದಿಬ್ಬರು ನಿದ್ರೆಗೆ ಜಾರಿದ್ದರು.  ನಾನು ಅಲ್ಲಿದ್ದ  ಕೆಂದಳಿಲು, ಮರಕುಟಿಗ, ಜಂಗಲ್ ಬಾಬ್ಲರ್ ಮತ್ತು ಕಾಜಾಣದಂತಹ ಹಕ್ಕಿಗಳ ಬಗ್ಗೆ ಮಗನಿಗೆ ತಿಳಿಸುತ್ತಾ ಹೋದೆ.

  ಇದ್ದಕ್ಕಿದ್ದಂತೆ ಬಸ್ಸಿನ ಗಡ ಗಡ ಎಂಜಿನ್ ಸದ್ದು ನಿಂತು ಹೋಯಿತು. ಚಾಲಕ ” ಅಲಾರ್ಮ್ ಕಾಲ್ ” ಎಂದಾಗ  ಹಲವರಿಗೆ  ಏನೂ  ಅರ್ಥವಾಗದೆ ಏನೋ ಇರಬೇಕೆಂದು ಹೊರಗೆ ನೋಡತೊಡಗಿದರು. ನನ್ನ ಕಿವಿಗೆ ಲಂಗೂರ್ ಕೋತಿಯ ಅಪಾಯದ ಕರೆ ಕೇಳಿಸಿತು. ತನ್ನ ಗುಂಪಿನ ರಕ್ಷಣೆಗಾಗಿ ಕಾವಲುಗಾರ ಕೋತಿಯೊಂದು ಮರದ ಮೇಲೆ ಕುಳಿತು ಮಾಂಸಾಹಾರಿ ಪ್ರಾಣಿಗಳು ಬಂದಾಗ ಜೋರಾಗಿ  ಕೂಗಿ  ಗುಂಪಿನ ಇತರ ಸದಸ್ಯರನ್ನು ಎಚ್ಚರಿಸುತ್ತದೆ ಎಂದು ನನಗೆ ತಿಳಿದಿತ್ತು. ಈ ಕೂಗನ್ನು ಕೇಳಿ  ಕಪಿ ಚೇಷ್ಟೆಯಲ್ಲಿ ತೊಡಗಿದ್ದ ಮಂಗಗಳೆಲ್ಲ ಸರ್ರನೆ ಮರಗಳನ್ನು ಏರಿ ಸುರಕ್ಷಿತ ಜಾಗಕ್ಕೆ ಸೇರಿದವು. ಈ ಲಂಗೂರ್ ಕೋತಿಗಳು ಹುಲಿಯನ್ನು ಕಂಡಾಗ ಒಂದು ರೀತಿ ಕೂಗಿದರೆ, ಚಿರತೆ ಮತ್ತು ಕಾಡು ನಾಯಿಗಳಿಗೇ  ಬೇರೆ ರೀತಿ ಕೂಗುತ್ತದೆ ಎಂದು ವನ್ಯ ಜೀವಿ ತಜ್ಞರೊಬ್ಬರು ಹೇಳಿದ್ದರು. ಆದರೆ ಅದನ್ನೆಲ್ಲ ಗ್ರಹಿಸುವಷ್ಟು ಜ್ಞಾನ  ನನ್ನಲ್ಲಿರಲಿಲ್ಲ. ಆದ್ದರಿಂದ ಯಾವ  ಬೇಟೆಗಾರ  ಮೃಗದ  ಒಂದು ನೋಟ  ಸಿಗಬಹುದೆಂದು ಕುತೂಹಲದಿಂದ ಎದುರು ನೋಡುತ್ತಿದ್ದೆ.  ನಮ್ಮ ಬಸ್ ನಿಂದ ಸ್ವಲ್ಪವೇ ದೂರವಿದ್ದ  ಜಿಂಕೆಗಳ ಗುಂಪು ಅದಾಗಲೇ ಎಚ್ಚರಗೊಂಡು ಕಿವಿಗಳೆನ್ನೆಲ್ಲ ನೆಟ್ಟಗೆ ಮಾಡಿ ಅಲುಗಾಡದೆ ನಿಂತಿದ್ದವು. ಬಹುಶಃ ಅವು ಯಾವುದೊ ಬೇಟೆಗಾರ ಪ್ರಾಣಿಯ ವಾಸನೆ ಗ್ರಹಿಸಿರಬೇಕು, ಎದುರಿನ ದಿಕ್ಕನ್ನೇ ದೃಷ್ಟಿಸಿ ಸಂಪೂರ್ಣ ಸ್ತಬ್ಧವಾಗಿ ನಿಂತಿದ್ದವು. 

ಎಲ್ಲರೂ ನಿಶ್ಯಬ್ದವಾಗಿರುವಂತೆ ಚಾಲಕ ಸೂಚಿಸಿದ. ಕೋತಿಯ ಕರೆಯೊಂದನ್ನು ಬಿಟ್ಟು ಎಲ್ಲವೂ ನಿಶ್ಯಬ್ದವಾಗಿತ್ತು. ಕಾಡಿಗೆ ಕಾಡೇ ಸ್ತಬ್ಧಗೊಂಡಿತ್ತು. ಇದ್ದಕ್ಕಿಂದಂತೆ ಆ ಭಯದ ವಾತಾವರಣವನ್ನು ಸೀಳುತ್ತಾ  ಜಿಂಕೆಯು  ಕರ್ಕಶವಾಗಿ  ಕೂಗಿದ ಧ್ವನಿ  ಕಿವಿಗೆ ಬಡಿಯಿತು. ಆ ಕರೆ ನಮ್ಮ ಹತ್ತಿರವೇ ಇರಬಹುದಾದ ಮಾಂಸಾಹಾರಿಯ ಉಪಸ್ಥಿತಿಯನ್ನು ಸಾರಿ ಹೇಳುತ್ತಿತ್ತು.  ಕಾಡು  ತನ್ನದೇ ಭಾಷೆಯಲ್ಲಿ  ಮಾತನಾಡುತಿತ್ತು.

ಇದು ನಿಜಕ್ಕೂ ಅನಿರ್ವಚನೀಯ ಅನುಭವ.  ಚಾಲಕನಿಗೆ ಏನೋ ಸುಳಿವು ಸಿಕ್ಕಿರಬೇಕು , ತಕ್ಷಣವೇ ಬಸ್ ಸ್ಟಾರ್ಟ್ ಮಾಡಿ  ಸುಮಾರು  ೧೦೦ ಅಡಿ ಮುಂದೆ ಸಾಗಿ ನಿಲ್ಲಿಸಿದರು. ನಮ್ಮ ಎದೆ ಬಡಿತ ಹೆಚ್ಚಾಗಿತ್ತು. ಉದ್ದುದ್ದ ಕ್ಯಾಮೆರಾಗಳು ಕಿಟಕಿಯಿಂದ ಹೊರಚಾಚಿ ಕಂಡಿರದ ಪ್ರಾಣಿಯನ್ನು ಸೆರೆಹಿಡಿಯಲು ಕಾತರವಾಗಿದ್ದವು. ಸ್ವಲ್ಪ ಸಮಯದ ನಂತರ ಪೊದೆಯ ಸಂದಿನಲ್ಲಿ ಏನೋ ಚಲಿಸಿದಂತಾಯಿತು. ಗಾಢ ಹಳದಿ ಬಣ್ಣದ ಚರ್ಮದ ಮೇಲೆ ಕಪ್ಪು ಚುಕ್ಕೆಗಳಿದ್ದ ಪ್ರಾಣಿಯ  ತೊಡೆಯ ಭಾಗ ಮತ್ತು ಬಾಲ  ಸ್ಪಷ್ಟವಾಗಿ ಕಂಡು ಕ್ಷಣಾರ್ಧದಲ್ಲಿ ಮರೆಯಾಯಿತು ಅಷ್ಟೆ!.   “ಚಿರತೆ, ಚಿರತೆ !!! ” ಎಂಬ ಕೂಗು ಎಲ್ಲೆಡೆ  ಮಾರ್ದನಿಸಿತು.

ಕೆಲವು ನಿಮಿಷದ ನಂತರ ಕೋತಿಯ ಕೂಗು ನಿಂತಿತು. ಕಾಡು ಮರಳಿ ಸಹಜ ಸ್ಥಿತಿಗೆ ಬಂದಿತು. ಕಾಡಿನ ವೇದಿಕೆಯಲ್ಲಿ  ನಡೆಯುತ್ತಿದ್ದ ಇಡೀ ದ್ರಶ್ಯಾವಳಿ ರೋಮಾಂಚನಕಾರಿಯಾಗಿತ್ತು.  ಚಿರತೆ ಇನ್ನೇನು ನಮ್ಮ ಹತ್ತಿರ ಬಂದುಬಿಡುತ್ತದೆ ಎಂದು ಕಾಯುತ್ತಿದ್ದ ಪ್ರವಾಸಿಗರಿಗೆ ಯಾವ ಪ್ರಾಣಿಯೂ ಬಾರದಿದ್ದರಿಂದ ಮತ್ತೆ ನಿರಾಸೆಯಾಗಿ  ಗೊಣಗುಟ್ಟುವಿಕೆ ಬಸ್ಸಿನ ಒಳಗೆಲ್ಲಾ ಹರಡಿತು. ಅದಾಗಲೇ ಸಮಯವಾಗಿದ್ದರಿಂದ  ಬಸ್ ಸಫಾರಿ ಕೇಂದ್ರದ ಕಡೆ ಮುಖ ಮಾಡಿತು.ಸಫಾರಿ ಕೇಂದ್ರಕ್ಕೆ ಬಂದು ತಲುಪಿದಾಗ ಹಲವರು ಶಾಪ ಹಾಕುತ್ತಾ ಇಳಿದರೆ, ಇನ್ನು ಕೆಲವರು ಮತ್ತೊಮ್ಮೆ ಬರುವ ಯೋಚನೆಯಲ್ಲಿದ್ದರು. ನಮಗಂತೂ ಕಾಣದಿದ್ದರೂ ಕಂಡಂತಹ ಅನುಭವವಾಗಿ, ನೋಡಿದ ಅದ್ಭುತ ದೃಶ್ಯಗಳನ್ನು ಮೆಲುಕು ಹಾಕುತ್ತಾ ಮನೆಯ ದಾರಿ ಹಿಡಿದೆವು.