ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ !!*

ಜಗತ್ತು ಅದರ ಇತಿಹಾಸದಲ್ಲಿ ದಾಖಲಾಗಿರುವಂತಹ ವ್ಯಕ್ತಿಗಳ ಸಾಲನ್ನು ನೋಡಿದರೆ ಬಹುತೇಕ ಚಾರಿತ್ರ್ಯಪೂರ್ಣ ಸಾಧಕರದ್ದೇ ಆಗಿದೆ. ಸಮಾಜ ಸದಾ ಸ್ಮರಿಸುವುದು ಇತಿಹಾಸವನ್ನು ಸೃಷ್ಟಿಸಿದವರನ್ನು ಹೊರೆತು ಇತಿಹಾಸದಲ್ಲಿ ಹುಳುಗಳಂತೆ ಮಣ್ಣುಪಾಲಾದವರನಲ್ಲ. ಇತಿಹಾಸದೊಳಗೆ ಎಷ್ಟೊಂದು ಯುದ್ಧಗಳು ನಡೆದಿವೆ ಆದರೆ ಗೆದ್ದವನನ್ನು ಉತ್ಪ್ರೇಕ್ಷಿಸಿ ಸಮಾಜದ ಮುಂದೆ ಪುಸ್ತಕಗಳು ಗ್ರಂಥಗಳು ರೋಮಾಂಚಕಾರಿಯಾಗಿ ಅವರ ವ್ಯಕ್ತಿತ್ವ ಹೇಳಲ್ಪಡುತ್ತವೆ.

ಆದರೆ ಸಾಮಾನ್ಯ ಲಕ್ಷಾಂತರ ಜನಗಳು ಪಾಲು ಕಾಣದಾಗುತ್ತದೆ. ಯಾರೆಲ್ಲ ಸಾಮಾನ್ಯರಂತೆ ಬದುಕಿ, ಸಾಮಾನ್ಯರಂತೆ ಸಂಸಾರ ಮಾಡಿ, ಸಾಮಾನ್ಯವಾಗಿ ಸಮಾಧಿಯಾದವರು ಇತಿಹಾಸದ ಪುಟಗಳಲ್ಲಿ ಇಲ್ಲವಾಗಿದ್ದಾರೆ. ಯಾಕೆ ಹೀಗಾಗಿದೆ!! ನಮ್ಮ ತಾತನ ಕಾಲದ ವಂಶವೃಕ್ಷವೇ ನಮಗೆ ತಿಳಿಯದಾಗಿದೆ. ಗಮನಿಸುವುದಾದರೆ ಗಾಂಧೀಜಿ ಸುಭಾಷ್ ಚಂದ್ರ ಬೋಸರು, ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್, ನಾರಾಯಣ ಗುರು, ವಿವೇಕಾನಂದರು, ರಾಮಕೃಷ್ಣರು ಹೀಗೆ ಪಟ್ಟಿಗಳನ್ನು ಹೆಣೆಯುತ್ತ ಹೋದರೆ ನಾವು ಅವರನ್ನು ಮುಖತಃ ನೋಡದಿದ್ದರೂ ಗೊತ್ತು. ಅವರ ತಂದೆ ತಾಯಿ ಯಾರು ಅವರ ಮುಂದಿನ ತಲೆಮಾರು ಯಾರು ಎಂಬುದು ಕೆಲವರು ನಮಗೆ ಗೊತ್ತು ಸಿಗುತ್ತಾರೆ. ಯಾಕಂದ್ರೆ ಅವ್ರು ನಮ್ಮ ಸಂಬಂಧಿಕರಲ್ಲದೇ ಇದ್ದರೂ ಅವರು ಸಮಾಜಕ್ಕೆ ಕೊಡುಗೆ ನೀಡಿರುವುದು ಚಿರಸ್ಮರಣೀಯವಾಗಿದೆ. ಹಾಗಾಗಿ ಅವರು ಸದಾ ಸಾವಿರಾರು ವರ್ಷಗಳ ಕಾಲ ಸೂರ್ಯ ಚಂದ್ರರು ಇರುವವರೆಗೂ ನೆನಪಿನಲ್ಲಿರುತ್ತಾರೆ ಪೂಜ್ಯನೀಯವಾಗಿರುತ್ತಾರೆ.

ಇವತ್ತಿನ ಡಿಜಿಟಲ್ ಯುಗದಲ್ಲಿ ಯುವಕರು ಪ್ರೀತಿ ಪ್ರೇಮ ಎಂಬ ಫೇಸ್ ಬುಕ್ ಟ್ರ್ಯಾಪ್ ಗಳಲ್ಲಿ ಅವರವರೇ ಬಲಿಯಾಗುತ್ತಿರುವಾಗ ಮೋಹದ ಪಾಶದಲ್ಲಿ ಬಿದ್ದು ತಮ್ಮ ಸ್ವಂತಿಕೆ ತಮ್ಮ ಜವಾಬ್ದಾರಿ ತಮ್ಮ ಸ್ವಾಭಿಮಾನ ತಮ್ಮ ದೇಶಪ್ರೇಮ ಇವೆಲ್ಲವನ್ನು ಹೊರತಾಗಿ ಇಂದ್ರಿಯಗಳ ಸುಖದತ್ತ ಮುಖ ಮಾಡಿ ದೇಶಕ್ಕೆ ಏನೂ ಮಾಡಲಾಗದ ನಿಷ್ಪ್ರಯೋಜಕ ಸಂತತಿಯ ಸ್ಥಿತಿಯಲ್ಲಿರುವುದನ್ನು ಗಮನಿಸಿದರೆ ಬದುಕಿನಲ್ಲಿಯೇ ಸತ್ತಂತೆ ಇವರು. ಇಂತಹ ವ್ಯಕ್ತಿಗಳಿಂದ ಸಮಾಜ ಬಯಸುವುದು ಏನೂ ಇಲ್ಲ. ಆದರೆ ಸಾಧನೆ ಮಾಡುವವರು ಇವರಿಗಿಂತ ಹೆಚ್ಚು ಇದ್ದಾರೆ ಎಂಬುದನ್ನು ಮರೆಯುವಂತೆಯೂ ಇಲ್ಲ.

 ಇತಿಹಾಸ ನಿರ್ಮಿಸಿದವರು ಎಲ್ಲರೂ ತುಂಬ ಶ್ರೇಷ್ಠ ಶ್ರೀಮಂತರೇನೂ ಆಗಿರಲಿಲ್ಲ. ಅವರು ಕೂಡ ಬಡ ಮಧ್ಯಮವರ್ಗದಿಂದಲೇ ಎದ್ದುಬಂದವರು ಗೆದ್ದು ನಿಂತವರು.

 *ತತ್ ಪರಿವರ್ತನಮ್ ಭವ॥* ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ಕಾಣಲು ಬಯಸುತ್ತೀರೋ ಆ ಬದಲಾವಣೆಯನ್ನು ಮೊದಲು ನಿಮ್ಮಲ್ಲಿ ನೀವು ತಿದ್ದಿಕೊಳ್ಳುವ ಮೂಲಕ ಆಗಬೇಕು. ಇಷ್ಟೆಲ್ಲ ವಿಷಯಗಳನ್ನು ನಾನು ಏನಕ್ಕೆ ಹೇಳುತ್ತಿದ್ದೇನೆ ಅಂದರೆ ನಮ್ಮ ಮೈಸೂರಿನ ಒಬ್ಬ ಯುವಕ ಅಂತಹ ಮಹಾನ್ ಸಾಧನೆಯನ್ನು ಮಾಡುವ ಮೂಲಕ ಇಡಿಯ ದೇಶಕ್ಕೆ ತಾನು ಸ್ಫೂರ್ತಿಯಾಗಿ ನಿಂತಿದ್ದಾನೆ. ಈ ಸಂದರ್ಭದಲ್ಲಿ

ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಹೇಳುತ್ತಾರೆ ಸಾಗರವನ್ನೇ ಕುಡಿಯಬಲ್ಲೆ ಬೆಟ್ಟವನ್ನ ಚದುರಿಸಬಲ್ಲೆ ಎಂಬ ಇಚ್ಚಾಶಕ್ತಿ ಯುವಜನಾಂಗಕ್ಕೆ ಇರಬೇಕು. ತನ್ನ ಸಾಮರ್ಥ್ಯವನ್ನು ಶಾರೀರಿಕವಾಗಿ ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಬೆಳೆಸಿಕೊಳ್ಳಬೇಕು.

 ಪ್ರಶಾಂತ್ಎಂಬುವ ಮೈಸೂರಿನ ಹೆಬ್ಬಾಳಿನ 22ವಯಸ್ಸಿನ ಯುವಕ ಭಾರತೀಯ ಭೂಸೇನೆಯ ಅತಿ ಕಿರಿಯ ಲೆಫ್ಟಿನೆಂಟ್ ಆಗಿ ಇಡೀ ದೇಶಕ್ಕೆ ಇವತ್ತು ದೊಡ್ಡ ಸಂಚಲನವನ್ನು ಮೂಡಿಸಿದ್ದಾರೆ. ಈ ಸಾಧನೆ ನಿಜಕ್ಕೂ ವರ್ಣಿಸಲು ಅಸಾಧ್ಯ.

ರೈಲ್ವೆ ಇಲಾಖೆಯ ಉದ್ಯೋಗಿ ಜಗದೀಶ್-ರಾಜಲಕ್ಷ್ಮಿ ಅವರ ಸುಪುತ್ರ *ಪ್ರಶಾಂತ್* ರವರು ಚಿಕ್ಕಂದಿನಿಂದಲೂ ಸೈನ್ಯಕ್ಕೆ ಸೇರುವ ಕನಸನ್ನು ಹೊತ್ತು ಕ್ರೀಡೆಯಲ್ಲಿ ತರಬೇತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುಪಿಎಸ್ ಸಿ ನಡೆಸುವ ಎನ್ ಡಿ ಎ ಪರೀಕ್ಷೆಯಲ್ಲಿ 2016 ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪರೀಕ್ಷೆಯನ್ನು ಬರೆದು ತೇರ್ಗಡೆ ಹೊಂದಿ ಮೈಸೂರಿನ ವಿವಿ ಮೊಹಲ್ಲಾದಲ್ಲಿ ವಾಸಿಸುತ್ತಿರುವ ನಿವೃತ್ತ ಕಮಾಂಡರ್ ಶ್ರೀ ಟಿ.ಎಸ್. ತ್ರಿಲೋಚನ್ ಸಿಂಗ್ ಮತ್ತು ರವಿರಾಜ್ ಎಂಬುವರ ಹತ್ತಿರ ಮಾರ್ಗದರ್ಶನ ಪಡೆದು ಡೆಹ್ರಾಡೂನ್ ನಲ್ಲಿ ನಡೆದ ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.

ಪುಣೆಯಲ್ಲಿ ಡಿಫೆನ್ಸ್ ಅಕಾಡೆಮಿಯ 3ವರ್ಷ ತರಬೇತಿ ಮುಗಿಸಿ, ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಅಂತಿಮ ತರಬೇತಿ ಯಶಸ್ವಿಯಾಗಿ ಪೂರೈಸಿ 2019ಡಿಸೆಂಬರ್ ಹೊತ್ತಿನಲ್ಲಿ ಪಾಸ್ ಔಟ್ ಆಗಿ ಭಾರತೀಯ ಭೂ ಸೇನೆಯ ಲೆಫ್ಟಿನೆಂಟ್ ಆಗಿ ಪ್ರಸ್ತುತ ಜನವರಿ 03, 2021ರಿಂದ ಅಹ್ಮದಾಬಾದ್ ನ “ದ್ರಂಗಾದ್ರ”ದಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

ಇವರ ಈ ಸಾಧನೆ ನಿಜಕ್ಕೂ ಮೈಸೂರಿನ ಎದೆಮುಟ್ಟಿ ಮೆಚ್ಚಿಕೊಳ್ಳುವಂಥದ್ದು ಮತ್ತು ಇವರು ನಮ್ಮ ಅಭಿಮಾನ ಎಂದರೆ ಅತಿಶಯೋಕ್ತಿಯಾಗಲಾರದು. *ಯೌವ್ವನವಿರುವುದು ದೇಹ ಪ್ರೇಮಕ್ಕಲ್ಲ- ದೇಶಪ್ರೇಮಕ್ಕೆ* ಎಂಬುದನ್ನು ಸಾಬೀತುಪಡಿಸಿದ ಧೀಮಂತ ನಾಯಕರು ಇವರು ಇವರು ಇಡಿಯ ಯುವಶಕ್ತಿಗೆ ಪ್ರೇರಣೆ ಎಂದರೆ ತಪ್ಪಾಗಲಾರದು. *ಹೀಗಾಗಿ ಸಾಯುವವನು ಸಾವಿರಾರು ದುರಾಲೋಚನೆಗಳನ್ನು ಹುಡುಕುವಾಗ ಸಾವಿರಾರು ದಾರಿಗಳನ್ನು ಹುಡುಕುವಾಗ, ಸಾಧಿಸುವವನಿಗೆ ಸಾವಿರಾರು ಸಶಕ್ತ ಮಾರ್ಗಗಳು ಇದ್ದೇ ಇದೆ.

✍🏻 ಪುರುಷೋತ್ತಮ್ ಅಗ್ನಿ

          ಮೈಸೂರು ಮಿರರ್

By admin