“ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಕನ್ನಡ ನೆಲ, ಜಲ, ಜನರು ಎಲ್ಲವೂ ಸಂಪನ್ಮೂಲತ್ವಕ್ಕೆ ಒಳಪಟ್ಟಿದೆ. ಇಲ್ಲಿಯ ಸಂಪತ್ತಿನ ಸೊಬಗನ್ನು ನಂಬಿ ಶ್ರಮಿಸಿದವರು ಎಂದಿಗೂ ಪಾತಾಳ ಕಂಡಿಲ್ಲ,ಶಿಖರದೆತ್ತರಕ್ಕೆ ಹಾರಿದ್ದಾರೆ. ಇತ್ತೀಚಿಗೆ ಉದ್ಯಮ ಜಗತ್ತಿನಲ್ಲಿ ಅತಿಯಾದ ಬೆಳವಣಿಗೆ ಜನರ ಜೀವನಶೈಲಿಯನ್ನು ಬದಲಿಸಿದೆ. ರಾಜಪ್ರಭುತ್ವಗಳು ಪ್ರಜಾಪ್ರಭುತ್ವಗಳಾಗಿ ಪ್ರಜಾಪ್ರಭುತ್ವದಲ್ಲಿ ಜಾಗತೀಕರಣದ ಮೈಲುಗಲ್ಲು ಹೊಸ ಕ್ಷೇತ್ರದ ಬೆಳವಣಿಯಾಗಿ ಖಾಸಗೀಕರಣವನ್ನು ಹುಟ್ಟುಹಾಕಿದೆ. ಇಲ್ಲಿ ಎಲ್ಲರ ಭಾಗಿತ್ವಕ್ಕೆ ಅವಕಾಶ ಸಿಗಬೇಕು ಅದಕ್ಕೆ ವೇದಿಕೆಯನ್ನು ಇಂತವರೇ ನೀಡಲಿ ಇಂತಜಾಗದಲ್ಲೇ ಆಗಲಿ ಎಂದು ಕುಳಿತರೆ ಅಭಿವೃದ್ಧಿ ಅಸಾಧ್ಯ. ಜವಬ್ದಾರಿಗಳು ವಿಘಟನೆಗೊಂಡು ನಿಭಾಯಿಸುವುದರಲ್ಲಿ ಯಾವುದೇ ಅಪಾಯಗಳನ್ನು ಸೃಷ್ಟಿಸಿಕೊಳ್ಳದಿರುವ ಸ್ಥಿತಿಯೇ ಇಲ್ಲಿ ಮುಖ್ಯವಾಗಿದೆ. ಆದ್ದರಿಂದ ಸರ್ಕಾರದ ಜವಬ್ದಾರಿಗಳಲ್ಲಿ ಖಾಸಗೀಕರಣದ ಹಸ್ತಕ್ಷೇಪ ತಪ್ಪೇನಲ್ಲ. ಆದ್ದರಿಂದ ಮುಕ್ತ ಭಾಗವಹಿಸುವಿಕೆ ಹಾಗು ಮುಕ್ತ ಕೊಡುಕೊಳ್ಳುವಿಕೆ ಅಗತ್ಯವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಹೊರಗಿನ ಬಹುಜನರು ಬಂಡವಾಳ ಹೂಡಿ ಆದಾಯವನ್ನು ಗಳಿಸುತ್ತಿದ್ದಾರೆ ಹಾಗು ದೇಶದ ಎಲ್ಲಾ ರಾಜ್ಯ ಭಾಷೆ ಜನಾಂಗದವರಿಗೆ ಕರ್ನಾಟಕ ರಾಜ್ಯವು ತೆರೆದ ಬಾಗಿಲಾಗಿದೆ; ಮುಕ್ತಮಾರುಕಟ್ಟೆಯಂತಾಗಿದೆ. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರತಿಷ್ಠಿತ ಕಂಪನಿಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಮುಖ್ಯನಗರಗಳಲ್ಲೂ ಬೇರೂರಿವೆ. ಕರ್ನಾಟಕದ ರಾಜಧಾನಿ ಬೆಂಗಳೂರು ಈಗ ರಾಜ್ಯದ ಉದ್ಯಮ ರಾಜಧಾನಿಯಾಗೂ ಹೊಸ ಬಗೆಯಲ್ಲಿ ರೂಪುಗೊಳ್ಳುತ್ತಿರುವುದು ಸಾದೃಶ್ಯ ಉದಾಹರಣೆ ಎನ್ನಬಹುದು.ಅಭಿವೃದ್ಧಿ ಎನ್ನುವುದು ಯಾವುದೋ ಒಂದು ಕ್ಷೇತ್ರದ ಬೆಳವಣಿಗೆಯನ್ನು ಅನುಸರಿಸಿ ನಿಂತರೆ ಸಾಧ್ಯವಾಗದು.ದೇಶದ ಬೆನ್ನೆಲುಬು ಆದ ಕೃಷಿ ಮತ್ತು ಸೇವಾವಲಯ ಹಾಗೂ ಕೈಗಾರಿಕಾವಲಯ ಅಥವಾ ಉತ್ಪಾದನಾವಲಯ ಇವುಗಳೆಲ್ಲದರ ಸಮಬೆಳವಣಿಗೆಯೇ ಅಭಿವೃದ್ಧಿ.

ಈ ಬೆಳವಣಿಗೆಯಲ್ಲಿ ಸರ್ವರ ಏಳಿಗೆಯೇ ಮುಖ್ಯ. ಹೀಗಾಗಿ ರಚನೆಗೊಳ್ಳುವ ಉದ್ಯಮಗಳಲ್ಲಿ ಕೃಷಿ ಅಂಶ ಸೇವಾ ಅಂಶ ಉತ್ಪಾದನಾ ಅಂಶ ಎಲ್ಲವೂ ಇರಬೇಕು.ಕರ್ನಾಟಕ ರಾಜ್ಯವು ಉದ್ಯಮಕ್ಕೆ ಪೂರಕವಾದ ನಿಸರ್ಗ ದೇಹವನ್ನು ಪಡೆದು ನಿಂತಿದೆ.ಜೊತೆಗೆ ಮಾನವ ಸಂಪನ್ಮೂಲವು ಕೂಡ ಹೇರಳವಾಗಿದೆ.ಇಲ್ಲಿ ಉದ್ಯಮಗಳಿಗೆ ಕಾನೂನಿನ ಅಡಿಯಲ್ಲಿ ಅವಕಾಶ ನೀಡುವುದು ಒಳ್ಳೆಯದೇ.ಆದರೆ ಪ್ರಾದೇಶಿಕ ಜನತೆಯ ನಾಡಿನ ಅಭಿವೃದ್ಧಿ ನೋಟಗಳು ಆ ಉದ್ಯಮ ಸಂಸ್ಥೆಯ ಹಲವು ಧ್ಯೇಯೋದ್ಧೇಶಗಳಲ್ಲಿ ಒಂದಾಗಿರುವುದು ಬಹುಮುಖ್ಯ. ಇನ್ನೊಂದು ಮುಖ್ಯ ಬೆಳವಣಿಗೆಯಾದರೇ ಇನ್ನೂ ಒಳ್ಳೆಯದೇ.ಇಲ್ಲಿನ ಜನರೇ ಉದ್ಯಮಿಗಳಾಗಿ ಹೊರ ದೇಶದ, ರಾಜ್ಯದ ಜನತೆಗೆ ಭಾಗಿತ್ವದಲ್ಲಿ ಅವಕಾಶಕೊಟ್ಟರೆ ಇನ್ನೂ ಉತ್ತಮ.ಈ ರೀತಿಯಾಗಿ ಎಲ್ಲಾ ಪ್ರಾದೇಶಿಕಗಳಲ್ಲೂ ಆಗಲಿ.ಕರ್ನಾಟಕದಲ್ಲಿ ತುಂಬಾ ಬುದ್ಧಿ ಜೀವಿಗಳು ಸೂಕ್ತವಾದ ವೇದಿಕೆಯ ಕೊರತೆಯಿಂದಾಗಿ ಹೊರ ದೇಶಗಳಿಗೆ, ಹೊರ ರಾಜ್ಯಗಳಿಗೆ ಪ್ರತಿಭಾಪಲಾಯನವಾಗುತ್ತಿದ್ದಾರೆ.ಈ ಬೆಳವಣಿಗೆ ಕರ್ನಾಟಕ ರಾಜ್ಯದ ಅಭಿವೃದ್ಧಿಯ ಕ್ಷೀಣಿಸುವಿಕೆಗೆ ಕಾರಣವಾಗುತ್ತಿದೆ.ಕರ್ನಾಟಕದಲ್ಲಿ ಸಾಮಾಜಿಕವಾಗಿ ,ಸಾಂಸ್ಕೃತಿಕವಾಗಿ,ಧಾರ್ಮಿಕವಾಗಿ, ರಾಜಕೀಯವಾಗಿ ಉತ್ತಮ ಭದ್ರತೆಯನ್ನು ಒಳಗೊಂಡಿರುವಾಗ ಅತ್ಯುತ್ತಮ ಶಿಕ್ಷಣ ಪಡೆದ ಮಾನವ ಸೃಜನರು
ರಾಜ್ಯದ ಗಡಿದಾಟಿದರೆ ನಷ್ಟವೂ ರಾಜ್ಯಕ್ಕೆ ಹೆಚ್ಚು.ಹಾಗಾಗಿ ಸೂಕ್ತ ಆಯೋಜನೆಗಳು ಮುಕ್ತ ಭಾಗವಹಿಸುವಿಕೆಗಳು ರಾಜ್ಯದ ಬದಲಾವಣೆಯ ಅಂಶವಾಗಲಿ.ಕರ್ನಾಟಕದ ಯುವ ಪೀಳಿಗೆಗೆ ಉದ್ಯಮಗಳ ಮೂಲಕ ಹಲವು ಉದ್ಯೋಗಗಳು ಸೃಷ್ಟಿಯಾಗಲಿ.ಉದ್ಯಮದ ಎಲ್ಲಾ ಭಾಗಿತ್ವಗಳಲ್ಲಿ ಮೊದಲ ಆದ್ಯತೆ ಎನ್ನುವುದು ಕನ್ನಡದವರಿಗೇ ಹೆಚ್ಚಾಗಲಿ.ಆಡಳಿತ ದೃಷ್ಟಿಯಲ್ಲಿ ಕನ್ನಡ ಭಾಷೆಯ ಬಳಕೆ ಇರಲಿ.ಕನ್ನಡ ಸಂಪತ್ತಿನ ಸದ್ಭಳಕೆಯ ಪ್ರಯೋಜನ ಕನ್ನಡಿಗರಿಗೆಯೇ ಮೊದಲು ಆಗಲಿ.ಆದರೆ ಈ ರೀತಿಯ ಸಾಧಕಗಳು ಕರ್ನಾಟಕದ ಬಹು ಕ್ಷೇತ್ರಗಳಲ್ಲಿ ಕಡಿಮೆ ಆಗಿದೆ.ಇದರ ಫಲಿತಾಂಶವೇ ಪ್ರತಿಭಾಪಲಾಯನ ಹೆಚ್ಚಾಗಿರುವುದು.ಕೃಷಿಯಿಂದ ಹಿಡಿದು ವಿಜ್ಞಾನ ಕ್ಷೇತ್ರದವರೆಗೂ ಕನ್ನಡ ಕುವರ ಕುವರಿಯರು ಅಗಾಧ ಸಾಧನೆಯನ್ನು ಮಾಡಲು ಅಣಿಯಾಗಿದ್ದಾರೆ.ಆ ಕ್ಷೇತ್ರಕ್ಕೆ ಅನುಗುಣವಾಗಿ ವಿದ್ಯಾ ಪಾರಂಗತರಾಗಿ ಸಜ್ಜಾಗಿದ್ದಾರೆ.ಆದರೆ ಎಲ್ಲಿಂದಲೋ ಬಂದವರು ಕರ್ನಾಟಕದಲ್ಲಿ ಪೂರ್ಣ ಅವಕಾಶವನ್ನು ಪಡೆದು ಅಭಿವೃದ್ಧಿಯನ್ನು ಹೊಂದುತ್ತಿರುವುದು ಹಾಗೂ ಕರ್ನಾಟಕದ ಪ್ರತಿಭೆಗಳು ಅವಕಾಶದಿಂದ ವಂಚಿತರಾಗುತ್ತಿರುವುದು ವಿಷಾಧನೀಯ.
ನನ್ನ ಸ್ನೇಹಿತರೊಬ್ಬರಲ್ಲಿ ಈ ವಿಚಾರವಾಗಿ ಒಂದು ಸನ್ನಿವೇಶದ ವಿವರಣೆಯನ್ನು ಕೇಳಿದ್ದೆ. ಬೆಂಗಳೂರಿನ ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ.ಕನ್ನಡದವರೇ ಇಲ್ಲಾ ಎಲ್ಲರೂ ಹೊರರಾಜ್ಯದಿಂದ ಬಂದವರೇ ಆಗಿದ್ದಾರೆ ಎಂದರು.ಇದಕ್ಕೆ ಕಾರಣ ಕೇಳಿದಾಗ ಕಂಪನಿಯಲ್ಲಿರುವ ಗ್ರೂಪ್ ಗಳ ಮ್ಯಾನೇಜರ್ ಬೇರೆ ರಾಜ್ಯದವರಾಗಿದ್ದು ಭಾಷೆ ಹಾಗೂ ರಾಜ್ಯದ ಅಭಿಮಾನದಿಂದಾಗಿ ಅವರು ತಮ್ಮ ಗ್ರೂಪಿನಲ್ಲಿ ಕನ್ನಡದವರಿಗೆ ಅವಕಾಶ ಕೊಡದೆ ತಮ್ಮ ತಮ್ಮ ರಾಜ್ಯದವರಿಗೆ ಭಾಷೆ ಬಲ್ಲವರಿಗೆ ಅವಕಾಶಕೊಟ್ಟಿದ್ದಾರೆ ಹೀಗಾಗಿ ನನ್ನ ಸ್ನೇಹಿತರು ಆ ಕಂಪನಿಯಿಂದ ಹೊರಗುಳಿದು ನಿರುದ್ಯೋಗ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದರು.ಹಾಗೂ ಈ ಸಮಸ್ಯೆಗೆ ಅವರು ಹೇಳಿದ ಪರಿಹಾರವು ನಾನು ಮೇಲೆ ತಿಳಿಸಿದಂತೆಯೇ ಇತ್ತು.ಇಲ್ಲಿ ಸ್ಥಾಪಿತವಾಗುವ ಕಂಪನಿಗಳು ನಮ್ಮ ರಾಜ್ಯದ ಪ್ರತಿಭಾನ್ವಿತರಿಂದಲೇ ಆಗಬೇಕು.ಹಾಗೂ ಇಲ್ಲಿ ಉದ್ಯೋಗಗಳು ಕನ್ನಡಿಗರಿಗೆಂದೇ ಒಂದಿಷ್ಟು ಮೀಸಲಾತಿ ಅಡಿಯಲ್ಲಿ ಕಡ್ಡಾಯವಾಗಿರಬೇಕು.ಆಗ ಮಾತ್ರ ಈ ಸಮಸ್ಯೆ ದೂರಾಗುತ್ತದೆ ಮತ್ತು ಉದ್ಯಮ ಸಂಸ್ಥೆಗಳು ಕರ್ನಾಟಕದಲ್ಲಿ ಸೃಷ್ಟಿಯಾಗುವುದು ಒಳ್ಳೆಯದು ಇಲ್ಲದಿದ್ದರೆ ಬೇಡ ಎಂದರು.
ಹೌದು ಕನ್ನಡ ತಾಯಿಯ ಎದೆಹಾಲು ಕನ್ನಡ ಮಕ್ಕಳಿಗೇ ಸಿಗುತ್ತಿಲ್ಲ. ಅಪೌಷ್ಟಿಕತೆ ಕನ್ನಡ ಮಕ್ಕಳಲ್ಲಿ ಕಾಡುತ್ತಿದೆ.ಇಲ್ಲಿ ಸಾಧಕಗಳೆಂದರೆ ಉದ್ಯಮಗಳನ್ನು ಸ್ಥಾಪಿಸುವುದು ,ಉದ್ಯೋಗವಕಾಶಗಳನ್ನು ಹೆಚ್ಚಿಸುವುದು ಸಂಪನ್ಮೂಲಗಳನ್ನು ಸದ್ಭಳಕೆ ಪಡಿಸಿಕೊಳ್ಳುವುದು. ರಾಜ್ಯದ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಸಾಧಿಸುವುದು.ಭಾಧಕಗಳೆಂದರೆ ಕನ್ನಡಿಗರಿಗೆ ಎಲ್ಲಾ ವಿಧದಲ್ಲೂ ಆಗುತ್ತಿರುವ ವಂಚನೆಯಾಗಿದೆ.ಕರ್ನಾಟಕದ ನಿಸರ್ಗ ಸಂಪನ್ಮೂಲಗಳನ್ನು ಹೊರಗಿನವರು ಕಬಳಿಸುತ್ತಿರುವುದಾಗಿದೆ.ಸರ್ಕಾರವು ಹೊರಗಿನ ಉದ್ಯಮಶೀಲರಿಗೆ ಮುಕ್ತ ಅವಕಾಶ ಕೊಡುವುದರ ಜೊತೆಗೆ ಕಠಿಣ ನಿಯಮಬದ್ಧ ಪ್ರಾದೇಶಿಕ ಪ್ರಯೋಜನಗಳ ಶರತ್ತುಗಳನ್ನು ವಿಧಿಸುವುದು ಒಳ್ಳೆಯದು. ಬಂಡವಾಳ ಹೂಡುವುದು ಕಾಲಧರ್ಮದ ಬದಲಾವಣೆಗಳನ್ನು ಅನುಸರಿದೆ ಹಾಗಾಗಿ ವಾಸ್ತವಿಕ ಪ್ರಜ್ಞೆಯಲ್ಲಿ ನೋಡುವುದಾದರೆ ಈ ಕರೋನಾ ಸಂಧರ್ಭವು ಅತಿಯಾದ ಬಿಕ್ಕಟ್ಟನ್ನು ತಂದೊಡ್ಡಿದೆ.ಉದ್ಯೋಗ ವಂಚಿತರಾಗಿ ಮನೆಯಲ್ಲಿ ಕುಳಿತಿರುವ ಯುವಕರಿಗೆ ಉದ್ಯೋಗ ಸೃಷ್ಟಿಯ ವಿಚಾರವಾಗಿ ಉದ್ಯಮಗಳ ಸ್ಥಾಪನೆಯ ಅವಕಾಶ ಅಗತ್ಯ.ಹಾಗೂ ಇದನ್ನು ರಚಿಸಲು ಸೂಕ್ತ ವಿಶ್ವ ಉದ್ಯಮ ತಜ್ಞರ ಸಲಹೆ ಸಹಕಾರ ಅಗತ್ಯ.ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ಉದ್ಯಮಶೀಲರು ಮುಂದಾಗಲಿ ಅವಕಾಶಗಳು ಕನ್ನಡಿಗರಿಗೆ ಬಹಳಷ್ಟು ತೆರೆದುಕೊಳ್ಳಲಿ.
*ಚಿಮಬಿಆರ್ (ಮಂಜುನಾಥ ಬಿ.ಆರ್)*
ಯುವಸಾಹಿತಿ, ಸಂಶೋಧಕ, ವಿಮರ್ಶಕ.
*ಹೆಚ್.ಡಿ.ಕೋಟೆ ಮೈಸೂರು.*
*ದೂರವಾಣಿ ಸಂಖ್ಯೆ:-8884684726*
Gmail I’d:-manjunathabr709@gmail.com