ಮೊಂಸಾರೆ ಅವರು ಈಗಾಗಲೇ ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ನಾತಿಚರಾಮಿಯಂತಹ ಸಿನಿಮಾಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸಿನಿ ಪ್ರಿಯರಿಗೆ ಇವರ ಸಿನಿಚಿತ್ರ ಆಲೋಚನಾ ಕ್ರಮ ಮತ್ತು ಸಿನಿ ಕೆಲಸದ ಮೇಲೆ ಒಂದು ರೀತಿಯ ಕುತೂಹಲವಿದೆ. ಸಿನಿಪ್ರಿಯರ ಕುತೂಹಲಕ್ಕೆ ಮತ್ತು ಸಾಮಾಜಿಕ ಅರಿವಿನ ಬೆಳೆವಣಿಗೆಗೆ ಪೂರಕವಾಗಿ ಈಗ 19.20.21 ಎಂಬ ಮತ್ತೊಂದು ಸಿನಿಮಾವನ್ನು ಹೊರತಂದಿದ್ದಾರೆ. ಈ ಸಿನಿಮಾ ಪ್ರೇಕ್ಷಕರ ಮೆದುಳಿಗೆ ಕೆಲಸವಚ್ಚುತ್ತದೆ, ಸಮಸ್ಯೆಗಳ ವಿರುದ್ಧ ಗಟ್ಟಿ ಧ್ವನಿಯಾಗಿಸುತ್ತದೆ. ಎದೆಯ ಕರುಣೆಗೆ ಜನ್ಮವಿತ್ತುತ್ತದೆ. ಮಾನವ ವಿಕಾಸವಾಗಿದ್ದಾನೆ ಆದರೆ ಮನುಷ್ಯನೆನಿಸಲು ಸಕಲದರಲ್ಲೂ ದಯೆ ತೋರಬೇಕು. ಅಧಿಕಾರ ಮತ್ತು ಸಂಪತ್ತು ಈ ಸಕಲದಯೆಯನ್ನು ಬತ್ತಿಸಿದೆ. ಕಾನೂನುಗಳು ಪ್ರತಿಯೊಬ್ಬರನ್ನು ರಕ್ಷಿಸಲಿಕ್ಕೆ ಇರುವಂತಹದ್ದು ಆದರೆ ದುರ್ಬುದ್ಧಿಯುಳ್ಳವರು ಕಾನೂನುಗಳನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಕಾನೂನುಗಳಲ್ಲಿ ನಿರಂಕುಶತೆಯನ್ನು ಮೆರೆಯುತ್ತಿದ್ದಾರೆ. ಈ ಸೂಕ್ಷ್ಮ ಮೋಸ, ವಂಚನೆ, ದಬ್ಬಾಳಿಕೆಗಳು ಸಾಮಾನ್ಯ ಜನರಿಗೆ ತಿಳಿದರೂ ಆರ್ಥಿಕ ಸಬಲರಲ್ಲದವರಾಗಿರುವುದರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.
ಈ ಒಂದು ಬಂಧನದಿಂದ ಮುಕ್ತಿ ಪಡೆಯಲು ಇರುವ ಮಾರ್ಗವೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕರೆಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ. ಈ ತಂತ್ರವನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಂಡರೆ ಎಂದಿಗೂ ನ್ಯಾಯ ನಾಶವಾಗುವುದಿಲ್ಲ ಎನ್ನುವುದಕ್ಕೆ ಪ್ರತ್ಯಕ್ಷ ಪ್ರಾಯೋಗಿಕ ಸಾಕ್ಷಿಯಾಗಿ ಮೊಂಸಾರೆ ಅವರು ಸಾಂವಿಧಾನಿಕ ವಿಧಿನಿಯಮಗಳನ್ನು ಆಧಾರಿಸಿ ಪ್ರಜಾಪ್ರಭುತ್ವ ಮಾದರಿ ಸಿನಿಮಾ ಎನಿಸಿದ 19,20,21 ಎಂಬ ಸಿನಿಮಾವನ್ನು ಸೃಜನಾತ್ಮಕವಾಗಿ ನಿರ್ದೇಶಿಸಿದ್ದಾರೆ. ನೈಜಕಥೆಯಾಧಾರಿತ ಕಲಾತ್ಮಕತೆಯಿಂದ ಕೂಡಿರುವ ಈ ಸಿನಿಮಾ ಪ್ರೇಕ್ಷಕರ ಚಪ್ಪಾಳೆಯನ್ನು ಅಲ್ಲಲ್ಲೇ ಪಡೆಯುತ್ತದೆ. ಇದು ಮೊಂಸಾರೆ ಅವರು ನಿರ್ದೇಶನದ ಸಿನಿಮಾವಾದರೂ ಪ್ರೇಕ್ಷಕರು ಇದು ನಮ್ಮ ಸಿನಿಮಾ ಎಂದು ಥಿಯೇಟರ್ ನಿಂದ ಆಚೆಬರುವುದಿದೆ.
ಕಾಡಿನ ಮಕ್ಕಳಾದ ಆದಿವಾಸಿಗಳಿಗೆ ನಾಗರಿಕತೆಯ ಬಣ್ಣದ ಸೆರಗನ್ನು ತೋರಿಸಿ ಬಟಾಬಯಲು ಗೊಳಿಸುವ ಹೃದಯ ಛಿದ್ರಕ ಘಟನೆ ಈ ಸಮಾಜದ ಎಷ್ಟೋ ಮಂದಿಗೆ ತಿಳಿದಿಲ್ಲ. ಕಾಡು ಹೂಗಳನ್ನು ಬೆಳೆವಣಿಗೆ ಎನ್ನುವ ದೃಷ್ಟಿಯಲ್ಲಿ ತುಳಿದು ನಾಶಗೊಳಿಸುತ್ತಿರುವ ಸನ್ನಿವೇಶವೊಂದು ಸ್ವಾತಂತ್ರ್ಯದ ನಂತರ ಜರುಗಿದುದರ ಅರಿವು ಬಹಳರಿಗೆ ಆಗಬೇಕಿದೆ. ಭಾರತವು ಬ್ರಿಟಿಷರ ಸೆರೆಯಲ್ಲಿದ್ದರೂ ಸ್ವಾತಂತ್ರ್ಯ ಪ್ರಜ್ಞೆಯಲ್ಲಿದ್ದ ಮೂಲ ನಿವಾಸಿಗಳಾದ ಆದಿವಾಸಿಗಳನ್ನು ನಿಜಕ್ಕೂ ಭಾರತ ಸ್ವಾತಂತ್ರ್ಯದ ನಂತರ ಬಂಧನಕ್ಕೆ ದೂಡಲಾಯಿತು. ಕಾಡುಜೀವಿಗಳನ್ನು ನಾಡಿಗೆ ತಂದು ಮೃಗಾಲಯದಲ್ಲಿ ಇರಿಸಿದಂತೆ ಆದಿವಾಸಿಗಳನ್ನು ಕಾಡಿನಿಂದ ನಾಡಿಗೆ ಕರೆತಂದು ಅವರ ಸ್ವಂತಿಕೆ ಮತ್ತು ಸ್ವಾತಂತ್ರ್ಯ ಬದುಕನ್ನು ನಾಗರಿಕ ಸಮಾಜ ಕಸಿದುಕೊಂಡಿದೆ.
ಈ ರೀತಿ ಆದಿವಾಸಿ ಜನಾಂಗವೊಂದು ನರಳಾಡುವ ವಿಷಾದವನ್ನು ಈ ಕಥಾವಸ್ತು ಒಳಗೊಂಡಿದೆ. ಆದಿವಾಸಿ ಹುಡುಗನೊಬ್ಬ ಶಿಕ್ಷಿತನಾಗಿ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಮುಂದಾದಾಗ ಅವನಿಗೊದಗುವ ರಾಜಕೀಯ ದಿಗ್ಬಂಧನ, ರಕ್ಷಕರೇ ಭಕ್ಷಕರಾಗಿ ತೋರುವ ಸಂಗತಿಗಳು ವಾಸ್ತವಿಕತೆಯನ್ನೊಂದಿದೆ. ತಿಳಿದವರೇ ಅನ್ಯಾಯದ ಹಾದಿಯಲ್ಲಿ ಮುಗ್ಧರನ್ನು ಹಿಂಸಿಸುವ ಕ್ರೌರ್ಯವನ್ನು ತುಂಬಾ ಹಸಿಯಾಗಿ ಬಿತ್ತರಿಸಲಾಗಿದೆ.
ಆದಿವಾಸಿಗಳ ಕುರಿತು ಕನ್ನಡದಲ್ಲಿ 1997ರಲ್ಲಿ ಭೂಮಿಗೀತ ಸಿನಿಮಾ ಕೇಸರಿ ಹರವು ಅಕಾ ಕೇಸರಿ ಹರವು ಅವರ ನಿರ್ದೇಶನದಲ್ಲಿ ಹೊರಬಂದಿದೆ. ಅಣೆಕಟ್ಟು ನಿರ್ಮಾಣಕ್ಕಾಗಿ ಆದಿವಾಸಿ ಬುಡಕಟ್ಟು ಜನಾಂಗವೊಂದನ್ನು ಬಲಾತ್ಕಾರವಾಗಿ ಅವರ ಆಚರಣೆ ಸಂಪ್ರದಾಯಗಳಿಗೆ ಮಸಿಬಳಿದು, ಅವರನ್ನು ಮಾನಸಿಕವಾಗಿ ಹಿಂಸಿಸಿ ಕಾಡಿನಿಂದ ಹೊರದಬ್ಬಲಾಗುತ್ತದೆ. ಈ ರೀತಿ ನಾನಾಬಗೆಯ ಕಿರುಕುಳಗಳಿಗೆ ಒಳಗಾದ ಆದಿವಾಸಿಗಳ ಪರವಾಗಿ ಅವರ ಸಂಕಷ್ಟಗಳನ್ನು ನಗರ ಜನರಿಗೆ ಮುಟ್ಟಿಸುವಲ್ಲಿ ಸಿನಿಮಾ ಕ್ಷೇತ್ರ ಆದಿವಾಸಿಗಳ ಪರವಾದ ಹೋರಾಟದ ಧ್ವನಿ ಎಂದೇ ಹೇಳಬಹುದು.
ನನಗೂ ಆದಿವಾಸಿಗಳ ಜೀವನ ಕುರಿತು ಒಂದಷ್ಟು ಅರಿವಿದೆ ಏಕೆಂದರೆ ವನಸಿರಿ ನಾಡು ಎಚ್. ಡಿ ಕೋಟೆ ಯವನು ನಾನು. ಎಚ್.ಡಿ ಕೋಟೆಯ ಸುತ್ತಮುತ್ತಲ ಗ್ರಾಮಗಳ ಹೊರವಲಯದಲ್ಲಿ ಆದಿವಾಸಿಗಳು ಕಾಡಿನಿಂದ ಹೊರಬಂದು ಬದುಕು ಸಾಗಿಸುತ್ತಿದ್ದಾರೆ. ಜತೆಗೆ ಕಾಡಿನ ಸಂಪರ್ಕದಲ್ಲಿ ಇನ್ನೂ ನಿಕಟವಾಗಿರುವ ಆದಿವಾಸಿಗಳು ಊರಿಗೆ ಬಂದಾಗ ಕಾಡಿನಲ್ಲಿ ಅವರಿಗಾದ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು. ಆ ಅನುಭವದಲ್ಲಿ ಒಂದು ಘಟನೆ ಕೇಳಿ ಅಸಹ್ಯವೆನಿಸಿತ್ತು. ಕಾಡು ಉತ್ಪನ್ನಗಳನ್ನು ತಮ್ಮ ಆಹಾರಕ್ರಮದಲ್ಲಿ ರೂಢಿಸಿಕೊಂಡ ಆದಿವಾಸಿಗಳಿಗೆ ನಾಗರಿಕ ಆಹಾರ ಪದ್ಧತಿಗಳು ಹಿಡಿಸುವುದಿಲ್ಲ ಹಾಗಾಗಿ ಅವರು ತಮ್ಮ ಆಹಾರಕ್ಕಾಗಿ ಕಾಡಿಗೆ ಆಗಾಗ ಹೋಗುತ್ತಿರುತ್ತಾರೆ. ಹೀಗೆ ಹೋಗುವಾಗ ಒಬ್ಬೊಬ್ಬರೇ ಹೋಗುವುದಿಲ್ಲ ತಮ್ಮ ಹೆಂಡಿರು ಮಕ್ಕಳ ಸಮೇತ ಒಂದೆರೆಡು ಕುಟುಂಬಗಳು ಕಾಡಿನೊಳಕ್ಕೆ ಹೋಗುತ್ತಾರೆ. ಜತೆಗೆ ಕಾಡಿಗೆ ಹೋಗುವುದಕ್ಕೆ ಇದೊಂದೇ ಕಾರಣವಲ್ಲ ಹೊಸದಾಗಿ ಮದುವೆಯಾದ ಆದಿವಾಸಿ ದಂಪತಿಗಳು ಸಹ ಕಾಡಿಗೆ ಹೋಗುವುದು ಅವರ ವಾಡಿಕೆ. ಇಂತಹ ಸಂದರ್ಭದಲ್ಲಿ ಅರಣ್ಯ ಸಿಬ್ಬಂಧಿಗಳಿಗೆ ಸಿಕ್ಕು ಬಿದ್ದಾಗ ಅವರ ಬೆದರಿಕೆಗೆ ಅಂಜಿಕೊಂಡು ಅವರು ಸಂಗ್ರಹಿಸಿದ ಕಾಡಿನ ಉತ್ಪನ್ನಗಳನ್ನು ಸಂಪೂರ್ಣವಾಗಿ ಸಿಬ್ಬಂದಿಗಳಿಗೆ ಕೊಟ್ಟು ಬರುವುದರ ಜತೆಗೆ ಅವರ ಹೆಂಡಿರನ್ನು ರಕ್ಷಕ ಸಿಬ್ಬಂಧಿಗಳಿಗೆ ಲೈಂಗಿಕ ಕ್ರಿಯೆಗೆ ಬಿಟ್ಟುಕೊಟ್ಟು ಬಂದೂಕಿನ ಹಿಂಬದಿ ದಂಡದಿಂದ ತಿನ್ನುವ ಭಾರಿ ಹೊಡೆತ ಮತ್ತು ಜೈಲು ಶಿಕ್ಷೆಯಾಗುವ ಭೀತಿಯಿಂದ ಬದುಕುಳಿಯುವ ಘಟನೆಯು ಸಂಭವಿಸುತ್ತದಂತೆ. ಈ ಮಾತನ್ನು ನಾನು ಅಂದು ಆದಿವಾಸಿಯೊಬ್ಬರಿಂದ ಕೇಳಿದ್ದೆ ಆದರೆ ಅದೆಷ್ಟು ಸತ್ಯ ಆ ಆದಿವಾಸಿಗಳಿಗೇ ತಿಳಿದ ಸಂಗತಿ. ಕಾಡಿಗೆ ನಾಡಿನವರ ನಂಟೇನಿದೆ. ಹೇಳಿದ್ದನ್ನು ಆಶ್ಚರ್ಯದಿಂದ ಅಸಹ್ಯಪಟ್ಟು ಕೇಳಿದಷ್ಟೇ! ಹಾಗಾಗಿಯೂ 19,20,21 ಸಿನಿಮಾದಲ್ಲಿ ಆದಿವಾಸಿಗಳಿಗೆ ರಕ್ಷಕರೆನಿಸಿದವರು ಕಿರುಕುಳಗಳನ್ನು ಕೊಡುವ ದೃಶ್ಯ ಕಂಡಾಗ ನನಗೆ ಆದಿವಾಸಿಯೊಬ್ಬ ಹೇಳಿದ ಕಥೆ ನೆನಪಾಯಿತು. ಇಂತಹ ಸಿನಿಮಾಗಳು ನಾಗರಿಕರೆನಿಸಿದ ಅನಾಗರಿಕರ ಅಟ್ಟಹಾಸಗಳಿಗೆ ಎಚ್ಚರಿಕೆಯನ್ನು ಪರಿವರ್ತನೆಯನ್ನು ನೀಡುತ್ತದೆ.
*ಚಿಮಬಿಆರ್ (ಮಂಜುನಾಥ ಬಿ.ಆರ್)*
*ಯುವಸಾಹಿತಿ, ವಿಮರ್ಶಕ*
*ಎಚ್.ಡಿ ಕೋಟೆ ಮೈಸೂರು.*
*ದೂರವಾಣಿ ಸಂಖ್ಯೆ:- 8884684726*
*Gmail I’d:-manjunathabr709@gmail.com*