ಮೈಸೂರು: ಉಪ್ಪಾರ ಸಮುದಾಯದವರು ಮೌಢ್ಯ ತ್ಯಜಿಸಿ ಶಿಕ್ಷಣವನ್ನು ಮಂತ್ರವಾನ್ನಾಗಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕರೆ ನೀಡಿದರು.

ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿ ಪರರ ಸಂಘವು ಭಾನುವಾರ ನಗರದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ೨೬ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ನಿವೃತ್ತ / ಬಡ್ತಿ ಹೊಂದಿದ ನೌಕರರು, ಸಾಧಕರು ಮತ್ತು ಸಮಾಜ ಸೇವಕರಿಗೆ ಸನ್ಮಾನ ಹಾಗೂ ನುಡಿನಮನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಶಿಕ್ಷಣದಲ್ಲಿ ವಂಚಿತರಾಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿರುವಿಕೆಗೆ ಕಾರಣವಾಗಿದೆ. ಬಡತನ, ಮೌಢ್ಯತೆ. ಅನಕ್ಷರತೆ ಹೋಗಲಾಡಿಸಬೇಕು. ಶಿಕ್ಷಣ, ದುಡಿಮೆಯಿಂದ ಸಂಘಟಿತರಾಗಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.


ವಿದ್ಯಾರ್ಥಿಗಳಿಗೆ ಗುರು ಮತ್ತು ಗುರಿ ಇರಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ ಇರಬೇಕು. ಕೀಳರಿಮೆ ಬಿಡಬೇಕು ಎಂದು ಅವರು ಸಲಹೆ ನೀಡಿದರು.ಸಮುದಾಯದವರು ಧರ್ಮಾಚರಣೆ ಮಾಡಲಿ. ಆದರೆ ಮೌಢ್ಯಾಚರಣೆ ಬಿಡಬೇಕು. ದುಂದುವೆಚ್ಚ ಕಡಿಮೆ ಮಾಡಬೇಕು. ಅಂಬೇಡ್ಕರ್ ಅವರು ಹೇಳಿರುವಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಅಸ್ತ್ರ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅದೆಷ್ಟೇ ಅವಮಾನವಾದರೂ ವಿದ್ಯೆ ಕಲಿತು ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ ರಚಿಸಿದ್ದಾರೆ.

ಅಬ್ದುಲ್ ಕಲಾಂ ಅವರು ಬಡತನದಲ್ಲಿ ಹುಟ್ಟಿ, ಪತ್ರಿಕೆ ಹಾಕಿಕೊಂಡು ಓದಿ, ಕ್ಷಿಪಣಿ ತಜ್ಞರಾಗಿ, ರಾಷ್ಟ್ರಪತಿ ಹುದ್ದೆಗೆ ಏರಿದ್ದನ್ನು ಸ್ಫೂರ್ತಿಯಾಗಿಸಿಕೊಳ್ಳಬೇಕು. ಆತ್ಮವಿಶ್ವಾಸ ಇದ್ದಲ್ಲಿ ಸಂಪಾದಿಸಬಹುದು ಎಂದರು.
ಹಿಂದೆ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕವೇ ಗಂಗಾ ಕಲ್ಯಾಣ, ನೇರ ಸಾಲ ಸೌಲಭ್ಯ ಮತ್ತಿತರ ಸವಲತ್ತು ಸಿಗುತ್ತಿದ್ದವು. ಸಿದ್ದರಾಮಯ್ಯ ಅವರು ಜನಾಂಗದವರಿಗೆ ಅನುಕೂಲ ಮಾಡಿಕೊಡಲು ನಿಗಮ ರಚಿಸಿದರು. ಆದರೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಆದ್ದರಿಂದ ಉಪ್ಪಾರ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.


ಎಚ್.ಡಿ. ಕೋಟೆಯ ಹಾಸ್ಟೆಲ್ ಜಮೀನು ಸಮಸ್ಯೆ ಬಗೆಹರಿಸಬೇಕು. ಜನಾಂಗದವರು ಯಾವುದಾದರೂ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡು ಹೆಚ್ಚಿನ ಪ್ರಾತಿನಿದ್ಯ ಪಡೆಯಲು ಯತ್ನಿಸಬೇಕು. ರಾಜಕೀಯ ಪಕ್ಷಗಳು ಕೂಡ ಉಪ್ಪಾರ ಜನಾಂಗದವರಿಗೆ ಹೆಚ್ಚಿನ ಸೀಟುಗಳನ್ನು ನೀಡಬೇಕು ಎಂದು ಅವರು ಹೇಳಿದರು.


ಕಳೆದೆರಡು ವರ್ಷಗಳಿಂದ ಕೊರೋನಾದಿಂದ ಮಂಕಾಗಿದ್ದ ಸಾರ್ವಜನಿಕ ಜೀವನ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಎಲ್ಲಾ ರೀತಿಯ ಚಟುವಟಿಕೆಗಳು ಪುನಾರಂಭವಾಗಿವೆ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಅಯ್ಯನ ಸರಗೂರು ಮಠದ ಶ್ರೀ ಚಿನ್ನಸ್ವಾಮೀಜಿಯವರ ಭಾವಚಿತ್ರ ಅನಾವರಣ ಮಾಡಿದರು.


ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್ ಮಾತನಾಡಿ, ಉಪ್ಪಾರರಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್-ಹೀಗೆ ಯಾವುದೇ ಪಕ್ಷ ಇಲ್ಲ. ಉಪ್ಪಾರದೇ ಒಂದು ಪಕ್ಷ. ಯಾರನ್ನಾದರೂ ಗೆಲ್ಲಿಸುವ ಶಕ್ತಿ ನಮಗಿಲ್ಲವಾದರೂ ಸೋಲಿಸುವ ಶಕ್ತಿ ಇದೆ. ಇದನ್ನು ಅರಿತುಕೊಂಡು ಸಂಘಟಿತರಾಗಿ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ಸಂಘಕ್ಕೆ ವೈಯಕ್ತಿಕವಾಗಿ ೫೦,೦೦೦ ರು. ನೆರವು ಘೋಷಿಸಿದ ಅವರು, ಸ್ಥಳದಲ್ಲಿಯೇ ಚೆಕ್ ನೀಡಿದರು.


ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಪ್ಪಾರ ಜನಾಂಗದ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮುಂದೆ ಬರಬೇಕಾದರೆ ಮೊದಲು ವಿದ್ಯಾವಂತರಾಗಬೇಕು. ಕಂದಾಚಾರ ಬಿಡಬೇಕು ಎಂದು ಕಿವಿಮಾತು ಹೇಳಿದರು.


ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಕಾರ್ಯಾಧ್ಯಕ್ಷ ಪಿ.ಎಸ್. ವಿಷಕಂಠಯ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ವಿವಿಧ ಪ್ರಶಸ್ತಿಗಳ ಪ್ರದಾನ: ಶ್ರೀ ಭಗೀರಥ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಮೈಸೂರು ಜಿಲ್ಲಾ ಉಪ್ಪಾರ ನೌಕರರ ಸಂಘದ ಮಾಜಿ ಅಧ್ಯP ದಿವಂಗತ ಆರ್.ಸೋಮಶೇಖರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಭಗೀರಥ ವಿದ್ಯಾಶ್ರೀ ಪ್ರಶಸ್ತಿಯನ್ನು ಚಾಮರಾಜನಗರ ತಾಲೂಕು ದೊಡ್ಡಮೋಳೆಯ ವರಲಕ್ಷ್ಮೀ, ವೈ.ಕೆ. ಮೋಳೆಯ ಎಸ್. ಸೌಜನ್ಯಾ, ನಾಗಮಂಗಲ ತಾಲೂಕು ಉಪ್ಪಾರಹಳ್ಳಿಯ ಎಸ್. ಶ್ರುತಿ, ಟಿ.ಕೆ. ಲೇಔಟ್‌ನ ಎಂ.ಮಿಥುನ್, ಶ್ರೀ ಭಗೀರಥ ಕ್ರೀಡಾರತ್ನ ಪ್ರಶಸ್ತಿಯನ್ನು ಜೆ.ಪಿ.ನಗರದ ಎನ್.ಪ್ರಜ್ವಲ್, ಅಂತಾರಾಷ್ಟ್ರೀಯ ಖೋ ಖೋ ಆಟಗಾರ ಪಿರಿಯಾಪಟ್ಟಣದ ಉಪ್ಪಾರಗೇರಿಯ ಪಿ.ಎನ್.ಕಿರಣ್‌ಕುಮಾರ್, ಶ್ರೀ ಭಗೀರಥ ನಾಗರಿಕ ಸೇವಾರತ್ನ ಪ್ರಶಸ್ತಿಯನ್ನು ಕೆ.ಆರ್.ಠಾಣೆ ಇನ್‌ಸ್ಪೆಕ್ಟರ್ ಎಂ.ಮಹದೇವಸ್ವಾಮಿ, ಭಗೀರಥ ಶಿPಣ ರತ್ನ ಪ್ರಶಸ್ತಿಯನ್ನು ಮಧುವನಹಳ್ಳಿಯ ಎಚ್.ಗೋಪಾಲಸ್ವಾಮಿ, ಶ್ರೀ ಭಗೀರಥ ವೃPಮಿತ್ರ ಪ್ರಶಸ್ತಿಯನ್ನು ಸಿ.ಎಂ.ವೆಂಕಟೇಶ್ ಮತ್ತು ಜಯಲಕ್ಷ್ಮೀ ದಂಪತಿಗೆ ಪ್ರದಾನ ಮಾಡಲಾಯಿತು.


ಸಮುದಾಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭಗೀರಥ ಪ್ರಶಸ್ತಿ ಪಡೆದವರಿಗೆ ೫ ಸಾವಿರ ನಗದು ಹಾಗೂ ಉಳಿದವರಿಗೆ ೧ ಸಾವಿರ ನಗದು ಬಹುಮಾನ ನೀಡಲಾಯಿತು.ಬಡ್ತಿ ಹೊಂದಿದ ನೌಕರರಾದ ಮೈಸೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಮದುಸೂಧನ್ ಎ.ಎನ್., ಶ್ರೀರಂಗಪಟ್ಟಣದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಾದೇಶ, ಕೆ.ಶೆಟ್ಟಹಳ್ಳಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮಹದೇವಪ್ಪ, ಚಾ.ನಗರ ಜಿಲ್ಲಾ ಹಿಂದುಳಿದ ವರ್ಗದ ಕಲ್ಯಾಣಾ ಇಲಾಖೆ ಜಿಲ್ಲಾ ಅಧಿಕಾರಿ ರೇವಣ್ಣ, ಎನ್.ಐ. ಕಾಲೇಜಿನ ಪ್ರೊ.ಚಿನ್ನಸ್ವಾಮಿ, ನಂಜನಗೂಡಿನ ಸೀನಿಯರ್ ಹೆಲ್ತ್‌ಕೇರ್ ಆಫೀಸರ್ ವಿಜಯಕುಮಾರಿ, ಸರ್ಕಾರಿ ಆಸ್ಪತ್ರೆ ಇಎನ್‌ಟಿ ಸರ್ಜನ್ ಚಿದಾನಂದ ಹೆಚ್.ಎನ್., ಸಾಗಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಮಂಜುಳಾ ಮಹದೇವಸ್ವಾಮಿ ಹಾಗೂ ನಿವೃತ್ತರಾದ ಅಧಿಕಾರಿ/ನೌಕರರಾದ ಪೊಲೀಸ್ ಇಲಾಖೆ ಎಎಸ್‌ಐಗಳಾದ ಶಂಭುಲಿಂಗಸ್ವಾಮಿ, ಸಿದ್ದಪ್ಪ, ವಿದ್ಯಾಇಲಾಖೆ ಗೊಂಡಶೆಟ್ಟಿ, ವಿಕ್ರಾಂತ್ ಟೈರ್‍ಸ್‌ನ ಮರಿಸ್ವಾಮಿ, ಹಿನಕಲ್ ಫೋಟೋಗ್ರಾಫರ್ ಹೇಮಂತ್, ಚಾ.ನಗರ ಜಿಲ್ಲಾ ಕುಷ್ಠರೋಗ ಆರೋಗ್ಯಾಧಿಕಾರಿ ಸಿ.ರಾಜು, ಶಿಕ್ಷಕ ಚೇಳನಿರಾಜು, ಆರೋಗ್ಯ ಇಲಾಖೆ ಮುದ್ದುಮಾದಶೆಟ್ಟಿ, ಪೊಲೀಸ್ ಇಲಾಖೆ ವೆಂಕಟರಂಗಶೆಟ್ಟಿ ಮತ್ತು ಪಿಎಚ್‌ಡಿ ಪಡೆದ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿಯ ಡಾ.ವೆಂಕಟರಾಜು ಎಸ್.ಎನ್., ಚಾ.ನಗರ ತಾಲೂಕು ಮೇಗಲಹುಂಡಿ ಗ್ರಾಮದ ಡಾ.ಮಹೇಶ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಚಾಮರಾಜನಗರದ ಸಿ.ಎ.ಮಹದೇವಶೆಟ್ಟಿ, ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ನಾಗರಾಜು ಮಖ್ಯ ಅತಿಥಿಗಳಾಗಿದ್ದರು.ಸಂಘದ ಅಧ್ಯಕ್ಷ ಮಹದೇವಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಂ. ಗೋವಿಂದರಾಜು ನಿರೂಪಿಸಿದರು. ಗೌರವ ಸಲಹೆಗಾರರಾದ ಜಗನ್ನಾಥ ಸಾಗರ್ ಅವರು ಸ್ವಾಗತಿಸಿದರು.