ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗ್ರಾಮಗಳ ರೈತರ ನಿದ್ದೆಗೆಡಿಸಿರುವ ಹುಲಿಗಾಗಿ ಸಾಕಾನೆಗಳ ಸಹಾಯದಿಂದ ಹುಡುಕಾಟ ಆರಂಭವಾಗಿದೆ.
ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ದಾಸನಪುರ ಮತ್ತು ದೊಡ್ಡಹೆಜ್ಜೂರಿನಲ್ಲಿ ಹುಲಿಯೊಂದು ಮೇಲಿಂದ ಮೇಲೆ ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದು ಕಳೆದೊಂದು ವಾರದಲ್ಲಿ ಐದು ಜಾನುವಾರುಗಳನ್ನು ಬಲಿತೆಗೆದುಕೊಂಡಿದೆ.
ಈಗಾಗಲೇ ಕೊರೋನಾದ ಸಂಕಷ್ಟದಲ್ಲಿರುವ ರೈತರಿಗೆ ಹುಲಿದಾಳಿ ನುಂಗಲಾರದ ತುತ್ತಾಗಿದೆಯಲ್ಲದೆ, ಕೃಷಿ ಕೆಲಸಕ್ಕೆ ಮನೆಯಿಂದ ಹೊರಗೆ ಹೋಗಲು ಭಯಪಡುವಂತಾಗಿದೆ.
ಈಗಾಗಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿಲ್ಲಿರುವ ದಾಸನಪುರ, ನೇಗತ್ತೂರು, ಕಚುವಿನಹಳ್ಳಿ ಮತ್ತು ದೊಡ್ಡಹೆಜ್ಜೂರಿನ ವಿವಿಧೆಡೆ ಕಾಣಿಸಿಕೊಂಡಿರುವ ಹುಲಿ ಜಾನುವಾರಗಳ ಮೇಲೆಯೇ ಹುಲಿ ದಾಳಿ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹುಲಿಯನ್ನು ಸೆರೆಹಿಡಿಯಬೇಕು ಅಥವಾ ಕಾಡಿಗೆ ಅಟ್ಟಬೇಕೆಂಬ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಸಾಕಾನೆಗಳಾದ ಕೃಷ್ಣ ಮತ್ತು ಗೋಪಾಲಸ್ವಾಮಿಯ ಸಹಾಯದಿಂದ ದೊಡ್ಡಹೆಜ್ಜೂರಿನ ಹಳೇ ಊರು ಹನುಮಂತಪುರದ ಅಂಗಳದಲ್ಲಿ ಹುಡಕಾಟ ನಡೆಸಿದ್ದು, ಈ ವೇಳೆ ಬಿದಿರು ಪೊದೆಯೊಳಗೆ ಸ್ವಲ್ಪ ದೂರದಲ್ಲಿ ಹುಲಿ ಕಾಣಿಸಿಕೊಂಡಿತ್ತಾದರೂ ಅರಣ್ಯ ಸಿಬ್ಬಂದಿಯೊಂದಿಗೆ ಆಗಮಿಸಿದ ಆನೆಗಳ ಜೊತೆ ಮೂನ್ನೂರಕ್ಕೂ ಹೆಚ್ಚು ಸಂಖ್ಯೆಯ ಗ್ರಾಮಸ್ಥರನ್ನು ಕಂಡು ಹುಲಿ ಗಾಬರಿಯಿಂದ ಪೊದೆಯೊಳಗೆ ಓಡಿ ಮರೆಯಾಗಿದೆ.
ಹುಣಸೂರು ಗ್ರಾಮಾತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ನಾಗರಹೊಳೆ ಆರಣ್ಯ ವಿಭಾಗದ ಎ.ಸಿ.ಎಫ್. ಸತೀಶ್, ವೀರನಹೊಸಹಳ್ಳಿ ವಲಯದ ಆರ್.ಎಫ್.ಓ. ನಮನ್ ನಾರಾಯಣನಾಯಕ್, ಡಿಆರ್‌ಎಫ್ ಓ ಚಂದ್ರೇಶ್ ನೇತೃತ್ವದಲ್ಲಿ ೬೦ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಮೂರು ವಿಭಾಗಗಳಾಗಿ ದಾಸನಪುರ, ಲಕ್ಷ್ಮಣತೀರ್ಥ ನದಿ ಹಾಗೂ ದೊಡ್ಡಹೆಜ್ಜೂರು ಹಳೇವೂರು ಭಾಗದಲ್ಲಿ ಮತ್ತು ಲಕ್ಷ್ಮಣತೀರ್ಥ ನದಿ ದಡದಲ್ಲಿ ನದಿಯಲ್ಲಿ ತೆಪ್ಪದ ಮೂಲಕವೂ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಹುಲಿಯ ಸುಳಿವು ಸಿಕ್ಕಿಲ್ಲವಾದುದರಿಂದ ಕಾರ್ಯಾಚರಣೆ ಮುಂದುವರೆದಿದೆ. ಹುಲಿ ಸಿಗುವ ತನಕ ಈ ವ್ಯಾಪ್ತಿಯ ರೈತರು ಮತ್ತು ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.