
ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರರ ಹೋರಾಟ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಹ ತ್ಯಾಗ ಬಲಿದಾನಗಳನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ. ಬ್ರಿಟಿಷರನ್ನು ಎದೆಗುಂದುವಂತೆ ಮಾಡಿದ ಹೋರಾಟಗಳು ನೂರಾರು ಆಗಿದ್ದು ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರ ಇತಿಹಾಸವನ್ನು ಯುವ ಸಮುದಾಯಕ್ಕೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರು ಆದ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಝಾನ್ಸಿ ಯೂತ್ ಕ್ಲಬ್ ವತಿಯಿಂದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಗೋಪಿನಾಥ್ ಸಹ ಬಲಿದಾನ ದಿವಸದಲ್ಲಿ ಮಾತನಾಡುತ್ತಾ, ಗೋಪಿನಾಥ್ ಸಹ ರವರು ಬಂಗಾಳದ ಮಹಾ ಕ್ರಾಂತಿಕಾರಿ ಯುವಕ ಭಾರತೀಯರ ಬಗ್ಗೆ ದ್ವೇಷದಿಂದ ಬಂಗಾಳದ ಪೊಲೀಸ್ ಕಮಿಷನರ್ ಚಾರ್ಲ್ಸ್ ತೆಗ್ರಾರ್ಟ್ ರವರ ಹತ್ಯೆಮಾಡಲು ಪ್ರಯತ್ನಿಸಿ ಮತ್ತೊಬ್ಬ ಇಂಗ್ಲಿಷ್ ಡೇ ಎಂಬುವವನನ್ನು ಕೊಲ್ಲಲಾಯಿತು. ೧೮ ವರ್ಷದ ಯುವಕ ಗೋಪಿನಾಥ್ ಅವರನ್ನು ಬಂಧಿಸಿ ಮಾರ್ಚ್ ಒಂದರಂದು ಗಲ್ಲಿಗೇರಿಸಲಾಯಿತು.
ಕ್ರಾಂತಿಕಾರರು ಯುವಶಕ್ತಿಯ ಪ್ರತೀಕವಾಗಿದ್ದು, ಕ್ರಾಂತಿಕಾರರ ಜೀವನ ಮತ್ತು ಬಲಿದಾನವನ್ನು ಮರೆಯಲು ಸಾಧ್ಯವಿಲ್ಲ, ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವ ದೇಶದೆಲ್ಲೆಡೆ ನಡೆಯುತ್ತಿದೆ .ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ವಿವಿಧ ಅಂಶಗಳ ಸಮಗ್ರ ಮಾಹಿತಿಯನ್ನು ಸಂಶೋಧನಾತ್ಮಕವಾಗಿ ರೂಪಿಸಿ ವಿದ್ಯಾರ್ಥಿ ಸಮೂಹಕ್ಕೆ ನೀಡುವ ಕಾರ್ಯ ನಡೆಯಬೇಕಿದೆ.
ಅಗೋಚರವಾಗಿ ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನ ಗೊಂಡ ನೂರಾರು ಕ್ರಾಂತಿಕಾರಿಗಳ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವ ಸಕಾಲ ನಿರ್ಮಾಣ ಮಾಡಬೇಕು. ವಾಸುದೇವ ಬಲವಂತ ಪಡಕೆ, ಸಾವರ್ಕರ್, ಚಾಪೇಕರ್ ಸಹೋದರರು, ಮದನ್ ಲಾಲ್ ಧಿಂಗ್ರಾ, ಕೃಷ್ಣವರ್ಮ, ಖದಿ ರಾಮ್ ಬೋಸ್, ರಾಸ್ ಬಿಹಾರಿ ಬೋಸ್, ಲಾಲಾ ಹರ್ ದಯಾಳ್, ಅಶ್ವ ಕುಲ್ಲ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ಲಾ, ರೋಷನ್ ಸಿಂಗ್ ,ರಾಜೇಂದ್ರ ಲಹರಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಅಂತಹ ನೂರಾರು ಕ್ರಾಂತಿಕಾರರು ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದಿದ್ದಾರೆ.
ಕ್ರಾಂತಿಕಾರಿ ಗೋಪಿನಾಥ್ ಸಹ ಅವರ ಭಾವಚಿತ್ರಕ್ಕೆ ಶಂಕರಪುರ ಹಿತರಕ್ಷಣಾ ಸಮಿತಿಯ ಮುರುಗೇಶ್ ಪುಷ್ಪ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಝಾನ್ಸಿ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಶರಣ್ಯ ಋಗ್ವೇದಿ ಮಾತನಾಡಿ, ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಮತ್ತು ಅವರ ಇತಿಹಾಸವನ್ನು ತಿಳಿಸುವ ಹಾಗೂ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕಾರ್ಯವನ್ನು ಮುಂದಿನ ದಿನಗಳಲ್ಲಿ ಇತಿಹಾಸ ಪರಿಚಯದ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ್, ಸಾನಿಕ , ಶ್ರಾವ್ಯ, ಕುಸುಮ ಮಹೇಶ್ವರಿ ಇದ್ದರು.
