
ಚಾಮರಾಜನಗರ: ಕರ್ನಾಟಕ ರಾಜ್ಯೋತ್ಸವದ ಪೂರ್ವವಾಗಿ ಇಂದು ಆಯೋಜಿಸಲಾಗಿದ್ದ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನನ್ನ ನಾಡು-ನನ್ನ ಹಾಡು ಎಂಬ ಶೀರ್ಷಿಕೆಯಡಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದ ಮುಂಭಾಗದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳು, ಕಲಾವಿದರು, ಸಾರ್ವಜನಿಕರು ಪಾಲ್ಗೊಂಡು ಕನ್ನಡ ಗೀತೆಗಳನ್ನು ಮೊಳಗಿಸಿದರು. ಈ ಮೂಲಕ ಕನ್ನಡ ನಾಡು, ನುಡಿ ಬಗೆಗಿನ ಪರಂಪರೆ ಸಾರಿದರು.
ನಾಡಿನ ಶ್ರೇಷ್ಠ ಕವಿಗಳ ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ನನ್ನ ನಾಡು-ನನ್ನ ಹಾಡು ಎಂಬ ಶೀರ್ಷಿಕೆಯಡಿ ಮೊದಲಿಗೆ ರಾಷ್ಟ್ರಕವಿ ಕುವೆಂಪುರವರ ನಾಡಗೀತೆ ಜಯಭಾರತ ಜನನಿಯ ತನುಜಾತೆ ಗೀತೆಯನ್ನು ಹಾಡಲಾಯಿತು. ಬಳಿಕ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ. ಡಿ.ಎಸ್. ಕರ್ಕಿರವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ. ಚನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ ಹಾಗೂ ಡಾ. ಹಂಸಲೇಖ ರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಸಮೂಹ ಗಾಯನ ಏಕಕಾಲದಲ್ಲಿ ಮೊಳಗಿದವು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದ ಮುಂಭಾಗದಲ್ಲಿ ನಡೆದ ಕೋಟಿ ಕಂಠ ಸಮೂಹ ಗೀತ ಗಾಯನ ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ನಗರಸಭಾ ಸದಸ್ಯರು, ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಇತರೆ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು, ವಿದ್ಯಾರ್ಥಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಗುರುಲಿಂಗಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್, ಸೇರಿದಂತೆ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಕನ್ನಡ ಬಳಕೆ, ಕಲಿಕೆ, ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಿ ಪೋಷಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಾನು ನನ್ನ ನಾಡು ನುಡಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ದನಾಗಿರುತ್ತೇನೆ. ಕನ್ನಡ ನಾಡಿನಲ್ಲಿರುವ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುತ್ತೇನೆ ಎಂಬ ಸಂಕಲ್ಪ ಮಾಡುತ್ತೇನೆ ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
