ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಈಗಾಗಲೇ ಎಲ್ಲೆಡೆ ತೃತೀಯ ಲಿಂಗಿಗಳ ಪರವಾದ ಧ್ವನಿಗಳು ಕೇಳಿಬರುತ್ತಿದೆ.ಜೊತೆಗೆ ಸಿನಿಮಾ ರಂಗಗಳಲ್ಲೂ ತೃತೀಯ ಲಿಂಗಿಗಳ ಬದುಕಿನ ಆಧಾರಿತ ಚಲನಚಿತ್ರಗಳು ಮೂಡಿ ಬಂದಿವೆ.ಉದಾಹರಣೆಗೆ ಸಂಚಾರಿ ವಿಜಯ್ ನಟಿಸಿರುವ “ನಾನು ಅವನಲ್ಲ ಅವಳು ಸಿನಿಮಾ ಕಥೆ”.ಈ ಸಿನಿಮಾ ಬಹುಪಾಲು ತೃತೀಯ ಲಿಂಗಿಗಳ ಜೀವನ ಶೈಲಿಯ ಸತ್ಯ ಕಥೆ ಆಧಾರಿತವಾಗಿ ಮೂಡಿ ಬಂದಿದೆ.ಒಂದು ಹೆಣ್ಣು ಅಥವಾ ಗಂಡು ತನ್ನ ಪ್ರೌಢಾವಸ್ಥೆಯಲ್ಲಿ ದೈಹಿಕ ಬದಲಾವಣೆಯಿಂದಾಗಿ ಯಾವ ರೀತಿಯಾಗಿ ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಜಿಗಿದು ಗಂಡಾದರೂ ಹೆಣ್ಣಿನ ರೂಪವನ್ನು ಮತ್ತು ಹೆಣ್ಣಾದರೂ ಗಂಡಿನ ರೂಪವನ್ನು ಪಡೆದುಕೊಳ್ಳುತ್ತಾರೆ ಎಂದು.ಹಾಗು ಈ ರೀತಿಯಲ್ಲಿ ತೃತೀಯ ಲಿಂಗಿಗಳಾದ ಮೇಲೆ ಅವರು ಅನುಭವಿಸುವ ಜೀವನದ ಹಲವು ಕಷ್ಟಗಳನ್ನು ತುಂಬಾ ವಾಸ್ತವವಾಗಿ ಈ ಸಿನಿಮಾದಲ್ಲಿ ತಿಳಿಸಲಾಗಿದೆ.ಇದೇ ರೀತಿಯ ಚಿತ್ರಣದಲ್ಲಿ ಒಬ್ಬ ತೃತೀಯಲಿಂಗಿ ಒಂದು ಸಾಮಾಜಿಕ ವೇದಿಕೆಯಲ್ಲಿ ನಿಂತು ತಮ್ಮ ಹಲವು ತೊಂದರೆಗಳನ್ನು ಎದುರಿಸುತ್ತಿರುವುದನ್ನು ದುಃಖ ಭಾವಪರವಶರಾಗಿ ಹಂಚಿಕೊಳ್ಳುತ್ತಿದ್ದರು.
ಆ ವೇದಿಕೆಯಲ್ಲಿ ಇಡೀ ಸಮಾಜಕ್ಕೆ ಹಲವು ಪ್ರಶ್ನೆಗಳನ್ನು ಹಾಕುತ್ತಿದ್ದರು.ಅದನ್ನು ಕೇಳಿದವರಿಗೆ ಮನ ಕರಗದೇ ಇರದು. “ಕೆಲಸ ಮಾಡುವ ಸಾಮರ್ಥ್ಯ ನನ್ನಲ್ಲಿದೆ ಕೆಲಸ ಕೊಡುವ ಮಾನವೀಯತೆ ಮತ್ತು ನೈತಿಕತೆ ನಿಮ್ಮಲ್ಲಿದೆಯಾ”?. ತೃತೀಯ ಲಿಂಗಿಗಳು ರಸ್ತೆಯಲ್ಲಿ ಭಿಕ್ಷೆ ಕೇಳುವುದು ತಪ್ಪು ಎನ್ನುವುದಾದರೆ ನಾಲ್ಕು ಗೋಡೆಗಳ ಮಧ್ಯೆ ಮೈಮಾರಿಕೊಳ್ಳುವುದು ತಪ್ಪು ಎನ್ನುವುದಾದರೆ ಸಮಾಜದಲ್ಲಿ ನಾನು ಗೌರವಯುತವಾಗಿ ನೈತಿಕವಾಗಿ ಜೀವನ ನಡೆಸಲು ನೀವೇನು? ನೀವೆಷ್ಟು? ಅವಕಾಶ ಮಾಡಿ ಕೊಟ್ಟಿದ್ದೀರಾ”?. *”ಕುಟಂಬದಿಂದ ಸಿಗಬೇಕಾದ ಪ್ರೀತಿ ಸಿಗಲಿಲ್ಲ, ಮಾನಸಿಕ ಬೆಂಬಲ ಸಿಗಲಿಲ್ಲ, ಸಮಾಜದಿಂದ ಒಳ್ಳೆಯ ವ್ಯವಸ್ಥೆ ಸಿಗಲಿಲ್ಲ ಕೊನೆಗೆ ನಾನು ಹೋಗಿದ್ದು ತೃತೀಯಲಿಂಗಿಗಳ ಸಮುದಾಯಕ್ಕೆ”. “ಒಂದು ಭಿಕ್ಷೆ ಬೇಡಬೇಕು ಇನ್ನೊಂದು ವೇಶ್ಯೆ ವೃತ್ತಿ ಮಾಡಬೇಕು ;ಇವೆರೆಡು ಕೆಲಸ ಮಾಡೋಕೆ ನಮಗೂ ಇಷ್ಟ ಇಲ್ಲ.ನನಗೂ ತಿಂಗಳ ಜೀವನಕ್ಕೆ ಹಣ ಬೇಕು ವಾಸಕ್ಕೆ ಒಂದು ಮನೆ ಬೇಕು” ಈ ರೀತಿಯಾಗಿ ತೃತೀಯಲಿಂಗಿ ಅವರು ಮಾತನಾಡಿದ ವೀಡೀಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ನಾನು ಕೂಡ ವೀಕ್ಷಿಸಿದೆ.ಅವರು ಹೇಳಿದ ಅಷ್ಟು ಮಾತುಗಳೂ ಸಹ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವಂತೆ ಮಾಡಿತು.ಪ್ರಜ್ಞಾವಂತ ವಿದ್ಯಾವಂತ ಎನಿಸಿದ ನನಗೆ ಆ ತೃತೀಯ ಲಿಂಗಿಗಳ ಸಮಾಜದ ಮೇಲೆ ಪೂರ್ವಪೀಡಿತನಾಗಿ ತಳೆದಿದ್ದ ಧೋರಣೆಗಳ ಬಗ್ಗೆ ಮರು ಪ್ರಶ್ನಿಸಿಕೊಳ್ಳುವಂತೆ ಆಯಿತು.ತೃತೀಯ ಲಿಂಗಿಗಳಾದವರಿಗೆ ಕುಟುಂಬದಿಂದಲೇ ಬಹಿಷ್ಕಾರವಿರುತ್ತದೆ.ಹೆತ್ತವರೇ,ಪೋಷಕರೇ ,ಸಂಬಂಧಿಕರೇ ಅವರ ಹುಟ್ಟನ್ನು ಅವಮಾನಿಸುತ್ತಿರುವಾಗ ಅಲ್ಲಿಯೇ ಮೊದಲು ಅವರಿಗೆ ಸಹಿಸಲಾಗದ ನೋವು ,ಮಾನಸಿಕ ಖಿನ್ನತೆ ಉಂಟಾಗುತ್ತದೆ.
ಒಂದು ಹೆಣ್ಣು ಪ್ರಾಕೃತಿಕವಾಗಿ ದೈಹಿಕ ಬದಲಾವಣೆಗಳಲ್ಲಿ ಪಕ್ವತೆ ಪಡೆಯುವಾಗ ಎಷ್ಟೆಲ್ಲಾ ಕಷ್ಟಗಳಿರುತ್ತವೆ.ಹೆಚ್ಚಿನದಾಗಿ ಪೋಷಕರಿಂದ ಆರೈಕೆ ಮತ್ತು ಜಾಗೃತಿ ಹಾಗು ಬೆಂಬಲ ಬೇಕಾಗಿರುತ್ತದೆ.ಸಮಾಜದಿಂದ ಒಂದು ಹೆಣ್ಣಿಗೆ ನೀಡುವ ಗೌರವ ಮತ್ತು ರಕ್ಷಣೆ ಬೇಕಾಗಿರುತ್ತದೆ. ಆ ನಂತರ ಒಂದು ಹೆಣ್ಣು ಸಮಾಜದೊಂದಿಗೆ ದೈರ್ಯದಿಂದ ಬೆರತು ಬಾಳಲು ಮುಂದಾಗುತ್ತಾಳೆ.ಇಲ್ಲವಾದರೆ ಹಲವಾರು ತೊಂದರೆಗಳಿಂದ ಒಂದು ಪ್ರಾಣಕ್ಕೆ ಹಾನಿ ಉಂಟಾಗುತ್ತದೆ ಇಲ್ಲವೇ ಮಾನಸಿಕವಾಗಿ ಖಿನ್ನತೆಗೊಳಗಾಗಿ ಹೊರಗಿನ ಸಮಾಜದಲ್ಲಿ ಸುವ್ಯವಸ್ಥಿತ ಬದುಕನ್ನು ಕಟ್ಟುಕೊಳ್ಳಲು ವಿಫಲವಾಗುತ್ತಾಳೆ.ಅಂತಹದರಲ್ಲಿ ಈ ತೃತೀಯಲಿಂಗಿಗಳ ದೈಹಿಕ ಮಾನಸಿಕ ಬದಲಾವಣೆಯ ಹಂತದಲ್ಲಿ ಯಾವ ಆರೈಕೆಯು ಸಹ ಇರುವುದಿಲ್ಲ, ಯಾವ ಪ್ರೋತ್ಸಾಹವು ಇರುವುದಿಲ್ಲ ಹಾಗೂ ಸಮಾಜವನ್ನು ಅವರು ಎದುರಿಸುವ ಪರಿಯಲ್ಲಿ ಯಾವುದೇ ಅರಿವು ಜಾಗೃತಿ ಅವರಿಗೆ ದೊರಕುವುದಿಲ್ಲ.ಎಲ್ಲವೂ ತಿರಸ್ಕಾರಗಳೇ ಆಗಿದೆ.ಇಂತಹ ಖಿನ್ನತೆ ಮತ್ತು ತಿರಸ್ಕಾರಗಳಲ್ಲಿ ಬೆಂದು ಇತ್ತಕಡೆ ಸಮಾಜದೊಂದಿಗೆ ಬೆರೆಯಲಾಗದೆ, ಕುಟುಂಬದವರ ಸಹಕಾರ ಪಡೆಯಲಾಗದೆ ಎಷ್ಟೋ ತೃತೀಯ ಲಿಂಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗು ತಾನು ಹುಟ್ಟಿ ಬೆಳೆದ ಸಮಾಜವನ್ನು ಬಿಟ್ಟು ದೇಶದ ಇನ್ಯಾವುದೋ ಒಂದು ಸ್ಥಳದಲ್ಲಿ ತನ್ನ ಮೂಲ ಗುರುತನ್ನು ಕಳೆದುಕೊಂಡು ಹೀನಾಯವಾಗಿ ಬದುಕುವ ದಾಟಿಯಲ್ಲಿ ಅಪಾರ ಕುಂದುಕೊರತೆಗಳನ್ನು ಎದುರಿಸುತ್ತಿದ್ದಾರೆ.ಇದ್ಯಾವುದು ಕೂಡ ಸಮಾಜದ ಮುಖ್ಯ ಕಣ್ಣಿಗೆ ಕಾಣಿಸುತ್ತಿಲ್ಲ.ಅವರಿಗೆ ಉನ್ನತ ಶಿಕ್ಷಣ ಪಡೆಯಲು, ಉದ್ಯೋಗ ಹೊಂದಲು ಸಮಾಜದ ಪೂರಕ ಬೆಂಬಲವಿಲ್ಲ.ಅವರಿಗೂ ಭಾವನೆಗಳಿದೆ, ಬದುಕಬೇಕೆನ್ನುವ ಹಂಬಲವಿದೆ ಹಲವಾರು ಮಾನವ ಜಗತ್ತಿನ ಆಸೆಗಳಿದೆ ಇದನ್ನೆಲ್ಲಾ ಪೂರೈಸಿಕೊಳ್ಳಬೇಕಾದರೆ ನಾವೇ ಅವರನ್ನು ಎಲ್ಲಾ ರಂಗಗಳಲ್ಲೂ ಸ್ವಾತಂತ್ರ್ಯ ಕೊಡದೆ ಭಿಕ್ಷೆ ಎತ್ತುವ ಮತ್ತು ಮೈ ಮಾರಿಕೊಂಡು ಬದುಕುವ ವೇಶ್ಯೆ ವೃತ್ತಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದಬ್ಬಿದ್ದೇವೆ. ನಾವೇ ಆ ನಂತರ ಅವರ ಬಗ್ಗೆ ಭಾವಿಸುವ ಭಾವನೆ, ಅಭಿಪ್ರಾಯ ಮಾತ್ರ ಅಸಹ್ಯವಾಗಿರುತ್ತದೆ.
ಹಾಗು ಅವರನ್ನು ಕಂಡು ಭಯಬೀಳುವ ಸ್ಥಿತಿಗೆ ಹೋಗುತ್ತೇವೆ.ನಮ್ಮ ಮುಂದಿನ ಪೀಳಿಗೆಯವರಲ್ಲೂ ಅವರ ಬಗ್ಗೆ ಭಯ, ಹಿಂಜರಿಕೆ, ತಿರಸ್ಕಾರ ,ಅಸಹ್ಯ ಧೋರಣೆಗಳನ್ನು ತಂದು ತೃತೀಯಲಿಂಗಿಗಳು ಭವಿಷ್ಯದ ಹೊಸ ಪೀಳಿಗೆಗಳ ಸಮಾಜದಿಂದಲೂ ಹೊರಗುಳಿಯುವಂತೆ ಮಾಡಿಬಿಡುತ್ತೇವೆ. ತೃತೀಯ ಲಿಂಗಿಗಳೂ ಕೂಡ ಮಾನವರೇ ,ಅವರಲ್ಲೂ ಮಾನವೀಯ ಗುಣಗಳಿವೆ, ಭಾವನೆಗಳಿವೆ ಕಷ್ಟ ಸುಖಗಳಿಗೆ ಸ್ಪಂದಿಸುವ ಮನಸ್ಸಿದೆ.ಇದ್ಯಾವುದನ್ನು ನಾವು ಗುರುತಿಸುವುದಿಲ್ಲ.ಅವರಿಂದ ಪ್ರತ್ಯೇಕತೆಯನ್ನು ಬಯಸಿ ಅಥವಾ ಅವರನ್ನು ನಮ್ಮಿಂದ ಪ್ರತ್ಯೇಕಗೊಳಿಸಿ. ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದೇವೆ ಮತ್ತು ಅವರು ಕೆಟ್ಟದಾರಿ ಹಿಡಿಯಲು ಪೂರಕ ಸನ್ನಿವೇಶವನ್ನು ಪರೋಕ್ಷವಾಗಿ ನಿರ್ಮಿಸಿಕೊಡುತ್ತಿದ್ದೇವೆ.ಈಗಲಾದರೂ ತೃತೀಯಲಿಂಗಿಗಳ ಮೇಲಿನ ಭಾವನೆ ಬದಲಿಸೋಣ.ತೃತೀಯ ಲಿಂಗಿಗಳಿಗೆ ಜನ್ಮ ನೀಡಿದ ಕುಟುಂಬದವರಿಗೆ ಜಾಗೃತಿ ಮೂಡಿಸೋಣ.ಆ ಪೋಷಕರು ತಮ್ಮ ಇತರ ಮಕ್ಕಳಂತೆ ತೃತೀಯಲಿಂಗಿಗಳಾದ ಮಕ್ಕಳನ್ನು ಪೋಷಿಸಲು,ಆರೈಕೆ ಮಾಡಲು ,ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ನೀಡಬೇಕಾದ ಎಲ್ಲಾ ಸಹಕಾರವನ್ನು ಕೊಡಲು ಸರ್ಕಾರವು ತೃತೀಯ ಲಿಂಗಿಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ,ತೃತೀಯಲಿಂಗಿಗಳ ಸಮುದಾಯದ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಕಾರ್ಯಯೋಜನೆಗೊಳ್ಳಲಿ.
ಮತದಾನದ ಹಕ್ಕು ತೃತೀಯಲಿಂಗಿಗಳಿಗೂ ಸಿಗಲಿ ಅವರೂ ಸಹ ರಾಜಕೀಯದಲ್ಲಿ ಸ್ಪರ್ಧಿಸಲಿ ,ರಾಜ್ಯವನ್ನು ದೇಶವನ್ನು ಆಳಲಿ. ಆಡಳಿತದ ಎಲ್ಲಾ ವ್ಯವಸ್ಥೆಯಲ್ಲೂ ಅವಕಾಶ ಸಿಗಲಿ. ನವೋದಯ ಶಾಲೆಗಳು,ಬಾಲಕ ,ಬಾಲಕಿಯರ ,ವಸತಿನಿಲಯ ಶಾಲೆಗಳು ಇರುವಂತೆ ತೃತೀಯಲಿಂಗಿಗಳ ವಸತಿನಿಲಯ ಶಾಲೆಗಳು ಉನ್ನತ ಶಿಕ್ಷಣದವರೆಗೂ ರಚನೆಗೊಳ್ಳಲಿ.ಎಲ್ಲಾ ಜಾತಿಯವರಿಗೂ ಸಮುದಾಯ ಭವನಗಳು,ಸಂಸ್ಥೆಗಳು ಇರುವಂತೆ ತೃತೀಯ ಲಿಂಗಿಗಳ ಸಮುದಾಯಭವನ, ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿ.ಸಾಮಾನ್ಯವಾಗಿ ಶಾಲಾ ಮಟ್ಟದಲ್ಲಿ ತೃತೀಯಲಿಂಗಿಗಳ ಬಗ್ಗೆ ಒಳ್ಳೆಯ ಭಾವನೆ ಮೂಡುವ ಮತ್ತು ಆ ಸಮುದಾಯದ ಮುಕ್ತ ಭಾಗವಹಿಸುವಿಕೆಗೆ ಪೂರಕವಾಗುವ ಪಠ್ಯಗಳು ಅಡಕವಾಗಲಿ.ಶಾಲಾ ಕಾಲೇಜುಗಳಲ್ಲಿ ತೃತೀಯ ಲಿಂಗಿಗಳ ಬಗ್ಗೆ ಅರಿವು ಜಾಗೃತಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಲಿ. ವರ್ಷದಲ್ಲಿ ವಿಶ್ವ ತೃತೀಯಲಿಂಗಿಗಳ ದಿನದ ಘೋಷಣೆಯಾಗಿ ವಿಶ್ವದೆಲ್ಲೆಡೆ ಅವರಿಗೆ ಗೌರವ ಸಲ್ಲಿಸುವಂತಾಗಲಿ.ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ತೃತೀಯಲಿಂಗಿಗಳ ವಿಷಯವಾಗಿ ಅಧ್ಯಯನ ಸಂಸ್ಥೆಯು ಆರಂಭವಾಗಲಿ. ಸರ್ಕಾರದಿಂದ ತೃತೀಯ ಲಿಂಗಿಗಳಿಗೆ ಪ್ರತೀ ಗ್ರಾಮ,ಪಟ್ಟಣ,ನಗರಗಳಲ್ಲೂ ಉಚಿತ ನಿವೇಶನಗಳ ವ್ಯವಸ್ಥೆ ಆಗಲಿ ,ಮತ್ತು ನಿರುದ್ಯೋಗ ತೃತೀಯಲಿಂಗಿಗಳಿಗೆ ಸ್ವಾವಲಂಬಿ ಉದ್ಯೋಗ ತರಬೇತಿಗಳು ಆರಂಭವಾಗಲಿ.ಇವತ್ತು ನಾವು ನೀವುಗಳು ಈ ದೇಶದಲ್ಲಿ ಏನೇನೂ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದೇವೆಯೋ ಅದೆಲ್ಲವೂ ತೃತೀಯ ಲಿಂಗಿಗಳಿಗೆ ಸಿಗುವಂತಾಗಲಿ.ಇದೆಲ್ಲವೂ ಸಿಗುವ ಮುನ್ನ ನಮ್ಮ ಮನಸ್ಸಿನ ಪೂರ್ವಪೀಡಿತ ಮನೋಭಾವನೆ ಮೊದಲು ಬದಲಾಗಲಿ.