ಪಿರಿಯಾಪಟ್ಟಣ:ಕರ್ನಾಟಕದ ಏಕೀಕರಣಕ್ಕೆ ಪತ್ರಿಕೆಗಳ ಪಾತ್ರ ಅನನ್ಯವಾಗಿದ್ದು ಹಾಗಾಗಿ ಪತ್ರಿಕೆಗಳನ್ನು ಸದಾ ಸ್ಮರಿಸುವ ಅಗತ್ಯವಿದೆ ಎಂದು ನಿವೃತ್ತ ಕನ್ನಡ ಸಹ ಪ್ರಾಧ್ಯಾಪಕ ಡಾ.ದ.ಸತೀಶ್ ಚಂದ್ರ ಪತ್ರಿಕೆಗಳ ಪಾತ್ರವನ್ನು ಸ್ಮರಿಸಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅನೇಕ ಪತ್ರಿಕೆಗಳು ದುಡಿಯುವ ಮೂಲಕ ನಾಡಿನ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿವೆ. ಆ ಕಾರಣಕ್ಕೆ ಕನ್ನಡ ರಾಜ್ಯೋತ್ಸವ ಕನ್ನಡಿಗರ ಬದುಕಿನಲ್ಲಿ ನಿತ್ಯೋತ್ಸವವಾಗುಂತಾಗಿದೆ. ಕನ್ನಡ ನಾಡಿನಲ್ಲಿ ಪರಭಾಷೆಗಳು ಹೆಚ್ಚಾಗುತ್ತಿದ್ದು, ಕನ್ನಡಿಗರು ಈ ಬಗ್ಗೆ ಜಾಗೃತಗೊಳ್ಳಬೇಕಿದೆ. ಕನ್ನಡ ಭಾಷೆ 2 ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿದೆ. ರಾಜ್ಯೋತ್ಸವದ ಹಬ್ಬವು ಒಂದು ದಿವಸಕ್ಕೆ ಸೀಮಿತ ಗೊಳಿಸದೆ ವರ್ಷಪೂರ್ತಿ ಆಚರಿಸುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸವಾಗಬೇಕು, ನಾವು 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದ್ದೇವೆ. ನಾವು 1956 ನ.1ರಂದು ಪುನರ್ ವಿಂಗಡಣೆ ಸಮಿತಿಯ ಮುಖಾಂತರ ಅನೇಕ ಭಾಗಗಳಾಗಿ ಒಡೆದು ಹಂಚಿ ಹೋಗಿದ್ದ ಕರ್ನಾಟಕವನ್ನು ಮೈಸೂರು ರಾಜ್ಯದ ಹೆಸರಿನಲ್ಲಿ ಹುಟ್ಟು ಹಾಕಲಾಯಿತು. ನಂತರ ದಿ.ದೇವರಾಜು ಅರಸು ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ವಿಶಾಲ ಕರ್ನಾಟಕವನ್ನು ಉದಯಗೊಳಿಸಲಾಗಿತ್ತು .ಕನ್ನಡವನ್ನು ಕೇವಲ ಆಡುಭಾಷೆಯಾಗಿ ಮಾತ್ರ ಮಾಡದೇ ಆಡಳಿತ ಭಾಷೆಯಾಗಿ ಸಹ ಮುನ್ನೆಡಸ ಬೇಕಾಗಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಆ ನೆಲದ ಭಾಷೆಯನ್ನು ಬಿಟ್ಟು ಉಳಿದ ಯಾವ ಭಾಷೆಯನ್ನು ಬಳಸುವುದಿಲ್ಲ. ಅದೇ ರೀತಿ ನಮ್ಮ ನಾಡಿನಲ್ಲೂ ಕೂಡ ಕನ್ನಡವನ್ನು ಬಿಟ್ಟು ಬೇರೆ ಯಾವ ಭಾಷೆಯನ್ನು ಬಳಸದಂತೆ ಕನ್ನಡಿಗರಾದ ನಾವು ಎಚ್ಚರವಹಿಸಬೇಕು. ಈಗಾಗಲೇ ಹಲವು ಕಡೆ ಪ್ರತ್ಯೇಕತೆಯ ಕೂಗು ಎದ್ದಿದೆ. ಹೈದ್ರಾಬಾದ್ ಕರ್ನಾಟಕ ಪ್ರವೇಶ, ತುಳುನಾಡು ಕೂಗು ಒಳ್ಳೆಯ ಸಂಸ್ಕೃತಿಯಲ್ಲ ಎಂದು ವಿಷಾದಿಸಿದರು. ತಹಶೀಲ್ದಾರ್ ಕುಂಞಿ ಅಹಮದ್ ಮಾತನಾಡಿ, ನಮ್ಮ ಕನ್ನಡ ಶಾಲೆಗಳನ್ನು ಉಳಿಸಬೇಕು. ಕನ್ನಡ ಭಾಷೆಗೆ ಹಿಂದಿ ಭಾಷೆಯನ್ನು ಹೊರತುಪಡಿಸಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕನ್ನಡಕ್ಕೆ ಕನ್ನಡ ಭಾಷೆ ಸಮದ್ಧ ಭಾಷೆಯಾಗಿದೆ. ಹಾಗಾಗಿ ಕನ್ನಡ ಕುರಿತು ಕೀಳರಿಮೆ ಬೇಡ ಎಂದರು.
ಈ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜು ಮಕ್ಕಳು ಹಾಗೂ ವಿವಿಧ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಶ್ರೀಧರ್, ಪುರಸಭಾ ಮುಖ್ಯಾಧಿಕಾರಿ ಮುತ್ತಪ್ಪ, ಬಿಇಓ ಬಸವರಾಜು, ಎಇಇ ವೆಂಕಟೇಶ್, ಕಸಾಪ ಅಧ್ಯಕ್ಷ ನವೀನ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಗೊರಹಳ್ಳಿ ಜಗದೀಶ್, ಸಿಡಿಪಿಒ ಮಮತಾ, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್, ಬಿಸಿಎಂ ವಿಸ್ತರಣಾಧಿಕಾರಿ ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
01ಪಿವೈಪಿ01: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಹಶೀಲ್ದಾರ್ ಕುಂಞಿ ಅಹಮದ್ ಉದ್ಘಾಟಿಸಿದರು.
