ಲಾಕ್ ಡೌನ್ ಇದ್ದರೂ ಅದಕ್ಕೆ ಸೊಪ್ಪು ಹಾಕದೆ ಕೆಲವರು ಪಟ್ಟಣದ ಬಡಾವಣೆಗಳ ಮುಖ್ಯರಸ್ತೆಯಲ್ಲಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವವರನ್ನು ತಡೆಯುವ ಸಲುವಾಗಿ ಕೆಲವರು ತಮ್ಮ ಬಡಾವಣೆಯ ಮುಖ್ಯ ರಸ್ತೆಗೆ ಮರದ ದಿಮ್ಮಿಯನ್ನಿಟ್ಟು ರಸ್ತೆ ಬಂದ್ ಮಾಡಿರುವ ಘಟನೆ ನಗರದ ಡಾ.ಬಾಬು ಜಗಜೀವನ್‌ರಾಂ ಬಡಾವಣೆಯಲ್ಲಿ ನಡೆದಿದೆ.

ಕಳೆದ ವರ್ಷ ಗ್ರಾಮೀಣ ಪ್ರದೇಶದ ಜನ ಕೊರೋನಾ ಸೋಂಕಿನ ಬಗ್ಗೆ ಹೆಚ್ಚು ಜಾಗೃತರಾಗಿದ್ದರಲ್ಲದೆ, ತಾವೇ ಸ್ವಯಂ ಆಗಿ ಹಳ್ಳಿಗಳನ್ನು ಬಂದ್ ಮಾಡುವ ಮೂಲಕ ಎಚ್ಚರಿಕೆ ವಹಿಸಿದ್ದರು. ಇದರಿಂದ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ ಈ ಬಾರಿಯ ನಿರ್ಲಕ್ಷ್ಯ ಹಳ್ಳಿಗಳಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ, ಕಾರ್ಮಿಕರು ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದವರು ನೇರವಾಗಿ ಹಳ್ಳಿಗೆ ಬಂದು ನೆಲೆನಿಂತಿದ್ದಾರೆ. ಹೀಗೆ ಬಂದವರಲ್ಲಿ ಈಗ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸುತ್ತಿರುವುದು ಆತಂಕಕ್ಕೀಡು ಮಾಡಿದೆ. ಇದರಿಂದ ಎಚ್ಚೆತ್ತುಕೊಂಡ ಕೆಲವು ಹಳ್ಳಿಯ ಜನ ಕಳೆದ ವರ್ಷದಂತೆಯೇ ಇದೀಗ ತಮ್ಮ ಹಳ್ಳಿಗೆ ಹೊರಗಿನವರು ಬರದಂತೆ ನಿರ್ಬಂಧ ಹೇರಿದ್ದಾರೆ.

ಲಾಕ್ ಡೌನ್ ಇದ್ದರೂ ಅದಕ್ಕೆ ಸೊಪ್ಪು ಹಾಕದೆ ಕೆಲವರು ಮುಖ್ಯ ರಸ್ತೆಯಲ್ಲಿ ಪೊಲೀಸರು ತಡೆಯಬಹುದೆಂಬ ಕಾರಣಕ್ಕೆ ಬಡಾವಣೆ ರಸ್ತೆ ಮೂಲಕ ಸಂಚರಿಸುತ್ತಿದ್ದಾರೆ. ಇದನ್ನು ಮನಗಂಡ ಡಾ.ಬಾಬು ಜಗಜೀವನ್‌ರಾಂ ಬಡಾವಣೆಯ ನಿವಾಸಿಗಳು ತಮ್ಮ ಬಡಾವಣೆಗೆ ಹೊರಗಿನಿಂದ ಯಾವ ವಾಹನಗಳು ಬರದಂತೆ ವಾಹನಗಳನ್ನು ನಿಯಂತ್ರಿಸುವ ಸಲುವಾಗಿ ರಸ್ತೆಗೆ ಅಡ್ಡಲಾಗಿ ಮರದ ದಿಮ್ಮಿ ಇಟ್ಟು ರಸ್ತೆ ಬಂದ್ ಮಾಡಿದ್ದಾರೆ.

ಕೋವಿಡ್ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳು ಹಾಗೂ ಜನರನ್ನು ತಡೆಯಲು ಪೊಲೀಸ್ ಸಿಬ್ಬಂದಿ ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ಬಳಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಚಾರವನ್ನು ಬಂದ್ ಮಾಡಿದ್ದರು. ಇದರಿಂದ ಆಸ್ಪತ್ರೆಗಳು, ಕಚೇರಿಗಳು, ಬ್ಯಾಂಕ್‌ಗಳಿಗೆ ತೆರಳುತ್ತಿದ್ದ ಜನರು ಹಾಗೂ ವಾಹನ ಸವಾರರು ನ್ಯಾಯಾಲಯ ರಸ್ತೆಯಿಂದ ಬಾಬು ಜಗಜೀವನ್‌ರಾಂ ಬಡಾವಣೆಯ ಮೂಲಕ ಬಸವೇಶ್ವರ ಚಿತ್ರಮಂದಿರದ ಬಳಿ ಬಿ.ರಾಚಯ್ಯ ಜೋಡಿ ರಸ್ತೆಗೆ ಬರುತ್ತಿದ್ದರು.

ಹೀಗಾಗಿ ಜಗಜೀವನರಾಂ ಬಡಾವಣೆಯಲ್ಲಿ ಕಾರುಗಳು, ಬೈಕ್‌ಗಳು ಹಾಗೂ ಜನರ ಓಡಾಟ ಹೆಚ್ಚಾಯಿತು. ಇದರಿಂದ ಆತಂಕಗೊಂಡ ಬಡಾವಣೆಯ ನಿವಾಸಿಗಳು ಬಡಾವಣೆಯ ಒಳಗೆ ಯಾವ ವಾಹನಗಳು ಬರದಂತೆ ತಡೆಯುವ ಸಲುವಾಗಿ ಜೋಡಿ ರಸ್ತೆಯಿಂದ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಮರದ ದಿಮ್ಮಿಯನ್ನು ಅಡ್ಡಲಾಗಿ ಇಟ್ಟು ವಾಹಗಳು ಬರದಂತೆ ಕಾವಲು ಕಾಯುತ್ತಿದ್ದಾರೆ.

By admin