ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಸಾಮರಸ್ಯದ ಕೊರತೆ ಕಾಣುತ್ತಿದ್ದು, ಈ ಮಾನವೀಯ ಗುಣಗಳ ಬೇರು ಒಣಗುವ ಮುನ್ನ ನೀರೆರೆದು ಪೋಷಿಸಿ ಸಮೃದ್ಧವಾಗಿಸುವ ಅವಶ್ಯಕತೆಯನ್ನು ಮನಗಂಡ ಸಹೃದಯ ಯುವಕರು, ಸಮಾನ ಮನಸ್ಕರು ಸಮಾಜದ ಮೇಲಿನ ಕಾಳಜಿ ಮತ್ತು ಪ್ರೀತಿಯಿಂದ ಆರಂಭಿಸಿರುವ ಹಾರ್ಟ್ ಸಂಸ್ಥೆಯ ಈ ಕಾರ್ಯ ಶ್ಲಾಘನಿಯ.
ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ನಗರದ ಯುವರಾಜ ಕಾಲೇಜು ಹಾಗೂ ನ್ಯೂ ಡಯಾಕೇರ್ ಸೆಂಟರ್ & ಪಾಲಿಕ್ಲಿನಿಕ್, ಇವರ ಸಹಯೋಗದೊಂದಿಗೆ ಹಾರ್ಟ್ ಸಂಸ್ಥೆಯು ಆಯೋಜಿಸಿದ್ದ ನಿಜವಾದ ಶಿಕ್ಷಣವೆಂದರೆ ಸಂಸ್ಕಾರ ಮತ್ತು ಮಾನವೀಯತೆಯ ವಿಕಾಸ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಬಿ.ಎನ್. ಯಶೋಧ ರವರು, ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರ ಸಂದೇಶ ತತ್ವಗಳನ್ನು ಯುವಕರು ಜೀವಿಸುವಂತೆ ಉತ್ತೇಜಿಸುವ ಇಂತಹ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸುತ್ತಿರುವ ಹಾರ್ಟ್ ಸಂಸ್ಥೆಯ ಕಾರ್ಯವೈಖರಿ ಬಹಳ ಶ್ಲಾಘನೀಯ ಹಾಗೂ ಈ ಸಂಸ್ಥೆಯ ಹೆಸರಲ್ಲೆ ಸಮಾಜದ ಮೇಲಿನ ಕಾಳಜಿ ಕಾಣಬಹುದು ಎಂದರು. ವಿದ್ಯಾರ್ಥಿಗಳು ಈ ಒಂದು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ತೋರುತ್ತಿರುವ ಈ ಇಚ್ಚಾಶಕ್ತಿ ಮತ್ತು ಉತ್ಸಾಹ ರಾಷ್ಟ್ರೀಯ ಯುವ ದಿನಾಚರಣೆಗೆ ಒಂದು ಅರ್ಥಪೂರ್ಣತೆಯನ್ನು ತಂದುಕೊಟ್ಟಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಕುಮಾರ್ ರವರು ಮಾತನಾಡಿ ಸಂಸ್ಥೆಯ ಆಧಾರ ಸ್ತಂಭಗಳಾದ ಪ್ರಾಮಾಣಿಕತೆ, ಮಾನವೀಯತೆ, ಸಮಗ್ರತೆ ಹಾಗೂ ಪಾರದರ್ಶಕತೆಯೊಂದಿಗೆ ಅರ್ಥಪೂರ್ಣ ಶಿಕ್ಷಣ, ಆರೋಗ್ಯಯುಕ್ತ ಸಮಾಜ ಹಾಗೂ ಕೌಶಲ್ಯಯುಕ್ತ ಕರ್ನಾಟಕವನ್ನಾಗಿಸುವ ಕನಸಿನೊಂದಿಗೆ ಸ್ಥಾಪಿತವಾಗಿರುವ ಈ ಸಂಸ್ಥೆ, ತಜ್ಞ ವೈದ್ಯರು, ಶಿಕ್ಷಕರು ಹಾಗೂ ಅಭಿವೃದ್ಧಿ ಚಿಂತಕರನ್ನೊಳಗೊಂಡ ಸದೃಢ ತಂಡವನ್ನು ಒಳಗೊಂಡಿರುವುದು. ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವಲ್ಲಿ ಸರ್ಕಾರದ ಮತ್ತು ಸರ್ಕಾರೇತರ ಸಂಸ್ಥೆಗಳ ಜೊತೆ ಕೈ ಜೋಡಿಸಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಈ ಸಂಸ್ಥೆಯ ಉದ್ದೇಶ ನಮ್ಮ ಯುವ ಜನತೆಗೆ ಪ್ರೇರಣಿಯಾಗಿದೆ ಎಂದರು.
ಈ ಪ್ರಬಂಧ ಸ್ಪರ್ಧೆಗೆ ಒಂದೇ ಕಾಲೇಜಿನ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿರುವುದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸುವ ಒಂದು ಚಿನ್ಹೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜಿನ ಮ್ಯಾನೇಜ್‌ಮೆಂಟ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ರುಬಿ ಸಲೆಸ್ಟಿನ್, ಎನ್‌ಎಸ್‌ಎಸ್ ಘಟಕದ ಆಧಿಕಾರಿಗಳಾದ ಡಾ. ಗಿರೀಶ್ ಚಂದ್ರ, ಎನ್‌ಎಸ್, ಎನ್‌ಎಸ್ ವಿಭಾಗದ ಕೋ-ಆಫೀಸರ್ ಆದ ಶ್ರೀ ಪ್ರಮೋದ್ ಹಾಗೂ ಹಾರ್ಟ್ ಸಂಸ್ಥೆಯ ಸದಸ್ಯರಾದ ಡಾ. ಮಹೇಶ್ ಶರ್ಮ, ವಿ.ಜೆ. ಮಿಂಚು, ವರದನಾಯಕ ಹಾಗೂ ಯುವರಾಜ ಕಾಲೇಜಿನ ಸ್ವಯಂ ಸೇವಕರು ಹಾಜರಿದ್ದರು.ಕೋವಿಡ್ ನಿಯಮವನ್ನು ಪಾಲಿಸುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.