ಕೃಷ್ಣರಾಜಪೇಟೆ: ರಾಜಕೀಯ ರಂಗದ ಅಜಾತಶತ್ರುವಿನಂತಿದ್ದ ಮಂಡ್ಯದ ಗಾಂಧಿ, ಮಾಜಿಸ್ಪೀಕರ್ ಕೃಷ್ಣ ಅವರ ಪುತ್ಥಳಿಯನ್ನು ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸುವ ಮೂಲಕ ಗಾಂಧಿವಾಧಿಯ ನೆನಪನ್ನು ಚಿರಸ್ಥಾಯಿಗೊಳಿಸಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹೇಳಿದರು.

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೃಷ್ಣರ ಜನ್ಮಭೂಮಿ ಕೊತ್ತಮಾರನಹಳ್ಳಿ ಗ್ರಾಮದಲ್ಲಿ ನಡೆದ ಕೃಷ್ಣರ ಪುಣ್ಯತಿಥಿ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, 50ವರ್ಷಗಳ ಸುದೀರ್ಘ ರಾಜಕಾರಣ ನಡೆಸಿದ ಕೃಷ್ಣ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ವಸಿದ್ಧಾಂತಗಳ ಉಳಿವಿಗಾಗಿ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳದೇ ನಿಷ್ಠೂರವಾಧಿಯಾಗಿದ್ದು ಒಂದೇ ಒಂದು ಕಪ್ಪುಚುಕ್ಕೆಯ ಕಳಂಕವನ್ನು ಮೈಗೂಡಿಸಿಕೊಳ್ಳದೇ ಸ್ವಚ್ಛವಾಗಿ ಸರಳ ಜೀವನ ನಡೆಸಿ ಮಂಡ್ಯದ ಗಾಂಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದರು.

ಹಿಂದುಳಿದಿದ್ದ ಕೆ.ಆರ್.ಪೇಟೆ ತಾಲೂಕಿಗೆ ಅಗತ್ಯವಾಗಿ ಆಗಬೇಕಾಗಿದ್ದ ಕೆಲಸ ಕಾರ್ಯಗಳನ್ನು ಮಾಡಿಸಿ ತಾಲೂಕಿನ ಸಮಗ್ರವಾದ ಅಭಿವೃದ್ಧಿಯ ಹರಿಕಾರನಾಗಿ ಕ್ರಾಂತಿಯನ್ನು ಮಾಡಿದ್ದಾರೆ. ಕೃಷ್ಣರ ಬಹು ದಿನಗಳ ಕನಸು ಮೂರು ದಶಕಗಳ ಹೋರಾಟವಾದ ಸಂತೇಬಾಚಹಳ್ಳಿ ಹೋಬಳಿಯ ಕೆರೆ-ಕಟ್ಟೆಗಳನ್ನು ತುಂಬಿಸುವ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆಯನ್ನು ಕೃಷ್ಣ ಅವರ ಕೈಯ್ಯಿಂದಲೇ ಉದ್ಘಾಟಿಸಬೇಕು. ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಸಂಕಷ್ಠ ದೂರಾದ ಘಳಿಗೆಯನ್ನು ಕೃಷ್ಣ ಅವರು ಸವಿಯಬೇಕು ಎಂದು ಆಸೆಪಟ್ಟಿದ್ದೆ, ಆ ಆಸೆಯು ನನಸಾಗದಿದ್ದರೂ ಕೃಷ್ಣರ ಧರ್ಮಪತ್ನಿಯವರಾದ ಇಂದ್ರಮ್ಮ ಅವರಿಂದ ಯೋಜನೆಯನ್ನು ಚಾಲನೆಗೊಳಿಸಿ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯುವಂತೆ ಮಾಡುತ್ತೇನೆ ಎಂದರು.

ಕೃಷ್ಣ ಅವರ ಧರ್ಮಪತ್ನಿ ಇಂದಿರಮ್ಮ, ಪುತ್ರಿ ಮಂಜುಳಾ ಅಳಿಯ ಶ್ರೀಧರ್ ಪುಣ್ಯತಿಥಿಯ ವಿಧಿವಿಧಾನಗಳ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್‌ಅರವಿಂದ್, ಹಿರಿಯ ಗಾಂಧೀವಾಧಿ ಕೌಡ್ಲೆಚನ್ನಪ್ಪ, ಮನ್‌ಮುಲ್ ಮಾಜಿಅಧ್ಯಕ್ಷ ಎಂ.ಬಿ.ಹರೀಶ್, ನಿರ್ದೇಶಕರಾದ ಕೆ.ಜಿ.ತಮ್ಮಣ್ಣ, ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಎಸ್.ಪ್ರಭಾಕರ್, ಎಸ್.ಅಂಬರೀಶ್, ಮುಖಂಡರಾದ ಎಂ.ಡಿ.ದೊಡ್ಡಸ್ವಾಮಿಗೌಡ, ಶೀಳನೆರೆ ಮೋಹನ್, ಸಂಚೇಬಾಚಹಳ್ಳಿ ನಾಗರಾಜು, ಸಂತೇಬಾಚಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಮೋಹನ್, ತಾ.ಪಂ ಸದಸ್ಯ ರಾಜಾಹುಲಿದಿನೇಶ್, ಪುರಸಭೆ ಸದಸ್ಯ ಟೈಲರ್ ದಿನೇಶ್, ಕೆ.ಆರ್.ಹೇಮಂತಕುಮಾರ್, ಶೀಳನೆರೆ ನಟರಾಜು, ರಾಜೇನಹಳ್ಳಿ ಕುಮಾರಸ್ವಾಮಿ, ಬಸ್‌ಕೃಷ್ಣೇಗೌಡ ಮತ್ತಿತರರು ಪುಣ್ಯತಿಥಿ ಕಾರ್ಯದಲ್ಲಿ ಭಾಗವಹಿಸಿ ಹಾಲುತುಪ್ಪವನ್ನು ಬಿಟ್ಟು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

ಇದೇ ವೇಳೆ ಸಚಿವ ನಾರಾಯಣಗೌಡರ ನಿವಾಸದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಅವರು ಕೃಷ್ಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಮಾಡಿ ಗೌರವ ಸಲ್ಲಿಸಿದರು.

By admin