ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಆಚರಣೆಯ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮ ಜರುಗಿತು.
ತಾಲೂಕಿನ ಗಡಿಗ್ರಾಮ ಅಮಚವಾಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಅಂಗವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹೇಂದ್ರ ರವರು ಗೌರವಿಸಿ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಕನ್ನಡಾಭಿಮಾನಿಗಳಿಂದ ಆಗಬೇಕಿದೆ. ಗ್ರಂಥಾಲಯ ಗಳಲ್ಲಿರುವ ನೂರಾರು ಪುಸ್ತಕಗಳನ್ನು ಓದುವ ಮುಖಾಂತರ ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಸಾಹಿತ್ಯದಿಂದ ನಮಗೆ ತಿಳುವಳಿಕೆ ಜ್ಞಾನ ಹೆಚ್ಚುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಬರಹಗಾರ ಲಕ್ಷ್ಮಿನರಸಿಂಹ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ೧೦೮ ವರ್ಷಗಳ ಇತಿಹಾಸವಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಶ್ರೀಕಂಠಯ್ಯ, ಆಲೂರು ವೆಂಕಟರಾಯ ದೇಶಪಾಂಡೆ ,ಮುಂತಾದ ನೂರಾರು ಶ್ರೇಷ್ಠ ವಿದ್ವಾಂಸರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಇಂದು ರಾಜ್ಯದ ಕನ್ನಡ ಸಂಘಟನೆಯ ಅಧಿಕೃತ ಬೆಳವಣಿಗೆಯ ಶಕ್ತಿ ಕೇಂದ್ರವಾಗಿದೆ. ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಿ ರುವುದು ಮೆಚ್ಚುಗೆಯಾದದ್ದು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ, ಕನ್ನಡ ಸಾಹಿತ್ಯ ಪರಿಷತ್ ಒಂದು ಶೇಷ್ಠ ಸಂಘಟನೆಯಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಗೆ ಐತಿಹಾಸಿಕ ಸಾಂಸ್ಕೃತಿಕ ಇತಿಹಾಸ ವಿದೆ.
ಸಾಹಿತ್ಯ-ಸಂಸ್ಕೃತಿ ಒಬ್ಬ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ. ಸಾಹಿತ್ಯ ಜ್ಞಾನದಿಂದ ವ್ಯಕ್ತಿ ಪರಿಪೂರ್ಣತೆಯನ್ನು ಹಾಗೂ ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಶ್ರೀಮಂತ ಸಾಹಿತ್ಯವಾದ ಕನ್ನಡವನ್ನು ಎಲ್ಲರೂ ಪ್ರೀತಿಸಿ ತಾಯಿಯಂತೆ ಹೃದಯದಲ್ಲಿ ಇಟ್ಟುಕೊಂಡು ಮುಂದಿನ ಪೀಳಿಗೆಗೆ ಕನ್ನಡ ಕನ್ನಡಿಗ ಕರ್ನಾಟಕ ಪರಂಪರೆಯನ್ನು ಕಟ್ಟಿಕೊಂಡು ಹೋಗೋಣ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಗಿರಿಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಆರ್ ಮೂರ್ತಿ, ಪತ್ರಕರ್ತ ರಾಜೇಂದ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಾಜೇಂದ್ರ, ನಾಗರತ್ನ ,ಪೂಜಾ ಉಪಸ್ಥಿತರಿದ್ದರು.
