“ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಮೇಲಿನ ಹೇಳಿಕೆ ಓದಿದ ನಿಮಗೆ ಒಳಗೆ ಯಾವುದೋ ಒಂದು ಸಿದ್ಧಾಂತದ ವಿಶ್ಲೇಷಣೆ ಇರಬೇಕು ಎನಿಸುವುದು ಸಹಜ.ಈ ಹಿಂದೆ ಬಂದಿರುವ ಸ್ತ್ರೀ ವಾದಿಗಳ ಮತ್ತು ಪುರುಷವಾದಿಗಳ ಜಾಡನ್ನು ಹಿಡಿದು ಭಿನ್ನ ದೃಷ್ಟಿಯಲ್ಲಿ ಎಳೆದಾಡಿ ಸಮತೂಗಿರಬಹುದು ಎನ್ನುವ ಅಭಿಪ್ರಾಯಗಳ ಬೆನ್ನಟ್ಟುವ ನಿಮ್ಮ ಯೋಚನಾ ಲಹರಿಗೆ ನನ್ನ ಸಣ್ಣ ತಿರುವು.ಒಂದೆರೆಡು ಘಟನೆ ಈ ಹಿಂದಿನ ಎರಡುದಿನಗಳಲ್ಲಿ ನನ್ನ ಬದುಕಿನಲ್ಲಿಯೇ ನಡೆಯಿತು.ನಾನು ಕಂಡ ಆ ಒಂದೆರೆಡು ಘಟನೆಗಳು ನನ್ನನ್ನು ತುಂಬಾ ವಿಚಲನೆಗೊಳಿಸಲಾಗಿ ಈ ಲೇಖನಿಯ ಶಾಹಿಯನ್ನು ಖಾಲಿಮಾಡುತ್ತಿದ್ದೇನೆ.ಬೆಳಗಿನ ವ್ಯಾಯಾಮ ದೇಹಕ್ಕೆ ಮನಸ್ಸಿಗೆ ಆಹ್ಲಾದಕರ.ಈಗಿನ ಕರೋನಾ ಪರಿಸ್ಥಿತಿಯಲ್ಲಿ ತುಂಬಾ ಅಗತ್ಯ.ಹೀಗಾಗಿಯೇ ನಾನು ಮುಂಜಾನೆ ಆರು ಮೂವತ್ತರ ಸಮಯಕ್ಕೆ ಸರಿಯಾಗಿ ಸರಸ್ವತಿಪುರಂನ ಜವರೇಗೌಡ ಪಾಕ್೯ ಗೆ ಪ್ರತಿದಿನ ಒಂದು ಹತ್ತು ಸುತ್ತು ನಡಿಗೆ ಮತ್ತು ಸಣ್ಣದಾಗಿ ದೇಹವನ್ನು ಅತ್ತ ಇತ್ತ ಬಗ್ಗಿಸಿ ಜಿಗಿಸಿ ಕೈ ಕಾಲು ಆಡಿಸಿ ಬರಲು ಹೋಗುತ್ತೇನೆ.ಮೊನ್ನೆ ಹೀಗಾಯ್ತು ನಾನು ವಾಕ್ ಮಾಡುತ್ತಿದ್ದೆ ನನ್ನ ಹಿಂದೆ ಒಂದು ನಾಲ್ಕು ಐದು ಹುಡುಗಿಯರ ಗುಂಪೊಂದು ಬರುತಿತ್ತು, ಅವರ ಮುಂದಿರುವ ನನಗೆ ಏನೋ ಒಂದು ರೀತಿ ಮುಜುಗರ, ಕಾಲುಗಳ ಹೆಜ್ಜೆ ಸರಿಮಾಡುವುದು ,

ಇಲ್ಲವೇ ಅವರು ಯಾವುದೋ ವಿಷಯಕ್ಕೆ ನಕ್ಕರೆ ನನ್ನ ಬಗ್ಗೆ ಏನಾದರೂ ಛೇಡಿಸುತ್ತಿರಬಹುದು ಎಂದುಕೊಳ್ಳುವುದು.ನನ್ನ ಉಡುಪುಗಳನ್ನು ಸರಿಮಾಡಿಕೊಳ್ಳಬೇಕು, ಬೇಗ ಬೇಗ ಇವರುಗಳಿಂದ ಅಂತರ ಕಾಪಾಡಿಕೊಳ್ಳಬೇಕು. ನಾನು ನನ್ನ ದಿಟ್ಟತನ ಮತ್ತು ಏಕಾಂತತೆಯನ್ನು ಸ್ವತಂತ್ರ ನಡಿಗಿಗೆ ತರಬೇಕೆಂದು ವೇಗದ ಹೆಜ್ಜೆ ಇಕ್ಕಬೇಕು ಎನ್ನಿಸುವ ಆಲೋಚನೆಗಳು ಒಮ್ಮೆಲೆ ಬರುತಿತ್ತು.ನೋಡಿ ಹುಡುಗನಾದರೂ ಹೆಣ್ಮಕ್ಕಳ ಬಹುಸಂಖ್ಯಾತರ ಮುಂದೆ ನಾನು ನನ್ನ ವ್ಯಕ್ತಿತ್ವವನ್ನು ಸರಿಪಡಿಸಿಕೊಳ್ಳುವ ಅಂದರೆ ತನು ಮನಗಳಿಗೆ ಸಾಣೆ ಹಿಡಿಯುತ್ತಿದ್ದೆ.ಅವರ ಮುಂದೆ ನನ್ನ ತನು ಮನದ ಗೌರವಕ್ಕೆ ಅಣಿಯಾಗುತ್ತಿದ್ದೆ.ಇದು ನಡಿಗೆಯಲ್ಲಿ ಮುಗಿದ ಅನುಭವ. ನಂತರ ಅದೇ ಪಾರ್ಕಿನಲ್ಲಿ ವ್ಯಾಯಾಮ ಮಾಡುವ ಹತ್ತಾರು ವ್ಯಾಯಾಮ ಸಲಕರಣೆಗಳು ಇವೆ.ನನ್ನ ವಿಚಿತ್ರ ಪರಿಪಾಟಲಿಗೆ ಅಂದು ವಿಧಿಯ ನಿಶ್ಚಿತ ಮುಗಿದಿರಲಿಲ್ಲ ಎನ್ನಿಸುತ್ತದೆ.ಅಲ್ಲೂ ಕೂಡ ಆರೇಳು ಹುಡುಗಿಯರು; ನಾನು ತುಳಿಯುತ್ತಿದ್ದ ಸೈಕ್ಲಿಂಗ್ ಸಲಕರಣೆಯೊಂದನ್ನು ಬಿಟ್ಟು ಉಳಿದೆಲ್ಲಾ ವ್ಯಾಯಾಮ ಸಲಕರಣೆಗಳಲ್ಲಿ ಜೋಡಿನಿಂತು ಕಸರತ್ತಿಗೆ ಇಳಿದಿದ್ದಾರೆ.ಅದುವೆ ಪಿಸು ಪಿಸು ಮಾತುಗಳು ಅವರವರಲ್ಲೇ ತಮಾಷೆಯ ನಗು.ಅಲ್ಲಿ ನಾನು ತುಳಿಯುತ್ತಿರುವ ಸೈಕ್ಲಿಂಗ್ ಸಲಕರಣೆಯು ಸ್ವಲ್ಪ ಮಳೆ ಬಿದ್ದು ಅದರ ಕೀಲುಗಳಲ್ಲಿ ಕುಯ್ಯ್ ಕುಯ್ಯ್ ಶಬ್ಧ ಬೇರೆ ಬಂದು ನನ್ನನ್ನು ಅವರುಗಳ ಮುಂದೆ ಸಂಕೋಚಕ್ಕೆ ಎಡೆಮಾಡಿತ್ತು.

ನನಗೆ ಕಾಲುಗಳೇ ಸರಿ ಲಯ ಹಿಡಿಯುತ್ತಿರಲಿಲ್ಲ.ಒಂದೆರೆಡು ತುಳಿತಕ್ಕೆಯೇ ಕಾಲುಗಳಿಗೆ ವಿರಾಮ ಬೇಕೆನಿಸುತಿತ್ತು.ಮನಸ್ಸಿಗೆ ಇವತ್ತು ವ್ಯಾಯಾಮ ನಡಿಗೆ ಸಾಕು ಹಾಸ್ಟೆಲ್ ಕಡೆಗೆ ಮುಖ ಮಾಡಿಬಿಡೋಣ ಎನಿಸುತಿತ್ತು.ಪಾಪ ಆ ಹುಡುಗಿಯರು ಯಾವುದೇ ಅಸಭ್ಯ ವರ್ತನೆ ತೋರುತ್ತಿರಲಿಲ್ಲ ಹಾಗೆ ನನಗೆ ಉದ್ದೇಶಪೂರ್ವಕವಾಗಿ ಯಾವುದೇ ರೀತಿಯ ಅಪಹಾಸ್ಯ ಕೂಡ ಮಾಡುತ್ತಿರಲಿಲ್ಲ.ಆದರೆ ಅವರ ಬಹುಸಂಖ್ಯೆಯ ಹಾಜರಾತಿಗೆ ನನ್ನೊಬ್ಬನ ಇರುವಿಕೆ ನನಗೆಯೇ  ಸ್ವಲ್ಪ ಮುಜುಗರ ಒಡ್ಡಿತ್ತು.ನಾನು ಅಲ್ಲಿಂದ ಕಾಲು ಕೀಳೋಣ ಎನ್ನುವಷ್ಟರಲ್ಲೇ ಅವರೆಲ್ಲಾ ಒಬ್ಬೊಬ್ಬರಾಗಿ ವಿರಮಿಸಿದ್ದರು.ನಾನು ಆ ಅಲೋಚನೆಗಳಲ್ಲೇ ಅರಿವಿರದೆ ಚೆನ್ನಾಗಿ ಸೈಕ್ಲಿಂಗ್ ಸಲಕರಣೆ ತುಳಿದು ಕಾಲು ನೋವು ಬರಸಿಕೊಂಡಿದ್ದೆ.ಎಲ್ಲರೂ ಹೋದ ನಂತರ ನಾನು ಸ್ವಲ್ಪ ಅಲ್ಲೇ ಕುಳಿತೆ.ಆ ವಿಚಾರವಾಗಿ ಯೋಚಿಸಿದೆ ;ನಾನೇಕೆ ಆ ಮಟ್ಟಿಗೆ ಕೆಲವು ಮನಸ್ಸಿನ ಮಾತುಗಳಿಗೆ ಮಗ್ನನಾಗಿದ್ದೆ.ಆ ಹೆಣ್ಮಕ್ಕಳು ಅವರ ಪಾಡಿಗೆ ಅವರಿದ್ದರು ಆದರೂ ನನ್ನಲ್ಲಿ ಭಯ ಎನಲಾಗದ ಭಯ ಅವರಿಂದ ಮಡಿವಂತಿಕೆಯ ಅಂತರ ಪಡೆಯಬೇಕೆಂಬ ಗುಣಗಾನ.ಇಷ್ಟು ದಿನ ನನ್ನ ಸ್ನೇಹಿತರೊಟ್ಟಿಗೆ ಸೇರಿ ಕಾಲೇಜಿನಲ್ಲಿ ಮತ್ತು ಹೊರಗಡೆ ದಾರಿಯಲ್ಲಿ ಒಮ್ಮೊಮ್ಮೆ ತಮಾಷೆಗೆ ಎಂದು ಹುಡುಗಿಯರನ್ನು ಛೇಡಿಸಿದ್ದು ಅವರ ಸ್ವತಂತ್ರಕ್ಕೆ ಧಕ್ಕೆ ಬರುವ ಹಾಗೆ ಚಿಕ್ಕ ಚಿಕ್ಕ ನಡವಳಿಕೆಗಳನ್ನು ಅವರ ಹಿಂದೆ ಮುಂದೆ ತೋರಿಸಿದ್ದು.ಅದರಿಂದ ಅವರುಗಳನ್ನು ಹಿಂಸೆಗೆ ಒಳಪಡಿಸಿ ಮನರಂಜನೆ ಪಡೆದದ್ದು ಎಲ್ಲವೂ ನೆನಪಾಗಿ ನನ್ನ ಆ ನಡವಳಿಕೆಗಳ ಮೇಲೆ ನನಗೆಯೇ ಕೋಪ ಮತ್ತು ತಾತ್ಸಾರ ಬರುತಿತ್ತು.ನನಗೆ ಆ ಹೆಣ್ಮಕ್ಕಳಿಂದ ಯಾವುದೇ ತೊಂದರೆ ಇಲ್ಲ ಕೇವಲ ಅವರ ಹೆಚ್ಚುಗಾರಿಕೆಯ ನಡುವೆ ನಾನು ಒಬ್ಬನೇ ಇದ್ದೆ.ಅದೇ ಅಷ್ಟರ ಮಟ್ಟಿಗೆ ಹಿಂಸೆಗೆ ನೂಕಿದೆ ಎಂದರೆ.ನಾವು ಪುರುಷರೆನಿಸಿದವರು ನಮ್ಮ ಬಹುಸಂಖ್ಯಾತ ಸ್ಥಿತಿಯಲ್ಲಿ ಅವರ ವಯಕ್ತಿಕತೆಗೆ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಾಗ ಸ್ತ್ರೀಯರಿಗೆ ಇನ್ನೆಷ್ಟು ಹಿಂಸೆಗೆ ನೂಕಿರುವುದಿಲ್ಲ ಮತ್ತು ಪಚೀತಿಗೆ ಪರಿಪಾಟಲಿಗೆ ಒಡ್ಡಿರುವುದಿಲ್ಲ.ಎನ್ನುವುದೆಲ್ಲವೂ ಒಳಗೊಳಗೆ ವಿಮರ್ಶೆಗೆ ಒಳಪಡುತಿತ್ತು.ಹಾಗೆಯೇ ನೋಡಿ ಹೆಣ್ಮಕ್ಕಳೇ ನಿಮ್ಮಷ್ಟು ಅಲ್ಲದಿದ್ದರೂ ನಮ್ಮೊಳಗೂ ಎಲ್ಲಾ ರೀತಿಯದ್ದಾದ ಶೀಲತ್ವದ ಕಾಪಾಡಿಕೊಳ್ಳುವಿಕೆ ಇರುತ್ತದೆ ಎಂದು ಅವರಿಗೆಲ್ಲಾ ಮನದೊಳಗೆ ಪುರುಷ ಸಮಾಜದ ಪರವಾಗಿ ಹೇಳುತ್ತಿದ್ದೆ.ಈ ರೀತಿ ಹೇಳಿದ್ದನ್ನು ಪಂಚಭೂತಗಳು ಕೇಳಿಸಿಕೊಂಡು ಮತ್ತೊಂದು ಘಟನೆಯನ್ನು ನನಗೆ ಅಂದೇ ಅಣಿಗೊಳಿಸಿತ್ತು.ನಾನು ಪತ್ರಕರ್ತ ಅಂದಿನ ಕಾರ್ಯಕ್ರಮಗಳಿಗೆ ತೆರಳಬೇಕಾಗಿತ್ತು.ನಮ್ಮ ಮುಖ್ಯ ಸಂಪಾದಕರಿಗೆ ದೂರವಾಣಿ ಕರೆ ಹಚ್ಚಿದೆ‌‌.ಸರ್ ಇವತ್ತಿನ ಕಾರ್ಯಕ್ರಮವೇನು?ಎಲ್ಲಿಗೆ ಹೋಗಬೇಕು, ಯಾವ ಕಾರ್ಯಕ್ರಮದ ರಿಪೋರ್ಟ್ ಮಾಡಿಕೊಂಡು ಬರಬೇಕು ಎಂದು ಕೇಳಿದೆ.ನಿಮ್ಮ ಮೊಬೈಲ್ ಗೆ ಸಂದೇಶ ಕಳುಹಿಸಿರುವೆ ನೋಡಿ ಎಂದರು.ಅವರು ನನಗೆ ಹಿಂದಿನ ದಿನವೇ ಕಾರ್ಯಕ್ರಮದ ಬಗ್ಗೆ ಮಾಹಿತಿ ಕಳುಹಿಸಿದ್ದರು.ನಾನು ಸರಿಯಾಗಿ ಗಮನಿಸಿರಲಿಲ್ಲ.ಏನಿರಬಹುದೆಂದು ನೋಡಿದಾಗಲೇ ಗಾಬರಿಗೊಂಡು ತಕ್ಷಣ ನಮ್ಮ ಪತ್ರಿಕೆ ಸಂಪಾದಕರಿಗೆ ಫೋನ್ ಮಾಡಿದೆ.ಸರ್ ನಾನು ಇವತ್ತು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು.ಅವರು ಯಾಕೀಗೆ ಹೇಳುತ್ತಿದ್ದಾರೆ

ಎಂದು ಯೋಚಿಸಿ ನನ್ನನ್ನು ಪ್ರಶ್ನಿಸುವ ಮೊದಲೇ ದೊಡ್ಡದಾಗಿ ನಕ್ಕು, ಸರ್ ಇವತ್ತು ಒಂದು ದೊಡ್ಡ ಹೋಟೆಲ್ ಒಂದರಲ್ಲಿ ಮಹಿಳಾ ಕ್ಲಬ್ ನ ವಾರ್ಷಿಕ ಸಭೆ  ಹಾಗೂ ಅವರ ಒಂದು ವರ್ಷದ ಸಾಮಾಜಿಕ ಸೇವೆಯ ಕುರಿತಾದ ಚಿಕ್ಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ. ಅಲ್ಲಿ ಎಲ್ಲರೂ ಹೆಚ್ಚಿನದಾಗಿ ಮಹಿಳೆಯರೇ ಇರುತ್ತಾರೆ ನಾನು ಹೋಗುವುದಿಲ್ಲ ಎಂದೆ.ಇದ್ದರೇನು ಅವರು ಇನ್ವಿಟೇಷನ್ ಕಳುಹಿಸಿದ್ದಾರೆ ನಮ್ಮ ಜವಬ್ದಾರಿ ಹೋಗಿ ಬನ್ನಿ ಎಂದರು.ನಾನು ಬೆಳಿಗ್ಗೆ ಆದ ಘಟನೆಯಿಂದ ಒಂದಷ್ಟು ಅಂತರಂಗದಲ್ಲಿ ತೌಲನಿಕತೆಯಲ್ಲಿ ಸಿಲುಕಿದ್ದೆ‌.ಈ ನಡುವೆ ಹೇಗಪ್ಪಾ ಅಲ್ಲಿಗೆ ಹೋಗೋದು ಎಂದು ಯೋಚಿಸುತ್ತಲೇ ಇರುವಾಗ ನಮ್ಮ ಮುಖ್ಯ ಸಂಪಾದಕರು ನನಗೆ ಪುನಃ ಕರೆಮಾಡಿ ನಾನು ಕೂಡ ಬರುವೆ ;ಆ ಕಾರ್ಯಕ್ರಮಕ್ಕೆ ಮುಂಚೆಯೇ ನೀವು ಹೋಗಿರಿ ಎಂದು ನನಗೆ ತಿಳಿಸಿದರು.ಅಬ್ಬಾ ಸ್ವಲ್ಪ ಜೀವಬಂದಂತೆ ಆಯ್ತು.ಸರಿ ಎಂದು ತಯಾರಾಗಿ ಕಾರ್ಯಕ್ರಮಕ್ಕೆ ಗೊತ್ತಿರದ ವಿಳಾಸವ ದಾರಿಅಪರಿಚಿತರ ಕೇಳಿ ಆ ಹೋಟೆಲ್ ತಲುಪಿದೆ.ಅಲ್ಲಿಗೆ ಹೋದಾಗಲೇ ಬೆಳಿಗ್ಗೆಗಿಂತ ಮತ್ತಷ್ಟು ಗೋಜಿಲಿಗೆ ಸಿಲುಕಿದ್ದು ನಾನು.ಅಲ್ಲಿರುವ ಮಹಿಳೆಯರೆಲ್ಲಾ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು. ಅವರ ಉಡುಗೆಗಳು ನನನ್ನು ತಲೆ ಕೆಳಮಾಡುವಂತೆ ಮಾಡಿತ್ತು.ಅವರ ತುಂಬಾ ಬೋಲ್ಡ್ ನೆಸ್ ಪ್ರವೃತ್ತಿ ನನಗೆ ಸಂಕೋಚ ತಂದೊಡ್ಡಿ ನನಗೆ ಮಾತೇ ಬರದಾಗಿತ್ತು.ನಾನು ಅಲ್ಲಿ ಒಂದಂಶವನ್ನು ಯೋಚಿಸಿದೆ ಅವರೆಲ್ಲಾ ನಮ್ಮ ಭಾರತೀಯರೋ ಅಥವಾ ಬೇರೆ ದೇಶದವರೋ ಎಂದು.ಅಥವಾ ಇವರೆಲ್ಲ ನಮ್ಮ ದೇಶದವರೇ ಆಗಿದ್ದರೂ ನಮ್ಮ ರಾಜ್ಯದವರಾ ಎನ್ನಿಸುತಿತ್ತು.ಏಕೆಂದರೆ ಅವರು ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು.ನಾನು ತುಂಬಾ ದೊಡ್ಡ ದೊಡ್ಡ ಮಂದಿ ಇರುವ ಕಾರ್ಯಕ್ರಮಗಳಿಗೆ ವೀಕ್ಷಕನಾಗಿ ಹೋಗಿದ್ದೇನೆ.ಆದರೆ ಅವರ್ಯಾರು ದೊಡ್ಡವರೆನಿಸಲು ಈ ಆಂಗ್ಲಮಾಧ್ಯಮದ ಸಂಪೂರ್ಣ ಬಳಕೆಯನ್ನು ತೋರಿಸಿರಲಿಲ್ಲ.ಇವರಿಗೇಕೆ ಈ ಆಂಗ್ಲ ಭಾಷೆಯ ಹುಚ್ಚು ಹಿಡಿದಿದೆ ಎನಿಸುತಿತ್ತು.ಇಲ್ಲಿ ಅವರುಗಳಿಗೆ ಒಂದು ತಪ್ಪಾಗಿ ಅರ್ಥವಾಗಿದೆ ಇಂಗ್ಲೀಷ್ ಭಾಷೆಯಲ್ಲಿ ಸಂಪೂರ್ಣವಾಗಿ ವ್ಯವಹರಿಸಿದರೆ ಆಧುನಿಕತೆಯಲ್ಲಿ ಪ್ರದರ್ಶನಗೊಂಡರೆ ಮಹಿಳೆಯರೆನ್ನುವ ನಾವುಗಳು ಎಲ್ಲಾ ರಂಗದಲ್ಲೂ ಪುರುಷರಿಗಿಂತ ಮೇಲುಗೈ ಸಾಧಿಸುತ್ತಿದ್ದೇವೆ ಎನ್ನುವುದು.ಹಾಗೇಯೆ ಸ್ತ್ರೀ ತನ್ನೊಳಗೆಯೇ ಇನ್ನೊಬ್ಬ ಸ್ತ್ರೀ ಗೆ ಪೈಪೋಟಿ ಕೊಡುತ್ತಿರುವುದು ಅಲ್ಲಿನ ಮಹಿಳಾ ಕ್ಲಬ್ ನ ಸಭಾಂಗಣದಲ್ಲಿ ತುಂಬಾ ಸೂಕ್ಷ್ಮವಾಗಿ ಗಮನಿಸಿದ ವಿಚಾರ.ಅವರಲ್ಲಿ ಸ್ತ್ರೀವಾದ ಇರಬಹುದು ಆದರೆ ಅದು ಹೆಚ್ಚು ಮುಖಗೊಳ್ಳುತ್ತಿರಲಿಲ್ಲ ಕಂಡುಬರುತ್ತಿರಲಿಲ್ಲ ಪುರುಷ ವಿರುದ್ಧವಾದ ಸ್ತ್ರೀ ಪರವಾದ ಒಂದೇ ಕಂಡುಬರುತಿತ್ತು ಅವರುಗಳ ನಡವಳಿಕೆಗಳಲ್ಲಿ.ನಾನು ಎಷ್ಟೇ ವಿಶಾಲಾತ್ಮಕ ದೃಷ್ಟಿಗೆ ನನ್ನನ್ನು ನಾನು ಅಂಟಿಸಿದರೂ.ಅವರುಗಳ ಪಾಶ್ಚಾತ್ಯ ಸಂಸ್ಕೃತಿಯ ಮಹಾ ಅನುಕರಣೆಯ ಮುಂದೆ ನನ್ನ ಭಾರತೀಯ ಸಂಸ್ಕಾರ ಸಂಸ್ಕೃತಿ ನೆನಪಾಗಿ ಅಲ್ಲಿಯವರ ನಡವಳಿಕೆಗಳನ್ನು ತಿರಸ್ಕರಿಸುತ್ತಿದ್ದೆ.ಅವರ್ಯಾರು ಇಲ್ಲಿ ಉಳಿಯಲು ಇಚ್ಚಿಸಿದಂತಿಲ್ಲ ಎಲ್ಲರೂ ಒಮ್ಮೆಲೆ ಪರದೇಶಕ್ಕೆ ಜಿಗಿಯುವಂತಹ ಲಕ್ಷಣಗಳನ್ನು ಹೊಂದಿದವರು ಎನಿಸುತಿತ್ತು.

ಆದರೆ ಆ ಮಹಿಳಾ ಕ್ಲಬ್ ಅವರಲ್ಲಿ ಈ ಅಂಶಗಳು ಇದ್ದದ್ದು ನನಗೆ ತುಂಬಾ ಸಂತೋಷ ತರಿಸಿತ್ತು.ಸಮಾಜದಲ್ಲಿ ನೊಂದವರಿಗೆ ದೀನ ದುರ್ಬಲರಿಗೆ ಸಹಾಯ ಹಸ್ತವನ್ನು ಚಾಚುವ ಅವರ ಸಂಘಟನೆಯ ಮಹಾ ಉದ್ದೇಶ ಹೆಚ್ಚು ಶ್ಲಾಘನೀಯ.ಸ್ತ್ರೀಯು ಸಂಸಾರದಲ್ಲಿ ಸಿಲುಕಿದಾಗ ಸಮಾಜಕ್ಕೆ ಕೊಡುಗೆ ನೀಡುವುದಕ್ಕಿಂತ ತನ್ನ ಕುಟುಂಬದ ಜವಬ್ದಾರಿಯೇ ಹೆಚ್ಚಾಗಿ ಅಲ್ಲಿಯೇ ತನ್ನವರಿಗಾಗಿ ಒದ್ದಾಡುವುದು ಹೆಚ್ಚು.ಹೀಗಿರುವಾಗ ತನ್ನ ಕುಟುಂಬದ ಜೊತೆಗೆ ಸಮಾಜವೆಂಬ ಮಹಾ ಕುಟುಂಬವನ್ನು ಗಮನಿಸುತ್ತಿರುವುದು ಒಳ್ಳೆಯ ಬೆಳವಣಿಗೆ.ಇಲ್ಲಿ ನಾನು ಕಂಡ ವಿಷಯಾದಿಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.ನಿಮ್ಮ ಯೋಚನೆಗಳ ಟೀಕೆಗೆ ನಾನು ಗುರಿಯಾಗಬಹುದು ಗೊತ್ತಿಲ್ಲ. ಇಲ್ಲಾ ನಿಮ್ಮ ನನ್ನ ಯೋಚನೆಯೂ ಸರಿದೂಗಿ ಪ್ರಶಂಸೆಗೂ ಒಳಗಾಗಬಹುದು ಅದೂ ಗೊತ್ತಿಲ್ಲ.ಆದರೂ ನನಗೆ ಅನ್ನಿಸಿದ್ದನ್ನು ನಿಮಗೆ ಗೊತ್ತು ಪಡಿಸಲು ಈ ಮೇಲಿನ ಸನ್ನಿವೇಶಯುಕ್ತ ವಾಕ್ಯ ಗುಚ್ಛವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದೇನೆ.ನಾನು ಸ್ತ್ರೀ ಪರವಾದ, ಪುರುಷ ಪರವಾದ ಮತ್ತು ಸಮಾನವಾದ ಪರಿಕಲ್ಪನೆಗೆ ಸನ್ನಿವೇಶವನ್ನು ಮುಂದಿಟ್ಟಿದ್ದೇನೆ. ನೀವು ಹೀಗೆಯೇ ಇರಿ ಎನ್ನಲು ನಾನ್ಯಾರು‌!ಹೀಗೆಯೇ ಯೋಚಿಸಿ ಎನ್ನಲು ನಾನ್ಯಾರು? ನಿಮಗೆ ಸ್ವತಂತ್ರವಿದೆ ನಾನು ಕಂಡ ದೃಶ್ಯಗಳಲ್ಲಿ ಸಮಾನವಾದ ಸಮಾಜವಾದವನ್ನು ಹುಡುಕಿಕೊಳ್ಳುವುದು ನಿಮಗೆ ಬಿಟ್ಟದ್ದು .

*ಚಿಮಬಿಆರ್ (ಮಂಜುನಾಥ ಬಿ.ಆರ್)
*ಯುವಸಾಹಿತಿ, ಸಂಶೋಧಕ, ವಿಮರ್ಶಕ.
*ಹೆಚ್.ಡಿ.ಕೋಟೆ ಮೈಸೂರು.
*ದೂರವಾಣಿ ಸಂಖ್ಯೆ:-8884684726