ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ರೇಡಿಯೋ ಜಾಕಿ ರಚನಾ ನಿಧನರಾಗಿದ್ದಾರೆ. ಅವರಿಗೆ ೩೫ ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ನಿಧನರಾಗಿದ್ದು, ರಚನಾ ಅವರ ಅನಿರೀಕ್ಷಿತ ನಿಧನ ಅಭಿಮಾನಿಗಳಿಗೆ ಶಾಕ್ ನೀಡಿದೆ. ರೇಡಿಯೋ ಮಿರ್ಚಿಯಲ್ಲಿ ಆರ್ಜೆ ಆಗಿದ್ದ ಅವರು, ತಮ್ಮ ಮಾತು, ಧ್ವನಿಯ ಮೂಲಕ ಅಪಾರ ಕೇಳುಗ ಅಭಿಮಾನಿಗಳನ್ನು ಸಂಪಾದಿಸಿದ್ದರು. ಜೆಪಿ ನಗರದ ಪ್ಲಾಟ್ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ನಿಧನರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ರಚನಾ ಅವರು ಅರ್ಜೆ ಕೆಲಸ ಬಿಟ್ಟಿದ್ದರು. ರಚನಾ ತಂದೆ-ತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದು, ರಚನಾ ಪಾರ್ಥಿವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯುತ್ತಿರುವುದಾಗಿ ರಚನಾ ಅಪ್ತ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಆರ್ಜೆ ರಚನಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಟುಂಬಸ್ಥರು ರಚನಾ ಅವರ ಅಂಗಾಂಗವನ್ನು ದಾನ ಮಾಡಿದ್ದಾರೆ.  ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೋಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ೧೨ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಚನಾ ಅವರ ನಿಧನಕ್ಕೆ ಚಿತ್ರರಂಗ, ಸಹದ್ಯೋಗಿಗಳು, ಅಪಾರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಆರ್ಜೆ ರಚನಾ ಅವರಿಗೆ ದೊಡ್ಡ ಅಭಿಮಾನಿ ಬಳಗವಿತ್ತು. ತಮ್ಮ ಮಾತಿನ ಮೂಲಕ ಅವರು ಕೇಳುಗರನ್ನು ರಂಜಿಸುತ್ತಿದ್ದರು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲೂ ಆರ್ಜೆಯಾಗಿ ಕಾಣಿಸಿಕೊಂಡಿದ್ದ ರಚನಾ ತಮ್ಮ ಸಂಭಾಷಣೆಗಳಿಂದ ಗಮನ ಸೆಳೆದಿದ್ದರು. ಚಿತ್ರದಲ್ಲಿ ಅವರ ಪಾತ್ರಕ್ಕೂ ದೊಡ್ಡ ಪ್ರಾಮುಖ್ಯತೆ ಇತ್ತು. ಅದನ್ನು ಸಮರ್ಥವಾಗಿ ಅವರು ನಿಭಾಯಿಸಿ, ಮೆಚ್ಚುಗೆ ಗಳಿಸಿದ್ದರು.ಹೀಗೆ ಆರ್ಜೆಯಾಗಿ ಗುರುತಿಸಿಕೊಂಡಿದ್ದ

ರಚನಾ ಅವರು ಕಳೆದ ಮೂರು ವರ್ಷಗಳಿಂದ ಕೆಲಸವನ್ನು ತ್ಯಜಿಸಿದ್ದರು.