ಗುಂಡ್ಲುಪೇಟೆ: ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಅನೇಕ ಕ್ವಾರಿಗಳಲ್ಲಿ ಒತ್ತುವರಿ, ರಾಜಧನ ಬಾಕಿ, ಅಧಿಕ ಆಳ ಸೇರಿದಂತೆ ಅನೇಕ ನ್ಯೂನ್ಯತೆ ಇದ್ದರು ಸಹ ಕ್ವಾರಿ ಮಾಲೀಕರ ಲಾಭಿಗೆ ಮಣಿದು ಕೇವಲ ಮುಚ್ಚಳಿಕೆ ಬರೆಸಿಕೊಂಡು ಗಣಿಗಾರಿಕೆ ಅವಕಾಶ ನೀಡಿದೆ ಎನ್ನಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತದ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 8 ತಂಡ ಜಿಲ್ಲೆಯ ಎಲ್ಲಾ ಕ್ವಾರಿಗಳನ್ನು ಪರಿಶೀಲನೆ ನಡೆಸಿ ಕ್ವಾರಿ ಒತ್ತುವರಿ, ಸುರಕ್ಷಿತ ಕ್ರಮ ಅನುಸರಿಸಿಲ್ಲ, ರಸ್ತೆ-ತಂತಿ ಬೇಲಿ, ಗಡಿ ಗುರುತಿಲ್ಲ. ಅಧಿಕ ಆಳ ತೆಗೆಯಲಾಗಿದೆ ಎಂಬಿತ್ಯಾದಿ ನ್ಯೂನ್ಯತೆಗಳಿವೆ ಎಂದು ವರದಿ ನೀಡಿದೆ ಎನ್ನಲಾಗಿದೆ. ಆದರೆ ಇದೀಗ ಅಷ್ಟೆಲ್ಲ ಸಮಸ್ಯೆ ಇದ್ದರು ಸಹ ಮುಚ್ಚಳಿಕೆ ಬರೆಸಿಕೊಂಡು ಅಧಿಕ ಕ್ವಾರಿಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜಿಲ್ಲಾಡಳಿತ ಹಲವು ಮಂದಿ ಕ್ವಾರಿ ಮಾಲೀಕರು ರಾಜಧನ ಬಾಕಿ ಉಳಿಸಿಕೊಂಡಿದ್ದರು ಸಹ ಅಂತವರ ಬಳಿ ಹಣ ಕಟ್ಟಿಸಿಕೊಂಡಿಲ್ಲ. ಒತ್ತುವರಿ ಮಾಡಿರುವವರ ವಿರುದ್ಧವೂ ಕ್ರಮ ವಹಿಸಿಲ್ಲ. ಹಲವು ನ್ಯೂನ್ಯತೆ ಇದ್ದರು ಸಹ ಅವುಗಳನ್ನು ಸರಿಪಡಿಸದೆ ಇದೀಗ ಕೇವಲ ಮುಚ್ಚಳಿಕೆ ಬರೆಸಿಕೊಂಡು ಗಣಿಗಾರಿಕೆ ಅವಕಾಶ ನೀಡಿರುವುದು ಸರಿಯಲ್ಲ. ಇದನ್ನು ಗಮನಿಸಿದರೆ ಅಧಿಕಾರಿಗಳು ಗಣಿ ಮಾಲೀಕರ ವಿರುದ್ಧ ಮೃಧು ಧೋರಣೆ ತಾಳಿದ್ದಾರೆ ಎಂದು ಭಾಸವಾಗುತ್ತೆ. ಆದ್ದರಿಂದ ಈ ಕೂಡಲೇ ಅಕ್ರಮ ಗಣಿಗಾರಿಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮಡಹಳ್ಳಿ ಗುಡ್ಡಕ್ಕಿಂತಲೂ ದೊಡ್ಡ ಮಟ್ಟದ ಅನಾಹುತ ಜಿಲ್ಲೆಯಲ್ಲಿ ಸಂಭಸುತ್ತದೆ ಎಂದು ಹೋರಾಟಗಾರ ಕಂದೇಗಾಲ ಶಿವಣ್ಣ ಆಕ್ರೋಶ ಹೊರಹಾಕಿದರು.
————ಕೋಟ್———–
ಜಿಲ್ಲಾಧಿಕಾರಿ ನೇತೃತ್ವದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಂಡ ಜಿಲ್ಲಾಡಳಿತಕ್ಕೆ ನೀಡಿರುವ ವರದಿಯನ್ನು ಜಿಲ್ಲಾಧಿಕಾರಿಗಳು ಬಹಿರಂಗ ಪಡಿಸಿ ಸಾರ್ವಜನಿಕರಿಗೆ ಇದರ ಮಾಹಿತಿ ತಿಳಿಯಪಡಿಸಬೇಕು. ಇದರಿಂದ ಆಯಾಯ ಭಾಗದ ಸ್ಥಳೀಯರಿಗೆ ಕ್ವಾರಿಯ ಅಕ್ರಮ-ಸಕ್ರಮದ ಮಾಹಿತಿ ಗೊತ್ತಾಗುತ್ತದೆ. ಇದರಿಂದ ಮಾತ್ರ ಅಕ್ರಮ ಗಣಿಗಾರಿಕೆ ನಿಲ್ಲಿಸಬಹುದು. ಅದನ್ನು ಹೊರತು ಪಡಿಸಿ ವರದಿ ಗೌಪ್ಯವಾಗಿ ಇಟ್ಟಿಕೊಳ್ಳುವುದು ಅಕ್ರಮ ಗಣಿಗಾರಿಕೆ ನಡೆಸಲು ಅಧಿಕರಿಗಳೇ ಸಹಕಾರ ನೀಡಿದಂತೆ. ಆದ್ದರಿಂದ ಈ ಕೂಡಲೇ ನೈಜ ವರದಿ ಬಹಿರಂಗ ಪಡಿಸಿ.
- ಮಹದೇವನಾಯಕ, ಕೋಟೆಕೆರೆ
ವರದಿ: ಬಸವರಾಜು ಎಸ್.ಹಂಗಳ