ಚಾಮರಾಜನಗರ: ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಉಳಿದಿರುವ ಕಟ್ಟಡ ತ್ಯಾಜ್ಯವನ್ನು (ಡೆಬ್ರೀಸ್) ಎಲ್ಲೆಂದರಲ್ಲಿ ಬಿಸಾಡದೇ ಸೋಮವಾರಪೇಟೆ ರಸ್ತೆಯ ತಾವರೆಕಟ್ಟೆ ಮೋಳೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಗರಸಭೆ ಅನುಮತಿ ಪಡೆದು ನಿಗದಿಪಡಿಸಿರುವ ಸ್ಥಳದಲ್ಲಿ ವಿಲೇವಾರಿ ಮಾಡುವಂತೆ ನಗರಸಭೆ ಸೂಚಿಸಿದೆ.
ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಉಳಿದಿರುವ ತ್ಯಾಜ್ಯವನ್ನು (ಡೆಬ್ರೀಸ್) ಎಲ್ಲೆಂದರಲ್ಲಿ ಬಿಸಾಡದೇ ಹಾಗೂ ಸಾರ್ವಜನಿಕರಿಗೆ ಓಡಾಡಲು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲು ನಗರಸಭೆಯು ಸೋಮವಾರಪೇಟೆ ರಸ್ತೆಯಲ್ಲಿ ಬರುವ ತಾವರಕಟ್ಟೆ ಮೋಳೆಯ ಸರ್ವೆ ನಂ.೩೬೧ ರ ಸ್ಥಳದಲ್ಲಿರುವ ಒಟ್ಟು ೨೫ ಎಕರೆಯ ಘನತ್ಯಜ್ಯ ವಿಲೇವಾರಿ ಘಟಕದಲ್ಲಿ ಪ್ರತ್ಯೇಕವಾಗಿ ೩ ಎಕರೆ ಜಾಗವನ್ನು ಕಟ್ಟಡ ತ್ಯಾಜ್ಯಗಳನ್ನು ಶೇಖರಿಸಲು ಸ್ಥಳ ನಿಗದಿಪಡಿಸಿದೆ. ಕಟ್ಟಡ ತ್ಯಾಜ್ಯಗಳನ್ನು ನಗರಸಭೆ ಅನುಮತಿ ಪಡೆದು ಮೇಲೆ ನಿಗದಿಪಡಿಸಿರುವ ಸ್ಥಳದಲ್ಲಿ ವಿಲೇವಾರಿ ಮಾಡಬೇಕು.
ಒಂದು ವೇಳೆ ಕಟ್ಟಡ ನೆಲಸಮ ಅವಶೇಷಗಳನ್ನು ರಸ್ತೆ ಬದಿಗಳಲ್ಲಿ ಅಥವಾ ಖಾಲಿ ನಿವೇಶನಗಳಲ್ಲಿ ಹಾಕುವುದು ಕಂಡು ಬಂದರೆ ಮೊದಲ ಬಾರಿಗೆ ೧ ಸಾವಿರ ರೂ. ಹಾಗೂ ಪುನರಾವರ್ತನೆಯಾದಲ್ಲಿ ೨ ಸಾವಿರ ರೂ. ದಂಡ ವಿಧಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ನೆಲಸಮ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ಸಾಗಿಸಲು ಸ್ವಂತ ವಾಹನ ಇಲ್ಲದಿದ್ದಲ್ಲಿ ನಗರಸಭೆಯ ವಾಹನ ಸಂಖ್ಯೆ ಕೆ.ಎ.೧೦, ೧೩೦೫ ಅನ್ನು ಪ್ರತಿ ಲೋಡ್ ಗೆ ೧೫೦೦ ರೂ. ರಂತೆ ನಗರಸಭೆಗೆ ಶುಲ್ಕ ಪಾವತಿಸಿ ಡೆಬ್ರೀಸ್ ಅನ್ನು ಸಾಗಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿಯ ಆರೋಗ್ಯ, ತಾಂತ್ರಿಕ ಶಾಖೆಯನ್ನು ಸಂಪರ್ಕಿಸಬಹುದು ಹಾಗೂ ಸಿವಿಲ್ ಎಂಜಿನಿಯರ್‌ಗಳು ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯಬೇಕು ಮತ್ತು ಉದ್ದಿಮೆ ಪರವಾನಗಿಯನ್ನು ನವೀಕರಿಸಿಕೊಳ್ಳುವುದು ಎಂದು ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಉಪಾಧ್ಯಕ್ಷರಾದ ಪಿ.ಸುಧಾ, ಪೌರಾಯುಕ್ತರಾದ ಕರಿಬಸವಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.