ಮೈಸೂರು: ಮಕ್ಕಳೆಂದರೆ ಈ ಲೋಕವನ್ನು ದೇವಮಂದಿರವನ್ನಾಗಿಸುವ ಮನುಷ್ಯರೂಪಿಗಳು, ಈ ಜಗವನ್ನು ಜಡಮುಕ್ತರನ್ನಾಗಿಸುವ ಚೇತನಗಳು ಎಂದು ಲೇಖಕಿ, ಕಲಾವಿದೆ, ಹೋಟೇಲ್ ಉದ್ಯಮಿ ಡಾ.ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.
ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ನಡೆದ ‘ವಿಂಗ್ಸ್ ಮಾಂಟೆಸರಿ ಹೌಸ್ ಆಫ್ ಚಿಲ್ಡ್ರನ್ ಶಾಲೆ’ಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ಅತ್ಯಂತ ಸುಂದರ ಹೃದಯಿಯಾಗಿ ಕಾಣಿಸಿಕೊಳ್ಳುತ್ತಾನೆಂದರೆ ಅದು ಅವನ ಬಾಲ್ಯದಲ್ಲಿ. ಬಾಲ್ಯವೆಂಬುದು ಎಲ್ಲಾ ಕೆಡುಕುಗಳಿಂದ ದೂರ ಉಳಿಯುವ ಮನುಷ್ಯ ಜೀವನದ ಅಮೂಲ್ಯ ಕಾಲಘಟ್ಟ. ಬಾಲ್ಯದಲ್ಲಿ ನಾವು ಮಕ್ಕಳ ಮನೋಲೋಕವನ್ನು ಎಷ್ಟು ಅದ್ಭುತ ಮತ್ತು ಸುಂದರವಾಗಿ ಕಟ್ಟುತ್ತೇವೋ ಅಷ್ಟೇ ಅವರ ಭವಿಷ್ಯವೂ ಅದ್ಭುತ ಹಾಗೂ ಸೌಂದರ್ಯದಿಂದ ಕೂಡಿರುತ್ತದೆ. ಎಂದು ಅವರು ಅಭಿಪ್ರಾಯಪಟ್ಟರು.

ಬಾಲ್ಯದ ವಿದ್ಯಾಭ್ಯಾಸ ಎಳೆಯ ಮಕ್ಕಳ ಭವಿಷ್ಯನ್ನು ರೂಪಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ.ಇದರಲ್ಲಿ ನಮ್ಮ ಶಾಲಾಶಿಕ್ಷಣದ ಜವಾಬ್ಧಾರಿ ಬಹಳ ಮಹತ್ವದ್ದು. ಈ ನಿಟ್ಟಿನಲ್ಲಿ ‘ವಿಂಗ್ಸ್ ಮಾಂಟೆಸರಿ ಹೌಸ್ ಆಫ್ ಚಿಲ್ಡ್ರನ್ ಶಾಲೆ’ಯು ಬಹಳ ಜವಾಬ್ಧಾರಿಯುತ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಮಕ್ಕಳಿಗೆ ಬಾಲ್ಯದಲ್ಲಿ ನಾವು ಏನನ್ನು ಕಲಿಸುತ್ತೇವೆಯೋ ಅದೇ ಅವರ ಮುಂದಿನ ದಿನಗಳಿಗೆ ಅಡಿಗಲ್ಲಾಗುತ್ತದೆ. ಭವಿಷ್ಯದ ದಾರಿಗೆ ಅಗತ್ಯವಿರುವಷ್ಟು ಆಯ್ಕೆಗಳನ್ನು ಮಕ್ಕಳ ಮುಂದಿಟ್ಟು ಅವರ ನಿರ್ಧಾರಗಳಿಗೆ ಸ್ವಾತಂತ್ರ್ಯ ಕಲ್ಪಿಸಿಕೊಡಬೇಕಾಗಿರುವುದು ಹೆತ್ತವರ ಜವಾಬ್ಧಾರಿ ಹಾಗೂ ಶಾಲೆಯ ಜವಾಬ್ದಾರಿ. ಮಕ್ಕಳು ಮನೆಯಲ್ಲಿ ಹೇಳಿಕೊಟ್ಟದ್ದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದೇ ಶಾಲೆಯಲ್ಲಿ ಹೇಳಿದ್ದನ್ನು ಬಹಳವಾಗಿ ಅನುಸರಿಸುತ್ತಾರೆ. ಶಾಲೆಯೆಂಬುದು ಒಪ್ರತೀ ವಿದ್ಯಾರ್ಥಿಗೆ ಹೆಮ್ಮೆಯ ಜಾಗವಾಗಿರುತ್ತದೆ. ಹೀಗಾಗಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕುರಿತು ನಾವು ಚಿಂತಿಸಬೇಕಾಗಿದೆ ಎಂದರು.
ಆನ್ಲೈನ್ ತರಗತಿಗಳ ಕಾರಣ ಅತ್ಯಂತ ಸಣ್ಣ ವಯಸ್ಸಿನಲ್ಲೇ ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಅತಿಯಾಗಿ ಅವಲಂಬಿತರಾಗಿರುವುದು ಆತಂಕಕಾರಿ ಎಂದವರು ಅಭಿಪ್ರಾಯ ಪಟ್ಟರು. ಮಕ್ಕಳ ಕಲಾತ್ಮಕತೆಯನ್ನು ಮೊಬೈಲ್ ನುಂಗಿಹಾಕುವುದಲ್ಲದೇ ದೈಹಿಕವಾಗಿಯೂ ಮಕ್ಕಳನ್ನು ಶಕ್ತಿಹೀನರನ್ನಾಗಿಸುತ್ತದೆ ಎಂಬುದನ್ನು ತಿಳಿದೂ ನಾವು ಅಸಹಾಯಕರಾಗಿರುವುದು ಚಿಂತನಾರ್ಹ ವಿಷಯವೆಂದರು. ಮಕ್ಕಳ ಕ್ರೀಯಾತ್ಮಕತೆಯನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿರುವ ‘ವಿಂಗ್ಸ್ ಮಾಂಟೆಸರಿ ಹೌಸ್ ಆಫ್ ಚಿಲ್ಡ್ರನ್ ಶಾಲೆ’ಯ ಪ್ರಾಂಶುಪಾಲರಾಗಿರುವ ಶ್ರೀಮತಿ ಸುಷ್ಮಾ ಕಾರ್ತಿಕ್ ಹಾಗೂ ಇಡೀ ತಂಡ ಅಭಿನಂದನಾರ್ಹ ಎಂದರು.

ಮೈಸೂರು ಇರತೆಡೆಗಳಿಗೆ ಹೋಲಿಸಿದರೆ ಸಾಮಾಜಿಕವಾಗಿ ಬಹಳ ಫಲವತ್ತಾದ ಊರು. ಇಲ್ಲಿ ಏನನ್ನೇ ಬಿತ್ತಿದರೂ ಅದು ಸಮೃದ್ಧ ಫಲ ಕೊಡಬಲ್ಲುದು. ಇದು ಸಾಂಸ್ಕೃತಿಕ ನಗರಿ. ನಮ್ಮ ಮಕ್ಕಳು ಇಲ್ಲಿ ತಮ್ಮ ಬಾಲ್ಯವನ್ನು ಕಳೆಯುತ್ತಿದ್ದಾರೆ. ಅತ್ಯಂತ ಸುಂದರ ಪ್ರಾದೇಶಿಕತೆಯನ್ನು ಅನುಭವಿಸುವ ಅದೃಷ್ಟ ಅವರಿಗಿದೆ. ಹೀಗಾಗಿ ಸಮೃದ್ಧವಾದ ಭವಿಷ್ಯವನ್ನು ಕಟ್ಟಿಕೊಂಡು ಸಾಧಕರಾಗಬಹುದಾದ ಎಲ್ಲಾ ಸಾಧ್ಯತೆ ಮತ್ತು ಅವಕಾಶಗಳೂ ನಮ್ಮ ಮಕ್ಕಳ ಮುಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಸವಿತಾ ಶೆಣೈ ರಂಗಾ ಅವರು ಮಾತನಾಡಿ, ಕೋವಿಡ್ ಕಾಲಘಟ್ಟದ ನಂತರದಲ್ಲಿ ಮಕ್ಕಳ ಚಟುವಟಿಕೆಗಳಿಗೆ ಅದ್ಭುತ ವೇದಿಕೆಯನ್ನು ಒದಗಿಸಿಕೊಟ್ಟ ‘ವಿಂಗ್ಸ್ ಮಾಂಟೆಸರಿ ಹೌಸ್’ನ ಎಲ್ಲರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ‘ವಿಂಗ್ಸ್ ಮಾಂಟೆಸರಿ ಹೌಸ್ ಆಫ್ ಚಿಲ್ಡ್ರನ್ ಶಾಲೆ’ಯ ಪ್ರಾಂಶುಪಾಲರಾಗಿರುವ ಶ್ರೀಮತಿ ಸುಷ್ಮಾ ಕಾರ್ತಿಕ್, ಶಾಲೆಯ ಟ್ರಸ್ಟಿ ಶ್ರೀಮತಿ ಶೋಭಾ ಅಮರೇಂದ್ರ ಮೊದಲಾವರು ಹಾಜರಿದ್ದರು. ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ , ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.