ಲವ್ ಸ್ಟೋರಿ 1998 ಸಿನಿಮಾ ನಿರ್ದೇಶನ ಮಾಡಿ ಬಿಡುಗಡೆಗೆ ಸಜ್ಜುಗೊಳಿಸುತ್ತಿರುವ ಪರಾಗ ಅವರು ಎರಡು ದಶಕಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತು ಸಾವಿರಾರು ವಿದ್ಯಾರ್ಥಿಗಳ ಮನಸಿನಲ್ಲಿ ನಾಗರಾಜು ತಲಕಾಡು ಎಂಬ ಮೂಲ ನಾಮಧ್ಯೇಯದಲ್ಲಿ ಪರಿಚಿತರು. ಪರಾಗ ಎಂಬುವುದು ಅವರ ಸಿನಿ ನಾಮ.(ಪೆನ್ ನೇಮ್) ಶ್ರೀ ತಲಕಾಡು ನಾಗರಾಜು ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಯಾದಾಗಿನಿಂದ ಸಮಾಜಮುಖಿಯಾಗಿ ಬೆಳೆದು ಬಂದ ಇವರು ವಿದ್ಯಾರ್ಥಿ ಸಂಘಟನೆಯ ಮುಖ್ಯ ನಾಯಕರಾಗಿ ಕಾಣಿಸಿಕೊಂಡು ವಿದ್ಯಾರ್ಥಿಗಳ ಪರವಾಗಿ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಲೇ ಬಂದವರು. ತಳ ಸಮುದಾಯದ ಆಶೋತ್ತರಗಳಿಗೆ ನೆರಳಾಗಿ ನಿಲ್ಲುವ ಕಾರ್ಯಗಳನ್ನು ಸದಾ ಚೈತನ್ಯದಾಯಕವಾಗಿ ಮುಂದುವರೆಸಿಕೊಂಡು ಬರುತ್ತಿರುವವರು. ರಂಗಭೂಮಿಯಲ್ಲಿ ತರಬೇತಿ ಪಡೆದು ಆ ಮೂಲಕ ಬೀದಿನಾಟಕಗಳಲ್ಲಿ ತೊಡಗಿಸಿಕೊಂಡವರು. ಲೇಖಕರಾಗಿ, ಸೃಷ್ಟಿ (ಕಾದಂಬರಿ) ಸೌಹಾರ್ದ ವಿಮರ್ಶೆ (ವಿಮರ್ಶೆ) ಬುದ್ಧಭಾರತ ಕಾವ್ಯ (ಪುರಾಣ ಕಾವ್ಯ) ಮುಂತಾದ ಉತ್ತಮ ಕೃತಿಗಳಿಗೆ ಕರ್ತೃ ಆಗಿದ್ದಾರೆ.
ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಒಲವನ್ನು ಹೊಂದಿದ ಇವರು ಕಥೆ, ಚಿತ್ರಕಥೆ, ಸಂಭಾಷಣೆ, ಚಿತ್ರ ಸಾಹಿತ್ಯ, ನಿರ್ದೇಶನ ಹೀಗೆ ಸಿನಿಮಾ ರಂಗದ ಬಹುಮುಖ ಆಯಾಮಗಳಲ್ಲೂ ಪರಿಣತಿ ಹೊಂದಿ ಸೃಜನಾತ್ಮಕ ವ್ಯಕ್ತಿಯಾಗಿ ಈಗ ರೂಪು ಗೊಂಡಿದ್ದಾರೆ. ಇವರ ಪರಿಚಯ ಮತ್ತು ಆಪ್ತ ಒಡನಾಟ ನನಗೆ ವಯಕ್ತಿಕವಾಗಿ ಕೆಲವು ವಿಶೇಷ ಅನುಭವಗಳನ್ನು ತಂದುಕೊಟ್ಟಿದೆ. ನಾನು ಇವರ ವಿದ್ಯಾರ್ಥಿಯಾಗಿದ್ದಾಗ ಇವರ ಸರಳ ಸಜ್ಜನಿಕೆಯ ದಿನಗಳನ್ನು ಕಂಡು ಅಚ್ಚರಿಗೊಂಡಿದ್ದೆ. ಪ್ರತಿಯೊಂದು ಘಟ್ಟದಲ್ಲೂ ವಿಭಿನ್ನ ಶೈಲಿಯ ಅಭಿರುಚಿ ಉಳ್ಳ ಇವರು ವಸ್ತ್ರ ವಿನ್ಯಾಸದಲ್ಲಿ, ಕೇಶ ವಿನ್ಯಾಸದಲ್ಲಿ ಭಿನ್ನವಾಗಿಯೇ ಕಾಣಿಸಿಕೊಳ್ಳುತ್ತಿದ್ದರು.

ವಿದ್ವತ್ತಿಗೆ ಹೆಸರಾದ ಇವರು ವಿದ್ಯಾರ್ಥಿಗಳ ಅಂತರ್ಯದ ಪೂರ್ವ ಜ್ಞಾನಕ್ಕೆ ಮೊದಲು ಕನ್ನಡಿ ಹಿಡಿದು ಆನಂತರ ತಮ್ಮ ಅರಿವಿನ ಮೂಲಕ ವಿದ್ಯಾರ್ಥಿಗಳು ತಿಳಿದ ವಿಷಯಗಳಿಗೆ ಒರೆ ಅಚ್ಚುತ್ತಿದ್ದರು. ವಿದ್ಯಾರ್ಥಿಗಳನ್ನು ಕೇವಲ ಪುಸ್ತಕ ಹುಳುವನ್ನಾಗಿಸದೆ ಸರ್ವತೋಮುಖ ಬೆಳವಣಿಗಾಗಿ ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳಿಗೆ ತೊಡಗಿಸುತ್ತಿದ್ದರು. ಮನೋವೈಜ್ಞಾನಿಕ ಸಿದ್ಧಾಂತಗಳನ್ನು ಬಲವಾಗಿ ನಂಬಿರುವ ಇವರಿಂದ ಎಷ್ಟೋ ಮಾನಸಿಕ ಖಿನ್ನತೆಯ ವಿದ್ಯಾರ್ಥಿಗಳು ತಮ್ಮ ಮಾನಸಿಕ ಸ್ಥಿಮಿತಕ್ಕೆ ಅಥವಾ ಕಲಿಕಾ ಸಾಮಥ್ರ್ಯದ ಸುಧಾರಣೆಗೆ ಚೈತನ್ಯ ಪಡೆದಿದ್ದಾರೆ.ಸಾಹಿತ್ಯದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವರ ಸಾಮಥ್ರ್ಯಕ್ಕನುಸಾರವಾಗಿ ವಿಷಯ ವಸ್ತುಗಳನ್ನು ಕೊಟ್ಟು ಮಾರ್ಗದರ್ಶನ ಮಾಡುತ್ತಾರೆ.

ನನ್ನ ದೆಶೆಯಿಂದಲೂ ಹೇಳುವುದಾದರೆ ನಾನು ಪತ್ರಿಕಾ ರಂಗದಲ್ಲಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹತ್ತು ಹಲವು ಲೇಖನಗಳನ್ನ ಬರೆಯುವಂತೆ ಪ್ರೇರೇಪಿಸಿದವರೂ, ತಿದ್ದಿ ತೀಡುತ್ತ ಮಾರ್ಗದರ್ಶನ ನೀಡುತ್ತಿರುವವರು ಇವರೆ. ನಾನು ಕಂಡಂತೆ ಮತ್ತು ಕೇಳಿದಂತೆ ಹಲವಾರು ವಿದ್ಯಾರ್ಥಿಗಳು ಈ ಸೌಭಾಗ್ಯವನ್ನು ಪಡೆದವರಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ಮಣೆಹಾಸುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಇವರೂ ಒಬ್ಬರೆಂದು ನನ್ನ ಹಿರಿಯರಿಂದ ಕೇಳಲ್ಪಟ್ಟಿದ್ದೇನೆ. ಹಾಗಾಗಿ ಇವರ ಪ್ರೋತ್ಸಾಹದಲ್ಲಿ ಸಾಹಿತ್ಯಕ ಅಂಶಗಳಿಂದ ಹೊರಹೊಮ್ಮಿದ ಪ್ರತಿಭೆಗಳು ಹಲವರಿದ್ದಾರೆ ಎನ್ನುವುದೇ ಇವರ ಹಿರಿಮೆ ಗರಿಮೆಗಳೆಂದರೆ ತಪ್ಪಿಲ್ಲ. ಬರವಣಿಗೆಯ ಪ್ರಜ್ಞೆ ಅವರಲ್ಲಿ ಹೆಚ್ಚಾಗಿರುವುದರಿಂದ ಹಣ ಸಂಪಾದನೆಗಿಂತ ಕೃತಿ ರಚನೆಗಳ ಕಡೆಗೆ ಸಮಯ ಕೊಡುತ್ತಲೇ ಇರುತ್ತಾರೆ.

ಸಿನಿಮಾ ರಂಗದಲ್ಲೂ ಸೇವೆ ಸಲ್ಲಿಸಬೇಕೆಂಬ ಅಭಿಲಾಷೆಯನ್ನೊತ್ತ ಇವರು ನಿರ್ದೇಶಕರಾದ ಟಿ.ಎಸ್ ನಾಗಾಭಾರಣ, ಎಸ್ ನಾರಾಯಣ್, ಚಂದ್ರಶೇಖರ್ ಬಂಡಿಯಪ್ಪ ಮುಂತಾದವರಲ್ಲಿ ಕೆಲಸ ಕಲಿತು ಈಗ ಸ್ವತಂತ್ರ ನಿರ್ದೇಶಕರಾಗಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ನಿರ್ದೇಶನ ಈ ನಾಲ್ಕು ಜವಬ್ದಾರಿಗಳನ್ನು ಒಬ್ಬರೇ ಹೊತ್ತು ಲವ್ ಸ್ಟೋರಿ 1998 ಎಂಬ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರಿಗೆ ಮನರಂಜನೆಯ ಔತಣ ನೀಡಲು ಸಜ್ಜಾಗಿದ್ದಾರೆ. ಈ ಸಿನಿಮಾದ ವಿಶೇಷತೆ ಎಂದರೆ ಅದರಲ್ಲಿ ನಟಿಸಿರುವ ಬಹುಪಾಲು ನಟರು ಹೊಸಬರು. ಕಲೆಗೇ ನಿಜವಾದ ಬೆಲೆ ಎನ್ನುವ ನೆಲೆಯಲ್ಲಿ ಈ ಸಿನಿಮಾದಲ್ಲಿ ಹೊಸಬರಿಗೆ ದಕ್ಕಿದೆ. ಸಿನಿಮಾದಲ್ಲಿ ಒಮ್ಮೆಯಾದರೂ ಕಾಣಿಸಿಕೊಳ್ಳಬೇಕೆಂಬ ಆಸೆಯನ್ನೊತ್ತ ಮನಗಳನ್ನೂ ತಂದಿಲ್ಲಿ ಅಭಿನಯಿಸಲು ದಾರಿ ತೋರಿದ್ದಾರೆ. ಒಬ್ಬ ನಿಜವಾದ ನಿರ್ದೇಶಕ ಮಾತ್ರ ಈ ರೀತಿಯ ಧೈರ್ಯ ಮಾಡಲು ಸಾಧ್ಯ. ತಮ್ಮ ನಿರಂತರ ಅಧ್ಯಯನದಿಂದ, ಸಿನಿಮಾ ಆಸಕ್ತಿಯಿಂದ ನವರಸಗಳಲ್ಲೂ ಪಾತ್ರಗಳನ್ನು ಲೀಲಾಜಾಲವಾಗಿ ತುಡಿಸುವ ಜಾಣ್ಮೆಯರಿತು ಹೊಸಬರಿಗೆ ಹಳೆಯ ಪಾತ್ರದಾರಿಗಳ ಅನುಭವದಷ್ಟೇ ಜೀವಂತಿಕೆ ತುಂಬುವುದನ್ನು ನಾನು ಕಂಡಿದ್ದೇನೆ. ಈ ಹೊಸಬರಲ್ಲಿ ನಾನೂ ಒಬ್ಬ, ಅವರ ವಿದ್ಯಾರ್ಥಿಗಳಾದ ನನ್ನ ಇತರೆ ಸ್ನೇಹಿತರನ್ನೂ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿದ್ದಾರೆ.

ತರಗತಿಯ ವೇದಿಕೆಯಲ್ಲಿ ನಾನು ಕಂಡ ನಾಗರಾಜು ತಲಕಾಡು ಅವರು ಸಿನಿಮಾ ವೇದಿಕೆಯಲ್ಲಿ ನಿರ್ದೇಶಕ ಪರಾಗರಾಗಿ ಬೇರೆಯೇ ಜವಾಬ್ದಾರಿತನದಲ್ಲಿ ಕಾಣಿಸಿಕೊಳ್ಳುವಾಗ ನಿಜಕ್ಕೂ ನನಗೆ ಆಶ್ಚರ್ಯವೆನಿಸುತ್ತಿತ್ತು. ಅಂತರ್ಯದಲ್ಲಿ ಇಷ್ಟೊಂದು ಭಿನ್ನ ಪ್ರತಿಭೆಯನ್ನು ಜೀರ್ಣಿಸಿಕೊಂಡು ನಮ್ಮೊಡನೆ ಸರಳ ಸಜ್ಜನಿಕೆಯ ಮೂರ್ತಿಯಂತಿದ್ದ ಇವರ ಮೇಲೆ ಅಭಿಮಾನ ಅಪಾರವಾಗುತ್ತಿತ್ತು. ನಮಗೆ ನಟನೆ ಹೊಸತು, ನಮ್ಮಲ್ಲೂ ಅಭಿನಯದ ಬಿತ್ತನೆಯನ್ನು ಬಿತ್ತಿ ಸಿನಿಮಾ ಕೃಷಿಯನ್ನು ಮಾಡಿದ ಪರಾಗ ಅವರು ಉತ್ತಮ ಸಿನಿಮಾ ಕೃಷಿಗಾರ ಎನ್ನವುದು ಖುಷಿ ಮತ್ತು ಬಹುಮುಖ ಪ್ರತಿಭೆಯ ಉಪನ್ಯಾಸಕರೆನ್ನುವುದು ಔದಾರ್ಯ.

ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಹೆಚ್.ಡಿ.ಕೋಟೆ ಮೈಸೂರು.
ದೂರವಾಣಿ ಸಂಖ್ಯೆ:-8884684726
Gmail I’d:-manjunathabr709@gmail.com
3 Attachments