ಗುಂಡ್ಲುಪೇಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ, ತಮ್ಮವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದರೂ ಕೂಡ ಕೆರೆಗಳಿಗೆ ನೀರು ತುಂಬಿಸಲು ಶಾಸಕ ಸಿ.ಎಸ್. ನಿರಂಜನಕುಮಾರ್ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಗಣೇಶ್‍ಪ್ರಸಾದ್ ಟೀಕಿಸಿದರು.
ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣಾ ಪೂರ್ವಭಾವಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಪುಟ್ಟರಂಗಶೆಟ್ಟಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಕೆರೆಗಳಿಗೆ ನೀರು ಬಿಡುವ ವಿಚಾರವಾಗಿ ಹಲವು ಮಂದಿ ಬಿಜೆಪಿಗರು ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಬಿಜೆಪಿ ಶಾಸಕರಿದ್ದು ಕೈಕಟ್ಟಿ ಕುಳಿತಿದ್ದಾರೆ ಎಂದರು.
ಚುನಾವಣೆ ಸಂದರ್ಭದ ವೇಳೆ ನಿರಂಜನಕುಮಾರ್ ತಾವು ಗೆದ್ದು ಶಾಸಕರಾದರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತೇನೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಶಾಸಕರಾದ ನಂತರ ಏನು ಮಾಡಲಾಗದ ಪರಿಸ್ಥಿತಿಗೆ ಬಂದೊದಗಿದ್ದಾರೆ ಎಂದರು.
ರಾಜ್ಯ ಬಿಜೆಪಿ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಖುರ್ಚಿಯಿಂದ ಕೆಳಗಿಳಿಸಲು ಹೊಂಚು ಹಾಕುತ್ತಿದ್ದಾರೆ. ಯಾವುದೇ ಕೆಲಸ ಆಗಬೇಕು ಎಂದರು ವಿಜಯೇಂದ್ರ ಅವರನ್ನೇ ಕೇಳಬೇಕು ಎಂಬ ಪರಿಸ್ಥಿತಿ ಇದೆ. ಇಂತಹ ವೇಳೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹೊಸ ಯೋಜನೆಗಳನ್ನು ತಾಲ್ಲೂಕಿಗೆ ತರುವುದು ಕನಸಿನ ಮಾತು ಎಂದು ತಿಳಿಸಿದರು.
ಮುಂದಿನ ಚುನಾವಣೆಗಳಿಗೆ ಗ್ರಾಪಂ ಚುನಾವಣೆ ಅಡಿಪಾಯವಾಗಿದ್ದು, ಈಗಿನಿಂದಲೇ ಎಲ್ಲರು ಭಿನ್ನಾಭಿಪ್ರಾಯ ಮರೆತು ಸಂಘಟಿತರಾದರೆ ಹೆಚ್ಚಿನ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಬಹುದು. ಕ್ಷೇತ್ರದಲ್ಲಿ 40 ಗ್ರಾಪಂಗಳಿದ್ದು, ಅದರಲ್ಲಿ ಸುಮಾರು 35 ಗೆಲ್ಲಲೆಬೇಕು. ಹಲವು ಮಂದಿ ಹಿರಿಯರು ಕಾಂಗ್ರೆಸ್ ಪಕ್ಷದಲ್ಲಿದ್ದು, ಪ್ರಸ್ತುತ ಅವರ ಮಕ್ಕಳು ಬಿಜೆಪಿ ಮತ ನೀಡುತ್ತಿದ್ದಾರೆ. ಮೊದಲು ನೀವು ಬದಲಾವಣೆಯಾಗಬೇಕು ಎಂದರು.
ಕಳೆದ 25 ವರ್ಷದಿಂದ ಮಹದೇವಪ್ರಸಾದ್ ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿದ್ದರು. ಅದರಿಂದಲೇ ಸತತವಾಗಿ ಗೆಲುವು ಸಾಧಿಸಿದ್ದರು. ನಂತರ ಗೀತಾ ಮಹದೇವಪ್ರಸಾದ್ ಕೂಡ ಉಪ ಚುನಾವಣೆಯಲ್ಲಿ ಗೆದ್ದು ಕ್ಷೇತ್ರಕ್ಕೆ ಕೋಟ್ಯಾಂತರ ಅನುದಾನ ತಂದಿದ್ದಾರೆ. ಈಗ ಶಾಸಕರಾದ ನಿರಂಜನ ಯಾವುದೇ ಹೊಸ ಯೋಜನೆ ತರದೆ ಹಳೆ ಅನುದಾನದಲ್ಲೆ ಗುದ್ದಲಿ ಪೂಜೆಗಳನ್ನು ಮಾಡುತ್ತಿದ್ದು, ತಮ್ಮದೆಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಬಿಜೆಪಿಯವರ ದಬ್ಬಾಳಿಕೆ ಹೆಚ್ಚಾಗಿದ್ದು, ಪೊಲೀಸ್ ಠಾಣೆಗೆ ಹೋದರೆ ನೀವು ಯಾವ ಪಕ್ಷ ಎಂದು ಕೇಳುವ ಪರಿಸ್ಥಿತಿ ಇದೆ. ಅಧಿಕಾರಿ ವರ್ಗದವರು ಕೂಡ ಶಾಸಕರ ಕೈಗೊಂಬೆಗಳಂತೆ ವರ್ತಿಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರ ಯಾವುದೇ ಕೆಲಸಗಳು ಸಹ ಆಗುತ್ತಿಲ್ಲ. ಇದರಿಂದ ದೂರವಾಗಬೇಕಾದರೆ ಕ್ಷೇತ್ರದ ಹೆಚ್ಚಿನ ಗ್ರಾಪಂಗಳಲ್ಲಿ ಪಕ್ಷ ಅಧಿಕಾರ ಹಿಡಿಯಬೇಕು ಎಂದರು.
ಯಾವುದೇ ಗೊಂದಲಗಳಿಲ್ಲದೆ ಪ್ರತಿ ಗ್ರಾಮ ಪಂಚಾಯಿಗಳಲ್ಲಿ ಸ್ಥಳೀಯರೇ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲುವ ಕಾರ್ಯತಂತ್ರ ರೂಪಿಸಬೇಕು. ಇದರಿಂದ ನಮಗೂ ಮುಂದಿನ ಚುನಾವಣೆ ಎದುರಿಸಲು ಶಕ್ತಿ ಬರುತ್ತದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಸಂದರ್ಭದಲ್ಲಿ ಸಹಕಾರ ನೀಡಲು ನಾವು ಸಿದ್ದವಿದ್ದು, ಅವಶ್ಯಕತೆ ಇದ್ದರೆ ನಮ್ಮ ಜೊತೆಗೆ ಚರ್ಚಿಸಿ ಎಂದು ತಿಳಿಸಿದರು.
ಈ ವೇಳೆ ಕೊಡಸೊಗೆ, ಕರಕಲಮಾದಳ್ಳಿ ಗ್ರಾಮದ ಹಲವು ಮಂದಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಸಭೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್, ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಪ್ಪ, ಬೇಗೂರು ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಜಿಪಂ ಮಾಜಿ ಅಧ್ಯಕ್ಷ ಮಹದೇವಪ್ಪ, ನಂಜನಾಯಕ, ರಾಜಶೇಖರಪ್ಪ, ಕೊಡಸೊಗೆ ಸಿದ್ದು, ಪುಟ್ಟ ಹನುಮಯ್ಯ, ಶಿವಸ್ವಾಮಿ, ತೆರಕಣಾಂಬಿ ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಶಿವಪ್ಪ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ