ಸರಗೂರು: ನೂತನ ತಾಲೂಕು ಸರಗೂರಿನಲ್ಲಿ ಎಲ್ಲಾ ಕಚೇರಿಗಳು ಕೆಲಸ ನಿರ್ವಹಿಸಲು ಶೀಘ್ರದಲ್ಲೇ ಕ್ರಮ ಜರುಗಿಸುವುದಾಗಿ ಶಾಸಕ ಅನಿಲ್ ಚಿಕ್ಕಮಾಧು ಭರವಸೆ ನೀಡಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿ ನೂತನವಾಗಿ ಶುರುವಾದ ಉಪಖಜಾನೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಗೂರು ತಾಲೂಕು ಅಭಿವೃದ್ಧಿಗೆ ಪೂರಕವಾಗಲು ಸರಕಾರಿ ಆಡಳಿತ ಕಚೇರಿಗಳು ಅವಶ್ಯಕ. ಈಗಾಗಲೇ ಸರಗೂರು ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ಉಪಖಜಾನೆ ಕಚೇರಿಯನ್ನು ಉದ್ಘಾಟಿಸಿದ್ದು, ಇನ್ನುಳಿದ ಕಚೇರಿಗಳೂ ಹಂತ-ಹಂತವಾಗಿ ಅಸ್ಥಿತ್ವಕ್ಕೆ ಬರಲಿವೆ ಎಂದು ಅವರು ಹೇಳಿದರು.
ನೂತನ ತಾಲೂಕಿಗೆ ಸರಕಾರ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡದಿರುವುದು ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಈಗಾಗಲೇ ಹಲವು ಬಾರಿ ಅನುದಾನಕ್ಕಾಗಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಪತ್ರ ಸಲ್ಲಿಸಲಾಗುವುದು. ಇದಲ್ಲದೆ ಎಲ್ಲಾ ಇಲಾಖೆಗಳೂ ಒಂದೆಡೆ ಇರುವಾಗೇ ಮಿನಿ ವಿಧಾನ ಸೌಧ ಶೀಘ್ರದಲ್ಲೇ ನೀರಾವರಿ ಇಲಾಖೆ ನಿವೇಶನದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ಸರ್ವೇ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಎಸ್.ವಿ.ವೆಂಕಟೇಶ್, ಜಿ.ಪಂ.ಮಾಜಿ ಸದಸ್ಯ ಚಿಕ್ಕವೀರನಾಯಕ, ರವಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ, ಮುಖಂಡರಾದ ಮಹಮ್ಮದ್ ಜಲೀಲ್, ಸುಭಾನ್, ನಾಗಯ್ಯ, ಮಧುಸೂದನ್, ಬಿಲ್ಲಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀಣಾ, ಹುಣಸೂರಿನ ಉಪಖಜಾನೆ ಸಹಾಯಕ ನಿರ್ದೇಶಕ ರಾಜಣ್ಣ, ಎಚ್.ಡಿ.ಕೋಟೆ ಸಹಾಯಕ ಖಜಾನಾಧಿಕಾರಿ ನೇತ್ರಾವತಿ ಶೆಟ್ಟಿ, ಮುಖ್ಯಾ ಲೆಕ್ಕಿಗ ನಾಗೇಶ್, ಪ್ರಥಮ ದರ್ಜೆ ಸಹಾಯಕ ಪೃಥ್ವಿ, ಮುಖ್ಯ ಲೆಕ್ಕಿಗ ಜಯರಾಮ್ ಸೇರಿದಂತೆ ಇನ್ನಿತರರು ಹಾಜರಿದ್ದರು.