“ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)
ಮಾನವನಿಗೆ ಮನರಂಜನೆ ಎಂಬುವುದು ಸಾರ್ವಕಾಲಿಕ ಅಗತ್ಯತೆ ಹಾಗೂ ಒಂದು ಉತ್ತಮವಾದ ಮನೋಚಿಕಿತ್ಸೆಯೂ ಕೂಡ ಆಗಿದೆ. ಆಸರಿಕೆ-ಬೇಸರಿಕೆಗಳಿಂದ ಪಾರಾಗಲು ಮನರಂಜನೆ ಒಂದು ಅತ್ಯುತ್ತಮ ಉಪಾಯ. ಈ ಮನರಂಜನೆ ಎಂಬುವುದು ಮಾನವ ವಿಕಾಸದ ಮಧ್ಯಯುಗದಲ್ಲೆಲ್ಲೋ ಹುಟ್ಟಿಕೊಂಡಿದ್ದಲ್ಲ, ಆದಿಯಲ್ಲೇ ಮಾನವ ವಿಕಾಸದ ಒಂದು ಭಾಗವಾಗಿ ಹುಟ್ಟನ್ನು ಪಡೆದುಕೊಂಡಿದೆ. ಪುರಾಣಗಳಲ್ಲೂ ಕೂಡ ಮನರಂಜನೆಗೆ ಸಾಕಷ್ಟು ಉದಾಹರಣೆಗಳಿವೆ. ಕೃತಯುಗ, ತೇತ್ರಾಯುಗ, ದ್ವಾಪರಯುಗ, ಕಲಿಯುಗ ಈ ನಾಲ್ಕು ಯುಗಗಳಲ್ಲೂ ಧಾರ್ಮಿಕ, ಆಧ್ಯಾತ್ಮಿಕತೆಯ ಮಾನ್ಯತೆಯನ್ನೂ ಸಹ ಮನರಂಜನೆ ಎನ್ನುವ ಸಾಂಸ್ಕೃತಿಕ ಅಂಗ ಪಡೆದುಕೊಂಡು ಬಂದಿದೆ. ಶಿವನೇ ನಾಟ್ಯಗಾರನಲ್ಲವೇ! ಕೃಷ್ಣನೇ ಕೊಳಲು ಊದಲಿಲ್ಲವೇ!, ಇಂದ್ರನಗರಿಯೇ ಕಲೆಯ ಮನರಂಜನೆಯ ತಾಣವಲ್ಲವೇ! ಇನ್ನೂ ಸಾಕಷ್ಟು ಉದಾಹರಣೆಗಳಿವೆ.ಕಾಲ ಕ್ರಮೇಣ ಈ ಮನರಂಜನೆ ವಿವಿಧ ಆಯಾಮಗಳನ್ನು ಅಥವಾ ರೂಪಗಳನ್ನು ಪಡೆದುಕೊಳ್ಳುತ್ತಾ ಸಾಗಿ ಮನರಂಜನೆ ಒಂದು ವೃತ್ತಿಯಾಗಿ, ಕ್ರೀಡೆಯಾಗಿ, ಕಲೆಯಾಗಿ, ಪ್ರತಿಭೆಯಾಗಿ, ಸಾಂಸ್ಕೃತಿಕ, ಸಾಂಪ್ರದಾಯಿಕ ಆಚರಣೆಯಾಗಿ ಇನ್ನೂ ಬಹುವಾಗಿ ರೂಢಿಗೆ ಬಂದಿದೆ.
ವಿಶ್ವದ ಎಲ್ಲಾ ಕಡೆ ಹಬ್ಬಹರಿದಿನ ವಿಶೇಷಗಳಲ್ಲಿ ಸಾಂಕೇತಿಕವಾಗಿ ಕೆಲವು ಆಟಗಳನ್ನು ಆಡಿಸಲಾಗುತ್ತದೆ. ಈ ಕೆಲವು ಮನರಂಜನೆಗಳು ಮಾನವನ ಉನ್ನತಿಗೂ ಕಾರಣವಾಗಿದೆ; ಅವುಗಳಲ್ಲಿ ಸಂಗೀತ, ನೃತ್ಯ, ಗಾಯನ, ರಂಗ ಅಭಿನಯ(ನಾಟಕ), ಕಥೆ ಹೇಳುವುದಾಗಿದೆ. ಕೆಲವೊಂದು ಮನರಂಜನಾ ಸ್ಪರ್ಧೆಗಳಲ್ಲಿ ಸಾಹಸ ಮತ್ತು ಅಪಾಯವೂ ಕೂಡ ಇರುತ್ತದೆ. ಭಾರತದಲ್ಲಿ ರಾಜರ ಆಳ್ವಿಕೆಯಲ್ಲಿ ಕತ್ತಿ, ಗುರಾಣಿ ಯುದ್ಧ ಕಲೆಗಳ ಸ್ಪರ್ಧೆ, ಪ್ರಾಣಿ ಭೇಟೆ, ಮಲ್ಲಯುದ್ಧಗಳಂತಹ ಮನೋರಂಜನಾ ಆಟಗಳು ಸ್ವಲ್ಪ ಮಟ್ಟಿಗೆ ಅಪಾಯ ತಂದೊಡ್ಡುತ್ತಿದ್ದವು ಆದರೆ ಮಾನವೀಯತೆಯನ್ನು ಕೊಲ್ಲುವವುಗಳಾಗಿರಲಿಲ್ಲ, ಶಕ್ತಿ ಸಾಮರ್ಥ್ಯದ ಊರ್ಜಿತ ಮತ್ತು ರಕ್ಷಣಾ ಕಲೆಗಳಾಗಿದ್ದವು. ಭಾರತಕ್ಕಿಂತ ಹೊರ ದೇಶಗಳಲ್ಲಿ ಮನರಂಜನೆಯ ಬಳಕೆ ವಿಕೃತಕ್ಕೆ ತಿರುಗಿತ್ತೆಂದು ಹೇಳಬಹುದು. ಗ್ರೀಕ್, ಈಜಿಪ್ಟ್ ನಾಗರಿಕತೆಗಳಲ್ಲಿದ್ದ ಒಂದು ಸ್ಪರ್ಧೆ ಪತ್ತೆಯಾಗಿದೆ, ಅದನ್ನು ಇತ್ತೀಚೆಗೆ ಹಾಲಿವುಡ್ ಸಿನಿಮಾಗಳಲ್ಲಿ ಕಾಣಬಹುದು. ಎಷ್ಟು ಭಯಾನಕ ಎಂದರೆ; ಕ್ರೂರ ಕಾಡು ಮೃಗಗಳನ್ನು ಬೋನಿನಲ್ಲಿಟ್ಟು, ಸ್ಪರ್ಧಿಗಳನ್ನು ಮೈದಾನಕ್ಕೆ ತಳ್ಳಿ ಬೋನಿನಲ್ಲಿದ್ದ ಕ್ರೂರ ಮೃಗಗಳನ್ನು ರಕ್ತದ ವಾಸನೆಯನ್ನು ಹೆಚ್ಚಿಸಿ ಹೊರಬಿಡಲಾಗುತ್ತಿತ್ತು ಆ ಭಯಾನಕ ಮೃಗಗಳೊಡನೆ ಸ್ಪರ್ಧಿಗಳು ಹೋರಾಡಬೇಕಿತ್ತು. ಅಲ್ಲಿ ಗೆದ್ದವರಿಗಿಂತ ಸತ್ತವರೇ ಹೆಚ್ಚು, ಗೆದ್ದವರಿಗೆ ಪ್ರಶಸ್ತಿ ಸಲ್ಲುವುದು ಇದ್ದೇ ಇದೆ ಆದರೆ ಅಲ್ಲಿನ ಅಪಾಯಗಳು ಆ ಮೃಗಗಳ ಕ್ರೂರತೆಯನ್ನು ಸೂಚಿಸುವುದಷ್ಟೇ ಅಲ್ಲ ಮಾನವನ ಕ್ರೂರತೆಯನ್ನೂ ಸಹ ಸೂಚಿಸುತ್ತಿತ್ತು. ಈ ಆಧುನಿಕ ಯುಗದಲ್ಲಿ ಮಾರ್ಪಾಡುಗೊಂಡ ಯಾಂತ್ರಿಕ, ತಾಂತ್ರಿಕ ಸಾಧನಗಳ ಬಳಕೆಯ ಮನರಂಜನೆಯ ಸ್ಪರ್ಧೆ ರೋಮಾಂಚನವನ್ನುಂಟು ಮಾಡುತ್ತದೆ ಜೊತೆಗೆ ಹೆಚ್ಚಿನ ಅಪಾಯವನ್ನೂ ಸಹ ತಂದಿಟ್ಟಿದೆ.
ಮಾನವರು ನೆಲವನ್ನಷ್ಟೇ ಮನರಂಜನೆಗೆ ವೇದಿಕೆ ಮಾಡಿಕೊಂಡಿಲ್ಲ ಆಕಾಶಕ್ಕೂ ಕೈ ಚಾಚಿ ಮನರಂಜನೆ ಪಡೆಯಲಾಗುತ್ತಿದೆ. ಪೀಳಿಗೆಯಿಂದ ಪೀಳಿಗೆಗೆ ಮನರಂಜನೆಗಳು ರೂಪಾಂತರ ಹೊಂದುವುದರ ಜೊತೆಗೆ ವೈವಿಧ್ಯತೆ ಮತ್ತು ನವೀನತೆಯನ್ನು ಹೊಂದುತ್ತಿವೆ. ಈ ಮನರಂಜನೆಗಳಲ್ಲಿ ಮಾನವನ ಬುದ್ಧಿವಂತಿಕೆ ಹೆಚ್ಚು ಬಳಕೆಯಾಗಿರುವುದೇ ಹೊಸ ಬಗೆಯ ಮನರಂಜನೆಯ ಸೃಜನೆಗೆ ಕಾರಣ ಎನ್ನಬಹುದು. ಆದರೆ ಮಾನವನ ಬುದ್ಧಿವಂತಿಕೆ ಮೂಲಭೂತವಾಗಿ ಎರಡು ಸ್ವರೂಪಗಳನ್ನು ಹೊಂದಿದೆ. ಮೊದಲನೆಯದು ಒಳ್ಳೆಯದು, ಎರಡನೆಯದು ಕೆಟ್ಟದ್ದು. ಮಾನವ ತನ್ನ ಬುದ್ಧಿವಂತಿಕೆಯನ್ನು ಅದೆಷ್ಟೋ ಒಳ್ಳೆಯವುಗಳಿಗೆ ಬಳಸಿ ಈ ಪ್ರಪಂಚವನ್ನು ತನ್ನ ಅಂಗೈಯಲ್ಲಿ ಹಿಡಿದಿಡಲು ಬಯಸಿದ್ದಾನೋ ಅಷ್ಟೇ!, ಒಂದಕ್ಕೆ ಸಾವಿರಪಟ್ಟು ಕೆಡುಕಿಗೆ, ಬುದ್ಧಿವಂತಿಕೆಯನ್ನು ಬಳಸಿ ಅಪಾಯವನ್ನು ಸಹ ತಂದಿಟ್ಟುಕೊಂಡಿದ್ದಾನೆ. ಮಾನವನ ವಿಕಾಸದಿಂದ ಹಿಡಿದು ಇಲ್ಲಿಯವರೆವಿಗೂ ಶಾಂತಿ ಎಂಬುವುದು ಎಲ್ಲಿಯೂ ಪೂರ್ಣವಾಗಿ ನೆಲೆಸಿಯೇ ಇಲ್ಲ. ಒಂದಲ್ಲಾ ಒಂದು ಕಾರಣಕ್ಕೆ ಘೋರಯುದ್ಧಗಳಿಂದ ಹಿಡಿದು ಸಣ್ಣಪುಟ್ಟ ಜಗಳ ವ್ಯಾಧಿಗಳ ಹೊದಿಕೆಯನ್ನು ಹೊದ್ದು ಮಾನವ ಅಶಾಂತಿಯಿಂದ ಬದುಕಿದ್ದಾನೆ. ಇದೆಲ್ಲವೂ ಅವನ ಕೆಡುಕಿನ ಬುದ್ಧಿವಂತಿಕೆಯಿಂದಲೇ ಆಗುತ್ತಿರುವುದು.
ಸುಧಾರಣೆ ತರಲು ಹೊರಟ ಏಸುಕ್ರಿಸ್ತ, ಬುದ್ಧನಿಂದ ಹಿಡಿದು ಬಸವಣ್ಣಮಧ್ಯಮಾದಿಯಾಗಿ ಈಗಿನ ಎಲ್ಲಾ ಸಮಾಜ ಸುಧಾರಕರ ಹೋರಾಟದ ಅಂತ್ಯವೂ ಹಿಂಸೆಯಿಂದಲೇ ಆವರಿಸಿದೆ ಅಥವಾ ಫಲಿತಾಂಶ ಕಂಡಿದೆ. ಈ ಹಿಂಸೆ ಮತ್ತು ಮಾನವನ ಬುದ್ಧಿವಂತಿಕೆ ಒಂದಕ್ಕೊಂದು ಪೂರಕ. ಹಾಗಾಗಿ ಈ ಪೂರಕ ಸ್ಥಿತಿಗತಿಗಳನ್ನು ಮತ್ತು ಅದರಿಂದಾದ ವ್ಯತ್ಯಾಸಗಳನ್ನು ಮನರಂಜನೆಯಲ್ಲೂ ಕಾಣಬಹುದು. ಮನರಂಜನೆಯಲ್ಲಿ ಕೆಡುಕುಗಳು ಈಗೀಗ ಉಲ್ಬಣಗೊಂಡಿದ್ದಲ್ಲ, ಆರಂಭದಲ್ಲೇ ತಿಳಿಸಿದಂತೆ ನಾಗರಿಕತೆಗಳ ಸ್ವರೂಪದಲ್ಲಿ ಇದನ್ನು ಕಾಣಬಹುದು. ಬಹಳ ಹಿಂದೆಯೇ ಅಂದರೆ ಯಾವಾಗ ಮಾನವನಿಗೆ ಕೇಡುಬುದ್ಧಿ ಹುಟ್ಟಿಕೊಂಡಿತೋ ಆಗಲೇ ಈ ಮನರಂಜನೆಯ ಅಪಾಯ, ಹುಚ್ಚಾಟ ಹುಟ್ಟಿಕೊಂಡಿದೆ. ಆದರೆ ಇತ್ತೀಚೆಗೆ ಅದರ ಮಟ್ಟ ಹೆಚ್ಚಾಗಿದೆ ಎನ್ನುವುದೇ ವಾಸ್ತವದ ಅಪಾಯದ ಮುನ್ಸೂಚನೆ.
ತಾಂತ್ರಿಕತೆ ಎನ್ನುವುದು ಹೆಚ್ಚಾದಂತೆ ಮನುಷ್ಯನ ಬದುಕು ಯಾಂತ್ರಿಕವಾಗಿದೆ. ಈ ಯಾಂತ್ರಿಕವಾದ ಬದುಕಿನಲ್ಲಿ ಸಿಲುಕಿದ ಮಾನವ ಈಗೀಗ ಮನರಂಜನೆ ಎನ್ನುವ ಹೆಸರಿನಲ್ಲಿ ಆರ್ಥಿಕತೆಯ ಲಾಭ ಬಯಸಿ ನಿಂತಿದ್ದಾನೆ. ಇದಕ್ಕೆ ದಾರಿ ಮಾಡಿಕೊಟ್ಟಿರುವುದು ಸಾಮಾಜಿಕ ಜಾಲತಾಣ ಎನ್ನುವ ಒಂದು ಬಹುದೊಡ್ಡ ವೇದಿಕೆ. ಇಲ್ಲಿ ಒಳ್ಳೆಯ ಬುದ್ಧಿವಂತಿಕೆಯ ಚಲಾವಣೆಗಿಂತ ಕೆಡುಕಿನ ಬುದ್ಧಿವಂತಿಕೆಯ ಚಲಾವಣೆಯೇ ಹೆಚ್ಚು. ಭಾಗಷಃ ಎಲ್ಲರೂ ಇಂದು ಈ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬದುಕಿನ ಪ್ರತಿ ಕ್ಷಣಗಳನ್ನು ದೂಡುವವರೇ ಆಗಿದ್ದಾರೆ. ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳಲು ಆಧುನಿಕ ಯಂತ್ರ-ತಂತ್ರಗಳನ್ನು ಬಳಸಲು ಮನಸ್ಸು ಮಾಡಿ ಎಡವಟ್ಟಿನೊಂದಿಗೆ ಉಪಾಯದ ಜೊತೆ ಅಪಾಯ ಎಂಬಂತೆ ಮಾನಸಿಕವಾಗಿ ಬಂಧಿಯಾಗಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ಮಂಗನಂತಾದ ಎಲ್ಲರೂ ಮುಖ್ಯವಾಹಿನಿಯಲ್ಲಿ ಹೆಸರು ಮಾಡಲು ಬಣ್ಣಬಣ್ಣದ ವೇಶಗಳನ್ನು, ಅಸಹ್ಯಗಳನ್ನು ತೊಡುತ್ತಿರುವುದು ಒಂದು ವಿಚಿತ್ರ ಬಗೆಯಾಗಿದೆ.ಸಿನಿಮಾಗಳು, ಕಥೆ, ನಾಟಕ ಅಭಿನಯ ಮಾದರಿಯಲ್ಲಿದ್ದು ಬೆಳ್ಳಿ ಪರದೆಗೆ ಜಿಗಿದದ್ದು ಒಂದು ಇತಿಹಾಸ. ಅಲ್ಲಿನ ನಟನೆ ಕಲಾದೇವಿಯ ಸೇವೆಯಾಗಿತ್ತು. ಆ ಮಾಧ್ಯಮದ ಮೂಲಕ ಸಮಾಜವನ್ನು ಎಚ್ಚರಿಸುವ ಮತ್ತು ಸರಿದಾರಿಗೆ ಹಿಡಿಯುವ ಪ್ರಯತ್ನ ಮನರಂಜನೆಯುಕ್ತವಾಗಿ ಆಗುತ್ತಿತ್ತು. ಈಗ ಅಲ್ಲೂ ಸಹ ಮಾನವನ ಈ ಹುಚ್ಚು ಬಯಕೆಗಳಿಗೆ ತಕ್ಕಂತೆ ಬದಲಾವಣೆಗಳು ಹುಟ್ಟಿಕೊಂಡಿದೆ. ಆ ಬೆಳ್ಳಿಪರದೆಯಲ್ಲಿರುವವರಿಗೆ ಪೈಪೋಟಿ ನೀಡಲು ಗಲ್ಲಿಗಲ್ಲಿಗೂ ವಿಕೃತ ಮನಸ್ಸಿನ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿವೆ. ಇದನ್ನು ಪ್ರತಿಭೆ ಎನ್ನಲಾಗುವುದಿಲ್ಲ ಬದಲಿಗೆ “ಹುಚ್ಚು ಬಯಲಾಟ” ಎನ್ನಬಹುದು.
ಈ ಹುಚ್ಚು ಬಯಲಾಟಗಳಿಂದ ಮನುಷ್ಯನೆಂಬ ಲಕ್ಷಣಗಳು ಮತ್ತು ಮನುಷ್ಯ ಮನುಷ್ಯನಿಗೆ ನೀಡುತ್ತಿದ್ದ ಗೌರವಗಳು ಎಲ್ಲವೂ ನಾಶವಾಗುತ್ತಿದೆ. ಸಂಸ್ಕೃತಿಯ ಕಗ್ಗೋಲೆಯಾಗುತ್ತಿದೆ; ಮಾನಸಿಕ ರೋಗಿಗಳ ತಾಣವಾಗಿದೆ. ಇದಕ್ಕೆ ಕಾರಣ ಇತ್ತೀಚಿಗಿನ ಆಧುನಿಕ ಅಪಾಯದ ಮನರಂಜನೆಯಾಗಿದೆ. ಒಂದು ಸ್ತ್ರೀ ವರ್ಗ ತನ್ನ ಅಂಗ ಪ್ರದರ್ಶನಕ್ಕಿಟ್ಟು ವಿಡಿಯೋ ಮಾಡುವುದು ಅದನ್ನು ಕಂಡವರು, ಅವರ ಹೆತ್ತವರ ಸಮೇತ ಅವರನ್ನು ತೆಗಳುವುದು. ಹಾಗೆ ತೆಗಳಿದ ಮಾತ್ರಕ್ಕೆ ಆ ರೀತಿ ಹುಚ್ಚಾಟ ಆಡುವವರು ಕಡಿಮೆಯಾಗಿಲ್ಲ ಅದನ್ನೇ ಪ್ರಚಾರವನ್ನಾಗಿ ಮಾರ್ಪಾಡಿಸಿಕೊಂಡು ಮತ್ತಷ್ಟು ಆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಒಂದು ಪರುಷ ವರ್ಗ ಹುಚ್ಚು ನರ್ತನದೊಂದಿಗೆ, ವ್ಯಂಗ್ಯ ಅಪಹಾಸ್ಯದೊಂದಿಗೆ, ತಿಕ್ಕಲು ನಡವಳಿಕೆಗಳೊಂದಿಗೆ ನಟನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು. ಅದನ್ನು ಅದೇ ಹುಚ್ಚು ಮನಸ್ಸಿನವರು ಇಷ್ಟ ಪಟ್ಟು ಮತ್ತಷ್ಟು ಆ ಹುಚ್ಚಾಟಗಳಿಗೆ ಪ್ರೋತ್ಸಾಹ ನೀಡುವುದು ಹೀಗಾಗಿ ಈ ತಪ್ಪುನಡವಳಿಕೆಗಳಲ್ಲಿ ಸ್ತ್ರೀ-ಪುರುಷ ಇಬ್ಬರೂ ಆವರಿಸಿಕೊಂಡಿದ್ದಾರೆ. ಮೊನ್ನೆ ಜರುಗಿದ ದೀಪಾವಳಿ ಹಬ್ಬದಲ್ಲಿ ಎಲ್ಲೆಲ್ಲೂ ತಿಳಿಗೇಡಿಗಳು ತಮಾಷೆಗೆಂದು ದಾರಿಹೋಕರ ಮೇಲೆ, ವೃದ್ಧರ ಮೇಲೆ, ಒಂದು ಪ್ರೇಕ್ಷಕ ಗುಂಪಿನ ಮೇಲೆ, ಪೆಟ್ರೋಲ್ ಬಂಕ್’ನಲ್ಲಿ, ಪಟಾಕಿ ಸಿಡಿಸಿ ಕಿಡಿಗೇಡಿತನವನ್ನು ತೋರಿದ್ದಾರೆ, ಅದು ಮಾತ್ರವಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರವೃತ್ತಿಯಲ್ಲಿ ನಿರತರಾಗಿದ್ದಾರೆ. ಇದೆಂಥಾ ಮನರಂಜನೆ ಎಂದು ತಿಳಿಯುತ್ತಿಲ್ಲ, ಇದರಿಂದ ಮುಂದಾಗುವ ಅಪಾಯದ ಕುರಿತು ಯಾರೂ ಹೆಚ್ಚಿನದಾಗಿ ಎಚ್ಚರ ವಹಿಸಿದಂತೆ ಕಾಣುತ್ತಿಲ್ಲ.
ಇನ್ನೊಂದು ರೀತಿಯ ಕೆಟ್ಟ ಹಾಸ್ಯಪ್ರವೃತ್ತಿ ಹೆಚ್ಚಾಗಿದೆ, ಇದರಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲದ ಹಾಗೆ ತೊಡಗಿರುವುದು ಭಾರತದ ಸಾಂಸ್ಕೃತಿಕ ಬುಡವನ್ನು ಬಗೆದಂತಿದೆ. ಅಶ್ಲೀಲ ಮಾತಿನೊಂದಿಗೆ, ಅಶ್ಲೀಲ ಚಟುವಟಿಕೆಗಳೊಂದಿಗೆ ಲೈಂಗಿಕ ವಿಚಾರಗಳನ್ನು ತುಂಬಾ ಸಹಜ ಎನ್ನುವಂತೆ ಸಮಾಜದ ತುಂಬೆಲ್ಲಾ ಬೇಕಾಬಿಟ್ಟಿ ಪ್ರಚಾರದಲ್ಲಿಡುತ್ತಿದ್ದಾರೆ. ಇದರಿಂದ ಮಾನವರ ಮನಸ್ಥಿತಿಯು ವಿಶಾಲವಾಗುವುದಿಲ್ಲ ಬದಲಿಗೆ ಮತ್ತಷ್ಟು ಸಂಕುಚಿತವಾಗುತ್ತದೆ ಆದರೆ ಅದರ ಅರಿವು ಮತ್ತು ತಿದ್ದುಕೊಳ್ಳುವಿಕೆ ಬಹಳರಿಗೆ ಒಪ್ಪದ ವಿಚಾರ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಮಾನ ಪಾಲ್ಗೊಳ್ಳುವಿಕೆ ಮುಖ್ಯ. ಆದರೆ ಯಾವುದರಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯ ಬಯಸುತ್ತಿದ್ದೇವೆ ಎನ್ನುವುದೂ ಕೂಡ ಇಲ್ಲಿ ಮುಖ್ಯವಾಗುತ್ತದೆ. ಇಲ್ಲಿ ಒಬ್ಬರನ್ನು ನೋಡಿ ಮತ್ತೊಬ್ಬರು ಅನುಸರಿಸುವುದು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜವನ್ನು ಹಾಳುಗೆಡುವ ಚಟುವಟಿಕೆಗಳಲ್ಲಿ ಒಬ್ಬರು ತೊಡಗಿ ಎಲ್ಲಾ ಕಡೆ ಅದನ್ನು ಹಂಚುವುದು ಒಳ್ಳೆಯ ಬೆಳವಣಿಗೆಯಲ್ಲ. ಇತ್ತೀಚಿಗೆ ವ್ಯಂಗ್ಯಕ್ಕೆ ಒಳಪಡಿಸುವ ದೃಷ್ಟಿಯಿಂದ ಕೆಲವರ ವಯಕ್ತಿಕ ಮಾಹಿತಿಗಳನ್ನು ಕದ್ದು ವಿಡಿಯೋ ಎಡಿಟ್ ಮಾಡಿ ಇನ್ನೊಬ್ಬರ ಸ್ವಾತಂತ್ರ್ಯ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಕಾನೂನಿನ ಭಯವಿಲ್ಲದೇ ಅಮಾಯಕರಿಗೆ ಬೆದರಿಕೆ ಒಡ್ಡುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಈ ಅಂತರ್ಜಾಲ(ಸೈಬರ್)ಪೋಲಿಸರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು, ಕೇವಲ ದೂರು ಬಂದಾಗ ಮಾತ್ರ ಕ್ರಮ ತೆಗೆದುಕೊಳ್ಳುವುದು ಪರಿಪೂರ್ಣ ಉಪಯೋಗವಲ್ಲ.
ಸಾಮಾಜಿಕ ಜಾಲತಾಣದಲ್ಲಿ ವಿಷಬೀಜದಂತಿರುವ ಇವರುಗಳಿಗೆ ಹೊಸ ಕಾನೂನುಗಳನ್ನು ಜಾರಿಗೊಳಿಸಿ ಅಥವಾ ಈಗಾಗಲೇ ಇರುವ ಕಾನೂನುಗಳನ್ನು ಬಲವಾಗಿ ಇಟ್ಟು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಒಬ್ಬರಿಂದ ನೂರು, ನೂರರಿಂದ ಸಾವಿರ, ಸಾವಿರದಿಂದ ಲಕ್ಷ ಹೀಗೆ ಇಡೀ ದೇಶ ಇಂತಹವರಿಂದ ಅವ್ಯವಸ್ಥಿತಗೊಳ್ಳುತ್ತದೆ. ಆಗಾಗ ಕೆಲವು ಸಾಮಾಜಿಕ ಜಾಲತಾಣದ ಆ್ಯಪ್'(ತಂತ್ರಾಂಶ)ಗಳನ್ನು ತೆಗೆದುಹಾಕುವುದು ಈ ಮಾದರಿಯ ದುರಂತಕ್ಕೆ ತಡೆಒಡ್ಡಿದಂತೆ ಆಗುತ್ತದೆ ಮತ್ತು ಉತ್ತಮ ಪರಿಹಾರವಾಗಿದೆ. ಸಾಮಾಜಿಕ ಜಾಲತಾಣದ ಭ್ರಷ್ಟತೆ ಸಮಕಾಲೀನ ಜಗತ್ತಿನ ದೊಡ್ಡ ಪಿಡುಗಾಗಿದೆ. ಸಾಮಾಜಿಕ ಜಾಲತಾಣವನ್ನು ನಾನಿಲ್ಲಿ ನೇರವಾಗಿ ದೂರುತ್ತಿಲ್ಲ ಅಲ್ಲಿ ನಮ್ಮ ನಡವಳಿಕೆಗಳನ್ನು ದೂರುತ್ತಿದ್ದೇನೆ. ನಾವೇ ಬುದ್ಧಿವಂತಿಕೆ ತೋರಿದ ವ್ಯವಸ್ಥೆಗಳಲ್ಲಿ ನಾವೇ ಹಾಳಾಗುತ್ತಿರುವುದು ವಿಪರ್ಯಾಸ. ನನ್ನನ್ನೂ ಒಳಗೊಂಡಂತೆ, ಇತರರನ್ನೂ ಒಳಗೊಂಡಂತೆ ಮನವರಿಕೆಯ ಮಾತಿದು; ಮನರಂಜನ ಅಪಾಯದಲ್ಲಿ ಸಿಲುಕಿರುವುದು ನಮ್ಮಗಳ ತಪ್ಪೆಂದು ತಿಳಿದು ಇನ್ನಾದರೂ ಕೆಲವುಗಳಿಂದ ಹಿಂದೆ ಸರಿಯಬೇಕಿದೆ.
ಹೀಗೆ ಇತ್ತೀಚಿನ ನವಭಾರತದ ಸಮಸ್ಯೆಗಳು ಎಲ್ಲಾ ಕ್ಷೇತ್ರದಲ್ಲೂ ಹೆಚ್ಚಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರವೆಂದರೆ ಸರ್ಕಾರದೊಂದಿಗೆ ನಾವುಗಳು ಸ್ವತಃ ಉತ್ತಮ ಬದಲಾವಣೆಯ ಹೆಜ್ಜೆಯನ್ನಿಡುವುದು. ಒಳಿತುಗಳೂ ಸಹ ಸಾಕಷ್ಟು ಏರ್ಪಟ್ಟರು, ಅದರ ದುಪ್ಪಟ್ಟು ಅಪಾಯ ಸಂಭವಿಸುತ್ತಿರುವುದರಿಂದ ಈ ದೃಷ್ಟಿ ನಿಮ್ಮ ಮುಂದೆ. ಒಳಿತುಗಳಿಗಾಗಿ ಒಗ್ಗೂಡಲು ಬನ್ನಿ, ಎಚ್ಚರಗೊಳ್ಳೋಣ ಬನ್ನಿ. ವಿವೇಕಾನಂದರ ಸ್ಮರಿಸುತ್ತ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ತಿಳಿಯಿರಿ.
ಚಿಮಬಿಆರ್ (ಮಂಜುನಾಥ ಬಿ.ಆರ್)ಯುವಸಾಹಿತಿ, ಸಂಶೋಧಕ, ವಿಮರ್ಶಕ.ಹೆಚ್.ಡಿ.ಕೋಟೆ ಮೈಸೂರು.ದೂರವಾಣಿ ಸಂಖ್ಯೆ:-8884684726