ಮಗುವಾಗಿ ಭೂಮಿಗೆ ಬಂದಾಗ ನಮಗೆ ಜಾತಿ ಸಂಸ್ಕೃತಿ, ಯಾವುದೂ ಇರಲ್ಲ. ನಂತರ ಹೆತ್ತವರ ಆರೈಕೆಯಲ್ಲಿ ಬೆಳೆಯುತ್ತಾ ಎಲ್ಲವೂ ಬರುತ್ತದೆ. ಮಗು ಹುಟ್ಟಿದ ಮನೆಯ ಆಚಾರ, ವಿಚಾರ, ನಡೆ, ನುಡಿಯನ್ನು ಅನುಕರಣೆ ಮಾಡುತ್ತಾ ಬೆಳೆಯುತ್ತದೆ.
ಮಗು ಬೆಳೆಯುತ್ತಾ ಹೋದಂತೆಯೇ ಸುತ್ತಲಿನ ಪರಿಸರ, ಬೆಳೆಯುತ್ತಿರುವ ವಾತಾವರಣ ಎಲ್ಲವೂ ಅದರ ಮೇಲೆ ಪರಿಣಾಮ ಬೀರುತ್ತದೆ. ಪೋಷಕರ ಹಿಡಿತದಲ್ಲಿ ಬೆಳೆಯುವ ಮಗು ನಂತರ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಅಥವಾ ಆ ನಂತರದ ಬದುಕನ್ನು ಸಾಗಿಸುವಾಗ ಹೊರ ಪ್ರಪಂಚದೊಂದಿಗೆ ಹೆಚ್ಚಾಗಿ ಬೆರೆಯುವುದರಿಂದ ಕೆಲವು ಆಕರ್ಷಣೆಗಳಿಗೆ ಒಳಗಾಗಿ ಬಿಡುತ್ತದೆ. ಅದು ಧರ್ಮದ ಮಾರ್ಗವೂ ಆಗಿರಬಹುದು ಅಥವಾ ಅಧರ್ಮದೂ ಆಗಿರಬಹುದು. ಆದರೆ ಅದನ್ನು ಬಹು ಬೇಗ ಅನುಕರಣೆ ಮಾಡಲು ಆರಂಭಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಬಾಲ್ಯದಿಂದಲೇ ಧರ್ಮದ ಬಗ್ಗೆ ಅರಿತು ಸುಸಂಸ್ಕೃತ ಮನೆತನದಲ್ಲಿಯೇ ಬೆಳೆಸುವ ಪ್ರಯತ್ನವನ್ನು ಹೆತ್ತವರು ಮಾಡದೆ ಹೋದರೆ ಅವರಿಗೆ ಅಧರ್ಮದ ಹಾದಿ ಬೇಗ ತೆರೆದುಕೊಳ್ಳುತ್ತದೆ.
ಆ ಸಂದರ್ಭ ಹೆತ್ತವರು ಅದನ್ನು ಗುರುತಿಸಿ ಮಗುವಿಗೆ ನ್ಯಾಯ ಮತ್ತು ಅನ್ಯಾಯದ ಬಗ್ಗೆ ಧರ್ಮ ಅಧರ್ಮದ ಬಗ್ಗೆ ತಿಳಿ ಹೇಳಬೇಕು. ನಾವು ಇವತ್ತು ಮಕ್ಕಳು ಚೆನ್ನಾಗಿ ಓದಿ ರ‍್ಯಾಂಕ್ ಪಡೆಯ ಬೇಕೆಂದು ಆಶಿಸುತ್ತೇವೆಯೋ ಹೊರತು ಸಂಸ್ಕೃತಿ, ನಡೆ ನುಡಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಮ್ಮೆ ದುಶ್ಚಟದ ಹಾದಿ ಹಿಡಿದವನು ಅದರ ಹಿಡಿತದಿಂದ ಅಷ್ಟು ಸುಲಭವಾಗಿ ಹೊರ ಬರಲಾರ. ಏಕೆಂದರೆ ಅದು ನೀಡುವ ಸುಖ ಮತ್ತಿನ ಸುಖ. ಆದರೆ ಅದು ಹೆಚ್ಚು ದಿನ ಉಳಿಯದ, ಬದುಕನ್ನೇ ನಾಶಗೊಳಿಸುವ ಸುಖ ಎಂಬುದು ಆ ಕ್ಷಣಕ್ಕೆ ಆತನಿಗೆ ತಿಳಿಯಲಾರದು. ಹಾಗಾಗಿ ಅದರಲ್ಲೇ ತೊಳಲಾಡುತ್ತಾ ಬದುಕುತ್ತಿರುತ್ತಾನೆ. ಅವನಿಗೆ ನಾನು ಮಾಡುತ್ತಿರುವುದು ತಪ್ಪು ಎಂಬ ಮನವರಿಕೆಯಾದರೂ ಅದರಿಂದ ಹೊರಬರಲಾರದಷ್ಟು ಆಳಕ್ಕೆ ಇಳಿದು ಬಿಟ್ಟಿರುತ್ತಾನೆ.
ಹಾಗೆನೋಡಿದರೆ ಪ್ರತಿ ವ್ಯಕ್ತಿಯೂ ಏಳು-ಬೀಳುಗಳನ್ನು ಬದುಕಿನಲ್ಲಿ ಕಂಡಿರುತ್ತಾನೆ. ಧರ್ಮದ ಹಾದಿಯಲ್ಲಿ ಹೊರಟವನಿಗೆ ತಕ್ಷಣಕ್ಕೆ ಜಯವಾಗಲೀ, ಸುಖವಾಗಲೀ ಸಿಗಲಾರದು. ಆದರೆ ನೆಮ್ಮದಿಗೆ ಎಂದೂ ಕೊರತೆ ಬಾರದು. ಬಹಳಷ್ಟು ಮಂದಿ ಸುತ್ತಲಿನವರು ಏಳಿಗೆಯಾದ ಬಗ್ಗೆ ತಮ್ಮಲ್ಲಿಯೇ ಹೀಗಳೆದುಕೊಳ್ಳುತ್ತಾರೆ. ನಾನೇನು ಮಾಡಿದ್ದೇನೆ? ಧರ್ಮದ ಹಾದಿ ಹಿಡಿದು ನಾನು ಸಾಧಿಸಿದ್ದೇನು? ಹೀಗೆ ಸಮಯ ಸಿಕ್ಕಾಗ ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ. ತಮ್ಮ ಬದುಕಿನಾವಧಿಯಲ್ಲಿ ಏನು ಸಂಪಾದಿಸಿದ್ದೇವೆ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ಎನ್ನುವುದೇ ಮುಖ್ಯವಾಗಿರುತ್ತದೆ. ಅನೈತಿಕ ಮಾರ್ಗದಿಂದ ಗಳಿಸಿದ ಸಂಪತ್ತಿಗೆ ಕ್ರಮೇಣ ದೊಡ್ಡ ಮೊತ್ತದ ಕಂದಾಯ ಕಟ್ಟಬೇಕಾಗಬಹುದು ಎಂಬುದನ್ನು ನಾವು ಮರೆಯಬಾರದು.
ಸತ್ಯಮೇವ ಜಯತೇ ಎಂಬ ವಾಕ್ಯದ ಪರಿಪಾಲನೆಯಲ್ಲಿ ನಡೆದರೆ ಶೀಘ್ರವಾಗಿ ಪ್ರಾಪ್ತಿ ದೊರೆಯದಿದ್ದರೂ, ಮಂದಗತಿಯ ಬರಡು ಬದುಕು ಸಿಕ್ಕರೂ ಆತ್ಮ ಸಂತೋಷ ಸದಾ ಉಳಿದಿರುತ್ತದೆ. ದುರ್ಮಾರ್ಗದಲ್ಲಿ ಹೊರಟವನಿಗೆ ಹೊರಗಿನ ಬೆಡಗಿನ ಪ್ರಪಂಚದ ಎಲ್ಲ ಸುಖಗಳು ದೊರೆತರೂ ಅಂತರಂಗದ ಅತೃಪ್ತಿ ಸದಾ ತಾಂಡವವಾಡುತ್ತಿರುತ್ತದೆ. ಹೀಗಾಗಿ ಮನಃಶಾಂತಿಯಿಲ್ಲದೆ, ಕೊರಗಿನಲ್ಲಿಯೇ ದಿನ ಕಳೆಯಬೇಕಾಗುತ್ತದೆ. ಕೊರಗು ಎನ್ನುವುದು ನಮಗೆ ದೇವರು ಕೊಟ್ಟ ಒಂದು ದೊಡ್ಡ ಶಿಕ್ಷೆ ಎಂದರೆ ತಪ್ಪಾಗುವುದಿಲ್ಲ. ನಾವು ಮಾಡಿದ ಪಾಪಗಳನ್ನು ಕೊರಗಿನ ಮೂಲಕ ತೀರಿಸಿಕೊಳ್ಳಬೇಕಾಗುತ್ತದೆ. ಅದೇ ಪುಣ್ಯದ ಕೆಲಸಗಳು ನಮ್ಮ ಮನಸ್ಸಿಗೆ ಒಂದಿಷ್ಟು ನೆಮ್ಮದಿಯನ್ನು ನೀಡುತ್ತದೆ.
ನಾವು ಹಿಡಿದ ಮಾರ್ಗ ಸನ್ಮಾರ್ಗದಾಗಿದ್ದು, ಅದರಿಂದಲೇ ಸಾಧಿಸಬೇಕು. ಸಾಧಿಸಿದ್ದು, ಅದು ವಿದ್ಯೆಯೂ ಅಥವಾ ಇನ್ಯಾವುದೋ ಆಗಿರಲಿ ಅದನ್ನು ತುಂಬಾ ಜಾಗ್ರತೆಯಿಂದ ರಕ್ಷಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಹೆಚ್ಚು ಕಾಲ ನಮ್ಮೊಂದಿಗಿದ್ದು, ನಮ್ಮನ್ನು ಕಾಪಾಡುತ್ತವೆ. ಇಲ್ಲಾಂದ್ರೆ ಸಾಧನೆ, ಯಶಸ್ಸು, ಶ್ರೇಯಸ್ಸು, ಹಣ, ಸಂಪತ್ತು, ಎಲ್ಲವೂ ನಮ್ಮಿಂದ ನಿರ್ಗಮಿಸಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಐಶ್ವರ್ಯದೊಂದಿಗೆ ಅಹಂ ಬೆಳೆಸಿಕೊಂಡರೆ ಮುಂದೆ ಅದು ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯ ಬಹುದೇ ವಿನಃ ಏಳ್ಗೆಗಲ್ಲ. ಆದ್ದರಿಂದ ನಾವು ಆದಷ್ಟು ಸನ್ಮಾರ್ಗದತ್ತ ಹೆಜ್ಜೆ ಇಡೋಣ ಅದು ಮೇಲ್ನೋಟಕ್ಕೆ ಕಷ್ಟಕರ ಹಾದಿಯೇ ಆಗಿದ್ದರೂ ನಮ್ಮ ನೆಮ್ಮದಿಗೆ ಎಂದಿಗೂ ಮೋಸ ಮಾಡುವುದಿಲ್ಲ.
-ಬಿ.ಎಂ.ಲವಕುಮಾರ್