ಮೈಸೂರು -4 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಾಚನಹಳ್ಳಿ ಪಾಳ್ಯದಲ್ಲಿ ಡಿ.ಐ.ಇ ಸೆಂಟರ್ ಅನ್ನು 2017-18 ನೇ ವರ್ಷ ಸುಮಾರು 50 ಲಕ್ಷ ರೂಗಳನ್ನು ಖರ್ಚುಮಾಡಿ ಪ್ರಾರಂಭಿಸಲಾಗಿತ್ತು. ಈ ಕೇಂದ್ರದಲ್ಲಿ ಮಕ್ಕಳ ತಜ್ಞರು, ಫಿಸಿಯೋಥೆರಫಿಸ್ಟ್, ಸ್ಪೀಚ್ ಥೆರಫಿಸ್ಟ್, ಸೈಕಾಲಿಸ್ಟ್, ಆಪ್ಟೋಮಾಲಜಿಸ್ಟ್ ಮತ್ತು ಆಪ್ತ ಸಮಾಲೋಚಕರಿದ್ದು ಮೈಸೂರು ಜಿಲ್ಲೆ ಹಾಗೂ ಇತರ ಜಿಲ್ಲೆಗಳಿಂದ ಬರುತ್ತಿದ್ದ ೦-18ವರ್ಷದ ಒಳಗಿನ ನ್ಯೂನತೆ ಹೊಂದಿದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಥೆರಫಿಗಳನ್ನು ನೀಡಲಾಗುತ್ತಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿತ್ತು. ಈ ಕೇಂದ್ರದಿಂದ ಮಕ್ಕಳಿಗೆ ಉಚಿತವಾಗಿ ತಪಾಸಣೆ, ಥೆರಪಿಗಳನ್ನು ನೀಡಿ ಮಕ್ಕಳನ್ನು ಗುಣಪಡಿಸಲಾಗುತ್ತಿತ್ತು. ಈ ಕೇಂದ್ರವನ್ನು ಮತ್ತು ಸಿಬ್ಬಂದಿಗಳನ್ನು ಸುಸಜ್ಜಿತವಲ್ಲದ ಹಳೆಯ ಶವಾಗಾರಕ್ಕೆ ಸ್ಥಳಾಂತರ ಮಾಡಿರುವುದು ಚಿಕಿತ್ಸೆ ಪಡೆಯುವವರಿಗೆ ಮತ್ತು ಸಿಬ್ಬಂದಿಗಳಿಗೆ ಬೇಸರತರಿಸಿದೆ. ಈ ಕೇಂದ್ರವನ್ನು ಜಿಲ್ಲಾ ಆಸ್ಪತ್ರೆ ಮೇಟಗಳ್ಳಿ ಇಲ್ಲಿಗೆ ಸ್ಥಳಾಂತರಿಸಿದ್ದು, ಈ ಕೇಂದ್ರಕ್ಕೆ ಆಸ್ಪತ್ರೆಯ ಒಳಭಾಗದ ಕಟ್ಟಡದಲ್ಲಿ ಜಾಗ ನೀಡದೆ ಆಸ್ಪತ್ರೆಯ ಹೊರಭಾಗದಲ್ಲಿರುವ ಹಳೆಯ ಶವಾಗಾರದ ಕಟ್ಟಡವನ್ನು ನೀಡಿದ್ದು ಈ ಶವಾಗಾರದಲ್ಲಿ ರೋಗಿಗಳಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಉಪಹಾರ ಮಂದಿರ(ಕ್ಯಾಂಟಿನ್) ನಿರ್ಮಾಣ ಮಾಡಿಕೊಡಲು ಮೊದಲು ನಿಶ್ಚಯಿಸಿದ್ದು. ಇದೀಗ ಈ ಶವಾಗಾರಕ್ಕೆ ಡಿ.ಇ.ಐ.ಸಿ. ಸೆಂಟರ್ ನ್ನು ಸ್ಥಳಾಂತರಿಸಿರುವುದರಿಂದ ಅಲ್ಲಿ ರೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಂಟಿನ್ ಸೌಲಭ್ಯ ಇಲ್ಲದಂತಾಗಿದೆ.

ಅಲ್ಲದೆ ನಾಚನಹಳ್ಳಿ ಪಾಳ್ಯ ಆಸ್ಪತ್ರೆಯ ಆವರಣದಲ್ಲಿ ಮಕ್ಕಳಿಗಾಗಿ sensory therapy (ಸಂವೇದನಾ ಚಿಕಿತ್ಸೆ) ಗಾಗಿ ಪಾರ್ಕನ್ನು ನಿರ್ಮಿಸಿದ್ದು, ಪಾರ್ಕ್ ನ ಮೇಲ್ಛಾವಣಿಯನ್ನು ದಾನಿಗಳು ನೀಡಿರುತ್ತಾರೆ. ಆದರೆ ಇನ್ನು ಮುಂದೆ ಇದು ಉಪಯೋಗವಿಲ್ಲದಂತಾಗುತ್ತದೆ. ಈ ರೀತಿ ಸ್ಥಳಾಂತರಗೊಂಡ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ ಮಕ್ಕಳ ಪೋಷಕರ ಹೇಳಿಕೆ ಏನಂದರೆ ಅಧಿಕಾರಿಗಳ ಅಲಕ್ಷ್ಯತನ ಎದ್ದು ತೋರುತ್ತಿದೆ ಶವಾಗಾರದಲ್ಲಿ ನಮ್ಮ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಭಯ ಉಂಟಾಗಿದೆ. ಆದಷ್ಟು ಬೇಗ ಜಿಲ್ಲಾ ಆಸ್ಪತ್ರೆಯ ಒಳಭಾಗದಲ್ಲಿ ಚಿಕಿತ್ಸೆಗೆ ಯೋಗ್ಯವಾದ ಕಟ್ಟಡವನ್ನು ಒದಗಿಸಲಿ ಇಲ್ಲ ಮೊದಲಿದ್ದ ನಾಚನಹಳ್ಳಿ ಪಾಳ್ಯದ ಡಿ.ಇ.ಐ.ಸಿ. ಸೆಂಟರ್ ನಲ್ಲೇ ಚಿಕಿತ್ಸೆಗೆ ಅನುವುಮಾಡಿಕೊಡಬೇಕೆಂದು ಪೋಷಕರು ಮೈಸೂರು ಮಿರರ್‌ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.