ಚಾಮರಾಜನಗರ: ವಿಶ್ವ ಮಟ್ಟದಲ್ಲಿ ಗಮನಸೆಳೆದಿರುವ ರಾಜ್ಯದ ರಾಜಧಾನಿ ಬೆಂಗಳೂರನ್ನು ದೂರದೃಷ್ಠಿಯಿಂದ ಅತ್ಯಂತ ಸುವ್ಯವಸ್ಥಿತವಾಗಿ ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಕೊಡುಗೆ ಸ್ಮರಣೀಯವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರ ಹೆಸರು ಕೇಳದವರೇ ಇಲ್ಲ. ಬೆಂಗಳೂರು ಎಂದಾಕ್ಷಣ ಪ್ರತಿಯೊಬ್ಬರಿಗೂ ಕೆಂಪೇಗೌಡರ ನೆನಪಾಗುತ್ತದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿರುವ ಬೆಂಗಳೂರನ್ನು ಅಂದೇ ತಮ್ಮ ದೂರ ದೃಷ್ಠಿಯಿಂದ ವೇಗವಾಗಿ ಅಭಿವೃದ್ದಿ ಹೊಂದಿದ ನಗರವನ್ನಾಗಿ ಕಟ್ಟಿದ ಕೀರ್ತಿ ಕೆಂಪೇಗೌಡರದ್ದಾಗಿದೆ ಎಂದರು.
ಪ್ರಜೆಗಳ ಹಿತದೃಷ್ಠಿಯಿಂದ ಕೆಂಪೇಗೌಡರು ಮಾಡಿದ ಕಾರ್ಯಗಳು ಇಂದಿಗೂ ಬೆಂಗಳೂರಿನಲ್ಲಿ ಕಾಣಬಹುದಾಗಿದೆ. ಕೆರೆ-ಕಟ್ಟೆಗಳು, ದೇವಾಲಯಗಳು ಸೇರಿದಂತೆ ಹಲವಾರು ಪ್ರಗತಿ ಕೆಲಸಗಳು ಇಂದೂ ಸಹ ನಮ್ಮ ಕಣ್ಣ ಮುಂದಿದೆ. ಇಂತಹ ಸ್ಮರಣೀಯ ಕಾರ್ಯಗಳನ್ನು ಮಾಡಿದ ಕೆಂಪೇಗೌಡರ ಜಯಂತಿಯನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡಾಗ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ರಾಮಚಂದ್ರ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಚತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಪಿ. ಶಿವಕುಮಾರ ಅವರು ನಾಡಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೆಂಪೇಗೌಡರು ಮುಂದಾಲೋಚನೆಯಿಂದ ಸಾರ್ವಕಾಲಿಕವಾಗಿ ನಿಲ್ಲುವ ಎಲ್ಲಾ ವ್ಯವಸ್ಥೆಯುಳ್ಳ ಬೆಂಗಳೂರು ನಗರವನ್ನು ಅಂದೇ ಅಚ್ಚುಕಟ್ಟಾಗಿ ರೂಪಿಸಿದರು. ನಾಡಿನ ಅಭಿವೃದ್ದಿಗೆ ಪೂರಕವಾಗಿರುವ ಹಾಗೂ ಎಲ್ಲಾ ವರ್ಗದವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬೆಂಗಳೂರು ನಿರ್ಮಿಸಿದರು ಎಂದರು.
ಮುಖ್ಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಡಾ. ಆರ್.ಎಚ್. ಪವಿತ್ರಾ ಅವರು ತಂತ್ರಜ್ಞಾನ ಯುಗದಲ್ಲಿ ಕರ್ನಾಟಕದ ಹೆಸರು ಬರಲು ಕಾರಣವಾದ ಬೆಂಗಳೂರನ್ನು ಸುಂದರವಾಗಿ ನಿರ್ಮಿಸಿದ ಕೆಂಪೇಗೌಡರನ್ನು ಜನ ನಾಯಕನೆಂದೇ ಕರೆಯಬೇಕಾಗುತ್ತದೆ. ಅಭಿವೃದ್ದಿಗೆ ಪೂರಕವಾದ ಎಲ್ಲಾ ಆಯಾಮಗಳನ್ನು ಸಾಕಾರಗೊಳಿಸಿದ ಕೆಂಪೇಗೌಡರು ಅಂದೇ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು ಎಂದು ತಿಳಿಸಿದರು.
ಬೆಂಗಳೂರು ಸಮಗ್ರ ಪ್ರಗತಿಗೆ ಕೋಟೆಗಳು, ಕೆರೆ-ಕಟ್ಟೆಗಳು, ದೇವಾಲಯಗಳು, ಉದ್ಯಾನವನ, ಪೇಟೆಗಳನ್ನು ಕೆಂಪೇಗೌಡರು ನಿರ್ಮಿಸಿದರು. ಕಸುಬು, ವ್ಯಾಪಾರಕ್ಕೆ ಅನುಗುಣವಾಗಿ ವಿವಿಧ ಪೇಟೆಗಳನ್ನು ರೂಪಿಸಿದರು. ನಗರದ ವಿವಿಧೆಡೆ ಹಲವಾರು ಕೆರೆಗಳನ್ನು ಕಟ್ಟಿ ಕೃಷಿ ಚಟುವಟಿಕೆಗಳಿಗೆ ಉತ್ತೇಜಿಸಿದರು. ಮೂಲ ಸೌಕರ್ಯಗಳನ್ನು ಒದಗಿಸಿದರು ಎಂದು ಡಾ. ಆರ್.ಎಚ್. ಪವಿತ್ರಾ ಅವರು ವಿವರಿಸಿದರು.
ನಗರಸಭಾ ಅಧ್ಯಕ್ಷರಾದ ಸಿ.ಎಂ. ಆಶಾ ನಟರಾಜು ಅವರು ಮಾತನಾಡಿ ರಾಜಧಾನಿ ಬೆಂಗಳೂರು ಇಂದು ನಾಡಿನ ನಾನಾ ಭಾಗದ ಜನರಿಗೆ ಉದ್ಯೋಗ ನೀಡಿದೆ. ಇಂತಹ ವ್ಯವಸ್ಥಿತ ನಗರ ನಿರ್ಮಾಣಕ್ಕೆ ಅಂದೇ ಸಕಲ ಅಭಿವೃದ್ದಿ ಕೆಲಸಗಳನ್ನು ಕೈಗೊಂಡ ಕೆಂಪೇಗೌಡರ ಸಾಧನೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ತಹಶೀಲ್ದಾರ್‌ರಾದ ಬಸವರಾಜು, ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್, ಮುಖಂಡರಾದ ಚಿನ್ನಿಮುತ್ತು, ರಾಜುಗೌಡ, ಚಾ.ರಂ.ಶ್ರೀನಿವಾಸಗೌಡ, ಮಣಿ, ರವಿಗೌಡ, ಮಹೇಶ್‌ಗೌಡ, ನಾಗೇಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.