ಚಾಮರಾಜನಗರ: ವಚನಕಾರರು, ಮಹಾನ್ ಪುರುಷರು ತಮ್ಮ ವಚನ ಹಾಗೂ ಸಾಹಿತ್ಯದ ಮೂಲಕ ಸಮಾಜದ ಉನ್ನತಿಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಜಯಂತಿ ಹಾಗೂ ತ್ರಿವಿಧ ದಾಸೋಹಿ ಶ್ರೀ ಡಾ. ಶಿವಕುಮಾರಸ್ವಾಮೀಜಿ ಯವರ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಚನಕಾರರು, ದಾರ್ಶನಿಕರು, ಮಹಾ ಪುರುಷರು ವಚನಗಳು ಹಾಗೂ ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಮಹನೀಯರ ಜಯಂತಿ ಹಾಗೂ ಪುಣ್ಯಸ್ಮರಣೆಯನ್ನು ಆಚರಿಸುವ ಉದ್ದೇಶ ಅವರು ಸಮಾಜಕ್ಕೆ ನೀಡಿದ ಉತ್ತಮ ಮಾರ್ಗದರ್ಶನ ಮೌಲ್ಯಗಳು ತಿಳಿಯಲಿ ಎಂಬುದೇ ಆಗಿದೆ. ಹೀಗಾಗಿ ಮಹಾನ್ ಸಾಧಕರು, ವಚನಕಾರರ ಮಾರ್ಗದಲ್ಲಿ ಮುನ್ನೆಡೆಯಬೇಕಿದೆ ಎಂದರು.
ಶಿವಯೋಗಿ ಸಿದ್ದರಾಮೇಶ್ವರರು ಕಾಯಕದ ಶ್ರೇಷ್ಠತೆಯನ್ನು ಸಾರಿದವರು. ಬಸವಣ್ಣ ಅವರ ಅನುಭವ ಮಂಟಪದಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ತಿಳಿಹೇಳುವಲ್ಲಿ ಮುಂದಾದರು.
ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಅವರು ಸಹ ಸಮಾಜದ ಒಳಿತಿಗೆ ಶ್ರಮಿಸಿದವರು. ಡಾ. ಶಿವಕುಮಾರಸ್ವಾಮೀಜಿ ಅವರು ವಿದ್ಯೆ, ಆಶ್ರಯ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳಿಗೆ ಬೆಳಕು ನೀಡಿದವರು. ಇವರೆಲ್ಲರ ಸ್ಮರಣೆ ಮಾಡಬೇಕಾದುದ್ದು ಅತೀ ಮುಖ್ಯವಾಗಿದೆ. ಮಹನೀಯರ ವಿಚಾರಗಳು ಆದರ್ಶ ಬದುಕಿಗೆ ದಾರಿದೀಪವಾಗಲಿ ಎಂದು ಎಂ. ರಾಮಚಂದ್ರ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವಚನಕಾರರು ಮಹಾನ್ ವ್ಯಕ್ತಿಗಳ ಜಯಂತಿ, ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಗುತ್ತಿದೆ. ಕೋವಿಡ್ ಪರಿಸ್ಥಿತಿ ಬೇಗನೆ ದೂರವಾಗಲಿ ಎಂಬುದು ಎಲ್ಲರ ಆಶಯವಾಗಿದೆ. ಕೊರೊನಾ ಮುಕ್ತವಾಗಲು ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗೂಡೂರು ಭೀಮಸೇನ ಅವರು ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು ವಚನಗಳಿಗೆ ಮಾತ್ರ ಸೀಮಿತವಾಗದೆ ಸಿದ್ದಿಪುರುಷರಾಗಿಯೂ ಮೆರೆದರು. ಇವರು ಜನರಿಗೆ ತತ್ವ ಬೋಧನೆ ಜೊತೆಗೆ ಕರ್ತವ್ಯ ಪಾಲನೆ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ವೇಮನ ಅವರು ಸರಳತೆ ಹಾಗೂ ವಾಸ್ತವತೆ ಬಗ್ಗೆ ಪ್ರತಿಪಾದಿಸಿದ್ದಾರೆ. ಅಂಬಿಗರ ಚೌಡಯ್ಯ ಅವರು ಡಾಂಭಿಕತೆಯ ವಿರುದ್ದ ತೀಕ್ಷ್ಣವಾಗಿ ಪ್ರಶ್ನಿಸಿದವರಾಗಿದ್ದಾರೆ. ನಡೆದಾಡುವ ದೇವರು ಎನಿಸಿಕೊಂಡಿದ್ದ ಶಿವಕುಮಾರಸ್ವಾಮೀಜಿ ಅವರು ವಿದ್ಯೆ, ಅನ್ನದಾನದ ಮೂಲಕ ಚಿರಸ್ಮರಣೀಯರಾಗಿದ್ದಾರೆ ಎಂದರು.
ಮುಖಂಡರಾದ ಗು. ಪುರುಷೋತ್ತಮ್ ಅವರು ಮಾತನಾಡಿದರು. ಜಾನಪದ ಅಕಾಡೆಮಿಯ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿಯವರು ವಚನ ಗಾಯನದ ಮೂಲಕ ಗಮನಸೆಳೆದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಮುಖಂಡರಾದ ನಿಜಧ್ವನಿ ಗೋವಿಂದರಾಜು, ಜಿ. ಬಂಗಾರು, ಮಲ್ಲಿಕಾರ್ಜುನಸ್ವಾಮಿ, ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಪ್ರಮೋದ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
