ಮೈಸೂರು: ಕೊಡಗಿನ ಕಾಫಿ ತೋಟದ ಕೆಲಸಕ್ಕೆಂದು ಬಂದ ಅಸ್ಸಾಂನ ಕಾರ್ಮಿಕರು ಲಾಕ್ ಡೌನ್ ಹಿನ್ನಲೆಯಲ್ಲಿ ಮಾಲೀಕರು ತೋಟದ ಪ್ರವೇಶಕ್ಕೆ ಹಿಂದೇಟು ಹಾಕಿದ್ದರಿಂದ ಬರೀ ಗೈನಲ್ಲಿ ನಡೆದು ಸಾಗುತ್ತಿದ್ದವರಿಗೆ ಪಿರಿಯಾಪಟ್ಟಣದ ತಹಸೀಲ್ದಾರ್, ಶಿರಸ್ತೇದಾರ್, ಸೇರಿದಂತೆ ನಾಗರಿಕರು ಮಾನವೀಯತೆ ಮೆರೆದು ಮರಳಿ ಅಸ್ಸಾಂಗೆ ತೆರಳಲು ಸಹಾಯ ಮಾಡಿದ್ದಾರೆ.
ಕೊಡಗಿನ ಸಿದ್ದಾಪುರ ಬಳಿಯ ಕಾಫಿ ತೋಟದಲ್ಲಿ ಕೆಲಸ ಮಾಡಲೆಂದು ಬಂದಿದ್ದ ಅಸ್ಸಾಂನ ಎಂಟು ಮಂದಿ ಕಾರ್ಮಿಕರು ಚುನಾವಣೆ ಸಂಬಂಧ ತಮ್ಮ ಊರಿಗೆ ಮರಳಿದ್ದರು. ಇದೀಗ ಮತ್ತೆ ಕೊಡಗಿನತ್ತ ಕೆಲಸಕ್ಕೆ ಆಗಮಿಸಿದ ಅವರಿಗೆ ಕೊರೋನಾ ಮಹಾಮಾರಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ಹಾಗೂ ಕೊರೋನಾ ಸೋಂಕಿನ ಭಯದಿಂದ ಮಾಲೀಕರು ಎಸ್ಟೇಟ್ ಒಳಗೆ ಪ್ರವೇಶ ಮಾಡಲು ಅವಕಾಶ ನೀಡಲಿಲ್ಲ. ಆದರೆ ತೋಟದ ಮಾಲೀಕರನ್ನು ನಂಬಿ ಕೇವಲ ಒಂದು ಬದಿಯ ಪ್ರಯಾಣಕ್ಕಷ್ಟೆ ಹಣವನ್ನಿರಿಸಿಕೊಂಡು ಬಂದಿದ್ದ ಕಾರ್ಮಿಕರು ವಾಪಸ್ಸು ಅಸ್ಸಾಂಗೆ ತೆರಳಲು ಹಣವಿಲ್ಲದೆ ನಡೆಯುತ್ತಾ ಪಿರಿಯಾಪಟ್ಟಣ ತಲುಪಿದ್ದರು.
ಈ ಕಾರ್ಮಿಕರು ಮೇ.4ರಂದು ತಮ್ಮ ಊರು ಅಸ್ಸಾಂನಿಂದ ಕೊಡಗಿಗೆ ಹೊರಟಿದ್ದರು. ಅವರಿಗೆ ಕೊಡಗಿನ ಪರಿಸ್ಥಿತಿಯ ಅರಿವು ಇರಲಿಲ್ಲ. ಬರುವ ಮೊದಲು ತೋಟದ ಮಾಲೀಕರನ್ನು ಸಂಪರ್ಕಿಸಿರಲಿಲ್ಲ. ಜತೆಗೆ ಕೊಡಗಿಗೆ ತೆರಳಿದರೆ ಯಾವುದಾದರೂ ಕಾಫಿ ತೋಟದಲ್ಲಿ ಕೆಲಸ ಸಿಗುತ್ತದೆ ಎಂಬ ನಂಬಿಕೆಯಿತ್ತು. ಆದರೆ ಕೊಡಗಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ಹೊರಗಿನಿಂದ ಬರುವವರ ಬಗ್ಗೆ ನಿಗಾ ವಹಿಸಲಾಗುತ್ತದೆ. ಹೊರಗಿನಿಂದ ಬರುವವರಿಂದ ಸೋಂಕು ಹರಡುವ ಭಯವೂ ಇದೆ. ಇಷ್ಟೇ ಅಲ್ಲದೆ ಕಠಿಣ ಲಾಕ್ ಡೌನ್ ಮಾಡಲಾಗಿದೆ. ಇದ್ಯಾವುದರ ಅರಿವಿಲ್ಲದ ಕಾರ್ಮಿಕರು ಅಸ್ಸಾಂನಿಂದ ಹೊರಟು ಮೇ.6ರಂದು ಮೈಸೂರು ತಲುಪಿದ್ದು, ಬಳಿಕ ಖಾಸಗಿ ವಾಹನದಲ್ಲಿ ರೂ.3,500 ಬಾಡಿಗೆ ನೀಡಿ ಸಿದ್ದಾಪುರ ಬಳಿಯ ಕಾಫಿ ಎಸ್ಟೇಟ್‌ಗೆ ಕಡೆಗೆ ತೆರಳಿದ್ದಾರೆ.
ಆದರೆ ಕೊಡಗಿನಲ್ಲಿ ಲಾಕ್ ಡೌನ್ ಕಾರಣ ಕೊಡಗು ಮೈಸೂರು ಗಡಿಯಲ್ಲಿ ಒಳಕ್ಕೆ ಪ್ರವೇಶ ನೀಡಲಿಲ್ಲ. ಹೀಗಾಗಿ ಕಾರ್ಮಿಕರನ್ನು ಕರೆದೊಯ್ದ ವಾಹನ ಚಾಲಕ ಗಡಿಭಾಗದಲ್ಲಿಯೇ ಬಿಟ್ಟು ಹಿಂತಿರುಗಿದ್ದಾನೆ. ಬೇರೆ ದಾರಿ ಕಾಣದ ಕಾರ್ಮಿಕರು ತಲೆ ಮೇಲೆ ಲಗ್ಗೇಜು ಹೊತ್ತು ಪಿರಿಯಾಪಟ್ಟಣದ ಬಸ್ ನಿಲ್ದಾಣ ತಲುಪಿದ್ದಾರೆ. ಅಲ್ಲಿ ಬಸ್ಸಿಗಾಗಿ ಕಾದಿದ್ದಾರೆ. ಬಸ್ ಇಲ್ಲ ಎಂಬುದನ್ನು ತಿಳಿದ ಅವರು ಮೈಸೂರಿನತ್ತ ಮತ್ತೆ ಲಗ್ಗೇಜು ಹೊತ್ತು ಸಾಗಿದ್ದಾರೆ. ಇದನ್ನು ಗಮನಿಸಿದ ಪೊಲೀಸ್ ಇಲಾಖೆಯ ಹೈವೇ ಪೆಟ್ರೋಲ್ ವಾಹನದ ಸಿಬ್ಬಂದಿ ವಿಜಯ್ ಕುಮಾರ್ ಹಾಗೂ ಮಹದೇವ್ ಅವರು ವಿಚಾರಿಸಿದಾಗ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಕಾಫಿ ಎಸ್ಟೇಟ್ ಮ್ಯಾನೇಜರ್‌ಗೆ ಫೋನ್ ಮಾಡಿ ಪೊಲೀಸರು ಮಾತನಾಡಿದ್ದಾರೆ. ಈ ವೇಳೆ ಎಸ್ಟೇಟ್ ಮ್ಯಾನೇಜರ್ ಅವರು ಸದ್ಯ ಒಂದೆರಡು ತಿಂಗಳು ಕೆಲಸಕ್ಕೆ ಬೇಡ ವಾಪಾಸ್ ಕಳಿಸಿಬಿಡಿ ಎಂದು ಹೇಳಿ ಮತ್ತೆ ಕರೆ ಸ್ವೀಕರಿಸದೆ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.
ಇದೇ ವೇಳೆ ಸ್ಥಳಕ್ಕಾಗಮಿಸಿದ ಪತ್ರಕರ್ತ ಬೆಕ್ಕರೆ ಸತೀಶ್ ಆರಾಧ್ಯ ಅವರು ತಾಲೂಕು ಕಚೇರಿಯ ಶಿರಸ್ತೇದಾರ್ ವಿನೋದ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಶಿರೆಸ್ತೇದಾರ್ ವಿನೋದ್ ಅವರು ಕೂಲಿ ಕಾರ್ಮಿಕರೊಂದಿಗೆ ಮಾತನಾಡಿದ ಸಂದರ್ಭ ಅವರು ನಾವು ಅಸ್ಸಾಂಗೆ ವಾಪಸ್ ಹಿಂತಿರುಗಿ ಹೋಗುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಳಿ ಹಣವಿಲ್ಲ ಎಂಬುದನ್ನು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಸಹ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಅವರ ಊರಿಗೆ ತೆರಳಲು ವೈಯಕ್ತಿಕ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಬಳಿಕ ಒಂದಷ್ಟು ಮಂದಿ ಸಹಾಯ ಮಾಡುವುದರೊಂದಿಗೆ ಕಾರ್ಮಿಕರನ್ನು ಅಸ್ಸಾಂಗೆ ಕಳುಹಿಸಿಕೊಟ್ಟಿದ್ದಾರೆ.

By admin