ಚಾಮರಾಜನಗರ: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅಧಿಕಾರಿಗಳು ವಿಳಂಬ ಮಾಡದೇ ತ್ವರಿತವಾಗಿ ಪರಿಹರಿಸಬೇಕು. ವಿವಿಧ ಸೌಲಭ್ಯಗಳಿಗೆ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ ಅನುಕೂಲ ಕಲ್ಪಿಸಬೇಕೆಂದು ಶಾಸಕರಾದ ಆರ್. ನರೇಂದ್ರ ಅವರು ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಪ್ರೌಢಶಾಲೆ ಆವರಣದಲ್ಲಿಂದು ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಸಮಸ್ಯೆಗಳು ಕುಂದು ಕೊರತೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಅರ್ಜಿಗಳನ್ನು ವಿಲೇವಾರಿ ಮಾಡದಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅರ್ಜಿದಾರರು ನೀಡಿರುವ ದಾಖಲೆಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಇ-ಸ್ವತ್ತು ನೀಡಬೇಕು. ನೀಡಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಸೂಕ್ತ ಹಿಂಬರಹ ನೀಡಬೇಕು. ಆದರೆ ಅನವಶ್ಯಕವಾಗಿ ಅರ್ಜಿಗಳನ್ನು ಇಟ್ಟುಕೊಳ್ಳಬಾರದು ಎಂದರು.
ಜಾಗೇರಿ ಸೇರಿದಂತೆ ಕೆಲ ಭಾಗದಲ್ಲಿ ಜಮೀನು ಪರಭಾರೆಗೆ ಇರುವ ಷರತ್ತು ನಿಯಮವನ್ನೇ ಮುಂದೊಡ್ಡಿ ಜಮೀನು ಮಾರಾಟಕ್ಕೆ ಅನುಮತಿಸಲಾಗುತ್ತಿಲ್ಲ ಎಂಬ ದೂರುಗಳು ಸಹ ಸಾಕಷ್ಟು ಇವೆ. ಈ ಬಗ್ಗೆ ಇರುವ ನಿಯಮ ಹಾಗೂ ವಿನಾಯಿತಿಯನ್ನು ಪರಿಶೀಲಿಸಿ ಜನರಿಗೆ ಅಗತ್ಯ ಅನುಕೂಲ ಕಲ್ಪಿಸಬೇಕು. ಈ ಭಾಗದಲ್ಲಿ ಮನೆ ನಿರ್ಮಾಣ ಮಾಡಲು ಪರವಾನಗಿ ನೀಡಲಾಗುತ್ತಿದೆ. ಆದರೆ ವಿದ್ಯುತ್ ಇನ್ನಿತರ ಸೌಲಭ್ಯಗಳಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕರು ತಿಳಿಸಿದರು.
ಖಾತೆಗಳನ್ನು ಶೀಘ್ರವಾಗಿ ಮಾಡಿಕೊಡುತ್ತಿಲ್ಲವೆಂಬ ಬಗ್ಗೆ ದೂರು ಕೇಳಿಬರುತ್ತಿವೆ. ಪೌತಿ ಖಾತೆಗಳು ಸಹ ಮಾಡಿಕೊಡುವಲ್ಲಿ ವಿಳಂಬವಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಅರ್ಜಿಗಳನ್ನು ಸ್ವೀಕರಿಸಿ ಸೌಲಭ್ಯ ಕಲ್ಪಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಬದಲಾವಣೆಗೆ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಕೃಷಿ ಇಲಾಖೆ ಅಧಿಕಾರಿಗಳು ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದರು.
ಪಾಳ್ಯ ಗ್ರಾಮದಲ್ಲಿ ಇನ್ನಷ್ಟು ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಸಂಚರಿಸಬೇಕು. ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಖಾಸಗಿ ಬಸ್‌ಗಳ ಓಡಾಟವು ಕಡಿಮೆಯಾಗಿದೆ. ಹೀಗಾಗಿ ಅಧಿಕಾರಿಗಳು ಹೆಚ್ಚು ಬಸ್‌ಗಳನ್ನು ಗ್ರಾಮಾಂತರ ಭಾಗಗಳಿಗೆ ನಿಯೋಜನೆ ಮಾಡಬೇಕು. ಧನಗೆರೆ ಬಳಿ ಒಂದು ಭಾಗದಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಪೂರ್ಣಗೊಳಿಸಿದೆ. ಆದರೆ ಮತ್ತೊಂದು ಕಡೆ ಸುಮಾರು ೧ ಕಿ.ಮೀ ನಷ್ಟು ಕಾಮಗಾರಿ ಕೈಗೊಂಡಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಕೂಡಲೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಶಾಸಕರು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಪ್ರತಿಯೊಬ್ಬರಿಂದ ಖುದ್ದು ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಮೀನುಗಳಿಗೆ ರಸ್ತೆ, ಖಾತೆ ಬದಲಾವಣೆ, ಪಿಂಚಣಿ, ಕೆರೆ, ಸರ್ಕಾರಿ ಜಮೀನು ಒತ್ತುವರಿ ತೆರವು, ಸಾಗುವಳಿ ಚೀಟಿ, ಇ-ಸ್ವತ್ತು, ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪಡೆಯಲಾಗುತ್ತಿರುವ ಶುಲ್ಕ, ಸ್ಮಶಾನ ಭೂಮಿ, ಪಶು ಆಸ್ಪತ್ರೆ ಸೇರಿದಂತೆ ನಾನಾ ಸೌಲಭ್ಯಗಳು ಹಾಗೂ ಸಮಸ್ಯೆಗಳ ಸಂಬಂಧ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಇದೇ ವೇಳೆ ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಐರನ್ ಕಿಟ್, ಬಿತ್ತನೆ ಬೀಜ ಸೌಲಭ್ಯಗಳನ್ನು ವಿತರಿಸಲಾಯಿತು. ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ಮಂಜೂರಾತಿ ಆದೇಶ ಪತ್ರಗಳನ್ನು ಗಣ್ಯರು ವಿತರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿ, ಉಪಾಧ್ಯಕ್ಷರಾದ ಸುಮ, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಮಂಜುಳ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
