ಚಾಮರಾಜನಗರ:ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿಯೇ ಗ್ರಾಹಕರ ಕಾನೂನು ರಚಿಸಲಾಗಿದ್ದು, ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಅರಿವು ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಅವರು ತಿಳಿಸಿದರು.

ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮತ್ತು ಜೆ.ಎಸ್.ಎಸ್ ಮಹಿಳಾ ಕಾಲೇಜು ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ತಾವು ಖರೀದಿಸುವ ಯಾವುದೇ ವಸ್ತು ಅಥವಾ ಪಡೆಯುವ ಸೇವೆಯಲ್ಲಿ ನಷ್ಟ, ಮೋಸ ಅನುಭವಿಸಿದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಆ ಮೂಲಕ ಪರಿಹಾರ ಪಡೆಯಬಹುದಾಗಿದೆ. ಹಣ ಕೊಟ್ಟು ಖರೀದಿಸಿದ ಯಾವುದೇ ವಸ್ತುವಿನಲ್ಲಿ ಗುಣಮಟ್ಟ, ಬೆಲೆ, ಪ್ರಮಾಣ ಹಾಗೂ ಅನುಕೂಲಗಳಲ್ಲಿ ವ್ಯತೀರಿಕ್ತ ಪರಿಣಾಮ ಉಂಟಾದಲ್ಲಿ ಮಾರಾಟಗಾರರ ವಿರುದ್ಧ ಖರೀದಿಸಿದ ರಶೀದಿ ಮತ್ತು ದಾಖಲೆಗಳ ಆಧಾರದ ಮೇಲೆ ದೂರು ಸಲ್ಲಿಸಿ ಕಾನೂನು ಹೋರಾಟ ಮಾಡಬಹುದಾಗಿದೆ ಎಂದರು.

ಗ್ರಾಹಕರು ವಸ್ತು ಖರೀದಿಸಿದ ೨ ವರ್ಷದ ಅವಧಿಯೊಳಗೆ ದೂರು ಸಲ್ಲಿಸಬೇಕು. ೫ ಲಕ್ಷದೊಳಗಿನ ಪರಿಹಾರಕ್ಕೆ ಯಾವುದೇ ರೀತಿಯ ಶುಲ್ಕ ಪಾವತಿ ಮಾಡದೇ ಉಚಿತವಾಗಿ ದೂರು ಸಲ್ಲಿಸಬಹುದು. ೧೦ ಕೋಟಿ ರೂ.ವರೆಗಿನ ಪರಿಹಾರಕ್ಕೆ ಸಂಬಂಧಿಸಿದಂತೆ ನಿಗದಿತ ಶುಲ್ಕ ಗ್ರಾಹಕರ ವೇದಿಕೆಗೆ ಪಾವತಿಸಿ ಗ್ರಾಹಕರ ವ್ಯಾಜ್ಯಾ ಪರಿಹಾರ ಕಾಯ್ದೆಯ ಮೂಲಕ ಸೂಕ್ತ ಪರಿಹಾರ ಪಡೆಯಬಹುದು ಎಂದು ನ್ಯಾಯಾಧೀಶರು ತಿಳಿಸಿದರು.

ಸಾಕಷ್ಟು ಜನರು ಗ್ರಾಹಕರ ಕಾನೂನುಗಳ ಅರಿವು ಹೊಂದಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು ದಿನನಿತ್ಯದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಠ್ಯದೊಂದಿಗೆ ಕಾನೂನಿನ ಅರಿವು ಹೊಂದುವುದು ಬಹಳ ಮುಖ್ಯ. ಗ್ರಾಹಕರ ಕಾನೂನುಗಳ ಕುರಿತು ತಾವು ಅರಿತು ಇತರರಿಗೂ ಅರಿವು ಮೂಡಿಸಬೇಕು. ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಎಸ್.ಸುಲ್ತಾನ್‌ಪುರಿ ಅವರು ತಿಳಿಸಿದರು.

ಜಿಲ್ಲಾ ಗ್ರಾಹಕರ ಆಯೋಗದ ಮಹಿಳಾ ಸದಸ್ಯರಾದ ಗೌರಮ್ಮಣಿ ಅವರು ಮಾತನಾಡಿ ಪ್ರತಿಯೊಬ್ಬ ಗ್ರಾಹಕನು ಯಾವುದೇ ವಸ್ತುವಿನ ಖರೀದಿಗೂ ಮುನ್ನ ವಸ್ತುವಿನ ತೂಕ, ಅಳತೆ, ನಿಖರ ಬೆಲೆ, ಗುಣಮಟ್ಟ, ವಸ್ತುವಿನ ಅವಧಿ ಬಗ್ಗೆ ವಿಶ್ಲೇಷಣೆ ಮಾಡಬೇಕು. ಖರೀದಿಸಿದ ವಸ್ತುವಿನಲ್ಲಿ ನ್ಯೂನತೆ ಉಂಟಾದರೆ ದೂರು ಸಲ್ಲಿಸಿದ ೩ ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುತ್ತದೆ. ಗ್ರಾಹಕರ ವ್ಯಾಜ್ಯಾಕ್ಕೆ ಸಂಬಂಧಿಸಿದಂತೆ ಕಾನೂನುಗಳಿದ್ದು, ಇವುಗಳನ್ನು ಎಲ್ಲಾ ಪ್ರಜ್ಞಾವಂತ ನಾಗರಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಯ ನ್ಯಾಯಾಧೀಶರಾದ ಎಂ. ಶ್ರೀಧರ್ ಅವರು ಮಾತನಾಡಿ ಗ್ರಾಹಕರ ಹಕ್ಕು ಮತ್ತು ಸೇವೆಯಲ್ಲಿ ಯಾವುದೇ ಸಮಸ್ಯೆ ಎದುರಾಗಬಾರದು. ಗ್ರಾಹಕರು ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಬೇಕು. ಅನ್ಯಾಯಗಳಿಗೆ ಅವಕಾಶ ನೀಡದೇ, ಕಾನೂನಿನ ಪರಿಪಾಲನೆ ಮಾಡಬೇಕು. ನ್ಯಾಯಾಲಯಗಳಿಂದ ಕಾನೂನಿನ ಅರಿವಿನ ಜೊತೆಗೆ ಕಾನೂನಿನ ನೆರವು, ಮಾಹಿತಿ, ಮಾರ್ಗದರ್ಶನ ಪಡೆಯಬಹುದಾಗಿದೆ. ನುರಿತ ಸೇವಾ ಮನೋಭಾವವಿರುವ ವಕೀಲರ ತಂಡವನ್ನು ನ್ಯಾಯಾಲಯ ಗುರುತಿಸಿದ್ದು ಅಗತ್ಯವಿರುವರು ಉಚಿತ ಕಾನೂನು ನೆರವನ್ನು ಪಡೆಯಬಹುದಾಗಿದೆ ಎಂದರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ವೈ.ಎಸ್.ತಮ್ಮಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ, ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್. ಮರೀಸ್ವಾಮಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕರಾದ ಶಿವರಾಜಮ್ಮ, ಗ್ರಾಹಕ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೀವ್, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.