ಚಾಮರಾಜನಗರ: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯವನ್ನು ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಅತ್ಯಂತ ಜವಾಬ್ದಾರಿಯುತ ನಿರ್ವಹಣೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೇ ೨೧ ಮತ್ತು ೨೨ರಂದು ಜಿಲ್ಲಾ ಕೇಂದ್ರದ ೮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು ೨೦೨೦ ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ನಗರದ ಬಿ.ಆರ್ ಹಿಲ್ಸ್ ರಸ್ತೆಯ ಜೆಎಸ್‌ಎಸ್ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆ, ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆ, ಎಂ.ಸಿ,ಎಸ್ ಪ್ರೌಢಶಾಲೆ, ಸಿದ್ದಾರ್ಥನಗರದ ಸಂತ ಜೋಸೆಫರ ಪ್ರೌಢಶಾಲೆ, ಕರಿನಂಜನಪುರ ಶ್ರೀದೇವಿ ಟೆಕ್ಸ್‌ಟೈಲ್ಸ್ ಹತ್ತಿರವಿರುವ ಯೂನಿವರ್ಸಲ್ ಪ್ರೌಢಶಾಲೆ ಮತ್ತು ಚನ್ನಿಪುರ ಮೋಳೆ ರಸ್ತೆಯಲ್ಲಿರುವ ಸೇವಾ ಭಾರತಿ ಪ್ರಾಥಮಿಕ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಲೋಪಗಳಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ಪರೀಕ್ಷಾ ಕಾರ್ಯದ ಉಸ್ತುವಾರಿಗಾಗಿ ಪರೀಕ್ಷಾ ಕೇಂದ್ರಗಳ ಅಧಿಕಾರಿಗಳ ತಂಡ, ನಿಯಂತ್ರಕ ಅಧಿಕಾರಿಗಳ ತಂಡ, ಮಾರ್ಗಾಧಿಕಾರಿಗಳ ತಂಡ, ಮುಖ್ಯ ಅಧೀಕ್ಷಕರ ತಂಡ, ಕೊಠಡಿ ಮೇಲ್ವಿಚಾರಕರ ತಂಡ, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳ ತಂಡ ಹಾಗೂ ಮೊಬೈಲ್ ಸ್ವಾಧೀನಾಧಿಕಾರಿಗಳ ತಂಡಗಳನ್ನು ರಚಿಸಿ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. ಮೇಲುಸ್ತುವಾರಿಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೊಳಗೊಂಡ ತ್ರಿಸದಸ್ಯ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಪರೀಕ್ಷಾ ಕೇಂದ್ರಕ್ಕೆ ಪೆನ್ನು, ಪೆನ್ಸಿಲ್ ಹಾಗೂ ಜಾಮಿಟ್ರಿ ಬಾಕ್ಸ್ ಹೊರತುಪಡಿಸಿ ಉಳಿದಂತೆ ಯಾವುದೇ ವಸ್ತುಗಳನ್ನು ತರದಂತೆ ಅಭ್ಯರ್ಥಿಗಳಿಗೆ ಸೂಚಿಸಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿಯೂ ಮೆಟಲ್ ಡಿಟೆಕ್ಟರ್‌ನಿಂದ ಅಭ್ಯರ್ಥಿಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಗುರುತಿಸುವಿಕೆ, ಮೂಲಸೌಲಭ್ಯ ಹಾಗೂ ಸಿ.ಸಿ. ಕ್ಯಾಮರಾ ಮತ್ತು ಗೋಡೆ ಗಡಿಯಾರ ಅಳವಡಿಕೆ ಸೇರಿದಂತೆ ಎಲ್ಲಾ ಅಗತ್ಯ ಸಿದ್ದತಾ ಕಾರ್ಯಗಳನ್ನು ಮುಂಜಾಗ್ರತೆಯಿಂದ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಜವಾಬ್ದಾರಿಯುತ ಹೊಣೆಗಾರಿಕೆಗೆ ಮುಂದಾಗಬೇಕು. ಸರ್ಕಾರದ ಸುತ್ತೋಲೆಯಲ್ಲಿರುವ ಮಾರ್ಗಸೂಚಿಗಳ ಬಗ್ಗೆ ಎಲ್ಲಾ ತಂಡದ ಅಧಿಕಾರಿಗಳಿಗೆ ತಿಳಿವಳಿಕೆ ನೀಡಿ ಯಾವುದೇ ಅಹಿತಕರ ಘಟನೆಗಳಿಗೂ ಆಸ್ಪದ ನೀಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಗೆ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ಹಾಜರಾಗಬೇಕು. ತಪ್ಪಿದಲ್ಲಿ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಬಾರದು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಮಾತನಾಡಿ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಾಗಳ ಸುವ್ಯವಸ್ಥೆಯನ್ನು ಮುನ್ನೆಚ್ಚರಿಯಾಗಿ ಪರಿಶೀಲಿಸಬೇಕು. ಪ್ರಶ್ನೆಪತ್ರಿಕೆಗಳನ್ನು ತಲುಪಿಸುವಾಗ ಗೌಪ್ಯತೆ ಹಾಗೂ ಜಾಗೃತೆ ವಹಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚುವರಿ ವಾಹನವನ್ನು ಕಾಯ್ದಿರಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಬೇಕು. ಜಿಲ್ಲೆಯಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲಾ ಅಧಿಕಾರಿ ವರ್ಗದವರು ಸಹಕಾರ ನೀಡಬೇಕು ಎಂದರು.
ಡಿ.ವೈ.ಎಸ್.ಪಿ. ಪ್ರಿಯದರ್ಶಿನಿ ಸಾಣೆಕೊಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ಸುಲೋಚನಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸುರೇಶ್, ನಗರಸಭೆ ಪೌರಾಯುಕ್ತರಾದ ಕರಿಬಸವಯ್ಯ, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.