ಪಾಂಡವಪುರ: ತಮ್ಮ ಕುಟುಂಬಸ್ಥರು ಹಾಗೂ ಜೀವದ ಹಂಗನ್ನು ತೊರೆದು ಕೋವಿಡ್-19ರ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಟೋರಾ ಸಂಸ್ಥೆ ಸದಸ್ಯರು ಟೀ, ಬಿಸ್ಕತ್ತು ಹಾಗೂ ಕುಡಿಯುವ ನೀರು ವಿತರಿಸಿದರು.
ಟೋರಾ ಸಂಸ್ಥೆ ಅಧ್ಯಕ್ಷ ಎಲ್.ಎಸ್.ಕೇಶವಮೂರ್ತಿ ನೇತೃತ್ವದಲ್ಲಿ ಸಂಸ್ಥೆಯ ಸದಸ್ಯರು ಪಟ್ಟಣದ ಡಾ.ರಾಜಕುಮಾರ್ ವೃತ್ತ, ಉಪವಿಭಾಗೀಯ ಆಸ್ಪತ್ರೆ ಆವರಣ, ಬಾಲಕಿಯರ ಪದವಿ ಪೂರ್ವ ಕಾಲೇಜು ವೃತ್ತ ಹಾಗೂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಹಾಗೂ ಗೃಹ ರಕ್ಷಕ ದಳದ (ಹೋಂಗಾರ್ಡ್ಸ್) ಸಿಬ್ಬಂದಿಗಳಿಗೆ ಟೀ, ಬಿಸ್ಕತ್ತು ಹಾಗೂ ಕುಡಿಯುವ ನೀರನ್ನು ವಿತರಿಸಿದರು.
ರಾಜ್ಯ ಸರ್ಕಾರ 14ದಿನಗಳವರೆಗೆ ಜನತಾಕರ್ಪ್ಯೂ ವಿಧಿಸಿರುವುದರಿಂದ ರಸ್ತೆಗಳಲ್ಲಿ ಜನರು ಓಡಾಟವನ್ನು ನಿಯಂತ್ರಿಸುವ ಸಲುವಾಗಿ ಪಟ್ಟಣದ ವಿವಿಧೆಡೆ ಕರ್ತವ್ಯನಿರತರಾಗಿರುವ ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಗಳಿಗೆ ಸಹಾಯಾಸ್ತ ಮಾಡುವ ಉದ್ದೇಶದಿಂದ 14ದಿನಗಳ ಕಾಲ ಪ್ರತಿನಿತ್ಯ ನಮ್ಮ ಟೋರಾ ಸಂಸ್ಥೆಯಿಂದ ಟೀ, ಬಿಸ್ಕತ್ತು ಮತ್ತು ಕುಡಿಯುವ ನೀರನ್ನು ನೀಡಲಾಗುತ್ತಿದೆ. ನಮ್ಮದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು ಸಂಸ್ಥೆ ಅಧ್ಯಕ್ಷ ಎಲ್.ಎಸ್.ಕೇಶವಮೂರ್ತಿ ಹೇಳಿದರು.
ಈ ವೇಳೆ ಟೋರಾ ಸಂಸ್ಥೆ ಅಧ್ಯಕ್ಷ ಎಲ್.ಎಲ್.ಕೇಶವಮೂರ್ತಿ, ಸದಸ್ಯರಾದ ಕಳಸಪ್ಪರ ಚಂದ್ರಶೇಖರ್, ಯೋಗೇಶ್, ರಾಜು, ಶಿಕ್ಷಕರಾದ ಎ.ಎಂ.ಮಂಜು, ಗಡ್ಡ ಚಂದ್ರಶೇಖರ್ ಇತರರಿದ್ದರು.