ಮೈಸೂರು: 2021-22 ನೇ ಸಾಲಿಗೆ ನಗರಪಾಲಿಕೆ ಮತ್ತು ನಗರಸಭೆ  ಆಸ್ತಿ ತೆರಿಗೆ ಪದ್ಧತಿಯನ್ನು ಯಥಾಸ್ಥಿತಿಯಾಗಿ ಮುಂದು ವರಿಸುವ ಹಾಗೂ ಶೇ 50ರಷ್ಟು ರಿಯಾಯಿತಿ ನೀಡಬೇಕೆಂದು ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೊಳ ಜಗದೀಶ್  ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು ರಾಜ್ಯದ ಜನರು ಕೊರೊನಾ ಮಹಾಮಾರಿ  2 ನೇ ಅಲೆಯ  ಹೂಡೆತಕ್ಕೆ ಸಿಲುಕಿ ಅದರಿಂದ ಹೊರ ಬರಲಾಗದೆ ಪರಿತಪಿಸುತ್ತಿದ್ದಾರೆ. ದೇಶದ ಪ್ರತಿಯೊಂದು ವಲಯವೂ ಕೊರೊನಾದ ಪ್ರಭಾವಕ್ಕೆ ಸಿಲುಕಿ ಜರ್ಜರಿತಗೊಂಡಿದ್ದು, ಈ ಕೊರೊನಾ ಮಹಾಮಾರಿಯನ್ನು ಕೇಂದ್ರ ಸರ್ಕಾರವು ನೈಸರ್ಗಿಕ ವಿಕೋಪ ಎಂದು ಘೋಷಿಸಿದೆ. ಆ ನಿಟ್ಟಿನಲ್ಲಿ ಆರ್ಥಿಕ ಅನಾನುಕೂಲತೆಯಿಂದ ಬಳಲುತ್ತಿ ರುವ ಸಮಾಜದ ಎಲ್ಲ ಕ್ಷೇತ್ರಗಳಿಗೆ (ವಲಯಗಳಿಗೆ ) ಕೇಂದ್ರ ಸರ್ಕಾರವು ಸಾವಿರಾರು ಕೋಟಿ ಆರ್ಥಿಕ ಪ್ಯಾಕೇಜನ್ನು ಘೋಷಿಸಿ ಸಂಬಂಧಿಸಿದ ರಾಜ್ಯಗಳ ಜನರ ಜೀವನವು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದೆ.

ಕೊರೊನಾ ಎರಡನೇ ಅಲೆಯು ಮೊದಲನೇ  ಅಲೆಗಿಂತಲೂ ಅಧಿಕ ತೀವ್ರಗತಿಯಲ್ಲಿದ್ದು, ಸಮಾಜದ ಎಲ್ಲ ವರ್ಗಗಳ ಜನರನ್ನು ಸಾವಿನ ಕೂಪಕ್ಕೆ ತಳ್ಳಿದೆ ಹಾಗೂ ಉಳಿದವರ ಬದುಕು ಚಿಂತಾಜನಕ ವನ್ನಾಗಿಸಿದೆ. ಇಂತಹ ಸಂಕಷ್ಟದ ನಡುವೆ ರಾಜ್ಯ ಸರ್ಕಾರವು ನಗರಪಾಲಿಕೆ ಮತ್ತು ನಗರಸಭೆಗೆ ಸಂಬಂಧಿಸಿದ ಆಸ್ತಿ ತೆರಿಗೆ ಹೆಚ್ಚಿಸಿರುವುದು ಸಮಂಜಸವಾದ ನಿರ್ಧಾರವಲ್ಲ. ಇದು ಕಾನೂನಿನ ಚೌಕಟ್ಟನ್ನು ಮೀರಿ ಕೈಗೊಂಡಿರುವ ಕ್ರಮವಾಗಿದೆ. ಆದ್ದರಿಂದ 2021-22 ನೇ ಸಾಲಿಗೆ ಹೆಚ್ಚಿಸಲು ಉದ್ದೇಶಿಸಿರುವ ಶೇ 3 ರಿಂದ 5ರ ಪ್ರಮಾಣದಲ್ಲಿನ ಆಸ್ತಿ ತೆರಿಗೆಯನ್ನು  ಪರಿಷ್ಕರಿಸಿ 2020 -21ನೇ ಸಾಲಿನ ಆಸ್ತಿ ತೆರಿಗೆಯನ್ನು ವಿವಿಧ ಸ್ವತ್ತುಗಳಿಗೆ ಸಂಬಂಧಿಸಿದಂತೆ ಶೇ. 3ರ ಒಳಗಾಗಿಯೇ ವಿಧಿಸಿ ಯಥಾವತ್ತಾಗಿ ಮುಂದುವರಿಸುವುದಲ್ಲದೆ, ತೆರಿಗೆ ಮೊತ್ತ ವನ್ನು ಪಾವತಿಸುವಲ್ಲಿ ಶೇ. 50ರಷ್ಟು ರಿಯಾಯಿತಿಯನ್ನು ನೀಡುವಂತೆ ಅವರು ಕೋರಿದ್ದಾರೆ.

By admin