ಚಾಮರಾಜನಗರ: ತ್ರಿಕಾಲ ಜ್ಞಾನಿಯಾಗಿದ್ದ ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಅವರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು ಮನುಕುಲದ ಒಳಿತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿರವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ. ದೇಶದ ಹಲವು ಸಾಧು ಸಂತರು, ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ. ಜಯಂತಿಗಳು ಕೇವಲ ಆಚರಣೆಗಷ್ಟೆ ಸೀಮಿತವಾಗದೆ ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಅರ್ಥಪೂರ್ಣಗೊಳಿಸಬೇಕು. ಜೀವನ ಸಾರ್ಥಕತೆಗಾಗಿ ಸಮಾಜದ ಒಳಿತಿಗೆ ಶ್ರಮಿಸುವ ಮೂಲಕ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

೧೭ನೇ ಶತಮಾನದಲ್ಲಿ ಜೀವಿಸಿದ್ದ ಕೈವಾರ ತಾತಯ್ಯ ಅವರು ಪವಾಡ ಪುರುಷರು ಆಗಿದ್ದರು. ತಾತಯ್ಯ ಅವರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲಾ ಸಮಾಜಗಳು ಸ್ಮರಿಸಿಕೊಳ್ಳಬೇಕಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ತಾರತಮ್ಯ, ಅಸಮಾನತೆ ಹೋಗಲಾಡಿಸಲು ತಾತಯ್ಯರು ಕೈಗೊಂಡ ಸಾಮಾಜಿಕ ಸುಧಾರಣೆ ಕಾರ್ಯ ಇಂದಿಗೂ ಮಾದರಿಯಾಗಿದೆ ಎಂದರು.

ನಗರಸಭಾ ಅಧ್ಯಕ್ಷರಾದ ಆಶಾನಟರಾಜು ಅವರು ಮಾತನಾಡಿ ತಾತಯ್ಯ ನವರು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕೈವಾರ ಕ್ಷೇತ್ರ ಬಹಳ ಪವಿತ್ರವಾದದ್ದು ಹಾಗೂ ಉತ್ತಮ ಪ್ರವಾಸೀತಾಣವು ಆಗಿದೆ. ಪ್ರತಿಯೊಬ್ಬರು ಒಂದು ಬಾರಿ ಕೈವಾರ ಕ್ಷೇತ್ರದರ್ಶನ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ದೇಶದ ಅಭ್ಯುದಯಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಸ್ಮರಣೆ ಭಾರತದ ಪರಂಪರೆಯಾಗಿದೆ. ಸಮಾಜದ ಶ್ರೇಯೋಭೀವೃದ್ದಿಗೆ ದುಡಿದವರು ಇತಿಹಾಸ ಸೃಷ್ಠಿಸುತ್ತಾರೆ. ಅಂತಹ ಶ್ರೇಷ್ಠ ದಾರ್ಶನಿಕರಲ್ಲಿ ತಾತಯ್ಯ ಅಗ್ರಗಣ್ಯರಾಗಿದ್ದಾರೆ. ಕಾಲಜ್ಞಾನ ಭವಿಷ್ಯವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಕೈವಾರ ತಾತಯ್ಯ ಅವರು ಎಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ ರವರು ಮಾತನಾಡಿ ತಾತಯ್ಯನವರು ತತ್ವಜ್ಞಾನಿ, ತ್ರಿಕಾಲಜ್ಞಾನಿ ಜೊತೆಗೆ ಯುಗಪುರುಷರು ಆಗಿದ್ದಾರೆ. ಪ್ರಚಲಿತ ಘಟಣೆಗಳ ಕುರಿತು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಸಮಾಜವನ್ನು ಅಧರ್ಮದಿಂದ ಸುಧರ್ಮದೆಡೆಗೆ ಹಾಗೂ ಜನರನ್ನು ತತ್ವಜ್ಞಾನದಿಂದ ದೈವಸಂಕಲ್ಪದೆಡೆಗೆ ಕೊಂಡೊಯ್ದರು. ಅದರ್ಶ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಜಿ.ವಿ. ಶ್ರೀನಿವಾಸ್ ಅವರು ಕೈವಾರ ತಾತಯ್ಯ ಅವರ ಕುರಿತು ಮುಖ್ಯ ಭಾಷಣ ಮಾಡಿದರು.

ನಗರಸಭೆ ಸದಸ್ಯರಾದ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ತಿಮ್ಮರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಬಣಜಿಗ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್, ಕಾರ್ಯದರ್ಶಿ ಕಾರ್ತಿಕ್, ನಂದಾ, ಶ್ರೀಧರ್, ಪದ್ಮಾ ಪುರುಷೋತ್ತಮ್, ಪ್ರಭಾಕರ್, ರಂಜನಿ, ರವಿ, ವಿಜಯ್‌ಕುಮಾರ್, ರಂಗರಾಮು, ಕನ್ನಡಪರ ಸಂಘಟನೆಗಳ ಮುಖಂಡರಾದ ಶ್ರೀನಿವಾಸಗೌಡ, ಶಾ.ಮುರಳಿ, ಆಲೂರುನಾಗೇಂದ್ರ, ಇತರರು ಇದ್ದರು.