ಚಾಮರಾಜನಗರ:ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ಕೈಗೊಳ್ಳಬೇಕಿರುವ ಯಾವುದೇ ಸೌಲಭ್ಯ ಕೆಲಸಗಳು ಬಾಕಿ ಉಳಿಯಬಾರದು. ಏನೆ ಸಮಸ್ಯೆಗಳಿದ್ದರೂ ಕೂಡಲೇ ಬಗೆಹರಿಸಬೇಕೆಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೋವಿಡ್ ಸೋಂಕು ನಿರ್ವಹಣೆ, ನಿಯಂತ್ರಣ, ಪರಿಹಾರ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಮೂರನೇ ಅಲೆಯ ಆತಂಕ ದುಗುಡ ಇನ್ನೂ ದೂರವಾಗಿಲ್ಲ. ಕೋವಿಡ್ ತಹಬದಿಗೆ ತರುವ ಕಾರ್ಯಗಳು ಸಮರ್ಪಕವಾಗಿ ನಡೆಯಬೇಕು. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸೌಲಭ್ಯಗಳಿಗೆ ಕೊರತೆಯಾಗಬಾರದು. ಆಂಬ್ಯುಲೆನ್ಸ್, ಆಮ್ಲಜನಕ ಘಟಕಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ನಿಲ್ಲಬಾರದು ಎಂದು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಉದಾಸೀನ, ನಿರ್ಲಕ್ಷ್ಯ ತೋರಬಾರದು. ಆಶಾ, ಅಂಗನವಾಡಿ, ಆರೋಗ್ಯ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ತೊಡಗಿಕೊಂಡಿವೆ. ಇದೇ ಬಗೆಯ ಪೂರಕವಾದ ಜಾಗೃತಿಯೊಂದಿಗೆ ಕೋವಿಡ್ ಹರಡುವಿಕೆ ತಡೆಯುವ ಕೆಲಸದಲ್ಲಿ ಮುಂದಾಗಬೇಕು ಎಂದರು.
ಇದೇ ಫೆಬ್ರವರಿ ೪ ಹಾಗೂ ೫ರಂದು ಜಿಲ್ಲೆಯಲ್ಲಿದ್ದು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಜಿಲ್ಲೆ ಸರ್ವಾಂಗೀಣ ಅಭಿವೃದ್ದಿಯಾಗಬೇಕು. ಆದ್ಯತಾ ವಲಯಗಳನ್ನು ತೀರ್ಮಾನಿಸಿ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗುವುದು. ಇಲಾಖೆಗಳ ಯೋಜನೆ, ಕಾರ್ಯಕ್ರಮಗಳ ಸೌಲಭ್ಯಗಳು ಜನರಿಗೆ ತಲುಪಬೇಕು ಎಂದು ಸಚಿವರು ತಿಳಿಸಿದರು.
ಬಡವರಿಗೆ, ಧ್ವನಿ ಇಲ್ಲದವರಿಗೆ, ಆಸರೆ ದೊರೆಯದ ಕುಟುಂಬಗಳಿಗೆ ಆದ್ಯತೆ ನೀಡಬೇಕು. ಅಭಿವೃದ್ದಿ ಬಗ್ಗೆ ಚಿಂತನೆಗಳು ನಡೆಯಬೇಕು. ವಸತಿ ಸೌಲಭ್ಯ ಯೋಜನೆಯಡಿ ಹೆಚ್ಚಿನ ಮನೆಗಳನ್ನು ನೀಡಬೇಕು. ಜಿಲ್ಲೆಯ ಪ್ರಗತಿಯಲ್ಲಿ ಉತ್ತಮ ಫಲಿತಾಂಶ ಬರಬೇಕು. ಈ ಮನೋಭಾವದೊಂದಿಗೆ ಅಧಿಕಾರಿಗಳು ಆತ್ಮವಿಶ್ವಾಸದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಉಳಿಯಬೇಕು. ಜಿಲ್ಲೆಯ ವರಿಷ್ಠ ಅಧಿಕಾರಿಗಳು ಜನಸಾಮಾನ್ಯರ ದೂರವಾಣಿ ಕರೆಗಳನ್ನು ಸ್ವೀಕರಿಸಬೇಕು. ಜನರ ಕೆಲಸಗಳಿಗೆ ಸ್ಪಂದಿಸಬೇಕು. ದೂರು ದುಮ್ಮಾನಗಳು, ಕುಂದು ಕೊರತೆ, ಸಮಸ್ಯೆಗಳನ್ನು ಜನಸ್ಪಂದನಾ ಮಾದರಿಯಲ್ಲಿ ಸ್ವೀಕರಿಸಿ ಪರಿಹರಿಸುವ ಕ್ರಮಗಳು ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕೋವಿಡ್ ಪರಿಸ್ಥಿತಿಯ ಪ್ರಸ್ತುತ ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬಬೇಕು. ಯಾವುದೇ ಆತಂಕದ ವಾತಾವರಣ ಸೃಷ್ಠಿ ಮಾಡಬಾರದು. ಆಂಬ್ಯುಲೆನ್ಸ್ ಖರೀದಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು. ಜಿಲ್ಲೆಗೆ ವಸತಿ ಯೋಜನೆಗಳಡಿ ಹೆಚ್ಚಿನ ಸೌಲಭ್ಯಗಳನ್ನು ಬಯಸಲಾಗಿದೆ. ಅಭಿವೃದ್ದಿ ಬಗ್ಗೆ ಹೆಚ್ಚು ಕಾರ್ಯಗಳು ನಡೆಯಬೇಕು ಎಂದರು.
ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಪ್ರಸ್ತುತ ಮೂರನೇ ಅಲೆ ಸಂದರ್ಭದಲ್ಲಿ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಸೂಕ್ಷ್ಮವಾಗಿ ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಕೇರ್ ಕೇಂದ್ರಗಳಿಗೂ ಸಿದ್ದತೆ ನಡೆದಿದೆ. ಆಂಬ್ಯುಲೆನ್ಸ್ ಖರೀದಿಗಾಗಿ ಶಾಸಕರ ಅನುದಾನದಲ್ಲಿ ಹಣ ನೀಡಲಾಗಿದೆ. ಈ ಸೌಲಭ್ಯ ಸೇವೆ ಬೇಗ ಲಭಿಸಬೇಕು ಎಂದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಕೋವಿಡ್ ನಿಯಂತ್ರಣಕ್ಕಾಗಿ ಹಲವು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಸೂಚನೆ, ನಿರ್ದೇಶನಗಳನ್ನು ಪಾಲಿಸಲಾಗುತ್ತದೆ. ಅಭಿವೃದ್ದಿ ಸಂಬಂಧ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ನಟರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಕೋವಿಡ್ ನಿಂದ ಮೃತಪಟ್ಟ ಬಾಕಿ ಕುಟುಂಬಗಳಿಗೆ ಶೀಘ್ರ ಪರಿಹಾರ ವಿತರಿಸಲು ಸೂಚನೆ: ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದು ಪರಿಹಾರ ನೀಡಲು ಬಾಕಿ ಇರುವ ಕುಟುಂಬಗಳಿಗೆ ಪರಿಹಾರ ವಿತರಿಸುವ ಕಾರ್ಯಕ್ಕೆ ಶೀಘ್ರ ಕ್ರಮವಹಿಸುವಂತೆ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು.
ಕೋವಿಡ್ ಪರಿಹಾರ ಸಮಿತಿಯು ಬಾಕಿ ಇರುವ ಅರ್ಜಿದಾರರಿಗೆ ಪರಿಹಾರ ಒದಗಿಸಲು ಸೂಕ್ತ ನಿರ್ಧಾರ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ತ್ವರಿತವಾಗಿ ಸೂಕ್ತ ತೀರ್ಮಾನ ತೆಗೆದುಕೊಂಡು ಅರ್ಹ ಕುಟುಂಬಗಳಿಗೆ ಪರಿಹಾರ ಒದಗಿಸಲು ತಕ್ಷಣವೇ ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಕೋವಿಡ್ ನಿಂದ ಮೃತಪಟ್ಟ ಬಿ.ಪಿ.ಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರ ೧ ಲಕ್ಷ ರೂ ಪರಿಹಾರ ನೀಡುತ್ತಿದೆ. ಕೇಂದ್ರ ಸರ್ಕಾರ ಎ.ಪಿ.ಎಲ್ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರ ಕುಟುಂಬಕ್ಕೂ ೫೦ ಸಾವಿರ ರೂ ಪರಿಹಾರ ನೀಡುತ್ತಿದೆ. ಕೆಲವರು ಕೇಂದ್ರದ ಪರಿಹಾರ ಇನ್ನೂ ತಲುಪಿಲ್ಲವೆಂದು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆಯೂ ಪರಿಶೀಲಿಸಿ ಶೀಘ್ರ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನಿರ್ದೇಶನ ನೀಡಿದರು.
