ಚಾಮರಾಜನಗರ: ಡೆಂಘಿ ಜ್ವರ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವುದು ಒಳಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಸಲಹೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜೆ.ಎಸ್.ಎಸ್. ಕಾಲೇಜಿನ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಘಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ ಗ್ರಾಮಾಂತರ ಪ್ರದೇಶಗಳು, ನಗರ ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ, ಸ್ವಚ್ಚತೆ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಮಳೆಗಾಲದಲ್ಲಿ ಸಾಮಾನ್ಯವಾಗಿ ಮಲೇರಿಯಾ, ಚಿಕನ್‌ಗುನ್ಯ ಹಾಗೂ ಡೆಂಘಿ ಜ್ವರ ಹಬ್ಬುವ ಸಾದ್ಯತೆ ಇದ್ದು ಈ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ರೋಗ ತಡೆಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ಸಹ ಡೆಂಘಿ ಜ್ವರದ ಕುರಿತು ಮಾಹಿತಿ ಪಡೆದು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಿವು ಮೂಡಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರೊಡನೆ ಕೈ ಜೋಡಿಸಿದಾಗ ಮಾತ್ರ ಡೆಂಘಿ ಹರಡುವಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ತಿಳಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕಾಂತರಾಜು ಮಾತನಾಡಿ ಮಳೆಗಾಲದಲ್ಲಿ ಡೆಂಘಿ ಜ್ವರ ಹರಡುವ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಆಗಬೇಕಿದೆ. ೨೦೨೨ ನೇ ಘೋಷವಾಕ್ಯವಾದ “ಡೆಂಘಿ ತಡೆಗಟ್ಟಬಹುದು : ಬನ್ನಿ ಎಲ್ಲರೂ ಕೈ ಜೋಡಿಸೋಣ” ಎಂಬಂತೆ ನಾವೆಲ್ಲರೂ ಒಟ್ಟಾಗಿ ಸೇರಿ ಈ ರೋಗವನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಚಾಮರಾಜನಗರ ನಗರಸಭೆ ಆಯುಕ್ತರಾದ ಕರಿಬಸವಯ್ಯ ಅವರು ಮಾತನಾಡಿ ತ್ಯಾಜ್ಯಗಳಲ್ಲಿ ನೀರು ಸಂಗ್ರಹ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ದಿನಬಳಕೆಯಲ್ಲಿ ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸ್ವಚ್ಚತೆ ಬಗ್ಗೆ ನಗರಸಭೆಯು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಇದೇ ವೇಳೆ ಡೆಂಘಿ ಜ್ವರ ತಡೆಯುವ ಸಂಬಂಧ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿ ಡಾ. ಮಹದೇವು, ಜೆ.ಎಸ್.ಎಸ್. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಿ. ವಿನಯ್ ಕುಮಾರ್, ನಗರಸಭೆ ಪರಿಸರ ಎಂಜಿನಿಯರ್ ಗಿರಿಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.