
ಚಾಮರಾಜನಗರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಯಾವುದೇ ಪ್ರಕ್ರಿಯೆಯನ್ನು ವಿಳಂಬ ಮಾಡದೇ ನಿಯಮಾನುಸಾರ ಕಾಲಮಿತಿಯಲ್ಲಿ ನಿರ್ವಹಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ತಿಂಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸಬೇಕು. ಇದರಿಂದ ವಿಸ್ತೃತವಾಗಿ ಚರ್ಚೆ ನಡೆದು ಅರ್ಜಿಗಳು ಬಾಕಿ ಉಳಿಯದೆ ಶೀಘ್ರವಾಗಿ ವಿಲೇವಾರಿಯಾಗಲಿದೆ. ಎಲ್ಲಾ ಕಾರ್ಯಗಳು ನಿಯಮಾನುಸಾರವಾಗಿ ನಡೆದು ಇಲಾಖೆಗೆ ಆದಾಯ ಬರಲಿದೆ. ಎನ್.ಒ.ಸಿ ಸೇರಿದಂತೆ ಅಗತ್ಯ ಪ್ರಕ್ರಿಯೆಯನ್ನು ನಿಯಮಾನುಸಾರ ಕಾಲಮಿತಿಯೊಳಗೆ ನಿರ್ವಹಿಸದೇ ಇರುವವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಸಚಿವರು ಸೂಚಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಇಲಾಖೆಯಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ನಿಯಮಾನುಸಾರ ನಿಗದಿತ ಅವಧಿಯೊಳಗೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು ಎಂದರು.
ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗಬಾರದು. ಗ್ರಾಮಗಳು, ಸೂಕ್ಷ್ಮ ವಲಯಗಳು, ಅರಣ್ಯಕ್ಕೆ ತೊಂದರೆಯಾಗಬಾರದು. ಇಲಾಖೆ ಯಾವುದೇ ನಿಯಮನ್ನು ಉಲ್ಲಂಘನೆ ಮಾಡಬಾರದು. ಕರಿಕಲ್ಲು ಸಾಗಣೆ ಮಾಡುವ ಲಾರಿಗಳು ನಿಗದಿತ ತೂಕ ನಿಯಮ ಅನುಸರಿಸುತ್ತಿಲ್ಲ. ಇಲಾಖೆಯ ನಿಯಮಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು. ರಾಜಸ್ವ ಸಂಗ್ರಹಣೆಯು ಗುರಿ ಅನುಸಾರ ನಡೆಯಬೇಕು ಎಂದರು.
ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಮಾತನಾಡಿ ಕಟ್ಟಡ ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟಿಂಗ್ ಕಾರ್ಯ ನಿರ್ವಹಿಸಬೇಕಾದಲ್ಲಿ ಬ್ಲಾಸ್ಟಿಂಗ್ ಲೈಸನ್ಸ್ ಪಡೆದವರಿಗೆ ಮಾತ್ರ ಅವಕಾಶವಿರುತ್ತದೆ. ಇಲ್ಲದಿದ್ದರೆ ಯಾವುದೇ ಅಪಾಯ ಸಂಭವಿಸಿದರೆ ಅಧಿಕಾರಿಗಳೆ ಹೊಣೆಗಾರರಾಗಬೇಕಾಗುತ್ತದೆ. ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದರು.
ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ಮಾತನಾಡಿ ಬ್ಲಾಸ್ಟಿಂಗ್ ಕಾರ್ಯ ನಿರ್ವಹಿಸುವ ಮೊದಲು ಎಚ್ಚರಿಕೆ ಇರಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು. ಜಿಲ್ಲೆಯಲ್ಲಿ ಅತ್ಯಂತ ಜಾಗರೂಕರಾಗಿ ಪರಿಶೀಲಿಸಿ ನಿಯಂತ್ರಣ ಮಾಡಬೇಕು ಎಂದರು.
ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ, ಕೊಳ್ಳೇಗಾಲ ತಾಲೂಕಿನಲ್ಲಿರುವ ಕಾವೇರಿ ನದಿ ತಟದಲ್ಲಿ ೬-೭ ಗ್ರಾಮಗಳಿದ್ದು ಎತ್ತಿನಗಾಡಿಗಳ ಮೂಲಕ ಮರಳು ಸಾಗಣೆ ಮಾಡುವವರಿಗೆ ತೊಂದರೆ ನೀಡಲಾಗುತ್ತಿದೆ. ಹಲವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಮಾತನಾಡಿ ಎತ್ತಿನಗಾಡಿಯಲ್ಲಿ ಮರಳು ಸಾಗಾಣೆ ಮಾಡುವವರಿಗೆ ತೊಂದರೆ ನೀಡಬಾರದು. ಎತ್ತಿನಗಾಡಿಗಳಲ್ಲಿ ಸಾಗಣೆ ಮಾಡುವ ಮರಳನ್ನು ಒಂದು ವೇಳೆ ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿದರೆ ಅಥವಾ ಬೇರೆ ಊರುಗಳಿಗೆ ಸಾಗಿಸಲು ಲಾರಿಗಳಿಗೆ ತುಂಬುವ ಕೆಲಸ ಮಾಡಿದರೆ ಅಂತಹವರ ವಿರುದ್ಧ ಕ್ರಮವಹಿಸುವ ಮೂಲಕ ಈ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಆದರೆ, ಸಣ್ಣ ಪುಟ್ಟ ಕೆಲಸಗಳಿಗೆ ಮರಳು ಸಾಗಣೆ ಮಾಡುವ ಎತ್ತಿನಗಾಡಿಗಳನ್ನು ಹಿಡಿದು ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ ಇದೇ ತಿಂಗಳು ಸಭೆ ನಡೆಸಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳು ತಪ್ಪದೇ ಸಭೆ ನಡೆಸಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಕ್ಕಳ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಕೈಗೊಂಡು ವರದಿ ನೀಡಬೇಕು. ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ವಿತರಣೆಯಲ್ಲಿ ಗುಣಮಟ್ಟ ಹಾಗೂ ಪ್ರಮಾಣ ಸಮರ್ಪಕವಾಗಿರಬೇಕು. ಯಾವುದೇ ಲೋಪವಾಗಬಾರದು. ಆಹಾರ ಗುಣಮಟ್ಟದ ಪರೀಕ್ಷೆಯನ್ನು ನಡೆಸಿ ವರದಿ ಪಡೆಯಬೇಕು ಎಂದರು.
ಅಂಗನವಾಡಿಗಳಿಗೆ ಮೂಲಸೌಕರ್ಯಗಳು ಲಭ್ಯವಾಗಬೇಕು. ಎಲ್ಲಿ ಸ್ವಂತ ಕಟ್ಟಡಕ್ಕೆ ನಿವೇಶನ ಲಭ್ಯವಿಲ್ಲವೋ ಅಂತಹ ಕಡೆ ಶಾಸಕರ ಸಹಕಾರ ನೆರವು ಪಡೆದು ನಿವೇಶನ ಪಡೆದುಕೊಳ್ಳಬೇಕು. ಈಗಾಗಲೇ ದುರಸ್ಥಿ ಹಾಗೂ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳ ಬಗ್ಗೆ ಹೆಚ್ಚು ಗಮನ ನೀಡಿ ಬಳಕೆಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಕಾಂಪೌಂಡ್, ಕಿಚನ್ ಗಾರ್ಡನ್ ನಿರ್ಮಾಣ ಮಾಡುವಲ್ಲಿಯೂ ಮುಂದಾಗಬೇಕು ಎಂದರು.
ಸ್ತ್ರೀ ಶಕ್ತಿ ಸಂಘಗಳಿಗೆ ಸರ್ಕಾರದ ನೆರವು, ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಸೌಲಭ್ಯ ತಲುಪಬೇಕು. ಬ್ಯಾಂಕುಗಳು ಮಹಿಳೆಯರಿಗೆ ಸಾಲ ನೀಡಲು ವಿಳಂಬ ಮಾಡದಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ಕರೆದು ಸೂಚನೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಬಾಲ್ಯ ವಿವಾಹ ತಡೆಗೆ ಎಲ್ಲಾ ಇಲಾಖೆಗಳ ಹೊಣೆಗಾರಿಕೆಯೂ ಇದೆ. ಈ ಬಗ್ಗೆ ಹೆಚ್ಚು ತಿಳಿವಳಿಕೆ ನೀಡಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳಬೇಕು. ನೊಂದ ಮಹಿಳೆಯರ ರಕ್ಷಣೆಗಾಗಿ ಸಖಿ ಒನ್ ಸ್ಟಾಪ್ ಸೆಂಟರ್, ಸಾಂತ್ವಾನ ಕೇಂದ್ರ, ಸ್ವಾಧಾರ್ ಗೃಹ ಇನ್ನಿತರ ನಿರ್ವಹಣೆ ಸರಿಯಾಗಿ ನಡೆಯಬೇಕು. ವಿಶೇಷ ಚೇತನರ ಸೌಲಭ್ಯಗಳಿಗೆ ಯಾವುದೇ ಕೊರತೆಯಾಗಬಾರದು. ಯಾವುದೇ ಸಮಸ್ಯೆಗಳು ಇದ್ದಲ್ಲಿ ಕೂಡಲೇ ಪರಿಹರಿಸಬೇಕು ಎಂದು ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಸೂಚನೆ ನೀಡಿದರು.
ವಿಧಾನ ಪರಿ?ತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ ಮತ್ತು ಭೂ ವಿಜ್ಞಾನ) ಪ್ರಧಾನ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ, ನಿರ್ದೇಶಕರಾದ ಡಾ. ವಿ. ರಾಮಪ್ರಸಾದ್ ಮನೋಹರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಶಿವಕುಮಾರ್, ಬಿ.ಆರ್.ಟಿ ಹುಲಿ ಯೋಜನೆ ನಿರ್ದೇಶಕ ಸಂತೋ?ಕುಮಾರ್ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಬಳಿಕ ರೈತ ಮುಖಂಡರ ಅಹವಾಲುಗಳನ್ನು ಸಚಿವರು ಆಲಿಸಿದರು.
ಸಭೆಗೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಚಿವರು, ಶಾಸಕರು, ಗಣ್ಯರು ವಿಶೇಷ ಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ, ಟಾಕಿಂಗ್ ಲ್ಯಾಪ್‌ಟಾಪ್, ಯಂತ್ರಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
