ಚಾಮರಾಜನಗರ: ಹೊಸದಾಗಿ ಬಗರ್‌ಹುಕುಂ ಸಾಗುವಳಿಚೀಟಿ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳ ತ್ವರಿತವಿಲೇವಾರಿಗೆ ಕ್ರಮವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬಗರ್‌ಹುಕುಂ ಸಾಗುವಳಿ ಚೀಟಿ ಪಡೆಯಲು ಫಲಾನುಭವಿಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಮಾತನಾಡಿದರು.
ಬಗರ್‌ಹುಕುಂ ಸಾಗುವಳಿಚೀಟಿ ಪಡೆಯಲು ಹೊಸದಾಗಿ ೩೩ ಅರ್ಜಿಗಳು ಸಲ್ಲಿಕೆಯಾಗಿವೆ. ಫಲಾನುಭವಿಗಳು ಜಮೀನನ್ನು ಉಳುಮೆ ಮಾಡುತ್ತಿದ್ದಾರೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ, ಚೀಟಿಪಡೆಯುವ ಸಂಬಂಧ ಹಣಕಟ್ಟುವ ಕುರಿತು ಮಾಹಿತಿ ಒದಗಿಸಬೇಕು, ಯಾವುದೇ ಕಾರಣಕ್ಕೂ ಬಗರ್‌ಹುಕುಂ ಸಾಗುವಳಿಚೀಟಿ ವಿತರಣೆಯಲ್ಲಿ ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.
ತಹಸೀಲ್ದಾರ್ ಬಸವರಾಜು, ಬಗರ್‌ಹುಕುಂ ಸಾಗುವಳಿ ಸಮಿತಿ ಸದಸ್ಯರಾದ ಪುರುಷೋತ್ತಮ್, ಬಿ.ಮಂಜು, ಸವಿತಾ, ಗ್ರಾಮಲೆಕ್ಕಿಗರು, ರಾಜಸ್ವನಿರೀಕ್ಷಕರು ಹಾಜರಿದ್ದರು.