ಮೈಸೂರು:  ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠಕ್ಕೆ ಭೇಟಿ ನೀಡಿದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸುತ್ತೂರು  ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರರೊಂದಿಗೆ ಉಭಯಕುಶಲೋಪರಿ ನಡೆಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು ಸುತ್ತೂರು ಶ್ರೀಗಳ ಪೂರ್ವಾಶ್ರಮದ ಮಾತೃಶ್ರೀ ಅವರು ಲಿಂಗೈಕ್ಯವಾಗಿರುವ ಹಿನ್ನಲೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಲು ಬಂದಿರುವುದಾಗಿ ತಿಳಿಸಿದರು.

ತಮ್ಮ ತಂದೆಯವರಿಗೂ ಹಿರಿಯ ಶ್ರೀಗಳೊಂದಿಗೆ ಒಡನಾಟವಿಟ್ಟುಕೊಂಡಿದ್ದರು. ಹೀಗಾಗಿ ಸ್ವಾಭಾವಿಕವಾಗಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿರುವುದಾಗಿ ಹೇಳಿದರಲ್ಲದೆ, ಇದರ ಹೊರತಾಗಿ ಭೇಟಿಯ ಹಿಂದೆ ಇನ್ಯಾವುದೇ ಉದ್ದೇಶವಿಲ್ಲ ಎಂದು ಹೇಳಿದರು.

ಇನ್ನು ಮೈಸೂರಿಗೆ ಡಾ.ಜಿ.ಪರಮೇಶ್ವರ್ ಅವರು ಆಗಮಿಸುತ್ತಿರುವಂತೆಯೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರಿಗೆ ಗುಲಾಬಿ ಹೂವಿನ ಬೃಹತ್ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಈ ವೇಳೆ ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪುಷ್ಪ ಅಮರನಾಥ್ ಸೇರಿದಂತೆ ಪಕ್ಷದ ಮುಖಂಡರು ಜತೆಗಿದ್ದರು.

By admin