ಚಾಮರಾಜನಗರ: ಭೂಮಿ-ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾದ ಬದುಕು ಹಾಗೂ ಸರಳ ಜೀವನಶೈಲಿಯಿಂದ ಪರಿಸರ ನಾಶ ತಡೆಯುವ ಮೂಲಕ ಪ್ರತಿಯೊಬ್ಬರು ವೈಜ್ಞಾನಿಕವಾಗಿ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ದೀನಬಂಧು ಶಾಲೆಯ ಸಂಸ್ಥಾಪಕರಾದ ಪ್ರೊ. ಜಿ.ಎಸ್. ಜಯದೇವ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿಂದು ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಗಿಡ ನೆಡುವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಎಲ್ಲರ ಆಸೆ-ಆಕಾಂಕ್ಷೆಗಳನ್ನು ಪೂರೈಸುವಷ್ಟು ಸಂಪತ್ತು, ಸಂಪನ್ಮೂಲಗಳು ಭೂಮಿಯಲ್ಲಿವೆ. ಹಾಗಿದ್ದರೂ ಸಹ ಮನುಷ್ಯನ ದುರಾಸೆಯಿಂದ ಪ್ರಕೃತಿಯ ಮೇಲೆ ಸಾಕಷ್ಟು ಹಾನಿಯಾಗುತ್ತಿದೆ. ಅನಾವಶ್ಯಕ, ಅಪರಿಮಿತ ಜೀವನ, ವಾಹನಗಳ ಅಧಿಕ ಬಳಕೆ, ಮಿತ ವಸ್ತುಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸುವಿಕೆಯಿಂದ ಪರಿಸರಕ್ಕೆ ಮಾರಕವಾಗುತ್ತಿದೆ. ಭೂಮಿ ಕೇವಲ ಮನುಷ್ಯನ ಸ್ವತ್ತಲ್ಲ. ಸಕಲ ಜೀವರಾಶಿಗಳಿಗೂ ಭೂಮಿ ಆಶ್ರಯ ತಾಣವಾಗಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಜೀವನವನ್ನು ಸರಳೀಕರಣಗೊಳಿಸಿ ಪರಿಸರ ರಕ್ಷಣಾ ಕಾರ್ಯಕ್ಕೆ ಪಣತೊಡಬೇಕು ಎಂದರು.
ವಿಶ್ವದಲ್ಲಿ ಇಂದು ೩೬ ಸಾವಿರ ಅಣುಬಾಂಬುಗಳಿವೆ. ಅವುಗಳ ಸ್ಫೋಟದಿಂದ ಆಗುವ ಪರಿಣಾಮವನ್ನು ಎಲ್ಲರೂ ಅರಿಯಬೇಕು. ಪ್ರಸ್ತುತ ನಡೆಯುತ್ತಿರುವ ಉಕ್ರೈನ್-ರಷ್ಯಾ ಕದನದಿಂದ ಭೂಮಿ ಬರಡಾಗುವ ಹಂತ ತಲುಪಿದೆ. ಕೆಲ ವರ್ಷಗಳ ನಂತರ ಅಲ್ಲಿ ಗಿಡ-ಮರಗಳು ಬೆಳೆಯಬಹುದಾದರೂ ಮಾನವ, ಪ್ರಾಣಿ, ಪಕ್ಷಿ ಸೇರಿದಂತೆ ಇತರೆ ಜೀವಿಗಳಿಲ್ಲದಿದ್ದರೇ ಏನಾಗಬಹುದು ಎಂಬ ಸತ್ಯವನ್ನು ಮನಗಾಣಬೇಕು. ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರು ಒಂದೊಂದು ಗಿಡ ನೆಡಿ, ಪರಿಸರ ಹಾಗೂ ಭೂ-ಸಂರಕ್ಷಣೆಗೆ ಅದೇ ದೊಡ್ಡ ಕೊಡುಗೆಯಾಗಿಲಿದೆ ಎಂದು ತಿಳಿಸಿದರು.
ಭೂಮಿಗೆ ಇಂದು ಜ್ವರ ಬಂದಿದ್ದು, ಅದರ ತಾಪಮಾನ ಹೆಚ್ಚಾಗುತ್ತಿದೆ. ನಾಲ್ಕು ಲಕ್ಷ ವರ್ಷಗಳಿಂದಿಚೆಗೆ ನಗರೀಕರಣ ಚಟುವಟಿಕೆಗಳಿಗೆ ಸಿಲುಕಿ ಪರಿಸರ ನಾಶ ಅವ್ಯಾಹತವಾಗಿ ನಡೆಯುತ್ತಿದೆ. ಜನಸಾಂದ್ರತೆ ಹಾಗೂ ತಂತ್ರಜ್ಞಾನದ ಸುಳಿಗೆ ನಲುಗಿರುವ ಪರಿಸರದ ನಾಶ ತಡೆಯಲು ನಾವೆಲ್ಲರು ಬುದ್ಧನ ಅಹಿಂಸಾ ಮಾರ್ಗವನ್ನು ಅನುಸರಿಸಬೇಕಾಗಿದೆ. ಆಗಮಾತ್ರ ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಎಲ್ಲಾ ಬಗೆಯ ಜೀವವೈವಿಧ್ಯಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದು ಜಯದೇವ ಅವರು ಅಭಿಪ್ರಾಯಪಟ್ಟರು.
ಮತದಾರರ ಜಾಗೃತಿ ಕುರಿತು ಮಾತನಾಡಿದ ಪ್ರೊ. ಜಯದೇವ ಅವರು ಪ್ರಜಾಸತ್ಯಾತ್ಮಕ ವ್ಯವಸ್ಥೆಯಲ್ಲಿ ಮತದಾನ ಬಹಳ ಪವಿತ್ರವಾದ ಕೆಲಸ. ಅದು ಎಲ್ಲರ ಹಕ್ಕು ಹಾಗೂ ಕರ್ತವ್ಯವಾಗಿದೆ. ೧೮ ವರ್ಷ ತುಂಬಿದ ಎಲ್ಲರೂ ಮತದಾನ ಮಾಡಬೇಕು. ಉತ್ತಮ ಸಮಾಜಕ್ಕೆ ಉತ್ತಮ ನಾಯಕತ್ವ ಗುಣವಿರುವ ವ್ಯಕ್ತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾನ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗೌರವಾನ್ವಿತ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ಮಾತನಾಡಿ ಪರಿಸರದ ಅರಿವು ಎಲ್ಲರಲ್ಲೂ ಇರಬೇಕು. ಪ್ರತಿಯೊಬ್ಬರು ತಮ್ಮ ಮನೆಗಳ ಸುತ್ತಮುತ್ತಲಿನ ಸ್ಥಳಗಳಲ್ಲಿ, ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಡಬೇಕು. ಮಕ್ಕಳು ಈ ಬಗ್ಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕಾಳಜಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಪರಿಸರ ದಿನಾಚರಣೆ ಒಂದು ದಿನದ ಕಾರ್ಯಕ್ರಮವಾಗದೇ ವರ್ಷಪೂರ್ತಿ ಆಚರಣೆಯಾಗಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಪರಿಸರ ಶಿಕ್ಷಣ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ೧ರಿಂದ ೧೦ನೇ ತರಗತಿವರೆಗಿನ ಪ್ರತಿ ಮೂರು ವರ್ಷಗಳ ಅವಧಿಗೆ ಶಾಲಾ ಅವರಣದಲ್ಲಿ ಪ್ರತಿಯೊಂದು ಮಗುವಿಗೂ ಒಂದೊಂದು ಗಿಡ ನೆಡುವಂತೆ ತಿಳಿಸಿ, ಅದರ ಉಸ್ತುವಾರಿಯನ್ನು ಆ ಮಗುವಿಗೆ ವಹಿಸಬೇಕು. ಇದರಿಂದ ಕೈತೋಟ ಅಭಿವೃದ್ಧಿಯಾಗಿ ಶಾಲಾ ವಾತಾವರಣ ಉತ್ತಮವಾಗಲಿದೆ. ಮಣ್ಣು ಮತ್ತು ಹಸಿರಿನ ಜೊತೆ ಮಕ್ಕಳ ಒಡನಾಡ ತಾನಾಗಿಯೇ ಬೆಳೆಯಲಿದೆ ಎಂದರು.
ಜಗತ್ತಿನ ತಾಪಮಾನ ಹೆಚ್ಚಾಗದಂತೆ ತಡೆಯಲು ಮರಗಳನ್ನು ಕಡಿಯಬಾರದು. ಪ್ಲಾಸ್ಟಿಕ್ ತ್ಯೆಜಿಸಬೇಕು. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪರಿಸರ ರಕ್ಷಣೆಯ ಕಾಳಜಿ ಮೂಡಿಸಿ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕಾಗಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಹ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಮಕ್ಕಳನ್ನೊಳಗೊಂಡ ಮಕ್ಕಳ ಜೀವವೈವಿಧ್ಯ ಸಮಿತಿ ರಚಿಸಲಾಗಿದೆ ಎಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಅಲ್ಲದೇ ಮಕ್ಕಳು ಈಗಿನಿಂದಲೇ ಮತದಾನದ ಶ್ರೇಷ್ಠತೆ ಹಾಗೂ ಮಹತ್ವವನ್ನು ಅರಿಯಬೇಕು. ಉತ್ತಮರ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾನವೆಂಬುದು ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುವುದರಿಂದ ಮತದಾನದಿಂದ ಯಾರೂ ಸಹ ವಂಚಿತರಾಗಬಾರದು ಎಂದರು.
ಪರಿಸರ ಸಂರಕ್ಷಣೆಯ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ಬಹುಮಾನ ವಿತರಿಸಿದರು ಹಾಗೂ ಸಂಪನ್ಮೂಲ ಅಧಿಕಾರಿಯವರು ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹಿರಿಯ ಸಿವಲ್ ನ್ಯಾಯಾಧೀಶರಾದ ಹೊನ್ನಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ನಗರಸಭೆ ಪೌರಾಯುಕ್ತರಾದ ಕರಿಬಸವಯ್ಯ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜು, ಪರಿಸರ ಅಧಿಕಾರಿ ಎಂ.ಜಿ. ರಘುರಾಮ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಎನ್. ಮಂಜುನಾಥ್, ತೋಟಗಾರಿಕೆ ಉಪನಿರ್ದೇಶಕರಾದ ಶಿವಪ್ರಸಾದ್ ಇತರರು ಇದ್ದರು.
ಆರಂಭದಲ್ಲಿ ಗೌರವಾನ್ವಿತ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ಜಿಲ್ಲಾಡಳಿತ ಭವನದ ಒಳಾವರಣದಲ್ಲಿರುವ ವಿದ್ಯುನ್ಮಾನ ಮತಯಂತ್ರಗಳ ಸಂರಕ್ಷಣಾ ಕಟ್ಟಡದ ಅವರಣದಲ್ಲಿ ಗಿಡ ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
