ಚಾಮರಾಜನಗರ: ಚಾಮರಾಜನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್  ಪಣ ತೊಟ್ಟಿದ್ದು, ಜಿಲ್ಲೆಯಾದ್ಯಂತ ಸಂಚರಿಸಿ ಕಂಟೈನ್‌ಮೆಂಟ್ ಜೋನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳ ಕಂಟೈನ್‌ಮೆಂಟ್ ಜೋನ್, ಕೋವಿಡ್ ಕೇರ್ ಕೇಂದ್ರಗಳಿಗೆ ಶಾಸಕ  ಎನ್.ಮಹೇಶ್ ಅವರೊಂದಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದ ಅವರು ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಟಾಸ್ಕ್ ಫೋರ್ಸ್ ಸಭೆ ನಡೆಸಿ ಕುಂದುಕೊರತೆ ಪರಿಶೀಲಿಸಿದ್ದಾರೆ.

ವಡ್ಡಗೆರೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಸಚಿವರು ಸೋಂಕಿತರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳು, ಊಟೋಪಚಾರ ಸಮಯಕ್ಕೆ ಸರಿಯಾಗಿ ದೊರೆಯುತ್ತಿದ್ದೆಯೇ ಎಂದು ಮಾಹಿತಿ ಪಡೆದರು.  ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರು ಬೇಸರ ಕಳೆಯಲು ಚೆಸ್, ಕೇರಂ ಬೋರ್ಡ್, ಟಿ.ವಿ. ಅಳವಡಿಸಲಾಗಿದೆ. ಇದುವರೆಗೆ ಆಹಾರವನ್ನು ಬೇರೆಡೆಯಿಂದ ಸರಬರಾಜು ಮಾಡಲಾಗುತ್ತಿತ್ತು. ಇನ್ನು ಮುಂದೆ ಅಡುಗೆ ತಯಾರಿಯನ್ನು ಇಲ್ಲಿಯೇ ಮಾಡಲಾಗುತ್ತದೆ ಎಂದು ಅಲ್ಲಿನ ಕೋವಿಡ್ ಕೇರ್ ಕೇಂದ್ರದ ನೋಡಲ್ ಅಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು.

ಯಳಂದೂರು ತಾಲೂಕಿನ ಗುಂಬಳ್ಳಿ ಹಾಗೂ ಗೌಡಹಳ್ಳಿ ಗ್ರಾಮದ ಕಂಟೈನ್‌ಮೆಂಟ್ ಜೋನ್ ಪ್ರದೇಶಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವರು ಅಲ್ಲಿನ ಸೋಂಕಿತರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು

ಗೌಡಹಳ್ಳಿ ಗ್ರಾಮದ ಜೆಎಸ್‌ಎಸ್ ಫ್ರೌಡಶಾಲಾ ಆವರಣದಲ್ಲಿ  ಕೋವಿಡ್ ನಿಯಂತ್ರಣ ಸಂಬಂಧ ಗ್ರಾಮ ಪಂಚಾಯಿತಿ ಟಾಸ್ಕ್ ಪೋರ್ಸ್ ಸಭೆ ನಡೆಸಿದ ಸಚಿವರು ಗ್ರಾಮದಲ್ಲಿ ಹೋಂ ಐಸೋಲೇಷನ್‌ಗೆ ಒಳಪಟ್ಟವರ ಸಂಖ್ಯೆ ಹೆಚ್ಚಿದ್ದು ಅಂತಹವರನ್ನು ಕೂಡಲೇ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಬೇಕು. ಒಂದು ವೇಳೆ ಸೋಂಕಿತರು ಮತ್ತು ಅವರ ಕುಟುಂಬಸ್ಥರು ನಿರಾಕರಿಸಿದರೆ ಮನವೊಲಿಸಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕು ಎಂದು ತಿಳಿಸಿದರು.

ಸೋಂಕು ಹೆಚ್ಚಳವಾಗದಂತೆ ತಡೆಯಲು ಗ್ರಾಮಸ್ಥರು ಸಹಕರಿಸಬೇಕು. ನಿಮ್ಮ ಗ್ರಾಮಗಳಲ್ಲಿ ಸೋಂಕು ಪ್ರಕರಣಗಳು ಇಲ್ಲವಾದರೆ ಕೊರೊನಾ ಮುಕ್ತ ಗ್ರಾಮವೆಂದು ಹೆಮ್ಮೆಯಿಂದ ಘೋಷಿಸಿಕೊಂಡು ಇತರೆ ಗ್ರಾಮಗಳಿಗೂ ಮಾದರಿಯಾಗಬಹುದು ಎಂದು ಸಚಿವರು ಮನವಿ ಮಾಡಿದರು.

ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆಸ್ಪತ್ರೆಗೂ ಭೇಟಿ ನೀಡಿ ವಿವರ ಪಡೆದರು. ಕುಂತೂರಿಗೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ ಸಮಾಲೋಚಿಸಿದರು. ತೇರಂಬಳ್ಳಿ ಗ್ರಾಮದಲ್ಲಿ ಕಂಟೈನ್‌ಮೆಂಟ್ ಜೋನ್‌ಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಮುಳ್ಳೂರು ಗ್ರಾಮದಲ್ಲಿ ಕೋವಿಡ್ ಹರಡುವಿಕೆ ತಡೆಯುವ ಕುರಿತು ಟಾಸ್ಕ್‌ಪೋರ್ಸ್ ಸಭೆ ನಡೆಸಿದರು. ಒಟ್ಟಾರೆಯಾಗಿ ಹೇಳಬೇಕೆಂದರೆ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದ ನಂತರ ಸಚಿವರ ಕಾರ್ಯ‍ ಶೀಲರಾಗಿದ್ದು, ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಪರಿಸ್ಥಿತಿಯನ್ನು ಗಮನಿಸಿ ಕ್ರಮ ಕೈಗೊಳ್ಳುತ್ತಿರುವುದು ಕಂಡು ಬರುತ್ತಿದೆ.

 

By admin