ಚಾಮರಾಜನಗರ: ಕೆನಡಾ ಸಂಸತ್ ನಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗ ಚಂದ್ರ ಆರ್ಯ ವಿಶ್ವದಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಿ ಪ್ರತಿಯೊಬ್ಬ ಕನ್ನಡಿಗರಲ್ಲಿ ಜಾಗೃತಿ ಮತ್ತು ಸ್ಪರ್ತಿಯನ್ನು ಹಾಗೂ ಸ್ವಾಭಿಮಾನವನ್ನು ಬಡಿದೆಬ್ಬಿಸಿರುವುದು ಅಭಿನಂದನೀಯ ವೆಂದು ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಗೂ ಚಿಂತಕರಾದ ಸುರೇಶ್‌ಋಗ್ವೇದಿ ತಿಳಿಸಿದ್ದಾರೆ.
ಕೆನಡಾ ದೇಶದ ಸಂಸತ್ತಿನಲ್ಲಿ ಚಂದ್ರ ಆರ್ಯರ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದು ಹಾಗೂ ರಾಷ್ಟ್ರಕವಿ ಕುವೆಂಪು ಸಾಹಿತ್ಯ ಮತ್ತು ಡಾ. ರಾಜಕುಮಾರ್ ಹಾಡಿರುವ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ,ಸಾಹಿತ್ಯ ಪದಗಳನ್ನು ತಿಳಿಸಿ, ಕನ್ನಡಿಗರೆಲ್ಲರಿಗೂ ಕನ್ನಡದ ಶಕ್ತಿಯನ್ನು ತುಂಬಿದ್ದಾರೆ.
ಕನ್ನಡ ಮಾತನಾಡುವುದು, ಕನ್ನಡವನ್ನು ಬಳಸುವುದೇ ಕೀಳರಿಮೆ ಎಂಬ ಮನಸ್ಥಿತಿ ಹೊಂದಿರುವ ಕನ್ನಡಿಗರಿಗೆ ಇವರು ಆದರ್ಶವಾಗಿದ್ದಾರೆ .
ವೃತ್ತಿಯಲ್ಲಿ ಇಂಜಿನಿಯರ್ ಆಗಿ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಚಂದ್ರ ಆರ್ಯರ ಕನ್ನಡದ ಪ್ರೇಮ ,ತಾಯಿಯನ್ನೇ ಗೌರವಿಸಿದಂತೆ. ಕನ್ನಡ ನೆಲ-ಜಲ-ಭಾಷೆಯ ಬಗ್ಗೆ ಸದಾಕಾಲ ಅಭಿಮಾನವನ್ನು ಹೊಂದಿ ಕನ್ನಡದ ಸಂಸ್ಕೃತಿ-ಪರoಪರೆ ಸಾಹಿತ್ಯವನ್ನು ಪ್ರೀತಿಸಿ ಗೌರವಿಸಿ ಮುಂದಿನ ಪೀಳಿಗೆಗೆ ಕನ್ನಡತನವನ್ನು ನೀಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಭಾಷೆಯ ಬೆಳವಣಿಗೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿ ಕನ್ನಡವನ್ನು ಬೆಳೆಸುವ ಸಕಾಲದಲ್ಲಿ ಚಂದ್ರ ಆರ್ಯ ರವರ ನಡೆ ಕನ್ನಡಿಗರಲ್ಲಿ ಚೈತನ್ಯ ಮೂಡಿಸಿದೆ ಎಂದು ಋಗ್ವೇದಿ ತಿಳಿಸಿದ್ದಾರೆ.