ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮರಣದ ಪ್ರಮಾಣವೂ ಏರಿಕೆಯಾಗುತ್ತಿದ್ದು, ಒಂದೇ ದಿನದಲ್ಲಿ ಇಪ್ಪತ್ತನಾಲ್ಕು ಮಂದಿ ಮೃತಪಟ್ಟ ದುರ್ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದು, ಕೋವಿಡ್ ಸಂಬಂಧಿಸಿದಂತೆ ಹೆಚ್ಚಿನ ಗಮನಹರಿಸುತ್ತಿರುವುದು ಕಂಡು ಬರುತ್ತಿದೆ.
ಈ ನಡುವೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು, ವಾರ್ಡ್ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಜೂಮ್ ಮೂಲಕ ವೀಡಿಯೋ ಸಂವಾದ ನಡೆಸಿದ ಸಚಿವರು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಿಸುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುವಾರು ಕಾರ್ಯಪಡೆ ಸಕ್ರಿಯವಾಗಿ ಕೋವಿಡ್ ತಡೆಗೆ ಸಹಕರಿಸಬೇಕೆಂದು ಮನವಿ ಮಾಡಿದರಲ್ಲದೆ, ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯ ಬೇಕಿರುವ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಹಕಾರ ಬೆಂಬಲ ಅತ್ಯಗತ್ಯವಾಗಿದೆ. ಜನರಿಗೆ ಕೋವಿಡ್ ಶಿಷ್ಠಾಚಾರ ಪಾಲನೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಕಂಡು ಕೋವಿಡ್ ತಪಾಸಣೆಗೆ ಒಳಗಾಗಬೇಕು. ಕೋವಿಡ್ ಸೋಂಕಿತರನ್ನು ವೈದ್ಯರ ಶಿಫಾರಸ್ಸಿನ ಮೇರೆಗೆ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸುವ ಕಾರ್ಯಕ್ಕೆ ವಾರ್ಡ್‌ವಾರು ಸಮಿತಿಗಳು ನೆರವಾಗಬೇಕು ಎಂದು ಮನವಿ ಮಾಡಿದರು.

ಮತ್ತೊಂದೆಡೆ ಅವರು ಜಿಲ್ಲೆಯ ಸಂತೇಮರಹಳ್ಳಿಯಲ್ಲಿರುವ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ಶಾಲೆಯ ಕಟ್ಟಡದಲ್ಲಿ ಸಜ್ಜುಗೊಳಿಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ವೀಕ್ಷಿಸಿದರು. ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಿ ಕಾರ್ಯಾರಂಭ ಮಾಡುವಂತೆ ಸೂಚನೆ ನೀಡಿದರಲ್ಲದೆ, ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಎಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಔಷಧೋಪಚಾರಗಳು ಹೇಗೆ ನೀಡಲಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಿದರು. ಯಳಂದೂರು ಹಾಗೂ ಕೊಳ್ಳೇಗಾಲ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು


ಕೊಳ್ಳೇಗಾಲ ಪಟ್ಟದಲ್ಲಿರುವ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕಿಗೆ ಸಂಬಂಧಿಸಿದಂತೆ ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್ ಸಹ ಇದ್ದು ಎಲ್ಲ ಕಾರ್ಯಪಡೆ ಸಮಿತಿಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ವಿಶೇಷವಾಗಿ ತೊಡಗಿಕೊಂಡು ಸೋಂಕು ತಹಬಂದಿಗೆ ತರಲು ನಿರತರಾಗಬೇಕು. ಟಾಸ್ಕ್ ಫೋರ್ಸ್ ಸಮಿತಿಗಳು ಕೋವಿಡ್ ಪರಿಸ್ಥಿತಿಯ ಅವಲೋಕನ ಮಾಡಬೇಕು. ಯಾವ ಭಾಗದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಿದೆ. ಸೋಂಕು ತಡೆಗೆ ಏನೆಲ್ಲಾ ವಿಧಾನಗಳನ್ನು ಅನುಸರಿಸಬೇಕಿದೆ ಎಂಬ ಬಗ್ಗೆ ಪರಾಮರ್ಶೆ ನಡೆಸಿ ಪರಿಹಾರ ಕ್ರಮಗಳಿಗೆ ಮುಂದಾಗಬೇಕು. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಸಾಧ್ಯವಾಗಲಿದೆ ಎಂದು ಹೇಳಿದರು.

By admin